ಬೆಂಗಳೂರು : ನಿರಂತರವಾಗಿ ಸುರಿಯುತ್ತಿರುವ ಮಳೆ ಎಫೆಕ್ಟ್‌- ಸಾಂಕ್ರಾಮಿಕ ರೋಗದ ಭೀತಿ

Published : Oct 24, 2024, 05:49 AM IST
In Pics: Bengaluru floods again, rains to lash city for 3 more days

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ಎಂಟ್ಹತ್ತು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶ, ರಾಜಕಾಲುವೆ ಹಾಗೂ ಕೆರೆ ಆಸುಪಾಸಿನಲ್ಲಿರುವ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಇದರಿಂದ ಆ ಭಾಗದಲ್ಲಿ ಸಾಂಕ್ರಾಮಿಕ ರೋಗಗಳು ಸ್ಫೋಟಗೊಳ್ಳುವ ಆತಂಕ ಎದುರಾಗಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ಎಂಟ್ಹತ್ತು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶ, ರಾಜಕಾಲುವೆ ಹಾಗೂ ಕೆರೆ ಆಸುಪಾಸಿನಲ್ಲಿರುವ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಇದರಿಂದ ಆ ಭಾಗದಲ್ಲಿ ಸಾಂಕ್ರಾಮಿಕ ರೋಗಗಳು ಸ್ಫೋಟಗೊಳ್ಳುವ ಆತಂಕ ಎದುರಾಗಿದೆ.

ಒಂದು ವಾರಕ್ಕೂ ಅಧಿಕ ದಿನಗಳಿಂದ ಬೆಂಗಳೂರಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಮಹದೇವಪುರ, ಯಲಹಂಕ, ರಾಜರಾಜೇಶ್ವರಿನಗರ, ದಾಸರಹಳ್ಳಿ ಭಾಗದ ಹಲವು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿದ್ದು, ರಾಜಕಾಲುವೆಗಳಲ್ಲಿ ನೀರು ಹರಿವಿನ ಮಟ್ಟ ಹೆಚ್ಚಾಗಿ ಆಸುಪಾಸಿನ ಬಡಾವಣೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ಕಳೆದ ಸೋಮವಾರ ಮತ್ತು ಮಂಗಳವಾರದ ಮಳೆಗೆ ಬರೋಬ್ಬರಿ 45ಕ್ಕೂ ಅಧಿಕ ಬಡಾವಣೆಗಳು ಅಕ್ಷರಶಃ ದ್ವೀಪಗಳಂತೆ ಮಾರ್ಪಟ್ಟಿವೆ.

ತೊಟ್ಟಿಗಳಲ್ಲಿ ಕೊಳಚೆ ನೀರು: ವಾರದ ಮಳೆಗೆ ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಮನೆಗಳಿಗೆ ಹಾಗೂ ವಸತಿ ಕಟ್ಟಡಗಳಿಗೆ ನೀರು ನುಗ್ಗಿದೆ. ಇದೀಗ ಪ್ರವಾಹ ಪರಿಸ್ಥಿತಿ ಇಳಿಮುಖಗೊಳ್ಳುತ್ತಿದೆ. ಕೊಳಚೆ ನೀರು ಕುಡಿಯುವ ನೀರು ಶೇಖರಣೆ ತೊಟ್ಟಿಗಳಲ್ಲಿ ತುಂಬಿಕೊಂಡಿದೆ. ರಸ್ತೆಗಳು, ಮಳೆ ನೀರುಗಾಲುವೆಯಲ್ಲಿ ಕೆಸರು ಶೇಖರಣೆಯಾಗಿದೆ. ತಗ್ಗು, ಗುಂಡಿಯಲ್ಲಿ ನಿಂತ ನೀರು ಹೊರ ಹೋಗುವುದಕ್ಕೆ ಅವಕಾಶವಿಲ್ಲದಂತಾಗಿ ದುರ್ವಾಸೆ ಆರಂಭಗೊಂಡಿರುವುದು ಕರುಳ ಬೇನೆ, ಕಾಲರಾ, ಜಾಂಡೀಸ್‌, ಇಲಿಜ್ವರ, ಡೆಂಘೀ, ಚಿಕುನ್‌ ಗುನ್ಯಾ, ಮಲೇರಿಯಾದಂತಹ ಸಾಂಕ್ರಮಿಕ ರೋಗಗಳ ಭೀತಿ ಎದುರಾಗಿದೆ.

ಹೀಗಾಗಿ, ಬಿಬಿಎಂಪಿಯ ಆರೋಗ್ಯ ವಿಭಾಗವು ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಳ್ಳುವಂತೆ ಬಿಬಿಎಂಪಿಯ ಎಲ್ಲಾ ವಲಯದ ಆರೋಗ್ಯಾಧಿಕಾರಿಗಳಿಗೆ ಸೂಚಿಸಿ ಆದೇಶಿಸಿದೆ.

ತಾತ್ಕಾಲಿಕ ಚಿಕಿತ್ಸಾ ಶಿಬಿರ

ಪ್ರವಾಹ ಉಂಟಾದ ಸ್ಥಳಗಳಿಗೆ ತುರ್ತು ಸ್ಪಂದನಾ ತಂಡ (ರ್‍ಯಾಪಿಡ್‌ ರೆಸ್ಪಾನ್ಸ್‌ ಟೀಂ) ನಿಯೋಜನೆ ಮಾಡುವುದು. ಅಗತ್ಯ ಔಷಧ ಒದಗಿಸುವುದು. ಪ್ರವಾಹ ಪೀಡಿತ ಸ್ಥಳದಲ್ಲಿ ತಾತ್ಕಾಲಿಕ ಚಿಕಿತ್ಸಾ ಶಿಬಿರ ನಡೆಸುವುದು. ಈ ಶಿಬಿರವು ದಿನದ 24 ಗಂಟೆ ಕಾರ್ಯ ನಿರ್ವಹಿಸುವುದು. ಗಂಭೀರ ಸ್ವರೂಪದ ರೋಗಿಗಳನ್ನು ಆ್ಯಂಬುಲೆನ್ಸ್‌ ಮೂಲಕ ಹತ್ತಿರದ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಿ ವ್ಯವಸ್ಥೆ ಮಾಡುವಂತೆ ನಿರ್ದೇಶಿಸಲಾಗಿದೆ.

ಜೀವರಕ್ಷಕ ಮಾತ್ರೆ ಲಭ್ಯವಿರಲಿ

ಬಿಬಿಎಂಪಿಯ ನಮ್ಮ ಕ್ಲಿನಿಕ್‌, ರೆಫರಲ್‌ ಆಸ್ಪತ್ರೆ, ಹೆರಿಗೆ ಆಸ್ಪತ್ರೆ, ಜನರಲ್‌ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿ ಲಭ್ಯವಿರುವ ನೋಡಿಕೊಳ್ಳಬೇಕು. ಜತೆಗೆ, ಓಆರ್‌ಎಸ್‌ ಮತ್ತು ಹಾಲೋಜೆನ್‌ ಮಾತ್ರೆಗಳನ್ನು ಆರೋಗ್ಯ ಸಹಾಯಕರು, ಅಂಗನವಾಡಿ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಪರೀಶಿಲಿಸಿ ಅಗತ್ಯವಿರುವ ಕಡೆ ನೀಡಬೇಕು ಎಂದು ನಿರ್ದೇಶಿಸಲಾಗಿದೆ.

ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ

ಬಿಬಿಎಂಪಿಯ ವಲಯ ಆರೋಗ್ಯಾಧಿಕಾರಿಗಳು ಪ್ರವಾಹ ಪರಿಸ್ಥಿತಿ ಉಂಟಾದ ಪ್ರದೇಶದಲ್ಲಿ ಬೆಂಗಳೂರು ಜಲಮಂಡಳಿಯ ಅಧಿಕಾರಿಗಳ ಸಹಯೋಗದಲ್ಲಿ ಕುಡಿಯುವ ನೀರಿನ ಕ್ಲೋರಿನ್‌ ಹಾಗೂ ಗುಣಮಟ್ಟ ಪರಿಶೀಲನೆ ನಡೆಸಿ ವರದಿ ನೀಡಬೇಕು. ನೀರು ಪೂರೈಕೆ ಆಗುತ್ತಿರುವ ಕೊಳವೆಗಳನ್ನು ಪರಿಶೀಲನೆ ನಡೆಸಿ ಸೋರಿಕೆ ಕಂಡು ಬಂದರೆ ದುರಸ್ಥಿ ಪಡಿಸುವುದು. ಒಂದು ವೇಳೆ ನೀರು ಕಲುಷಿತ ನೀರು ಎಂಬುದು ಕಂಡು ಬಂದರೆ ಪರ್ಯಾಯ ನೀರಿನ ವ್ಯವಸ್ಥೆಗೆ ಬಿಬಿಎಂಪಿ ನಿರ್ದೇಶಿಸಿದೆ.

ಹೋಟೆಲ್‌ಗಳಲ್ಲಿ ಬಿಸಿ ನೀರು ಪೂರೈಸುವಂತೆ ನಿರ್ದೇಶನ

ಪ್ರವಾಹ ಉಂಟಾಗಿರುವ ಪ್ರದೇಶದಲ್ಲಿನ ಹೋಟೆಲ್‌ ಮಾಲೀಕರು ಗ್ರಾಹಕರಿಗೆ ಕಡ್ಡಾಯವಾಗಿ ಬಿಸಿ ನೀರು ಪೂರೈಕೆ ಮಾಡಬೇಕು. ಜತೆಗೆ ಆಹಾರದ ಗುಣಮಟ್ಟ ಪರಿಶೀಲನೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೋಟೆಲ್‌ ಮಾಲೀಕರು ಸೇರಿದಂತೆ ಸಾರ್ವಜನಿಕರು ತಮ್ಮ ನೀರು ಶೇಖರಣೆ ಮಾಡುವ ತೊಟ್ಟಿಗಳನ್ನು ಬ್ಲೀಚಿಂಗ್‌ ಪುಡಿ ಹಾಕಿ ಸ್ವಚ್ಛಗೊಳಿಸಬೇಕೆಂದು ಅರಿವು ಮೂಡಿಸಬೇಕೆಂದು ತಿಳಿಸಲಾಗಿದೆ.

ಬೀದಿ ಬದಿಯಲ್ಲಿ ಆಹಾರ, ಹಣ್ಣು ಮಾರಾಟ ನಿಷೇಧ

ಪ್ರವಾಹ ಪರಿಸ್ಥಿತಿ ಉಂಟಾಗಿರುವ ಪ್ರದೇಶದಲ್ಲಿ ಕತ್ತರಿಸಿದ ಹಣ್ಣು ಹಾಗೂ ತೆರೆದಿಟ್ಟ ಆಹಾರ ಪದಾರ್ಥ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳುವುದು. ಜತೆಗೆ, ಈ ರೀತಿ ಪದಾರ್ಥಗಳನ್ನು ಸೇವನೆ ಮಾಡಬಾರದೆಂದು ಜನರಿಗೆ ಅರಿವು ಮೂಡಿಸುವಂತೆ ಹೆಲ್ತ್‌ ಸೂಪರ್‌ ವಸರ್ಸ್‌ ಹಾಗೂ ಹಿರಿಯ ಆರೋಗ್ಯ ಪರಿವೀಕ್ಷಕರಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

ಮಳೆಯಿಂದ ನಗರದಲ್ಲಿ ಹಲವು ಬಡಾವಣೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮ ಕುಡಿಯುವ ನೀರು ಪರೀಕ್ಷೆ ನಡೆಸುವುದು ಸೇರಿದಂತೆ ಮೊದಲಾದ ಕ್ರಮ ಕೈಗೊಳ್ಳಲಾಗಿದೆ.

ಸುರಳ್ಕರ್ ವಿಕಾಸ್ ಕಿಶೋರ್, ವಿಶೇಷ ಆಯುಕ್ತ, ಆರೋಗ್ಯ ವಿಭಾಗ.

PREV

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌