ಕಪ್‌ತುಳಿತ ಕೇಸಲ್ಲಿ ಐಪಿಎಸ್‌ ವರ್ಗ ಕೇಂದ್ರದ ಅಂಗಳಕ್ಕೆ!

Published : Jun 07, 2025, 07:25 AM IST
Parliament building. (File Photo/ANI)

ಸಾರಾಂಶ

ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ವಿವಾದದ ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳಕ್ಕೆ ಬಿದ್ದಿದೆ.

ಗಿರೀಶ್ ಮಾದೇನಹಳ್ಳಿ

 ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಪ್ರವೇಶ ದ್ವಾರದ ಬಳಿ ಕಾಲ್ತುಳಿತದಲ್ಲಿ ಆರ್‌ಸಿಬಿ ಅಭಿಮಾನಿಗಳ ಸಾವು ದುರಂತಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿ ಮೂವರು ಐಪಿಎಸ್ ಅಧಿಕಾರಿಗಳ ಅಮಾನತು ವಿವಾದದ ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳಕ್ಕೆ ಬಿದ್ದಿದೆ.

ಒಂದೆಡೆ ಕೇಂದ್ರದ ನಡೆ ಮೇಲೆ ಅಮಾನತು ಶಿಕ್ಷೆಗೊಳಗಾಗದ ಅಧಿಕಾರಿಗಳ ಭವಿಷ್ಯ ನಿಂತಿದ್ದರೆ, ಇನ್ನೊಂದೆಡೆ ಈ ವಿಚಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ರಾಜಕೀಯ ಕುಸ್ತಿಗೆ ಅಖಾಡವಾಗಲಿದೆಯೇ ಎಂಬ ಕುತೂಹಲ ಮೂಡಿಸಿದೆ. ಕರ್ತವ್ಯ ಲೋಪದ ಆರೋಪ ಮೇರೆಗೆ ಅಖಿಲ ಭಾರತ ಸೇವಾ ಅಧಿಕಾರಿಗಳ ಅಮಾನತು ವಿಷಯದಲ್ಲಿ ಕಾನೂನು ಪ್ರಕಾರ ಕೇಂದ್ರ ಸರ್ಕಾರಕ್ಕೆ ಅಂತಿಮ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿದೆ. ಒಂದು ವೇಳೆ ರಾಜ್ಯ ಸರ್ಕಾರದ ಅಮಾನತು ಆದೇಶವನ್ನು ಕೇಂದ್ರ ತಿರಸ್ಕರಿಸಿದರೆ ತಕ್ಷಣವೇ ಆ ಅಮಾನತು ಆದೇಶ ರದ್ದಾಗಲಿದೆ. ಆಗ ಅಧಿಕಾರಿಗಳು ನಿರಾಳರಾಗಿ ಕರ್ತವ್ಯಕ್ಕೆ ಹಾಜರಾಗಬಹುದು ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್, ಹೆಚ್ಚುವರಿ ಆಯುಕ್ತ (ಪಶ್ಚಿಮ) ವಿಕಾಸ್ ಕುಮಾರ್ ವಿಕಾಸ್ ಹಾಗೂ ಕೇಂದ್ರ ವಿಭಾಗದ ಡಿಸಿಪಿ ಎಚ್‌.ಶೇಖರ್ ಅವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ ಸಿಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಅಲ್ಲದೆ ಈ ಅಮಾನತು ಕುರಿತು ಕೇಂದ್ರಕ್ಕೆ ರಾಜ್ಯ ಸರ್ಕಾರ ಅಧಿಕೃತವಾಗಿ ಮಾಹಿತಿ ಸಹ ಕೊಟ್ಟಿದೆ. ಒಂದು ತಿಂಗಳಲ್ಲಿ ತೀರ್ಮಾನಿಸಬೇಕು:

ರಾಜ್ಯ ಸರ್ಕಾರದ ಅಧೀನದಲ್ಲಿ ಸೇವೆ ಸಲ್ಲಿಸುವ ಐಎಎಸ್‌, ಐಪಿಎಸ್ ಹಾಗೂ ಐಎಫ್‌ಎಸ್‌ ಅಧಿಕಾರಿಗಳ ಮೇಲೆ ಕೇಂದ್ರದ ನಿಯಂತ್ರಣವಿರುತ್ತದೆ. ಅಂತೆಯೇ ಕರ್ತವ್ಯ ಲೋಪ ಅಥವಾ ಮತ್ಯಾವುದೇ ಆರೋಪದಡಿ ತನ್ನ ಅಧೀನದಲ್ಲಿ ಸೇವೆ ಸಲ್ಲಿಸುವ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದರೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. 

ನಿಯಾನುಸಾರ ಈ ಅಮಾನತು ಪ್ರಕರಣದ ವರದಿ ಬಗ್ಗೆ ಒಂದು ತಿಂಗಳೊಳಗೆ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಅಮಾನತು ಆದೇಶಕ್ಕೆ ಕೇಂದ್ರ ಸಮ್ಮತಿಸಿದರೆ ಅಮಾನತಿಗೊಳಗಾದ ಅಧಿಕಾರಿಗಳ ಶಿಕ್ಷೆ ಮುಂದುವರೆಯಲಿದೆ. ಈ ಅವಧಿಯೊಳಗೆ ಕೇಂದ್ರ ಸರ್ಕಾರ ಆದೇಶ ತಿರಸ್ಕರಿಸಿದರೆ ಅಧಿಕಾರಿಗಳು ಸಂಕಷ್ಟದಿಂದ ಮುಕ್ತರಾಗಿ ಪುನಃ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಗೃಹ ಇಲಾಖೆ ಮೂಲಗಳು ವಿವರಿಸಿವೆ. ಕಾಲ್ತುಳಿತ ಪ್ರಕರಣದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರ ಅಮಾನತಿಗೆ ರಾಜ್ಯದ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ವಿಷಯದಲ್ಲಿ ಪ್ರಬಲ ದನಿ ಎತ್ತಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು, ಐಪಿಎಸ್ ಅಧಿಕಾರಿಗಳ ಅಮಾನತು ರದ್ದತಿಗೆ ಕೇಂದ್ರದ ಮೇಲೆ ಒತ್ತಡ ಹೇರುವ ಸಾಧ್ಯತೆಗಳಿವೆ. ಹೀಗಾಗಿ ಅಧಿಕಾರಿಗಳು ತಲೆದಂಡದ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಣಯಕ್ಕೆ ಕೇಂದ್ರ ಸರ್ಕಾರ ವ್ಯತಿರಿಕ್ತ ತೀರ್ಮಾನ ಮಾಡಿದರೆ ರಾಜಕೀಯ ಕದನಕ್ಕೆ ಎಡೆ ಮಾಡಿಕೊಡಬಹುದು ಎನ್ನಲಾಗುತ್ತಿದೆ.

 ಇಲಾಖಾ ಮಟ್ಟದ ವಿಚಾರಣೆ?

ತಾಂತ್ರಿಕವಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಅಮಾನತು ಆದೇಶ ತಿರಸ್ಕರಿಸಬಹುದು. ಆದರೆ ಆ ಅಧಿಕಾರಿಗಳ ಮೇಲೆ ಇಲಾಖಾ ಮಟ್ಟದ ವಿಚಾರಣೆಗೆ ಕೇಂದ್ರ ತಡೆ ನೀಡಲು ನಿಯಮಾನುಸಾರ ಸಾಧ್ಯವಿಲ್ಲ ಎಂದು ಮೂಲಗಳು ಹೇಳಿವೆ.

PREV
Read more Articles on

Recommended Stories

ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!
ರಾಜ್ಯದಲ್ಲಿ ಇನ್ನೂ 3-4 ದಿನ ಮಳೆ ಸಾಧ್ಯತೆ