KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು

Published : Aug 22, 2025, 01:40 PM IST
KAPPEC

ಸಾರಾಂಶ

ಪ್ರಧಾನ ಮಂತ್ರಿ ಕಿರು ಆಹಾರ ಉದ್ದಿಮೆಗಳ ನಿಯಮಬದ್ದಗೊಳಿಸುವ (ಪಿಎಂಎಫ್​ಎಂಇ) ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ನೋಡಲ್ ಏಜೆನ್ಸಿಯಾಗಿದೆ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್).

ಪ್ರಧಾನ ಮಂತ್ರಿ ಕಿರು ಆಹಾರ ಉದ್ದಿಮೆಗಳ ನಿಯಮಬದ್ದಗೊಳಿಸುವ (ಪಿಎಂಎಫ್​ಎಂಇ) ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ನೋಡಲ್ ಏಜೆನ್ಸಿಯಾಗಿದೆ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್). ಕಳೆದ 5 ವರ್ಷದಲ್ಲಿ ಕಪೆಕ್​ ಮೂಲಕ 6,888 ನವ ಆಹಾರೋದ್ಯಮಿಗಳು ಪಿಎಂಎಫ್​ಎಂಇ ಯೋಜನೆಯ ಸಾಲ, ಸಬ್ಸಿಡಿ, ಮಾರ್ಗದರ್ಶನ ಪಡೆದುಕೊಂಡು 30 ಸಾವಿರಕ್ಕೂ ಹೆಚ್ಚು ನೇರ ಉದ್ಯೋಗ ಸೃಷ್ಟಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಈ ಯೋಜನೆ ಮೂಲಕ ಆಹಾರೋದ್ಯಮದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಬ್ಯಾಂಕುಗಳು 822 ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿದೆ. ಈ ಎಲ್ಲ ಬೆಳವಣಿಗೆಗಳ ಚುಕ್ಕಾಣಿ ಹಿಡಿದಿರುವ ಕರ್ನಾಟಕ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ (ಕೆಪೆಕ್​​) ಮುನ್ನಡೆಸುತ್ತಿದೆ. ಕಪೆಕ್​​ನ ಚಟುವಟಿಕೆಗಳಿಗೆ ತೀವ್ರ ವೇಗ ನೀಡಿರುವ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸಿ.ಎನ್. ಶಿವಪ್ರಕಾಶ್​ ಅವರನ್ನ ಕನ್ನಡಪ್ರಭ ಮುಖಾಮುಖಿಯಾಗಿ ನಡೆಸಿದ ಮಾತುಕತೆ ಹೀಗಿದೆ..

ಕೆಪೆಕ್ ಇದ್ದಕ್ಕಿದ್ದಂತೆ ಆಕ್ಟೀವ್ ಆದಂತಿದೆ? ಈ ವರ್ಷದ ನಿಮ್ಮ ಟಾರ್ಗೆಟ್ ಏನು?

2025-26ರ ಬಜೆಟ್​ನಲ್ಲಿ ನಮ್ಮ ಮುಖ್ಯಮಂತ್ರಿಗಳು 5000 ಆಹಾರೋದ್ಯಮ ಸ್ಥಾಪಿಸುವ ಭರವಸೆಯೊಂದಿಗೆ 206 ಕೋಟಿ ರೂಪಾಯಿ ಅನುದಾನ ಮೀಸಲಿರಿಸಿದ್ದಾರೆ. ಮುಖ್ಯಮಂತ್ರಿಗಳು ನೀಡಿರುವ ಭರವಸೆ ಜಾರಿಗೆ ತರುವಂತೆ ನಮ್ಮ ಕೃಷಿ ಸಚಿವರಾದ ಚಲುವರಾಯಸ್ವಾಮಿ ಮತ್ತು ನಮ್ಮ ನಿಗಮದ ಅಧ್ಯಕ್ಷರಾದ ಹರೀಶ್ ಅವರು ನಮಗೆ ಸೂಚಿಸಿದ್ದಾರೆ. ಅಗತ್ಯ ಸಹಕಾರ ಮತ್ತು ಅಧಿಕಾರ ನೀಡಿದ್ದಾರೆ. ಹೀಗಾಗಿ ಕೆಲಸ ವೇಗ ಪಡೆದುಕೊಂಡಿದೆ. ಡಿಸೆಂಬರ್ ಅಂತ್ಯಕ್ಕೆ ಮುಖ್ಯಮಂತ್ರಿಗಳು ಹೇಳಿದಂತೆ ಈ ಸಾಲಿನಲ್ಲಿ 5 ಸಾವಿರಹೊಸ ಆಹಾರೋದ್ಯಮಗಳು ಕರ್ನಾಟಕದಲ್ಲಿ ಕೆಲಸ ಮಾಡುವಂತೆ ನಮ್ಮ ಕಪೆಕ್ ತಂಡ ಮಾಡಲಿದೆ.

ಕಳೆದ ಐದು ವರ್ಷದಲ್ಲಿ ಆಗಿರೋದನ್ನು ಒಂದೇ ವರ್ಷದಲ್ಲಿ ಮಾಡಲು ಸಾಧ್ಯವೇ?

ಸಾಧ್ಯವಾಗುವ ಮುನ್ಸೂಚನೆ ನಮಗೆ ಜುಲೈನಲ್ಲೇ ಸಿಕ್ಕಿದೆ. ಜುಲೈ ತಿಂಗಳು ಒಂದರಲ್ಲೇ ಏಳುನೂರಕ್ಕೂ ಹೆಚ್ಚು ಅರ್ಜಿ ಸ್ವೀಕರಿಸಿದ್ದೇವೆ. ಜಿಲ್ಲಾವಾರು ನಡೆಸುತ್ತಿರುವ ಸಭೆಗಳು ಹಾಗೂ ಮಾಧ್ಯಮಗಳ ಸಹಕಾರದಿಂದ ಪಿಎಂಎಫ್​ಎಂಇ ಯೋಜನೆ ಮತ್ತು ಕೆಪೆಕ್​​ನ ಕಾರ್ಯದ ಅರಿವು ಜನರಲ್ಲಿ ಹೆಚ್ಚಾಗುತ್ತಿದೆ. 

ಸಾಲ, ಸಬ್ಸಿಡಿ ಪಡೆದವರೆಲ್ಲಾ ಸಕ್ಸಸ್ ಆಗಿದ್ದಾರ..? ಸಮಸ್ಯೆಗೆ ಸಿಲುಕಿ ಸಾಲ ಕಟ್ಟದವರು ಇದ್ದಾರ?

ನಮಗಿರುವ ಮಾಹಿತಿ ಪ್ರಕಾರ ಈ ಯೋಜನೆಯಲ್ಲಿ ಸಾಲ ಪಡೆದ ಶೇ. 85ಕ್ಕೂ ಹೆಚ್ಚು ಜನ ಕಾಲ ಕಾಲಕ್ಕೆ ಸಾಲದ ಕಂತು ಪಾವತಿಸುತ್ತಿದ್ದಾರೆ. ಕೇವಲ ಶೇ. 12 ರಷ್ಟು ಉದ್ಯಮಿಗಳು ಸಾಲ ಪಾವತಿಯಲ್ಲಿ ಸಮಸ್ಯೆ ಇದೆ. ಒಂದು ಯೋಜನೆ ಶೇ. 85ಕ್ಕೂ ಹೆಚ್ಚು ಯಶಸ್ವಿಯಾಗುವುದು ಅತ್ಯುತ್ತಮ ಎನ್ನಬಹುದು. 100 ರಷ್ಟು ಉದ್ಯಮಿಗಳು ಯಶಸ್ವಿಯಾಗಿಸುವತ್ತ ನಮ್ಮ ಗಮನ ಕೇಂದ್ರೀಕರಿಸಲಿದ್ದೇವೆ.

ಬ್ಯಾಂಕ್ ಲೋನ್ ಪಡೆಯಲು ಗ್ಯಾರಂಟಿ ಕೊಡಬೇಕಾ?

10 ಲಕ್ಷ ರೂ.ವರೆಗೆ ಸಾಲ ನೀಡಲು ಯಾವುದೇ ಗ್ಯಾರಂಟಿ ಕೇಳದಂತೆ ಕೇಂದ್ರ ಸರ್ಕಾರವೇ ಸೂಚಿಸಿದೆ. 10 ಲಕ್ಷ ಮೇಲ್ಪಟ್ಟ ಮೊತ್ತಕ್ಕೆ ಉತ್ಪಾದನಾ ಘಟಕವನ್ನೇ ಗ್ಯಾರಂಟಿ ಮಾಡಿಕೊಂಡು ಸಾಲ ನೀಡಲಾಗುತ್ತದೆ. ಕನಿಷ್ಠ ದಾಖಲಾತಿಗಳೊಂದಿಗೆ ಈ ಸಾಲ ದೊರಕಿಸಿಕೊಡುತ್ತೇವೆ. ಅದಲ್ಲದೇ, ಕೇಂದ್ರ ಸರ್ಕಾರದ ವಿಮಾ ಸೌಲಭ್ಯವಾದ Credit Guarantee Trust for Medium and Small Enterprises (CGTMSE) ಮೂಲಕ ಸಣ್ಣ ಉದ್ದಿಮೆದಾರರು 2 ಕೋಟಿ ರೂ.ವರೆಗೂ ಯಾವುದೇ ಅಡಮಾನ ಇಲ್ಲದೆ ಸಾಲ ಪಡೆಯಬಹುದು.

ಸಂಸ್ಕರಣೆ ಮಾಡಿಬಿಡುತ್ತಾರೆ, ಮಾರ್ಕೆಟಿಂಗ್​ಗೆ ಕೆಲವರು ಪರದಾಡುತ್ತಿದ್ದಾರೆ. ಇದರ ಪರಿಹಾರಕ್ಕೆ ಏನು ಯೋಜನೆಗಳಿವೆ?

ನಿಜ ಸಂಸ್ಕರಣೆ ಕೆಲಸದಲ್ಲಿ ನಮ್ಮವರು ಮುಂದಿದ್ದಾರೆ. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಮಾಡುತ್ತಿದ್ದಾರೆ. ಅದನ್ನು ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಹಿಡಿಯಲು ಕೆಲವರಿಗೆ ಸಮಸ್ಯೆ ಇದೆ. ಸಾಲ, ಸಬ್ಸಿಡಿ ನೀಡುವ ಜೊತೆಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಅನೇಕ ಯೋಜನೆ ಹಾಕಿಕೊಂಡಿದ್ದೇವೆ. ಸದ್ಯದಲ್ಲೇ ಅದರ ಜಾರಿ ಕೆಲಸ ಶುರು ಮಾಡಲಿದ್ದೇವೆ. ಮಾರ್ಕೆಟಿಂಗ್ ವಿಷಯದಲ್ಲಿ ಮೂರು ಪ್ರಮುಖ ವಿಧಾನಗಳಿವೆ. ಸಗಟು ವ್ಯಾಪಾರ, ಚಿಲ್ಲರೆ ವ್ಯಾಪಾರ ಮತ್ತು ಆನ್ಲೈನ್ ವ್ಯಾಪಾರ. ನಮ್ಮವರ ಆಹಾರಉತ್ಪನ್ನಗಳಿಗೆ ಬಿ ಟು ಬಿ ಅಂದ್ರೆ ಸಗಟು ವ್ಯಾಪಾರ ಕಲ್ಪಿಸಲು ಕೆಪೆಕ್ ಕೇಂದ್ರ ಕಚೇರಿ ಆವರಣದಲ್ಲಿ ಟ್ರೇಡ್ ಪೆವಿಲಿಯನ್ ಸ್ಥಾಪಿಸಲು ತೀರ್ಮಾನಿಸಲಾಗಿದೆ. 15 ಮಳಿಗೆಗಳಿರುವ ಈ ಟ್ರೇಡ್ ಪೆವಿಲಿಯನ್​ನಲ್ಲಿ ವಾರಕ್ಕೆ 15 ಆಹಾರೋದ್ಯಮಿಗಳು ತಮ್ಮ ಆಹಾರ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲು ಅವಕಾಶ ನೀಡಲಿದ್ದೇವೆ. 120 ದೊಡ್ಡ ದೊಡ್ಡ ಕಂಪನಿಗಳನ್ನು ಕೂಡ ಸಂಪರ್ಕಿಸಿದ್ದೇವೆ. ಈ 120 ಕಂಪನಿಗಳಿಗೆ ಪ್ರತಿ ವಾರ ಆಹ್ವಾನ ಕಳುಹಿಸಿ ನಮ್ಮವರ ಉತ್ಪನ್ನಗಳನ್ನು ತೋರಿಸಿ ವ್ಯಾಪಾರ ಕಲ್ಪಿಸುವುದು ನಮ್ಮ ಉದ್ದೇಶ.

ಗ್ರಾಹಕರಿಗೆ ಕೆಪೆಕ್ ಉತ್ಪನ್ನಗಳನ್ನು ತಲುಪಿಸಲು ಏನು ಪ್ಲಾನ್ ಇದೆ?

ಈಗಾಗಲೇ ನಡೆಯುತ್ತಿರುವ ಮಾರಾಟ ಮೇಳಗಳು, ಕೃಷಿ ಮೇಳಗಳಲ್ಲಿ ಹೆಚ್ಚಿನ ಮಳಿಗೆ ಪಡೆದು ನಮ್ಮ ಸಂಸ್ಕರಣೆದಾರರಿಗೆ ಅವಕಾಶ ನೀಡುತ್ತೇವೆ. ಜೊತೆಗೆ ಸದ್ಯದಲ್ಲೇ ಕೆಪೆಕ್​ ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಎರಡು ದಿನಗಳ ಮೇಳ ಆಯೋಜಿಸಲು ನಿರ್ಧರಿಸಿದೆ. ಆ ಮೇಳದಲ್ಲಿ 120 ರಿಂದ 150 ಮಳಿಗೆ ಹಾಕುವ ಯೋಚನೆ ಇದೆ. ಇದಕ್ಕೆ ಸಿಗುವ ಪ್ರತಿಕ್ರಿಯೆ ನೋಡಿ ಬೇರೆ ಬೇರೆ ಕಡೆ ಮೇಳ ಆಯೋಜಿಸಲು ಯೋಜನೆ ರೂಪಿಸಲಿದ್ದೇವೆ. ನಮ್ಮದೇ ಔಟ್ಲೆಟ್​ಗಳನ್ನು ತೆರೆಯುವ ಅವಕಾಶ ಮತ್ತು ವ್ಯವಸ್ಥೆ ನಮಲ್ಲಿ ಸದ್ಯಕ್ಕಿಲ್ಲ. 

ಕೆಪೆಕ್ ಉದ್ದಿಮೆದಾರರಿಗೆ ಸ್ವತಂತ್ರ ಆನ್ಲೈನ್ ಮಾರುಕಟ್ಟೆ ಕಲ್ಪಿಸುವಿರಾ?

ಕೆಪೆಕ್ ಉದ್ದಿಮೆದಾರರಿಗೆ ಸ್ವತಂತ್ರ ಆನ್ಲೈನ್ ಮಾರುಕಟ್ಟೆ ಕಲ್ಪಿಸಿದರೆ ಯಶಸ್ಸಾಗುವುದು ಕಷ್ಟವಿದೆ. ಅದಕ್ಕಾಗಿಯೇ ಈಗಾಗಲೇ ಜನಪ್ರಿಯಗೊಂಡಿರುವ ಆನ್ಲೈನ್ ಮಾರುಕಟ್ಟೆ ತಾಣಗಳಲ್ಲೇ ರಿಯಾಯ್ತಿ ದರದಲ್ಲಿ ಅವಕಾಶ ಕೊಡಿಸುವ ಕುರಿತು ಮಾತನಾಡುತ್ತಿದ್ದೇವೆ. ಮನೆ ಮನೆಗೆ ತೆರಳಿ ಉತ್ಪನ್ನ ಮಾರಲು ಕಂಪನಿಯೊಂದರ ಜೊತೆ ಮಾತುಕತೆ ನಡೆಯುತ್ತಿದೆ. ಎಲ್ಲರೂ ಹೇಳುತ್ತಿರುವ ವೆಚ್ಚ ಹೆಚ್ಚಿರೋದ್ರಿಂದ ನಮ್ಮ ಉದ್ದಿಮೆದಾರರ ಹಿತ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಿದ್ದೇವೆ.

ಸಿರಿಧಾನ್ಯ, ಎಣ್ಣೆಗಾಣ, ಬೆಲ್ಲ ಮತ್ತು ಮಸಾಲ ಉದ್ದಿಮೆಗಳೇ ಹೆಚ್ಚಿರಲು ಕಾರಣ ಏನು?

ಇವುಗಳ ಕಲಬೆರಕೆ ಕುರಿತು ಜನರಲ್ಲಿ ದಿನದಿಂದ ದಿನಕ್ಕೆ ಜಾಗೃತಿ ಹೆಚ್ಚುತ್ತಿದೆ. ಈ ನಾಲ್ಕು ಪದಾರ್ಥಗಳು ಭವಿಷ್ಯ ಭಾರತದ ಆರೋಗ್ಯಕರ ಅಭ್ಯಾಸಗಳಾಗಲಿವೆ ಎಂಬುದರ ದಿಕ್ಸೂಚಿ. ಸಿರಿಧಾನ್ಯದ ಬಳಕೆಯ ಮಹತ್ವ ಅರಿವಾಗಿ ಬೇಡಿಕೆ ಹೆಚ್ಚುತ್ತಿರೋದೆ ನಮ್ಮ ಉದ್ದಿಮೆದಾರರ ಯಶಸ್ಸಿಗೆ ಕಾರಣವಾಗಿದೆ. ರಿಫೈಂಡ್ ಎಣ್ಣೆಗಳಲ್ಲಿನ ಕಲಬೆರಕೆ, ಸಕ್ಕರೆ ಬಳಕೆಯ ಅಪಾಯ ಕೂಡ ಎಲ್ಲರ ಗಮನಕ್ಕೆ ಬಂದಿರೋದೆ ಇವುಗಳ ಬೇಡಿಕೆ ಹೆಚ್ಚಲು ಕಾರಣ. ಕಲೆಬೆರಕೆ ಇಲ್ಲದ ಗುಣಮಟ್ಟಕ್ಕೆ ನಮ್ಮ ಸಂಸ್ಕರಣೆದಾರರು ನೀಡುತ್ತಿರುವ ಆದ್ಯತೆ ಜನರಿಗೆ ಮನವರಿಕೆಯಾಗಿದೆ. ಬೆಲ್ಲದ ಬಳಕೆ ಹೆಚ್ಚಾಗಿದ್ದು. ಸದ್ದಿಲ್ಲದೆ Brown revolution (ಬೆಲ್ಲದ ಕ್ರಾಂತಿ) ನಡೆಯುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಬೆಲ್ಲದ ಗಾಣ, ಎಣ್ಣೆ ಗಾಣ ಇರುವ ದಿನ ದೂರವಿಲ್ಲ.

ಆಹಾರೋದ್ಯಮಿಗಳನ್ನು ಹೆಚ್ಚಿಸಲು ಬೇರೆ ಯೋಜನೆಗಳೇನು?

ಎಸ್ಸಿಎಸ್ಟಿ ನಿಗಮಗಳು, ಹಿಂದುಳಿದ ವರ್ಗದ ನಿಮಗಳು, ಮಹಿಳಾ ಯೋಜನೆಗಳಲ್ಲಿ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿರುವವರನ್ನು ಪರಿಶೀಲಿಸುತ್ತಿದ್ದೇವೆ. ಎಲ್ಲಾ ನಿಗಮಗಳ ಸಹಕಾರವನ್ನು ಕೋರಿ ಅಲ್ಲಿ ಯಾರಾದರೂ ಆಹಾರೋದ್ಯಮ, ಆಹಾರ ಸಂಸ್ಕರಣೆ ನೆರವಿಗಾಗಿ ಅರ್ಜಿ ಸಲ್ಲಿಸಿದವರಿದ್ದರೆ ಅವರನ್ನ ನಾವೇ ನೇರ ಸಂಪರ್ಕಿಸುವ ಕೆಲಸವನ್ನೂ ಸದ್ಯದಲ್ಲೇ ಆರಂಭಿಸಲಿದ್ದೇವೆ.

ಬ್ಯಾಂಕುಗಳು ತ್ವರಿತವಾಗಿ ಸಾಲ ನೀಡಲು ಏನು ಕ್ರಮ ಕೈಗೊಂಡಿದ್ದೀರಿ?

ಬ್ಯಾಂಕುಗಳು ಅರ್ಜಿ ಸಲ್ಲಿಕೆಯಾದ 15 ದಿನಗಳಲ್ಲಿ ಸಾಲ ಮಂಜೂರು, ವಿತರಣೆ ಮುಗಿಸುವಂತೆ ರಾಜ್ಯ ಮಟ್ಟದ ಬ್ಯಾಂಕರ್ ಸಮಿತಿ ಸಂಚಾಲಕರಾದ ಎಂ. ಭಾಸ್ಕರ್ ಚಕ್ರವರ್ತಿ ಇತ್ತೀಚೆಗೆ ಆದೇಶಿಸಿ ತ್ವರಿತ ಅರ್ಜಿ ವಿಲೇವಾರಿಗೆ ಚಾಲನೆ ನೀಡಿದ್ದಾರೆ. ಸದ್ಯದಲ್ಲೇ ಬೆಂಗಳೂರಿನಲ್ಲಿ ಬಾಕಿ ಉಳಿದ ಅರ್ಜಿ ವಿಲೇವಾರಿ ಮತ್ತು ಹೊಸ ಅರ್ಜಿ ಸ್ವೀಕರಿಸಿ ಸ್ಥಳದಲ್ಳೇ ಮಂಜೂರಾತಿ ನೀಡುವ ಸಬ್ಸಿಡಿ ಸಹಿತ ಸಾಲ ಮೇಳ ನಡೆಸಲು ಯೋಚಿಸಿದ್ದೇವೆ. ಕೃಷಿ ಸಚಿವರ ಲಭ್ಯತೆ ನೋಡಿಕೊಂಡು ಸದ್ಯದಲ್ಳೇ ದಿನಾಂಕ ಪ್ರಕಟಿಸಲಿದ್ದೇವೆ.

ರಫ್ತು ಹೆಚ್ಚಿಸಲು ಏನು ಯೋಜನೆಗಳಿವೆ? ಏನು ಸಹಕಾರ ಸಿಗಲಿದೆ?

ನಮ್ಮ ಕೆಪೆಕ್​ನಲ್ಲಿ ರಫ್ತು ಉತ್ತೇಜಿಸಲೆಂದೇ ಪ್ರತ್ಯೇಕ ವಿಭಾಗವಿದೆ. ರಫ್ತು ಯೋಗ್ಯ ಉತ್ಪನ್ನಗಳು, ಉದ್ದಿಮೆದಾರರನ್ನು ಗುರುತಿಸಿ ಸಲಹೆ, ಮಾರ್ಗದರ್ಶನ ನೀಡುತ್ತಿದ್ದೇವೆ. ಎಫ್​ಎಸ್​ಎಸ್​ಎಐ ಪ್ರಮಾಣ ಪತ್ರ ಪಡೆಯಲು ನೆರವಾಗುತ್ತಿದ್ದೇವೆ. ಇದಲ್ಲದೇ ಬೇಕಾಗುವ ಅಗತ್ಯ ಪರೀಕ್ಷೆ ಮತ್ತು ಸರ್ಟಿಫಿಕೇಟ್​ ಪಡೆಯಲು ಮಾರ್ಗದರ್ಶನದ ಜೊತೆಗೆ 50 ಸಾವಿರ ರೂಪಾಯಿ ಸಹಾಯ ಧನ ಕೂಡ ನೀಡುತ್ತಿದ್ದೇವೆ.

ರೈತರಿಗೆ ಮತ್ತು ಸಣ್ಣ ಉದ್ದಿಮೆದಾರರಿಗೆ ಬ್ಯಾಂಕಿನ ಜ್ಙಾನ ಇರುವುದಿಲ್ಲ, ಇದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ?

ಯೋಜನೆಯ ಬಗ್ಗೆ ಬ್ಯಾಂಕಿಗೆ ಸಂಬಂಧಿಸಿದ ಸಲಹೆ / ಮಾರ್ಗದರ್ಶನ ನೀಡಲು “ಬ್ಯಾಂಕ್‌ ಸಲಹಾ ಕೋಶ”ವನ್ನು ಕೆಪೆಕ್‌ ಸಂಸ್ಥೆಯಲ್ಲಿ ಸ್ಥಾಪಿಸಲಾಗಿರುತ್ತದೆ. 3 ಜನ ನುರಿತ ತಜ್ಙರು ಈ ಕೋಶದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆನರಾ ಬ್ಯಾಂಕ್‌ನಲ್ಲಿ ಚೀಫ್‌ ಮ್ಯಾನೇಜರ್‌ ಆಗಿ ನಿವೃತ್ತರಾಗಿರುವವರು ಈ ಕೋಶದ ಮುಖ್ಯಸ್ಥರಾಗಿರುತ್ತಾರೆ. ಬ್ಯಾಂಕಿಂಗ್‌ ವಿಷಯಕ್ಕೆ ಸಂಬಂಧಪಟ್ಟ ಯಾವುದೇ ಮಾಹಿತಿ ಪಡೆಯಲು ಆಸಕ್ತರು ಕೆಪೆಕ್‌ ಸಂಸ್ಥೆಗೆ ಭೇಟಿ ನೀಡಬಹುದು.

PREV
Read more Articles on

Recommended Stories

ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?
ಆಹಾರ ಉದ್ದಿಮೆಗಳ ರಫ್ತು ಹೆಚ್ಚಿಸಲು ವಿಶೇಷ ಯೋಜನೆ ರೂಪಿಸುತ್ತೇವೆ: ಹರೀಶ್​​