ಸೂಕ್ಷ್ಮ ಮನಸ್ಸಿನ ಕನ್ನಡಿಗರ ನಿರ್ಧಾರಕ್ಕೆ ಬದ್ಧ: ಸೋನು

Sujatha NRPublished : May 6, 2025 10:15 AM

ಸೂಕ್ಷ್ಮ ಮನಸ್ಸಿನ ಕನ್ನಡಿಗರು ತೆಗೆದುಕೊ‍ಳ್ಳುವ ನಿರ್ಧಾರಕ್ಕೆ ತಾನು ಬದ್ಧ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಪತ್ರಕ್ಕೂ ಬಹುತೇಕರು ವಿರೋಧ ವ್ಯಕ್ತ ಪಡಿಸಿದ್ದಾರೆ.

 ಬೆಂಗಳೂರು : ಕನ್ನಡಿಗರ ಕೂಗು ತೀವ್ರವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಗಾಯಕ ಸೋನು ನಿಗಮ್‌ ಕನ್ನಡಿಗರನ್ನು ಉದ್ದೇಶಿಸಿ ದೀರ್ಘ ಪತ್ರ ಬರೆದಿದ್ದಾರೆ. ತನ್ನದೇನೂ ತಪ್ಪಿಲ್ಲ ಎಂಬ ಧಾಟಿಯಲ್ಲಿ ಪತ್ರ ಬರೆದಿರುವ ಸೋನು, ಸೂಕ್ಷ್ಮ ಮನಸ್ಸಿನ ಕನ್ನಡಿಗರು ತೆಗೆದುಕೊ‍ಳ್ಳುವ ನಿರ್ಧಾರಕ್ಕೆ ತಾನು ಬದ್ಧ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಪತ್ರಕ್ಕೂ ಬಹುತೇಕರು ವಿರೋಧ ವ್ಯಕ್ತ ಪಡಿಸಿದ್ದಾರೆ.

ಪತ್ರದ ಆರಂಭದಲ್ಲಿ ಸೋನು ನಿಗಮ್‌, ‘ಕನ್ನಡ ಭಾಷೆ, ಸಂಸ್ಕೃತಿ ಪ್ರೀತಿಸುವವನು ನಾನು. ಮೊನ್ನೆ ಬೆಂಗಳೂರಿನಲ್ಲಿ ನಡೆದ ಘಟನೆಯಲ್ಲಿ ನನ್ನ ಮಗನ ವಯಸ್ಸಿನ ಹುಡುಗರು ಗೂಂಡಾಗಿರಿ ಮಾಡಲು ಬಂದರು. ಅವರನ್ನು ಹದ್ದುಬಸ್ತಿನಲ್ಲಿಡಲು ಹಾಗೆ ಹೇಳಬೇಕಾಯಿತು, 51 ವರ್ಷ ಹಿರಿಯನಾದ ನಾನು ಅವರ ರೌಡಿಸಂ ಅನ್ನು ಸಹಿಸಿಕೊಂಡಿರಲು ಸಾಧ್ಯವೇ? ಇದರಲ್ಲಿ ನನ್ನ ತಪ್ಪೇನಿದೆ? ಇಷ್ಟಾದರೂ ನೀವು ತೆಗೆದುಕೊಳ್ಳುವ ನಿರ್ಣಯಕ್ಕೆ ನಾನು ಬದ್ಧ’ ಎಂದು ಹೇಳಿದ್ದಾರೆ.

‘ನಮಸ್ಕಾರ, ಕನ್ನಡ ಭಾಷೆ, ಸಂಸ್ಕೃತಿ, ಸಂಗೀತ, ಗಾಯನ ಕ್ಷೇತ್ರ ಹಾಗೂ ಸಮಸ್ತ ಕನ್ನಡಿಗರ ಮೇಲೆ ನನಗೆ ಎಣೆಯಿಲ್ಲದ ಪ್ರೀತಿ ಇದೆ. ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲ, ವಿಶ್ವಾದ್ಯಂತ ಸಂಚರಿಸುವಾಗಲೂ ಆ ಗೌರವ, ಅಭಿಮಾನ ಹಾಗೇ ಇರುತ್ತದೆ. ಅಲ್ಲದೆ ಹಿಂದಿಯೂ ಸೇರಿ ಬೇರೆಲ್ಲ ಭಾಷೆಗಳಿಗಿಂತ ಅಧಿಕ ಹಾಡುಗಳನ್ನು ನಾನು ಕನ್ನಡದಲ್ಲೇ ಹಾಡಿದ್ದೇನೆ. ಕನ್ನಡದ ಬಗ್ಗೆ ನನ್ನ ಪ್ರೀತಿ ಏನು ಎಂಬುದಕ್ಕೆ ಸಾಕ್ಷಿಯಾಗಿ ನೂರಾರು ವೀಡಿಯೋಗಳು ಸೋಷಲ್‌ ಮೀಡಿಯಾದಲ್ಲಿವೆ. ಕರ್ನಾಟಕದಲ್ಲಿ ನಡೆಯುವ ಪ್ರತೀ ಕಾನ್ಸರ್ಟ್‌ನಲ್ಲಿಯೂ ಒಂದು ಗಂಟೆಗಿಂತ ಹೆಚ್ಚು ಕಾಲ ಕನ್ನಡ ಹಾಡುಗಳನ್ನೇ ಹಾಡುತ್ತೇನೆ’ ಎಂದು ಹೇಳಿದ್ದಾರೆ.

ಅವರು ಮುಂದುವರಿದು, ‘ಆದರೆ ನನ್ನ ಗೌರವಕ್ಕೆ ಚ್ಯುತಿ ಬರುವಂತೆ ನಡೆದುಕೊಂಡರೆ ಸುಮ್ಮನಿರಲು ನಾನೇನು ಚಿಕ್ಕ ಹುಡುಗ ಅಲ್ಲ. 51 ವರ್ಷದ ಮಧ್ಯ ವಯಸ್ಕ. ನನ್ನ ಮಗನ ವಯಸ್ಸಿನ ಹುಡುಗರು ಭಾಷೆಯ ನೆಪದಲ್ಲಿ ಸಾವಿರಾರು ಜನರ ಮುಂದೆ ನನ್ನನ್ನು ಹುಚ್ಚುಚ್ಚಾಗಿ ಬೆದರಿಸಿದಾಗ ನಾನು ಸಹಿಸಿಕೊಂಡಿರಲು ಹೇಗೆ ಸಾಧ್ಯ? ಆ ಹುಡುಗರ ಗೂಂಡಾಗಿರಿಗೆ ಅವರ ಪಕ್ಕದಲ್ಲಿದ್ದವರೇ ಮುಜುಗರಗೊಂಡು ಬಾಯ್ಮುಚ್ಚಿಕೊಂಡಿರಲು ಹೇಳಿದ್ದರು. ನಾನು ಮೊದಲ ಸಲ ಅವರಿಗೆ ಪ್ರೀತಿ ಹಾಗೂ ಸಜ್ಜನಿಕೆಯಿಂದಲೇ ಪ್ರತಿಕ್ರಿಯೆ ನೀಡಿದ್ದೆ, ಈಗಷ್ಟೇ ಹಾಡಲು ಶುರು ಮಾಡಿದ್ದೇನೆ, ನಿಮಗೆ ಖಂಡಿತಾ ನಿರಾಸೆ ಮಾಡುವುದಿಲ್ಲ, ನಾವು ಯೋಜನೆ ಮಾಡಿದಂತೆ ಕಾರ್ಯಕ್ರಮ ಮುಂದುವರಿಸಲು ಅವಕಾಶ ನೀಡಿ ಎಂದಿದ್ದೆ. ಇಂಥ ದೊಡ್ಡ ಶೋಗಳಲ್ಲಿ ತಾಂತ್ರಿಕ ಸಮನ್ವಯ ಬಹಳ ಮುಖ್ಯ. ನಾವು ಮೊದಲು ಹಾಕಿಕೊಂಡ ಪ್ಲಾನ್‌ನಂತೆ ಕೆಲಸ ಮಾಡದಿದ್ದರೆ ಹಿನ್ನೆಲೆ ಸಂಗೀತದವರಿಗೆ ಗೊಂದಲವಾಗಿ ಕಾರ್ಯಕ್ರಮ ಕೆಡುವ ಸಾಧ್ಯತೆ ಇರುತ್ತದೆ. ಆದರೆ ಈ ಸೂಕ್ಷ್ಮ ತಿಳಿಯದ ಆ ಮಂದಿ ಮತ್ತೆ ಮತ್ತೆ ಗೂಂಡಾಗಿರಿ ಮಾಡುತ್ತಾ ನನ್ನನ್ನು ಬೆದರಿಸಲಾರಂಭಿಸಿದರು. ಈಗ ಹೇಳಿ, ಇಲ್ಲಿ ತಪ್ಪು ಯಾರದು’ ಎಂದು ಸೋನು ನಿಗಂ ಪ್ರಶ್ನಿಸಿದ್ದಾರೆ.

‘ನಾನೊಬ್ಬ ದೇಶಭಕ್ತ. ಭಾಷೆ, ಜಾತಿ ಅಥವಾ ಧರ್ಮದ ಹೆಸರಿನಲ್ಲಿ ದ್ವೇಷ ಹುಟ್ಟಿಸುವ ಯಾರನ್ನಾದರೂ ನಾನು ತಾತ್ವಿಕವಾಗಿ ವಿರೋಧಿಸುತ್ತೇನೆ. ಹೀಗಾಗಿಯೇ ಅವರಿಗೆ ಬುದ್ಧಿವಾದ ಹೇಳಿದೆ. ಆಗ ಅಲ್ಲಿದ್ದ ಸಾವಿರಾರು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಖುಷಿಯಿಂದ ನನ್ನ ನಡೆಯನ್ನು ಸ್ವಾಗತಿಸಿದರು. ಅಲ್ಲಿಗೆ ಆ ವಿಚಾರ ಅಂತ್ಯವಾಯಿತು. ನಂತರ ಒಂದು ಗಂಟೆಗೂ ಹೆಚ್ಚು ಕಾಲ ಕನ್ನಡ ಹಾಡುಗಳನ್ನು ಹಾಡಿದ್ದೆ. ಅವೆಲ್ಲವೂ ಸೋಷಿಯಲ್‌ ಮೀಡಿಯಾದಲ್ಲಿ ಇವೆ’ ಎಂದು ಸಮರ್ಥನೆ ನೀಡಿದ್ದಾರೆ.

‘ಈ ಘಟನೆಯಲ್ಲಿ ತಪ್ಪು ಯಾರದು ಎಂದು ಕರ್ನಾಟಕದ ಸೂಕ್ಷ್ಮ ಮನಸ್ಸಿನ ಜನತೆಯೇ ನಿರ್ಣಯ ತೆಗೆದುಕೊಳ್ಳಬೇಕು. ನೀವೇನೇ ತೀರ್ಪು ಕೊಟ್ಟರೂ ಅದನ್ನು ಗೌರವದಿಂದ ಸ್ವೀಕರಿಸುತ್ತೇನೆ. ಜೊತೆಗೆ ಕರ್ನಾಟಕದ ಕಾನೂನು, ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಕರ್ನಾಟಕದ ಜನತೆ ನನಗೆ ನೀಡಿರುವುದು ದೈವಿಕ ಪ್ರೀತಿ. ಯಾವೊಂದು ದುರುದ್ದೇಶವನ್ನೂ ಇಟ್ಟುಕೊಳ್ಳದೆ ನೀವು ಏನೇ ತೀರ್ಪು ನೀಡಿದರೂ ಅದನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ’ ಎಂದು ಪತ್ರವನ್ನು ಕೊನೆಗೊಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಪತ್ರಕ್ಕೆ ಸಾವಿರಾರು ಮಂದಿ ಕಾಮೆಂಟ್‌ ಮಾಡಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.