ಪೊಲೀಸ್ ಇಲಾಖೆಯಲ್ಲಿ ಪುರುಷ ಅಧಿಕಾರಿ ಮತ್ತು ಸಿಬ್ಬಂದಿ ಮಾಡುವಂತಹ ಕಠಿಣ ಕೆಲಸಗಳನ್ನು ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳೂ ಮಾಡುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮೆಚ್ಚುಗೆ ಸೂಚಿಸಿದ್ದಾರೆ.
ಬೆಂಗಳೂರು : ಪೊಲೀಸ್ ಇಲಾಖೆಯಲ್ಲಿ ಪುರುಷ ಅಧಿಕಾರಿ ಮತ್ತು ಸಿಬ್ಬಂದಿ ಮಾಡುವಂತಹ ಕಠಿಣ ಕೆಲಸಗಳನ್ನು ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳೂ ಮಾಡುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮೆಚ್ಚುಗೆ ಸೂಚಿಸಿದ್ದಾರೆ.
ಮೈಸೂರು ರಸ್ತೆಯ ಸಿಎಆರ್ ಕೇಂದ್ರ ಸ್ಥಾನದ ಮೈದಾನದಲ್ಲಿ ಶನಿವಾರ ನಡೆದ ಮಾಸಿಕ ಕವಾಯತು ಮತ್ತು ವಿಶ್ವ ಮಹಿಳಾ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಕೆಲ ವರ್ಷಗಳ ಹಿಂದೆ ಪೊಲೀಸ್ ಇಲಾಖೆಯಲ್ಲಿ ಠಾಣಾ ಬರಹಗಾರರು, ಸಹಾಯಕ ತನಿಖಾಧಿಕಾರಿ, ಬಂದೋಬಸ್ತ್ ಉಸ್ತುವಾರಿ ಸೇರಿದಂತೆ ಕೆಲ ಕೆಲಸಗಳು ಪುರುಷ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ಮಾತ್ರ ಸಾಧ್ಯ ಎನ್ನುವ ಭಾವನೆ ಇತ್ತು. ಇತ್ತೀಚೆಗೆ ಈ ಕೆಲಸಗಳನ್ನು ಮಹಿಳೆಯರು ಯಶಸ್ವಿಯಾಗಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ನಗರದ 126 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಪ್ರಶಂಸನಾ ಪತ್ರ ವಿತರಿಸಿದರು. ಅಂತೆಯೆ ನಗರ ಪೊಲೀಸರೇ ನಡೆಸುತ್ತಿರುವ ಪರಿಹಾರ ಕೇಂದ್ರ ಹಾಗೂ ವಿವಿಧ ಕಾರ್ಪೊರೇಟ್ ಸಂಸ್ಥೆಗಳ ಸಹಯೋಗದಲ್ಲಿ 32 ಮಹಿಳಾ ಫಲಾನುಭವಿಗಳಿಗೆ ಉಚಿತವಾಗಿ ಇ-ಆಟೋ ರಿಕ್ಷಾಗಳನ್ನು ವಿತರಿಸಲಾಗಿದ್ದು, ಇಬ್ಬರು ಮಹಿಳೆಯರಿಗೆ 2 ಚಾಯ್ ಬಂಡಿ, 10 ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.
ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ, ಡಿಸಿಪಿ ಸಾರಾ ಫಾತಿಮಾ, ಎಸಿಪಿ ಉಮಾರಾಣಿ ಸೇರಿದಂತೆ ಹಿರಿಯ ಹಾಗೂ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಣಿ ಚೆನ್ನಮ್ಮ ಪಡೆಯಿಂದ ಪ್ರದರ್ಶನ
ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ನಗರ ಪೊಲೀಸ್ ವಿಭಾಗದ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ವಿಶೇಷ ಕವಾಯತು ನಡೆಸಿತು. ಅಂತೆಯೆ ಮಹಿಳೆಯರೇ ಇರುವ ‘ರಾಣಿ ಚೆನ್ನಮ್ಮ ಪಡೆ’ ತಂಡವು ವಿಶೇಷ ಪ್ರದರ್ಶನ ನೀಡಿ ಗಮನ ಸೆಳೆಯಿತು.