ವಿನೂತನ ‘ಆಸ್ಟ್ರಿಡ್‌’ ಸಂಸ್ಥೆಯ ಒಂಬತ್ತು ಶಾಲೆಗಳ ಉದ್ಘಾಟನೆ

Published : Nov 16, 2026, 11:10 AM IST
School

ಸಾರಾಂಶ

ವಿದ್ಯಾರ್ಥಿಗಳನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಸ್ಥಾಪಿತವಾಗಿರುವ ‘ಆಸ್ಟ್ರಿಡ್‌ ವರ್ಲ್ಡ್‌ ಸ್ಕೂಲ್‌’ ಸಂಸ್ಥೆಯ ಒಂಬತ್ತು ಶಾಲೆಗಳು ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ವಿದ್ಯುಕ್ತವಾಗಿ ಚಾಲನೆಗೊಂಡವು.

ಬೆಂಗಳೂರು : ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ಕುತೂಹಲ ಆಧಾರಿತ ಕಲಿಕೆ, ಏಕಾಗ್ರತೆ, ಭಾವನಾತ್ಮಕ ವಿಕಾಸ, ನೈತಿಕ ಮೌಲ್ಯಗಳ ಬೋಧನೆಯೊಂದಿಗೆ ವಿದ್ಯಾರ್ಥಿಗಳನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಸ್ಥಾಪಿತವಾಗಿರುವ ‘ಆಸ್ಟ್ರಿಡ್‌ ವರ್ಲ್ಡ್‌ ಸ್ಕೂಲ್‌’ ಸಂಸ್ಥೆಯ ಒಂಬತ್ತು ಶಾಲೆಗಳು ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ವಿದ್ಯುಕ್ತವಾಗಿ ಚಾಲನೆಗೊಂಡವು.

ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ವರ್ಣರಂಜಿತ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್‌.ವಿ.ದೇಶಪಾಂಡೆ, ಸಮಾಜ ಕಲ್ಯಾಣ ಸಚಿವ ಕೆ.ಎಚ್‌.ಮುನಿಯಪ್ಪ, ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಆಸ್ಟ್ರಿಡ್‌ ವರ್ಲ್ಡ್‌ ಸ್ಕೂಲ್‌ನ ಬ್ರಾಂಡ್‌ನ ಲೋಗೋ ಅನಾವರಣಗೊಳಿಸುವ ಮೂಲಕ ಸಂಸ್ಥೆಯ ಒಂಬತ್ತು ಶಾಲೆಗಳನ್ನು ಉದ್ಘಾಟಿಸಿದರು.

ಆರ್‌.ವಿ.ದೇಶಪಾಂಡೆ ಅವರು ಮಾತನಾಡಿ, ಒಂದು ಕಾಲದಲ್ಲಿ ಆರ್ಥಿಕ ಸ್ಥಿತಿವಂತರೂ ಶಿಕ್ಷಣಕ್ಕೆ ಒತ್ತು ನೀಡುತ್ತಿರಲಿಲ್ಲ. ಆದರೆ, ಇಂದು ವಿದ್ಯೆ ಪಡೆಯದ ವ್ಯಕ್ತಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಹಾಗಾಗಿ ಎಲ್ಲ ವರ್ಗದ ಜನರೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ಸಿಗುವಂತಾಗಬೇಕು. ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಿಗೂ ಆಸ್ಟ್ರಿಡ್‌ನಂಥ ಸಂಸ್ಥೆಯ ಶಾಲೆಗಳನ್ನು ವಿಸ್ತರಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಾಮಾಜಿಕ ಜವಾಬ್ದಾರಿ, ನಾಯಕತ್ವದ ಗುಣ, ವ್ಯಕ್ತಿತ್ವ ವಿಕಸನ ಸೇರಿ ಪರಿಪೂರ್ಣ ವ್ಯಕ್ತಿಗಳನ್ನಾಗಿ ರೂಪಿಸುವ ಸಮಗ್ರ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ಐಕ್ಯುಗಿಂತ ಇಕ್ಯೂ ಮುಖ್ಯ:

ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಅವರು ಮಾತನಾಡಿ, ಇವತ್ತು ಅಮೆರಿಕದ ಶೇ.30ಕ್ಕೂ ಹೆಚ್ಚು ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು ಭಾರತದ ಮೂಲದವರಾಗಿದ್ದಾರೆ. ಭಾರತದ ಉತ್ತಮ ಶಿಕ್ಷಣದ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಮುಂದೆ ನಮ್ಮ ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಇನ್ನೂ ಹೆಚ್ಚಿನ ಜಾಗತಿಕ ಸ್ಪರ್ಧೆ ಎದುರಿಸಬೇಕಾಗಿದೆ. ಅದಕ್ಕೆ ಪೂರಕವಾಗಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು. ಮಕ್ಕಳಿಗೆ ಬೌದ್ಧಿಕ ಶಕ್ತಿಗಿಂತ (ಐಕ್ಯು) ಭಾವನಾತ್ಮಕ ಬುದ್ಧಿಮತ್ತೆ(ಇಕ್ಯು) ಬಹಳ ಮುಖ್ಯ ಎಂದು ತಿಳಿಸಿದರು.

ಸಚಿವ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಇಂದು ಸರ್ಕಾರಗಳು ಎಷ್ಟೇ ಪ್ರಯತ್ನಪಟ್ಟರೂ ಖಾಸಗಿ ಶಿಕ್ಷಣ ಸಂಸ್ಥೆಗಳಷ್ಟು ಮಟ್ಟಕ್ಕೆ ಶಿಕ್ಷಣ ನೀಡಲಾಗುತ್ತಿಲ್ಲ. ಆಸ್ಟ್ರಿಡ್‌ನಂತಹ ಶಿಕ್ಷಣ ಸಂಸ್ಥೆಗಳು ತಾವು ಪ್ರತಿನಿಧಿಸುವ ಈಗಿನ ಬೆಂಗಳೂರು ಗ್ರಾಮಾಂತರ, ಶಿಡ್ಲಘಟ್ಟದಲ್ಲಿ ಶಾಲೆ ಆರಂಭಿಸುವುದಾದರೆ ಅಗತ್ಯ ಭೂಮಿ ಕಲ್ಪಿಸಿಕೊಡುವ ಭರವಸೆ ನೀಡಿದರು.

ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಸಂಪಾದಕೀಯ ಮಂಡಳಿ ನಿದೇಶಕ ರವಿ ಹೆಗಡೆ ಅವರು ಮಾತನಾಡಿ, ಇಂದು ಅಮೆರಿಕದಂಥ ರಾಷ್ಟ್ರದ ಅನೇಕ ದೈತ್ಯ ಐಟಿ ಕಂಪನಿಗಳಲ್ಲಿ ಭಾರತದ ಪ್ರತಿಭಾನ್ವಿತರು ಮುಖ್ಯಸ್ಥರಾಗಿದ್ದಾರೆ. ಆದರೂ, ನಮ್ಮ ರಾಷ್ಟ್ರದಲ್ಲೇ ಜನ ಇನ್ನೂ ರಸ್ತೆಯಲ್ಲೇ ಕಸ ಬಿಸಾಡುವ, ತಾಳ್ಮೆ, ಸಮಯ ಪ್ರಜ್ಞೆ ತೋರದೆ ತಾವೇ ಟ್ರಾಫಿಕ್‌ ಜಾಮ್‌ ಮಾಡುವಂತಹ ಸನ್ನಿವೇಶಗಳನ್ನು ಕಾಣುತ್ತಿದ್ದೇವೆ. ಹಾಗಾಗಿ ಎಲ್ಲೋ ಒಂದು ಕಡೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮರು ವ್ಯಾಖ್ಯಾನ ಮಾಡುವ, ಆಮೂಲಾಗ್ರ ಬದಲಾವಣೆ ಮಾಡುವ ಸನ್ನಿವೇಶದಲ್ಲಿ ನಾವಿದ್ದೇವೆ. ಕೇವಲ ವಿದ್ಯಾವಂತರನ್ನಾಗಿಸುವ ಶಿಕ್ಷಣ ನೀಡಿದರೆ ಸಾಲದು, ಜನರನ್ನು ಬುದ್ದಿವಂತರನ್ನಾಗಿ ಮಾಡುವ ಶಿಕ್ಷಣ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮತ್ತು ನಿರ್ದೇಶಕ ಎ.ಆರ್‌.ನಾಯಕ್‌ ಮಾತನಾಡಿ, ಆಸ್ಟ್ರಿಡ್‌ ಸಂಸ್ಥೆ ಬೆಂಗಳೂರಿನ ಯಲಹಂಕ, ಸರ್ಜಾಪುರ, ಕಗ್ಗಲೀಪುರ, ಮಾಕಳಿ, ಗಿರಿನಗರ, ಅತ್ತಿಬೆಲೆ, ಹೊಸಕೋಟೆ, ಕನಕಪುರ ಮತ್ತು ಉತ್ತರ ಕನ್ನಡದ ಮಂಕಿ-ಮುರುಡೇಶ್ವರದಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳನ್ನು ಆರಂಭಿಸುತ್ತಿದೆ. ನಮ್ಮ ಶಾಲೆಗಳಲ್ಲಿ ಪಠ್ಯ ಪುಸ್ತಕ ಮತ್ತು ಪರೀಕ್ಷೆಗಳನ್ನು ಮೀರಿ ಮಕ್ಕಳ ವೈಜ್ಞಾನಿಕ ಕಲಿಕಾ ಕ್ರಮ ಮತ್ತು ಜ್ಞಾನವನ್ನು ಒಗ್ಗೂಡಿಸುವ ವಿಶೇಷ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಕುತೂಹಲ ಆಧಾರಿತ ಕಲಿಕೆ, ಏಕಾಗ್ರತೆ, ಭಾವನಾತ್ಮಕ ವಿಕಾಸ, ನೈತಿಕ ಮೌಲ್ಯಗಳು ಹಾಗೂ ಮಕ್ಕಳ ಸಂಘಟನಾತ್ಮಕ ಮನಸ್ಥಿತಿ ಉದ್ದೀಪನಗೊಳಿಸುವತ್ತ ಗಮನ ವಹಿಸಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌, ಮಾಜಿ ಸಚಿವೆ, ಡಾ. ಜಯಮಾಲ ರಾಮಚಂದ್ರ, ಮಾಜಿ ಸಂಸದ ಚಂದ್ರಪ್ಪ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌, ಆಯುರ್ವೇದ ತಜ್ಞೆ ಡಾ.ಅಹಲ್ಯಾ ಶರ್ಮಾ ಮತ್ತಿತರ ಗಣ್ಯರು ಮಾತನಾಡಿದರು.

ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಉತ್ತಮ ಗುಣಮಟ್ಟದ, ಸಾಕಷ್ಟು ಸಂಪಾದಿಸುವ ಶಿಕ್ಷಣ ನೀಡಿದರೂ ಕಡೆಗಾಲದಲ್ಲಿ ಹೆತ್ತವರನ್ನು ನೋಡಿಕೊಳ್ಳದ, ತನ್ನ ದೇಶಕ್ಕೆ, ಕನಿಷ್ಠ ತನ್ನ ಊರಿಗೆ ಏನಾದರು ಸೇವೆ ಮಾಡದೆ ಹೋದರೆ ಏನು ಪ್ರಯೋಜನ. ಹಾಗಾಗಿ ಶಾಲೆಗಳು ಸಮಾಜಿಕ ಪರಿವರ್ತನೆಯ ಕೇಂದ್ರಗಳಾಗಬೇಕು. ಮೌಲ್ಯಯುತ ಶಿಕ್ಷಣ ನೀಡಬೇಕು.

- ಎನ್‌.ರವಿಕುಮಾರ್‌, ವಿರೋಧ ಪಕ್ಷದ ಮುಖ್ಯಸಚೇತಕ, ವಿಧಾನ ಪರಿಷತ್‌

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗಳೂರು ನಿವಾಸಿಗಳ ಮಾಹಿತಿ ಸಂಗ್ರಹಕ್ಕೆ ಕ್ರಮ : ಡಿಕೆ
ಬೆಂಗಳೂರು : ಇಂದಿನಿಂದ ಎರಡು ದಿನ ನಗರದಲ್ಲಿ ಚಳಿ ಹೆಚ್ಚಳ