ಅಂತಾರಾಷ್ಟ್ರೀಯ ಟ್ರಾವೆಲ್ ಎಕ್ಸ್‌ಪೋ-2025 - ಪ್ರವಾಸೋದ್ಯಮದಿಂದ 1.5 ಲಕ್ಷ ನೌಕರಿ ಸೃಷ್ಟಿ : ಸಿಎಂ

Published : Feb 27, 2025, 10:04 AM IST
Siddaramaiah

ಸಾರಾಂಶ

ಇತ್ತೀಚೆಗೆ ಹೊರತಂದಿರುವ ಕರ್ನಾಟಕ ಪ್ರವಾಸೋದ್ಯಮ ನೀತಿಯಿಂದ (2024-2029) ಮುಂದಿನ 5 ವರ್ಷಗಳಲ್ಲಿ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ 8,000 ಕೋಟಿ ರು. ನೇರ ಹೂಡಿಕೆ ಮತ್ತು ಒಂದೂವರೆ ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

 ಬೆಂಗಳೂರು :  ಇತ್ತೀಚೆಗೆ ಹೊರತಂದಿರುವ ಕರ್ನಾಟಕ ಪ್ರವಾಸೋದ್ಯಮ ನೀತಿಯಿಂದ (2024-2029) ಮುಂದಿನ 5 ವರ್ಷಗಳಲ್ಲಿ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ 8,000 ಕೋಟಿ ರು. ನೇರ ಹೂಡಿಕೆ ಮತ್ತು ಒಂದೂವರೆ ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರವಾಸೋದ್ಯಮ ಇಲಾಖೆ ನಗರದ ಬಿಐಇಸಿಯಲ್ಲಿ ಆಯೋಜಿಸಿರುವ 3 ದಿನಗಳ (ಫೆ.26-28) ‘ಕರ್ನಾಟಕ ಇಂಟರ್‌ನ್ಯಾಷನಲ್ ಟ್ರಾವೆಲ್ ಎಕ್ಸ್‌ಪೋ-2025’ (ಕೈಟ್) ಅನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಕಳೆದ 2 ವರ್ಷಗಳಲ್ಲಿ ರಾಜ್ಯದ ಪ್ರವಾಸೋದ್ಯಮ ವಲಯದ ಮೂಲಸೌಕರ್ಯಗಳು, ಉತ್ಪನ್ನಗಳು ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ 440 ಕೋಟಿ ರು. ಹಂಚಿಕೆ ಮಾಡಲಾಗಿದೆ. ಪ್ರವಾಸೋದ್ಯಮ ನೀತಿ ಕಾರ್ಯರೂಪಕ್ಕೆ ತರಲು 1,350 ಕೋಟಿ ರು. ಬಜೆಟ್ ಒದಗಿಸಲಾಗಿದೆ ಎಂದು ಹೇಳಿದರು.

ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡು ರಾಜ್ಯದ ಪ್ರವಾಸಿ ತಾಣಗಳನ್ನು ಉದ್ಯಮ ಸ್ನೇಹಿ ಮತ್ತು ಗ್ರಾಹಕರಿಗೆ ಹತ್ತಿರವಾಗಿಸುತ್ತಿದ್ದೇವೆ. ಪ್ರವಾಸೋದ್ಯಮದ ಬೆಳವಣಿಗೆ, ಅನ್ವೇಷಣೆ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ. ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿ, ವಾಸ್ತವ್ಯ ಮತ್ತು ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಮೂಲಕ ಉದ್ಯಮ ಆರಂಭಿಸುವ ಪ್ರಕ್ರಿಯೆ ಸರಳೀಕರಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿಯವರು ಭರವಸೆ ನೀಡಿದರು.

ನಾಲ್ಕು ಯುನೆಸ್ಕೋ ತಾಣಗಳು, 35 ರಾಷ್ಟ್ರೀಯ ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ತಾಣಗಳು ಸೇರಿ ಕರ್ನಾಟಕವು ಅಪೂರ್ವವಾದ ಭೌಗೋಳಿಕ ಪ್ರದೇಶಗಳು, ಪ್ರೇಕ್ಷಣೀಯ, ಐತಿಹಾಸಿಕ ಸ್ಥಳಗಳು, ವೈವಿಧ್ಯಮಯ ಸಂಸ್ಕೃತಿ ಮತ್ತು ವಿಫುಲ ಅವಕಾಶಗಳ ಭೂಮಿಯಾಗಿದೆ. ಈ ಪ್ರತಿಷ್ಠಿತ ಕಾರ್ಯಕ್ರಮದ ಮೂಲಕ ಕರ್ನಾಟಕವನ್ನು ಜಗತ್ತಿನ ನೆಚ್ಚಿನ ಮತ್ತು ಆಕರ್ಷಕ ಪ್ರವಾಸಿ ತಾಣವಾಗಿ ರೂಪಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಘೋಷಿಸಿದರು.

ಹೂಡಿಕೆಗೆ ಹೆಚ್ಚು ಅವಕಾಶ-ಎಚ್‌ಕೆಪಿ: ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ದೇಶ-ವಿದೇಶಗಳ ಪ್ರವಾಸೋದ್ಯಮಿಗಳು, ಆಸಕ್ತರು ಒಂದೆಡೆ ಸೇರಿ ಕರ್ನಾಟಕದಲ್ಲಿನ ಅವಕಾಶ ಬಳಸಿಕೊಳ್ಳಲು ಕೈಟ್ ಒಂದು ಅದ್ಭುತವಾದ ವೇದಿಕೆ ಕಲ್ಪಿಸಿದೆ. ಪ್ರವಾಸಿ ಸ್ಥಳಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಜಾಗತಿಕ ಮಟ್ಟದ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಉದ್ಯಮಿಗಳಿಗೆ ಪೂರಕವಾದ ನೀತಿ ಜಾರಿಗೆ ತಂದಿದ್ದೇವೆ. ಇದನ್ನು ಸದುಪಯೋಗಪಡಿಸಿಕೊಂಡು ಜನರಿಗೆ ಉತ್ತಮ ಪ್ರವಾಸದ ಅನುಭವ ಒದಗಿಸಬೇಕು. ರಾಜ್ಯದಲ್ಲಿ ಜೀವನೋಪಾಯ, ಆರ್ಥಿಕತೆ ಬೆಳವಣಿಗೆ, ಉದ್ಯೋಗವಕಾಶಗಳ ಸೃಷ್ಟಿಗೆ ಕೊಡುಗೆ ನೀಡಬೇಕು ಎಂದರು.

ಸಾಹಸಿ ಪ್ರವಾಸೋದ್ಯಮ, ಐತಿಹಾಸಿಕ ತಾಣ ಪ್ರವಾಸೋದ್ಯಮ, ನಮ್ಮ ಸ್ಮಾರಕ, ನಮ್ಮ ಹೆಮ್ಮೆ ಯೋಜನೆ ಸೇರಿದಂತೆ ಅನೇಕ ಹೊಸತನಗಳನ್ನು ಪರಿಚಯಿಸುತ್ತಿದೆ. ವಾಸ್ತವ್ಯ, ಆಹಾರ, ಮನೋರಂಜನಾ ಕ್ರೀಡೆಗಳು, ಕ್ಷೇಮ ಸೇವಾಧಾಮಗಳು, ಸಾರಿಗೆ ಸೇರಿ ಅನೇಕ ವಲಯಗಳಲ್ಲಿ ದೊಡ್ಡ ಮತ್ತು ಸಣ್ಣ ಗಾತ್ರದ ಹೂಡಿಕೆ ವಿಫುಲ ಅವಕಾಶಗಳು ಇವೆ. ಎಲ್ಲರಿಗೂ ಅವಕಾಶಗಳನ್ನು ಕಲ್ಪಿಸಲು ಸ್ಪರ್ಧಾತ್ಮಕ ವಾತಾವರಣ ನಿರ್ಮಿಸುತ್ತಿದ್ದೇವೆ ಎಂದು ಸಚಿವ ಪಾಟೀಲ್ ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ.ಎಂ.ಸಿ. ಸುಧಾಕರ್, ಭೋಸರಾಜು, ಶಾಸಕರಾದ ರಿಜ್ವಾನ್ ಅರ್ಷದ್ ಉಪಸ್ಥಿತರಿದ್ದರು.

ಸೀಪ್ಲೇನ್‌ ಸೇವೆಗೆ ಯೋಚನೆ: ಎಚ್‌ಕೆಪಿ

ರಾಜ್ಯದಲ್ಲಿ ಸೀಪ್ಲೇನ್ ಸೇವೆ ಆರಂಭಿಸುವ ಉದ್ದೇಶವಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಪ್ರವಾಸಿತಾಣಗಳ ಬಳಿ ಇರುವ ಜಲಾಶಯ, ಸಮುದ್ರ ಅಥವಾ ಜಲಮೂಲಗಳನ್ನು ಸೀಪ್ಲೇನ್ ಲ್ಯಾಂಡಿಂಗ್‌, ಟೇಕಾಫ್‌ಗೆ ಬಳಸಲಾಗುತ್ತದೆ. ಪ್ರವಾಸಿಗರು ಸೀಪ್ಲೇನ್‌ನಲ್ಲಿ ಹಾರಾಡಿ ಆಕಾಶದಿಂದ ಪ್ರೇಕ್ಷಣೀಯ ತಾಣಗಳನ್ನು ವೀಕ್ಷಿಸಬಹುದಾಗಿದೆ ಎಂದರು.

ಕೈಟ್-2025 ಮುಖ್ಯಾಂಶಗಳು

- ಬೆಂಗಳೂರು ಅಂತಾರಾಷ್ಟ್ರೀಯ ಎಕ್ಸಿಬಿಷನ್‌ ಕೇಂದ್ರದಲ್ಲಿ ಕೈಟ್ ಎಕ್ಸ್‌ಪೋ-2025

- ದೇಶ-ವಿದೇಶಗಳ 400ಕ್ಕೂ ಹೆಚ್ಚು ಪ್ರವಾಸೋದ್ಯಮ ಸಂಸ್ಥೆಗಳು ಇದರಲ್ಲಿ ಭಾಗಿ

- ರಾಜ್ಯದ ಐತಿಹಾಸಿಕ ತಾಣ, ನೂತನ ಪ್ರವಾಸೋದ್ಯಮ ಸರ್ಕ್ಯೂಟ್‌ಗಳ ಪರಿಚಯ

- ಪ್ರವಾಸಿ ತಾಣದಲ್ಲಿನ ಉದ್ಯಮ ಅವಕಾಶ ಅರಿಯಲು ‘ಬಿಸಿನೆಸ್‌ ಟು ಬಿಸಿನೆಸ್’ ಸಭೆ

- ಹೊಟೇಲ್‌ಗಳು, ಟೂರ್ ಆಪರೇಟರ್ಸ್, ಎಫ್‌ಕೆಸಿಸಿಐ ಮತ್ತಿತರ ಸಂಸ್ಥೆಗಳು ಭಾಗಿ

ಜಗತ್ತಿನ ಅತ್ಯಂತ ಆಕರ್ಷಕ ಮತ್ತು ಪ್ರವಾಸಿಗರ ನೆಚ್ಚಿನ ತಾಣವಾಗಿ ಕರ್ನಾಟಕವನ್ನು ಅಭಿವೃದ್ಧಿಪಡಿಸಲು ನಾವು ಬದ್ಧರಾಗಿದ್ದೇವೆ. ಪ್ರವಾಸೋದ್ಯಮಿಗಳು, ಟೂರ್ ಮತ್ತು ಟ್ರಾವೆಲ್ಸ್ ಏಜೆನ್ಸಿಗಳು ಸೇರಿ ಆತಿಥ್ಯ ವಲಯದ ಎಲ್ಲರೂ ಪ್ರವಾಸೋದ್ಯಮದ ಬೆಳವಣಿಗೆಗೆ ಕೈಜೋಡಿಸಬಹುದು.

-ಸಿದ್ದರಾಮಯ್ಯ, ಮುಖ್ಯಮಂತ್ರಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಅಪಾರ ಭಕ್ತರ ಸಮ್ಮುಖದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ
ಅಭಿವೃದ್ಧಿ ಪಥದತ್ತ ದೇವನಹಳ್ಳಿ ತಾಲೂಕು