25*3 ಜಾಗದಲ್ಲಿ ವಾಕಿಂಗ್‌ ಮಾಡ್ತಿದ್ದೇನೆ - ಅಲ್ಲಿ ಸೂರ್ಯನ ಕಿರಣ ಕೂಡ ಬೀಳಲ್ಲ : ದರ್ಶನ್

Published : Sep 26, 2025, 07:36 AM IST
renukaswamy murder case supreme court cancelled bail of actor darshan thoogudeepa

ಸಾರಾಂಶ

ನ್ಯಾಯಾಲಯದ ಆದೇಶದಲ್ಲಿ ತಿಳಿಸಿರುವ ಯಾವುದೇ ಸೌಲಭ್ಯಗಳನ್ನೂ ಜೈಲಧಿಕಾರಿಗಳು ಕಲ್ಪಿಸಿಲ್ಲ. 25 ಅಡಿ ಉದ್ದ ಮತ್ತು 3 ಅಡಿ ಅಗಲದ ಪ್ಯಾಸೇಜ್‌ನಲ್ಲಿ ವಾಕಿಂಗ್‌ ಮಾಡಲು ಅನುಮತಿಸಿದ್ದಾರೆ. ಈ ಜಾಗದಲ್ಲಿ ಸೂರ್ಯನ ಕಿರಣ ಸಹ ಬೀಳುವುದಿಲ್ಲ

 ಬೆಂಗಳೂರು :  ನ್ಯಾಯಾಲಯದ ಆದೇಶದಲ್ಲಿ ತಿಳಿಸಿರುವ ಯಾವುದೇ ಸೌಲಭ್ಯಗಳನ್ನೂ ಜೈಲಧಿಕಾರಿಗಳು ಕಲ್ಪಿಸಿಲ್ಲ. 25 ಅಡಿ ಉದ್ದ ಮತ್ತು 3 ಅಡಿ ಅಗಲದ ಪ್ಯಾಸೇಜ್‌ನಲ್ಲಿ ವಾಕಿಂಗ್‌ ಮಾಡಲು ಅನುಮತಿಸಿದ್ದಾರೆ. ಈ ಜಾಗದಲ್ಲಿ ಸೂರ್ಯನ ಕಿರಣ ಸಹ ಬೀಳುವುದಿಲ್ಲ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ಚಿತ್ರ ನಟ ದರ್ಶನ್‌ ದೂರಿದ್ದಾರೆ.

ಪ್ರಕರಣದ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿಗಾಗಿ ಗುರುವಾರಕ್ಕೆ ವಿಚಾರಣೆ ನಿಗದಿಪಡಿಸಲಾಗಿತ್ತು. ಹಾಗೆಯೇ, ನ್ಯಾಯಾಲಯದ ಸೂಚನೆ ಹೊರತಾಗಿಯೂ ಹಾಸಿಗೆ, ದಿಂಬು, ಹೊದಿಕೆ ಸೇರಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸದ ಜೈಲಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಶಿಫಾರಸು ಮಾಡುವಂತೆ ಕೋರಿ ದರ್ಶನ್‌ ಸಲ್ಲಿಸಿರುವ ಅರ್ಜಿಯೂ ಇದೇ ವೇಳೆ ವಿಚಾರಣೆಗೆ ನಿಗದಿಯಾಗಿತ್ತು.

ಅರ್ಜಿ ವಿಚಾರಣೆ ನಡೆಸಿದ ನಗರದ 57ನೇ ಸಿಟಿ ಸಿವಿಲ್‌ ಮತ್ತು ನ್ಯಾಯಾಲಯ ದರ್ಶನ್‌ಗೆ ಕಾರಾಗೃಹಗಳ ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯ ಕಲ್ಪಿಸಲು ನಿರ್ದೇಶಿಸಿ ಹೊರಡಿಸಿರುವ ತನ್ನ ಆದೇಶ ಪಾಲಿಸದ್ದಕ್ಕೆ ವಿವರಣೆ ನೀಡಲು ಸೆ.30ರಂದು ಖುದ್ದು ಹಾಜರಾಗುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನಿರ್ದೇಶಿಸಿತು.

ವಿಚಾರಣೆ ವೇಳೆ ದರ್ಶನ್ ಮತ್ತು ಆತನ ಪರ ವಕೀಲರು, ತಮಗೆ ಜೈಲಿನಲ್ಲಿ ನ್ಯಾಯಾಲಯದ ಆದೇಶದಂತೆ ಯಾವುದೇ ಸೌಲಭ್ಯ ಕಲ್ಪಿಸುತ್ತಿಲ್ಲ ಎಂದರು. ಆರೋಪಿಗಳಾದ ಜಗದೀಶ್‌ ಮತ್ತು ಅನುಕುಮಾರ್‌ ಅವರು, ತಮ್ಮನ್ನೂ ಈಗಲೂ ಕ್ವಾರಂಟೈನ್‌ ಸೆಲ್‌ನಲ್ಲಿ ಇಡಲಾಗಿದೆ ಎಂದು ತಿಳಿಸಿದರು.

ಈ ವಾದ ಪರಿಗಣಿಸಿದ ನ್ಯಾಯಾಧೀಶ ಐ.ಪಿ.ನಾಯ್ಕ್‌ ಅವರು, ನ್ಯಾಯಾಲಯ ಆದೇಶ ಪಾಲಿಸದ ಮತ್ತು ಆರೋಪಿಗಳನ್ನು ಕ್ವಾರಂಟೈನ್‌ ಸೆಲ್‌ನಿಂದ ಸ್ಥಳಾಂತರಿಸದ ಬಗ್ಗೆ ಎರಡು ದಿನಗಳಲ್ಲಿ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ತಮ್ಮ ವಿವರಣೆ ನೀಡಬೇಕು. ಹಾಗೆಯೇ, ಸೆ.30ರಂದು ಜೈಲು ಅಧಿಕ್ಷಕರು ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿತು.

ನಂತರ ಪವಿತ್ರಾ ಗೌಡ, ದರ್ಶನ್‌ ಸೇರಿ ಇತರೆ ಐವರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು 2025ರ ಅ.9ರವರೆಗೆ ವಿಸ್ತರಿಸಿ ಆದೇಶಿಸಿದ ನ್ಯಾಯಾಲಯ, ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಗುರುವಾರ ಪವಿತ್ರಾ ಗೌಡ, ದರ್ಶನ್‌ ಸೇರಿ ಜೈಲಿನಲ್ಲಿರುವ ಏಳು ಮಂದಿ ಆರೋಪಿಗಳು ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾದರು. ಇನ್ನೂ ಎಂಟನೆ ಆರೋಪಿ ಹೊರತುಪಡಿಸಿ ಜಾಮೀನು ಮೇಲಿರುವ ಉಳಿದ 9 ಮಂದಿ ಆರೋಪಿಗಳು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಎಂಟನೇ ಆರೋಪಿ ರವಿಶಂಕರ್‌ ಪರ ವಕೀಲರು, ವಿಚಾರಣೆಗೆ ಹಾಜರಾಗುವುದರಿಂದ ವಿನಾಯ್ತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿತು.

ಇದೇ ವೇಳೆ 9ನೇ ಆರೋಪಿ ಧನರಾಜ್‌, ಜಪ್ತಿ ಮಾಡಿರುವ ತನ್ನ ಬೈಕ್‌ ಅನ್ನು ಬಿಡುಗಡೆ ಮಾಡಲು ತನಿಖಾಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದರು. ಪ್ರಕರಣದ 12ನೇ ಆರೋಪಿ ಎಂ.ಲಕ್ಷ್ಮಣ್‌ ತನ್ನ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಕೋರಿ ಅರ್ಜಿ ಸಲ್ಲಿಸಿದರು.

ಬಳಿಕ ದರ್ಶನ್‌ ಪರ ವಕೀಲರು ಹಾಜರಾಗಿ, ಕನಿಷ್ಠ ಸೌಲಭ್ಯ ಕಲ್ಪಿಸಲು ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಜೈಲಧಿಕಾರಿಗಳು ಪಾಲಿಸುತ್ತಿಲ್ಲ ಎಂದು ನ್ಯಾಯಾಧೀಶರ ಗಮನಕ್ಕೆ ತಂದಾಗ ನ್ಯಾಯಾಧೀಶರು, ನ್ಯಾಯಾಲಯದ ಅನುಸಾರ ಜೈಲಧಿಕಾರಿಗಳು ನಿಮಗೆ ಸೌಲಭ್ಯ ಕಲ್ಪಿಸಿಲ್ಲವೇ ಎಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಿದ್ದ ದರ್ಶನ್‌ ಅವರನ್ನು ಪ್ರಶ್ನಿಸಿದರು.

ನ್ಯಾಯಾಲಯದ ಆದೇಶದಲ್ಲಿ ತಿಳಿಸಿರುವ ಯಾವುದೇ ಸೌಲಭ್ಯವನ್ನೂ ಜೈಲು ಅಧಿಕಾರಿಗಳು ಕಲ್ಪಿಸಿಲ್ಲ. 25 ಅಡಿ ಉದ್ದ ಮತ್ತು 3 ಅಡಿ ಅಗಲವಿರುವ ಪ್ಯಾಸೇಜ್‌ನಲ್ಲಿ ವಾಕಿಂಗ್‌ ಮಾಡಲು ಅನುಮತಿಸಿದ್ದಾರೆ. ಆದರೆ, ಈ ಜಾಗದಲ್ಲಿ ಸೂರ್ಯನ ಬೆಳಕು ಸಹ ಬೀಳುವುದಿಲ್ಲ ಎಂದು ದರ್ಶನ್‌ ತಿಳಿಸಿದರು.

ಇನ್ನು 6ನೇ ಆರೋಪಿ ಜಗದೀಶ್‌ ಮತ್ತು 7ನೇ ಆರೋಪಿ ಅನುಕುಮಾರ್‌, ತಮ್ಮನ್ನೂ ಈ ದಿನದವರೆಗೂ ಕ್ವಾರೆಂಟೈನ್‌ ಸೆಲ್‌ನಲ್ಲಿ ಇಡಲಾಗಿದೆ. ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಿಸಿಲ್ಲ ಎಂದು ಜೈಲು ಅಧಿಕಾರಿಗಳ ವಿರುದ್ಧ ಆರೋಪಿಸಿದರು.

ಜೈಲರ್‌ಗೆ ಬುಲಾವ್‌

ಕಾರಾಗೃಹಗಳ ಕೈಪಿಡಿ ಅನುಸಾರ ಕೊಲೆ ಆರೋಪಿ, ನಟ ದರ್ಶನ್‌ಗೆ ಕನಿಷ್ಠ ಸೌಲಭ್ಯ ಕಲ್ಪಿಸಲು ನಿರ್ದೇಶಿಸಿ ಹೊರಡಿಸಿರುವ ತನ್ನ ಆದೇಶ ಪಾಲಿಸದ್ದಕ್ಕೆ ವಿವರಣೆ ನೀಡಲು ಸೆ.30ರಂದು ಖುದ್ದು ಹಾಜರಾಗುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ 57ನೇ ಸಿಟಿ ಸಿವಿಲ್‌ ಮತ್ತು ನ್ಯಾಯಾಲಯ ನಿರ್ದೇಶಿಸಿದೆ.

PREV
Read more Articles on

Recommended Stories

ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ
ಜಾತಿ ಗಣತಿಗೆ ತಡೆ ಇಲ್ಲ: ಹೈಕೋರ್ಟ್‌