ಪರಿಸರವಾದಿಗಳ ವಿರೋಧದ ನಡುವೆಯೂ ನಗರದ ಸಸ್ಯಕಾಶಿ ಲಾಲ್ಬಾಗ್ ಉದ್ಯಾನವನದ ಕೆಳಭಾಗದಲ್ಲಿಯೇ ಸುರಂಗ ಮಾರ್ಗ ಕೊರೆಯಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಅಧಿಕೃತ ಆದೇಶ ಹೊರಬೀಳುವುದು ಮಾತ್ರ ಬಾಕಿ ಉಳಿದಿದೆ.
ಉಮಾಶಂಕರ ಕಾರ್ಯ
ಬೆಂಗಳೂರು : ಪರಿಸರವಾದಿಗಳ ವಿರೋಧದ ನಡುವೆಯೂ ನಗರದ ಸಸ್ಯಕಾಶಿ ಲಾಲ್ಬಾಗ್ ಉದ್ಯಾನವನದ ಕೆಳಭಾಗದಲ್ಲಿಯೇ ಸುರಂಗ ಮಾರ್ಗ ಕೊರೆಯಲು ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಅಧಿಕೃತ ಆದೇಶ ಹೊರಬೀಳುವುದು ಮಾತ್ರ ಬಾಕಿ ಉಳಿದಿದೆ.
ಹೆಬ್ಬಾಳ ಸಮೀಪ ಈಗಾಗಲೇ ಬಿಡಿಎ 2.75 ಕಿ.ಮೀ. ಶಾರ್ಟ್ ಟನಲ್ ಕಾಮಗಾರಿ ಆರಂಭಿಸಿದೆ. ಈ ಜಾಗದ ಪಕ್ಕದಲ್ಲಿಯೇ ಅದಾನಿ ಸಂಸ್ಥೆ ಟೆಂಡರ್ ಪಡೆದಿರುವ ಮೊದಲ ಹಂತದ ಉತ್ತರ-ದಕ್ಷಿಣ ಕಾರಿಡಾರ್ ಸುರಂಗ ಮಾರ್ಗದ ಕಾಮಗಾರಿ ಆರಂಭಿಸಲು ಸಕಲ ಸಿದ್ಧತೆ ನಡೆದಿದೆ.
ಆರಂಭದಲ್ಲಿ ಲಾಲ್ ಬಾಗ್ ಒಳಭಾಗದಲ್ಲಿ ಸುರಂಗ ಕೊರೆಯಲು ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೆಲ ತಿಂಗಳು ಸರ್ಕಾರ ತಟಸ್ಥವಾಗಿತ್ತು. ಅಕ್ಟೋಬರ್ ಮೊದಲ ವಾರದಲ್ಲಿ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಲಾಲ್ ಬಾಗ್ ಒಳಭಾಗದಲ್ಲೇ ಸುರಂಗ ಮಾರ್ಗ ಕೊರೆಯಲು ತೀರ್ಮಾನಿಸಿತು. ಸಚಿವ ಸಂಪುಟ ಸಭೆ ಅನುಮತಿ ಪಡೆದಿರುವ ಕಡತದ ಕುರಿತು ಸರ್ಕಾರ ಯಾವುದೇ ಮಾಹಿತಿ ನೀಡದಂತೆ ಗೌಪ್ಯತೆ ಕಾಪಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪರಿಸರವಾದಿಗಳ ಪ್ರತಿಭಟನೆ ನಂತರ ಲಾಲ್ ಬಾಗ್ ಕುರಿತು ಅಧಿಕಾರಿಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸುವಂತೆ ತಿಳಿಸಿತ್ತು ಎನ್ನಲಾಗಿದೆ.
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ ಸ್ಮೈಲ್ ) ಹಾಗೂ ಜಿಬಿಎ ಅಧಿಕಾರಿಗಳು ನಗರದ ನಿಮ್ಹಾನ್ಸ್ ಕೆಳ ಭಾಗ ಹಾಗೂ ಲಾಲ್ ಭಾಗ್ ಪಕ್ಕದ ಜಮೀನು ಸೇರಿ ಎರಡು ಕಡೆಗಳ ಭೂಮಿ ಒಳಭಾಗದಲ್ಲಿ ಸುರಂಗ ಕೊರೆಯಬಹುದು ಎಂಬ ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ, ಸುರಂಗ ಮಾರ್ಗ ಬದಲಾದರೆ ಯೋಜನೆಯ ಗಾತ್ರ ಬದಲಾಗುವುದಲ್ಲದೆ, ಖಾಸಗಿ ಜಮೀನುಗಳೂ ಇರುವುದರಿಂದ ಮತ್ತೊಂದು ವಿವಾದ ಸೃಷ್ಟಿಯಾಗಲು ಅವಕಾಶವಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬಂದವು. ಇದರಿಂದಾಗಿ ಅನ್ಯಮಾರ್ಗವಿಲ್ಲದೆ, ಲಾಲ್ ಬಾಗ್ ಕೆಳಭಾಗದಲ್ಲಿಯೇ ಸುರಂಗ ಮಾರ್ಗ ನಿರ್ಮಾಣ ಮಾಡುವ ಅನಿವಾರ್ಯಕ್ಕೆ ಸರ್ಕಾರ ಸಿಲುಕಿದೆ ಎಂದು ಮೂಲಗಳು ತಿಳಿಸಿವೆ.
ಹೆಬ್ಬಾಳ ಸಮೀಪ ಬಿಡಿಎ ಆರಂಭಿಸಿರುವ ಶಾರ್ಟ್ ಟನಲ್ ಕಾಮಗಾರಿ ಸಮೀಪದಲ್ಲಿಯೇ ಎಸ್ಟೀಮ್ ಮಾಲ್ ಜಂಕ್ಷನ್ನಿಂದ ಸಿಲ್ಕ್ ಬೋರ್ಡ್ ನ ಕೆಎಸ್ ಆರ್ ಪಿ ಜಂಕ್ಷನ್ವರೆಗೆ 16.74 ಕಿ.ಮೀ ಉದ್ದದ 3-ಲೇನ್ನ ಭೂಮಿ ಒಳಗಿನ ಅವಳಿ ಸುರಂಗ ರಸ್ತೆ ಕಾಮಗಾರಿ ಆರಂಭಿಸಬೇಕಾಗಿದೆ.
ಆರಂಭದಲ್ಲಿ 25 ಮೀ. ಆಳಕ್ಕೆ ಇಳಿಯುವ ಸುರಂಗ, ಭೂಮಿ ಕೊರೆಯುವ ಯಂತ್ರದ ಸಹಾಯದಿಂದ ಭೂಮಿಯ ಒಳಭಾಗದಲ್ಲಿಯೇ ಕೊರೆದು ರೇಸ್ ಕೋರ್ಸ್ ಸಮೀಪದ ಶೇಷಾದ್ರಿ ರಸ್ತೆವರೆಗೆ ನಿರ್ಮಾಣವಾಗಲಿದೆ. ಎರಡು ಪ್ಯಾಕೇಜ್ ಗಳಲ್ಲಿ ಕಾಮಗಾರಿ ಆರಂಭವಾಗಲಿದ್ದು, ಪ್ಯಾಕೇಜ್ ಒಂದರಲ್ಲಿ 3-ಲೇನ್ ಹಾಗೂ 2-ಲೇನ್ ಪ್ರವೇಶ ಹಾಗೂ ನಿರ್ಗಮನ ರಾಂಪ್ಗಳನ್ನು ಒಳಗೊಂಡಿದೆ. ಈ ಪ್ಯಾಕೇಜ್ ನಲ್ಲಿ 8.7 ಕಿ.ಮೀ.ವರೆಗೆ ಸುರಂಗ ನಿರ್ಮಾಣ ನಡೆಯಲಿದೆ. ಎರಡನೇ ಪ್ಯಾಕೇಜ್ ನಲ್ಲಿ ಸಿಲ್ಕ್ ಬೋರ್ಡ್ ವರೆಗಿನ ಕಾಮಗಾರಿ ಮುಕ್ತಾಯವಾಗಲಿದೆ.
17,000 ಕೋಟಿ ವೆಚ್ಚದ ಈ ಯೋಜನೆ ಗುತ್ತಿಗೆ
ಒಟ್ಟು 17,000 ಕೋಟಿ ವೆಚ್ಚದ ಈ ಯೋಜನೆ ಗುತ್ತಿಗೆಯನ್ನು ಅದಾನಿ ಸಂಸ್ಥೆ ಪಡೆದುಕೊಂಡಿದ್ದು, ಮೂಲಗಳ ಪ್ರಕಾರ ಭೂಮಿಯ ಒಳಪದರ, ಅದರಲ್ಲಿರುವ ಕಲ್ಲಿನ ಪ್ರಕಾರಗಳನ್ನು ಈಗಾಗಲೇ ಸಂಸ್ಥೆ ಅಧ್ಯಯನ ನಡೆಸಿದೆ. ಸುರಂಗ ಕೊರೆಯುವ ಯಂತ್ರಗಳ ತಯಾರಿಕೆ ಆರಂಭಿಸಲಾಗಿದ್ದು, ಕೊರೆಯುವ ಯಂತ್ರಗಳ ತಯಾರಿಕೆಗೆ 8 ರಿಂದ 9 ತಿಂಗಳ ಕಾಲಾವಧಿ ಬೇಕಾಗಬಹುದು. ಅಲ್ಲಿಯವರೆಗೆ ಸರ್ಕಾರದಿಂದ ಎಲ್ಲಾ ಅನುಮತಿಗಳನ್ನು ನೀಡಿ ಕಾಮಗಾರಿ ಆರಂಭಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವ ಭರವಸೆಯನ್ನು ಸಂಸ್ಥೆಗೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಡಿಪಿಆರ್ನಂತೆ ಟೆಂಡರ್ ಆಗಿರುವುದರಿಂದ ಆದೇಶವೂ ಅದರಂತೆ ಆಗುತ್ತದೆ- ತುಷಾರ್
ಡಿಪಿಎಆರ್ ಪ್ರಕಾರ ಲಾಲ್ ಬಾಗ್ ಕೆಳಭಾಗದಲ್ಲಿಯೇ ಟನಲ್ ಹೋಗುತ್ತದೆ ಎಂದು ಆಗಿರುವುದರಿಂದ ಟೆಂಡರ್ ಕುರಿತ ಆದೇಶವೂ ಲಾಲ್ ಬಾಗ್ ಕೆಳಭಾಗದಲ್ಲಿಯೇ ಟನಲ್ ಹೋಗುತ್ತದೆ ಎಂದು ಆಗುತ್ತದೆ. ಆದರೆ, ಕಾಮಗಾರಿ ನಡೆಯುವಾಗ ಅದನ್ನು ಬದಲಾಯಿಸುತ್ತೇವೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಲಾಲ್ ಬಾಗ್ ಸಮೀಪ ಸುರಂಗ ತೆರೆಯಬೇಕೆಂಬ ಉದ್ದೇಶವಿತ್ತು. ಆದರೆ, ಅದನ್ನು ಕಾಮಗಾರಿ ನಡೆಯುವ ಸಮಯದಲ್ಲಿ ಬದಲಾಯಿಸಿ ಜಯನಗರದಲ್ಲಿ ಸರ್ಕಾರಿ ಜಾಗದಲ್ಲಿ ತೆರೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಕಾಮಗಾರಿ ನಡೆಯುವ ಸಂದರ್ಭ ಲಾಲ್ ಬಾಗ್ ಪಕ್ಕಕ್ಕೆ ನಿರ್ಮಾಣ ಮಾಡಲಾಗುವುದು ಎಂದರು.
