ಬೆಂಗಳೂರು ನಿವಾಸಿಗಳ ಮಾಹಿತಿ ಸಂಗ್ರಹಕ್ಕೆ ಕ್ರಮ : ಡಿಕೆ

Published : Nov 16, 2026, 10:11 AM IST
DK Shivakumar

ಸಾರಾಂಶ

ನಗರದಲ್ಲಿ ವಾಸಿಸುವ ಜನರ ಸುರಕ್ಷತೆಯ ದೃಷ್ಟಿಯಿಂದ ಪ್ರತಿ ಮನೆಯ ನಿವಾಸಿಗಳ ವಿವರಗಳನ್ನು ಸಂಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.ಮಾಡರ್ನ್ ಟೆಕ್ನೋ ಜಿಮ್ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರು : ನಗರದಲ್ಲಿ ವಾಸಿಸುವ ಜನರ ಸುರಕ್ಷತೆಯ ದೃಷ್ಟಿಯಿಂದ ಪ್ರತಿ ಮನೆಯ ನಿವಾಸಿಗಳ ವಿವರಗಳನ್ನು ಸಂಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಭಾನುವಾರ ಭಾರತೀನಗರ ಪೊಲೀಸ್ ಠಾಣೆ ಬಳಿ ಆಯೋಜಿಸಿದ್ದ ‘ಭಾರತೀನಗರ ಹಬ್ಬ’ದಲ್ಲಿ ಸಮುದಾಯ ಭವನ, ಮಾಡರ್ನ್ ಟೆಕ್ನೋ ಜಿಮ್ ಹಾಗೂ ಬ್ಯಾಡ್ಮಿಂಟನ್ ಕೋರ್ಟ್ ಉದ್ಘಾಟಿಸಿ ಮಾತನಾಡಿದರು.

ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಲ್ಲಿ 45 ಲಕ್ಷ ಮತದಾರ ಸಂಖ್ಯೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಯಾರು ಎಲ್ಲಿ ವಾಸಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸ್ ಇಲಾಖೆಯಲ್ಲೂ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಪ್ರತಿ ಮನೆಯಲ್ಲಿ ವಾಸಿಸುವವರ ಮಾಹಿತಿ ಸಂಗ್ರಹಿಸಲು ಸೂಚಿಸಲಾಗುವುದು ಎಂದು ಹೇಳಿದರು.

ಕಟ್ಟಡಗಳ ನಿರ್ಮಾಣದ ಜೊತೆಗೆ, ಜನರ ಬದುಕಿನಲ್ಲಿ ಬದಲಾವಣೆ ತರುವುದು ಮತ್ತು ಯುವಜನತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದೇ ನಿಜವಾದ ಅಭಿವೃದ್ಧಿ. ಸಾಮಾಜಿಕ ಸಾಮರಸ್ಯ ಮತ್ತು ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡಲು ರಾಜ್ಯಾದ್ಯಂತ 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲಾಗಿದೆ. ಜಿಮ್, ಕ್ರೀಡಾ ಚಟುವಟಿಕೆಗಳಿಗೆ ಬರುವ ಯುವಕರನ್ನೂ ಈ ಸಂಘಗಳ ಸದಸ್ಯರನ್ನಾಗಿ ಮಾಡಬೇಕು ಎಂದು ಸೂಚಿಸಿದರು.

ಭಾರತ್ ಜೋಡೋ ಯುವ ಸಂಘಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪ್ರತಿ ವಾರ್ಡ್‌ನಲ್ಲೂ 200ಕ್ಕೂ ಅಧಿಕ ಸದಸ್ಯರು ಸೇರ್ಪಡೆಯಾಗಿದ್ದಾರೆ. 16 ರಿಂದ 35 ವರ್ಷದ ಯುವಕರನ್ನು ಒಂದೇ ವೇದಿಕೆಯಲ್ಲಿ ಭೇಟಿ ಮಾಡಿ ಸಂವಾದ ನಡೆಸುವ ಉದ್ದೇಶವಿದೆ. ಇದಕ್ಕಾಗಿ ಭಾರತೀನಗರದಲ್ಲೇ ಯುವಕರ ಸಭೆ ಆಯೋಜಿಸಬೇಕು ಎಂದು ಶಾಸಕ ರಿಜ್ವಾನ್ ಅರ್ಷದ್ ಅವರಿಗೆ ಸೂಚಿಸುವುದಾಗಿ ತಿಳಿಸಿದರು.

ವಾಹನ ದಟ್ಟಣೆ ಸವಾಲು:

ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದ ಅಭಿವೃದ್ಧಿಯೂ ಸರ್ಕಾರದ ಆದ್ಯತೆಯಾಗಿದೆ. ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ 1.40 ಕೋಟಿಗೆ ತಲುಪಿದ್ದು, ಸಂಚಾರ ದಟ್ಟಣೆ ದೊಡ್ಡ ಸವಾಲಾಗಿದೆ. ಕಟ್ಟಡ ತೆರವು ವಿಚಾರ ನ್ಯಾಯಾಲಯಕ್ಕೆ ಹೋದರೆ ವರ್ಷಗಟ್ಟಲೆ ವಿಳಂಬವಾಗುವ ಸಾಧ್ಯತೆ ಇದೆ. ಹೀಗಾಗಿ ನಗರದ ಸಮಸ್ಯೆಗಳಿಗೆ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳಲು ಸರ್ಕಾರ ಹಲವು ಚಿಂತನೆಗಳನ್ನು ನಡೆಸುತ್ತಿದೆ ಎಂದು ವಿವರಿಸಿದರು.

ರಾಜ್ಯದ ರಸ್ತೆಗಳ ಅಭಿವೃದ್ಧಿಗೆ 20 ಸಾವಿರದಿಂದ 25 ಸಾವಿರ ಕೋಟಿ ಹಾಗೂ ನಗರಸಭೆ ಮತ್ತು ಪುರಸಭೆಗಳ ಅಭಿವೃದ್ಧಿಗೆ ಮುಂದಿನ ಒಂದು ವರ್ಷದಲ್ಲಿ 10 ಸಾವಿರ ಕೋಟಿ ರು. ವೆಚ್ಚ ಮಾಡುವ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನಿಂದ ಬರುವ ಆದಾಯವನ್ನು ಇಡೀ ರಾಜ್ಯದ ಅಭಿವೃದ್ಧಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಬಿಎ ಮುಖ್ಯ ಆಯುಕ್ತ ಡಾ.ಎಂ.ಮಹೇಶ್ವರರಾವ್‌, ಬೆಂಗಳೂರು ಕೇಂದ್ರ ವಲಯ ಪಾಲಿಕೆ ಆಯುಕ್ತ ಜಿ.ಜಗದೀಶ್‌ ಮತ್ತಿತರರು ಹಾಜರಿದ್ದರು.

ಎಥೆನಾಲ್‌ ಮಿಶ್ರಣ ಬಗ್ಗೆ ದನಿ ಎತ್ತದ ಪ್ರತಿ ಪಕ್ಷಗಳು: ಸಿಎಂ

ಪೆಟ್ರೋಲ್‌ಗೆ ಅಧಿಕ ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಿರುವುದರಿಂದ ವಾಹನಗಳಿಗೆ ಆಗಿರುವ ತೊಂದರೆಗಳ ಬಗ್ಗೆ ಸರ್ಕಾರ ಗಮನ ಹರಿಸಿದೆ. ವಾಹನಗಳ ಇಂಜಿನ್ ಹಾನಿ, ಮೈಲೇಜ್ ಕಡಿಮೆಯಾಗಿರುವುದು ಸೇರಿ ಗ್ರಾಹಕರಿಗೆ ಉಂಟಾಗಿರುವ ಸಮಸ್ಯೆಗಳ ಬಗ್ಗೆ ವಿರೋಧ ಪಕ್ಷಗಳು ಧ್ವನಿ ಎತ್ತುತ್ತಿಲ್ಲ ಎಂದು ಶಿವಕುಮಾರ್‌ ಟೀಕಿಸಿದರು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನಸ್ನೇಹಿಯಾಗಿಲ್ಲ. ಕೇಂದ್ರ ಸರ್ಕಾರ ತೆರಿಗೆ ಕಡಿಮೆ ಮಾಡಿದರೆ ರಾಜ್ಯವೂ ಬೆಲೆ ಕಡಿಮೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದರು.

ಪೊಲೀಸರಿಗೆ ಮಾಹಿತಿ ನೀಡಿ: ರಿಜ್ವಾನ್‌ ಅರ್ಷದ್‌

ಮಕ್ಕಳು ಮಾದಕ ವಸ್ತುಗಳ ವ್ಯಸನಿಯಾಗಿದ್ದರೆ ಪೋಷಕರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಚಿವ ರಿಜ್ವಾನ್‌ ಹರ್ಷದ್‌ ಮನವಿ ಮಾಡಿದರು.

ಶಿವಾಜಿನಗರ ಕ್ಷೇತ್ರವು ಡ್ರಗ್ಸ್, ಗಾಂಜಾದಿಂದ ಮುಕ್ತವಾಗಬೇಕು. ಆದರೆ ಡ್ರಗ್ಸ್‌ ಹಾವಳಿ ನಮ್ಮ ಪ್ರದೇಶದಲ್ಲಿ ಜಾಸ್ತಿ ಆಗುತ್ತಿದೆ. ಪೊಲೀಸರು‌ ಎಷ್ಟೇ ಕ್ರಮಕೈಗೊಂಡರೂ ಸಂಪೂರ್ಣ ಬಂದ್ ಆಗಿಲ್ಲ. ಮಕ್ಕಳು ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದರೆ ಪೋಷಕರೇ ಪೊಲೀಸರಿಗೆ ಮಾಹಿತಿ‌ ನೀಡಬೇಕು ಎಂದು ಕೋರಿದರು.

ಜರ್ಮನಿಯಿಂದ ಆಮದು ಮಾಡಿಕೊಂಡ ಜಿಮ್‌ ಸಲಕರಣೆ ದೊರೆತಿದೆ. ಕ್ಷೇತ್ರದಲ್ಲಿ ನಾಲ್ಕು ಜಿಮ್‌ ಸ್ಥಾಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಹಳೆಯ ಕಲ್ಯಾಣ ಮಂಟಪ ನೆಲಸಮ ಮಾಡಿ ಹೊಸ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗಿದೆ. ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಜನರು ಸಹಕಾರ ನೀಡಬೇಕು ಎಂದು ತಿಳಿಸಿದರು.

ಮುಂದಿನ ವರ್ಷ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ: ಕೃಷ್ಣ ಬೈರೇಗೌಡ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂದಿನ ವರ್ಷ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದರು.

ಶಿವಾಜಿನಗರ ಕ್ಷೇತ್ರಕ್ಕೆ ಏಳೆಂಟು ತಿಂಗಳಲ್ಲಿ ಮೊದಲ ಮೆಟ್ರೋ ರೈಲಿನ ಸಂಪರ್ಕ ದೊರೆಯಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂದಿನ ವರ್ಷ ಸಂಪರ್ಕ ಕಲ್ಪಿಸಲಾಗುವುದು. ಡಿ.4 ರಿಂದ ಬೆಂಗಳೂರು ಜಾತ್ರೆ ಆಯೋಜಿಸಲಾಗುವುದು. ಬಾಂಬೆಯಿಂದ ಕಲಾವಿದರನ್ನು ಕರೆಸಿ ರಸೆಲ್‌ ಮಾರ್ಕೆಟ್‌ ಬಳಿಯೂ ಹಬ್ಬ ಆಯೋಜಿಸಲಾಗುವುದು ಎಂದು ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗಳೂರು : ಇಂದಿನಿಂದ ಎರಡು ದಿನ ನಗರದಲ್ಲಿ ಚಳಿ ಹೆಚ್ಚಳ
ಲಾಲ್‌ಬಾಗ್ ಒಳಗೆ ಸುರಂಗ ಮಾರ್ಗಕ್ಕೆ ಸಿದ್ಧತೆ