;Resize=(412,232))
ಬೆಂಗಳೂರು : ರಾಜ್ಯದಲ್ಲಿ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಎಡವಟ್ಟುಗಳು 3ನೇ ದಿನವೂ ಮುಂದುವರಿದಿವೆ. ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಲ್ಲಿ ಸಮುದಾಯ ಭವನ, ಕಲ್ಯಾಣ ಮಂಟಪದಲ್ಲಿ ಸಾಮೂಹಿಕವಾಗಿ ಎನ್ಯೂಮರೇಷನ್ ಫಾರ್ಮ್ ಭರ್ತಿ ಮಾಡಿದ ಆರೋಪ ಕೇಳಿ ಬಂದ ಬೆನ್ನಲ್ಲೇ ಈಗ ವಿಜಯಪುರ, ಹಾವೇರಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಬಿಎಲ್‌ಒಗಳು ಮಸೀದಿ, ಕಲ್ಯಾಣ ಮಂಟಪ, ಅಂಗನವಾಡಿ, ದೇವಸ್ಥಾನ, ಅಂಗಡಿ, ರಾಜಕೀಯ ಮುಖಂಡನ ಮನೆ, ಶಾಲೆ, ಗಲ್ಲಿಯಲ್ಲಿನ ಕಟ್ಟೆಗಳಲ್ಲಿ ಕುಳಿತು ಕೆಲಸ ಮಾಡಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಪ್ರತಿ ಮನೆಗೂ ಎನ್ಯೂಮರೇಷನ್ ಫಾರ್ಮ್ ನೀಡಿ ಮಾಹಿತಿ ಸಂಗ್ರಹಿಸಬೇಕು ಎಂಬ ಚುನಾವಣಾ ಆಯೋಗದ ನಿಯಮವನ್ನು ಗಾಳಿಗೆ ತೂರಿ ಅಧಿಕಾರಿಗಳು ತಮಗೆ ಬೇಕಾದೆಡೆ ಕುಳಿತು ಜನರನ್ನೇ ತಮ್ಮ ಬಳಿಗೆ ಕರೆಸಿಕೊಳ್ಳುತ್ತಿದ್ದಾರೆ. ಇದರಿಂದ ವೃದ್ಧರು, ಅಂಗವಿಕಲರಿಗೂ ಸಮಸ್ಯೆ ಆಗುತ್ತಿದೆ ಎಂದು ಸಚಿವರು, ಶಾಸಕರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 30ರಿಂದ ರಾಜ್ಯಾದ್ಯಂತ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆ ಆರಂಭವಾಗಿದೆ. ಅದರಂತೆ ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮತದಾರರ ಮನೆ ಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರ್ಮ್ ನೀಡುತ್ತಿದ್ದಾರೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಬಿಎಲ್‌ಒಗಳು ಕಲ್ಯಾಣ ಮಂಟಪ, ಶಾಲೆ, ದೇವಸ್ಥಾನ, ಗಲ್ಲಿಯಲ್ಲಿನ ಕಟ್ಟೆಗಳಲ್ಲಿ ಕುಳಿತು ಮತದಾರರನ್ನೇ ತಮ್ಮ ಬಳಿಗೆ ಕರೆಸಿಕೊಳ್ಳುತ್ತಿದ್ದಾರೆ. ಇಂಡಿ ನಗರದಲ್ಲಿನ ಕಲ್ಯಾಣ ಮಂಟಪದಲ್ಲಿ, ಇಂಡಿ ತಾಲೂಕಿನ ತಡವಲಗಾ ಗ್ರಾಮದ ದೇವಸ್ಥಾನದಲ್ಲಿ, ಉಕ್ಕಲಿಯ ಸರಕಾರಿ ಶಾಲೆಯಲ್ಲಿ, ವಿಜಯಪುರ ನಗರದ ಹರಣ ಶಿಕಾರಿ ಕಾಲೋನಿಗಳಲ್ಲಿನ ಶಾಲೆಗಳು ಹಾಗೂ ದೇವಸ್ಥಾನಗಳಲ್ಲಿ ಎಸ್‌ಐಆರ್ ಕಾರ್ಯ ನಡೆದಿದೆ.
ಶಿವಮೊಗ್ಗ ನಗರದ ಸೂಳೆಬೈಲಿನಲ್ಲಿ ಬಿಎಲ್ಒಗಳು ಒಂದೇ ಕಡೆ ಕುಳಿತು ಫಾರಂ ವಿತರಿಸಿ ಭರ್ತಿ ಮಾಡುತ್ತಿದ್ದು, ರಾಜಕೀಯ ಪಕ್ಷವೊಂದರ ನಾಯಕರು ಸಾಥ್ ನೀಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬಿಎಲ್ಓ ಜೊತೆ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಒಂದೇ ಕಡೆ ಕುಳಿತು ಫಾರಂ ನೀಡುತ್ತಿರುವುದು ಹಾಗೂ ಬಂಡಲ್‌ಗಟ್ಟಲೆ ಫಾರಂಗಳನ್ನು ಕೈಯಲ್ಲಿ ಹಿಡಿದು ಕುಳಿತು ಬಂದವರಿಗೆ ಫಾರಂ ವಿತರಣೆ ಮಾಡುತ್ತಿದ್ದಾರೆ.
ಇನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ಬಂಕಾಪುರದಲ್ಲಿ ಅಧಿಕಾರಿಗಳು, ದೊಡ್ಡದೇವರ ಮಸೀದಿಯ ಕಚೇರಿಯಲ್ಲೇ ಕುಳಿತು ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ಸವಣೂರು ಪಟ್ಟಣದ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರೊಬ್ಬರ ಮನೆಯಲ್ಲಿಯೇ ಕುಳಿತು ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದರೆ ಇದಕ್ಕೆ ರಾಜಕೀಯ ಮುಖಂಡರು ಸಮರ್ಥನೆ ನೀಡಿದ್ದಾರೆ. ನಾವು ಅನಕ್ಷರಸ್ಥರಿಗೆ ಸಹಾಯ ಮಾಡುತ್ತಿದ್ದೇವೆ. ಅವರಿಗೆ ಫಾರಂ ತುಂಬಲು ಬರುವುದಿಲ್ಲ. ಅದಕ್ಕೆ ನೆರವಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ದಾವಣಗೆರೆ ನಗರದ ಜಾಲಿ ನಗರ, ಬಸಾಪುರ ಸೇರಿದಂತೆ ದಾವಣಗೆರೆ ದಕ್ಷಿಣ ಕ್ಷೇತ್ರದ ಅನೇಕ ಕಡೆಗಳಲ್ಲಿ ಅಂಗನವಾಡಿ ಕೇಂದ್ರಗಳು, ದೇವಸ್ಥಾನಗಳು, ಅಂಗಡಿಗಳ ಮುಂದೆ ಕುಳಿತು ಸಾಮೂಹಿಕವಾಗಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಎಲ್‌ಒಗಳು ತೊಡಗಿದ್ದಾರೆ. ಜಾಲಿ ನಗರದ ಬೂತ್ ನಂಬರ್ 49ರ ಅಂಗನವಾಡಿ ಕೇಂದ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದೆ. ಇದಕ್ಕೆ ಬಿಜೆಪಿ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯನ್ನು ಮತದಾರರ ಮನೆಗಳಿಗೇ ತೆರಳಿ ಪೂರ್ಣಗೊಳಿಸಬೇಕೆಂದು ಈಗಾಗಲೇ ಎಲ್ಲ ಬಿಎಲ್‌ಒಗಳಿಗೆ ಸೂಚಿಸಲಾಗಿದೆ. ಮನೆಗಳಿಗೆ ತೆರಳಿ ಫಾರ್ಮ್ ಕೊಟ್ಟ ಬಳಿಕ ಒಂದೆಡೆ ಕುಳಿತು ಅವುಗಳನ್ನು ಮ್ಯಾಪಿಂಗ್ ಮಾಡುತ್ತಿರಬಹುದು. ಕೆಲವು ಕಡೆ ನೆಟ್‌ವರ್ಕ್ ಸಿಗದಿರುವುದರಿಂದ ಒಂದೆಡೆ ಕುಳಿತಿರಬಹುದು. ಆದರೂ ಇನ್ನೊಮ್ಮೆ ಎಲ್ಲ ಬಿಎಲ್‌ಒಗಳಿಗೆ ಕಟ್ಟುನಿಟ್ಟಾಗಿ ಆದೇಶಿಸಲಾಗುವುದು.