ಬೆಂಗಳೂರು : ವೇತನ ಹಿಂಬಾಕಿ, ವೇತನ ಹೆಚ್ಚಳಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ಸರ್ಕಾರ ಜತೆ ನಡೆಸಿದ ಸಂಧಾನ ಸಭೆ ವಿಫಲವಾಗಿದೆ. ಇದರ ನಡುವೆ ನೌಕರರ ಮುಷ್ಕರವನ್ನು 1 ದಿನ ತಡೆ ಹಿಡಿಯುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಅದರ ಹೊರತಾಗಿಯೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಮಂಗಳವಾರ ಬೆಳಗ್ಗೆಯಿಂದಲೇ ಮುಷ್ಕರ ನಡೆಸುವುದಾಗಿ ಘೋಷಿಸಿದೆ. ಇದರಿಂದ ರಾಜ್ಯಾದ್ಯಂತ ಬಸ್ಸುಗಳ ಸೇವೆ ವ್ಯತ್ಯಯವಾಗಿ 1 ಕೋಟಿಗೂ ಹೆಚ್ಚು ಪ್ರಯಾಣಿಕರು ಪರದಾಡುವ ಆತಂಕ ಎದುರಾಗಿದೆ.
ಈ ನಡುವೆ ಹೈಕೋರ್ಟ್ ಆದೇಶದ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲು ಜಂಟಿಕ್ರಿಯಾ ಸಮಿತಿ ನಿರ್ಧರಿಸಿದ್ದು, ಮಂಗಳವಾರ ಬೆಳಗ್ಗೆ ಸಮಿತಿ ಪದಾಧಿಕಾರಿಗಳ ಸಭೆ ನಡೆಸಿ ಮುಷ್ಕರದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ. ಒಂದು ವೇಳೆ ಕ್ರಿಯಾ ಸಮಿತಿ ಪೂರ್ವ ನಿರ್ಧಾರದಂತೆ ಮುಷ್ಕರಕ್ಕೆ ಇಳಿದರೆ, ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ಬಸ್‌ಗಳ ಸಂಚಾರದಲ್ಲಿ ಭಾರೀ ವ್ಯತ್ಯಯವಾಗುವುದು ಸ್ಪಷ್ಟ.
ಕೋರ್ಟ್ ಆದೇಶ:
38 ತಿಂಗಳ ವೇತನ ಹೆಚ್ಚಳ ಹಿಂಬಾಕಿ ಪಾವತಿ ಮತ್ತು 2024ರ ಜನವರಿಯಿಂದ ಹೊಸದಾಗಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರಕ್ಕೆ ನಿರ್ಧರಿಸಿದ್ದಾರೆ. ಆದರೆ, ಸರ್ಕಾರದ ನಿಲುವು ತಿಳಿಯುವ ಸಂಬಂಧ ಸಾರಿಗೆ ನೌಕರರು ಮುಷ್ಕರದ ಆರಂಭವನ್ನು ಒಂದು ದಿನದ ಮಟ್ಟಿಗೆ ತಡೆಯುವಂತೆ ಸಾರಿಗೆ ನೌಕರರಿಗೆ ಹೈಕೋರ್ಟ್ ಸೋಮವಾರ ಸೂಚನೆ ನೀಡಿದೆ.
ಈ ಆದೇಶದಲ್ಲಿ ತಮ್ಮನ್ನು ಪ್ರತಿವಾದಿಯನ್ನಾಗಿಸಿಲ್ಲ ಹಾಗೂ ಹೈಕೋರ್ಟ್ ಆದೇಶ ದೊರೆಯುವಲ್ಲಿ ವಿಳಂಬವಾದ ಕಾರಣ ಮುಷ್ಕರ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸ್ಪಷ್ಟಪಡಿಸಿತು. ಹೀಗಾಗಿ ಬೆಳಗ್ಗೆ 6 ಗಂಟೆಯಿಂದ ರಾಜ್ಯದೆಲ್ಲೆಡೆ ಸರ್ಕಾರಿ ಸಾರಿಗೆ ಸೇವೆ ಸ್ಥಗಿತಗೊಳ್ಳಲಿದೆ ಎಂದು ತಿಳಿಸಲಾಗಿದೆ.
1 ಲಕ್ಷ ನೌಕರರು, 25 ಸಾವಿರ ಬಸ್‌ಗಳು:
ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ 1 ಲಕ್ಷಕ್ಕೂ ನೌಕರರು ಕೆಲಸ ಮಾಡುತ್ತಿದ್ದು, 26 ಸಾವಿರ ಬಸ್‌ಗಳಲ್ಲಿ ಸೇವೆ ನೀಡಲಾಗುತ್ತಿದೆ. ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಮುಷ್ಕರದಲ್ಲಿ ಬಹುತೇಕ ಎಲ್ಲ ನೌಕರರು ಭಾಗಿಯಾಗಲಿದ್ದಾರೆ. ನಾಲ್ಕೂ ನಿಗಮಗಳ ಬಸ್ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಲಿದೆ. ಇನ್ನು, ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ನಿಗಮಗಳಲ್ಲಿ ಚಾಲಕ ಮತ್ತು ನಿರ್ವಾಹಕರು ಸೋಮವಾರ ರಾತ್ರಿಯೇ ತಮ್ಮತಮ್ಮ ಊರುಗಳಿಗೆ ತೆರಳಿದ್ದಾರೆ. ಹೀಗಾಗಿ ಮಂಗಳವಾರ ಬೆಳಗ್ಗೆ ಘಟಕಗಳಿಂದ ಬಸ್‌ಗಳನ್ನು ರಸ್ತೆಗಿಳಿಸಲು ನೌಕರರಿಲ್ಲದಂತಾಗಲಿದೆ.
ಖಾಸಗಿ ವಾಹನಗಳ ಸೇವೆಗೂ ತಡೆ:
ಸಾರಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡರೆ ಪರ್ಯಾಯವಾಗಿ ಸೇವೆ ನೀಡಲು ಖಾಸಗಿ ವಾಹನ ಬಳಕೆಗೆ ಸಾರಿಗೆ ಇಲಾಖೆ ನಿರ್ಧರಿಸಿತ್ತು. ಅದಕ್ಕಾಗಿ ಮಂಗಳವಾರದಿಂದಲೇ ಸೇವೆ ಆರಂಭಿಸುವಂತೆಯೂ ಖಾಸಗಿ ವಾಹನ ಮಾಲೀಕರ ಸಂಘಟನೆಗಳಿಗೆ ಸೂಚಿಸಲಾಗಿತ್ತು. ಆದರೆ, ಹೈಕೋರ್ಟ್ ಮುಷ್ಕರ ಮುಂದೂಡುವ ಆದೇಶ ನೀಡಿದ ಹಿನ್ನೆಲೆಯಲ್ಲಿ, ಮಂಗಳವಾರದ ಬದಲು ಬುಧವಾರದಿಂದ ಸೇವೆ ನೀಡಲು ಸಿದ್ಧರಾಗಿರುವಂತೆ ಎಂದು ಸಾರಿಗೆ ಇಲಾಖೆಯು ಖಾಸಗಿ ವಾಹನ ಮಾಲೀಕರ ಸಂಘಟನೆಗಳಿಗೆ ತಿಳಿಸಿದೆ. ಹೀಗಾಗಿ ಸರ್ಕಾರಿ ಬಸ್‌ಗಳು ರಸ್ತೆಗಿಳಿಯದಿದ್ದರೆ ಖಾಸಗಿ ವಾಹನಗಳ ಸೇವೆಯೂ ಮಂಗಳವಾರ ಕಷ್ಟ ಎನ್ನುವಂತಾಗಿದೆ.
ಎಲೆಕ್ಟ್ರಿಕ್ ಬಸ್‌ಗಳು ಸೇವೆಯಲ್ಲಿ:
ನಾಲ್ಕೂ ನಿಗಮಗಳಲ್ಲಿ ಸುಮಾರು 1,700 ಎಲೆಕ್ಟ್ರಿಕ್ ಬಸ್‌ಗಳು ಸೇವೆ ನೀಡುತ್ತಿವೆ. ಅದರಲ್ಲಿ ಬಿಎಂಟಿಸಿ ಒಂದರಲ್ಲೇ 1,500 ಎಲೆಕ್ಟ್ರಿಕ್ ಬಸ್‌ಗಳು ಸಂಚರಿಸುತ್ತಿವೆ. ಆ ಬಸ್‌ಗಳಲ್ಲಿ ಖಾಸಗಿ ಚಾಲಕರನ್ನು ನಿಯೋಜಿಸಲಾಗಿದೆ. ಆ ಚಾಲಕರು ಸಾರಿಗೆ ನೌಕರರ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದ್ದರಿಂದ ಎಲೆಕ್ಟ್ರಿಕ್ ಬಸ್‌ಗಳು ಮುಷ್ಕರದ ಸಂದರ್ಭದಲ್ಲಿ ಸೇವೆ ನೀಡಲಿವೆ.
ಎಸ್ಮಾ ಜಾರಿ, ರಜೆ ರದ್ದು
ಸಾರಿಗೆ ಸೇವೆ ಅಗತ್ಯ ಸೇವೆ ವ್ಯಾಪ್ತಿಯಲ್ಲಿ ಬರುವ ಕಾರಣದಿಂದಾಗಿ ಸಾರಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಈಗಾಗಲೇ ಎಸ್ಮಾ ಜಾರಿಗೊಳಿಸಲಾಗಿದೆ. ಅದರ ಜತೆ ರಜೆಯಲ್ಲಿರುವ ನೌಕರರಿಗೆ ರಜೆ ರದ್ದುಗೊಳಿಸಿ, ಕರ್ತವ್ಯಕ್ಕೆ ಹಾಜರಾಗುವಂತೆಯೂ ಸೂಚಿಸಲಾಗಿದೆ. ಇನ್ನು, ಎಲ್ಲ ಘಟಕಗಳಲ್ಲೂ ನೌಕರರಿಗೆ ಆಯಾ ಘಟಕ ವ್ಯವಸ್ಥಾಪಕರ ಮೂಲಕ ಹೈಕೋರ್ಟ್ ಆದೇಶ ಮತ್ತು ಎಸ್ಮಾ ಜಾರಿಯಲ್ಲಿರುವ ಕಾರಣ ಯಾರೂ ಮುಷ್ಕರದಲ್ಲಿ ಭಾಗಿಯಾದಂತೆ ಸೂಚನೆಯನ್ನೂ ನೀಡಲಾಗಿದೆ. ಒಂದು ವೇಳೆ ನೌಕರರು ಮುಷ್ಕರದಲ್ಲಿ ಪಾಲ್ಗೊಂಡರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮತ್ತು ಕರ್ತವ್ಯ ಹಾಜರಾಗದವರಿಗೆ ವೇತನ ನೀಡದಿರಲೂ ಸಾರಿಗೆ ನಿಗಮಗಳು ನಿರ್ಧರಿಸಿವೆ.
ಗೊಂದಲದಲ್ಲಿ ನೌಕರರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಸಭೆ ಮುಕ್ತಾಯದ ನಂತರವೂ ಸಾರಿಗೆ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳುವ ಮನಸ್ಥಿತಿಯಲ್ಲಿದ್ದರು. ಆದರೆ, ಹೈಕೋರ್ಟ್ ಒಂದು ದಿನದ ಮಟ್ಟಿಗೆ ಮುಷ್ಕರಕ್ಕೆ ತಡೆ ನೀಡಿದ ಕಾರಣಕ್ಕಾಗಿ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಬೇಕೇ-ಬೇಡವೇ ಎಂಬ ಗೊಂದಲಕ್ಕೆ ಸಿಲುಕಿದರು. ಅದರ ನಡುವೆಯೇ ಜಂಟಿ ಕ್ರಿಯಾ ಸಮಿತಿ ಹೈಕೋರ್ಟ್ ಆದೇಶವಿದ್ದರೂ ಮುಷ್ಕರ ನಡೆಸುವುದಾಗಿ ತಿಳಿಸಿದ್ದರಿಂದ ನೌಕರರ ಗೊಂದಲ ಮತ್ತಷ್ಟು ಹೆಚ್ಚುವಂತಾಗಿದೆ.
ನೌಕರರಿಗೆ ಎಂಡಿ ಅವರ ಸಂದೇಶ
ಹೈಕೋರ್ಟ್ ಆದೇಶದ ಕುರಿತು ಸಾರಿಗೆ ನೌಕರರಿಗೆ ಮಾಹಿತಿ ಇರುವುದಿಲ್ಲ ಎಂದು ಅರಿತ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ತಮ್ಮ ನೌಕರರಿಗೆ, ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಸೋಮವಾರ ಸಂಜೆಯೇ ಸಂದೇಶ ರವಾನಿಸಿದ್ದಾರೆ. ಇದರ ಜತೆಗೆ ಸಾರಿಗೆ ನೌಕರರ ಬೇಡಿಕೆಗೆ ಮುಖ್ಯಮಂತ್ರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶವೂ ಇದೆ. ಹೀಗಾಗಿ ನೌಕರರು ಮುಷ್ಕರದಲ್ಲಿ ಪಾಲ್ಗೊಳಬಾರದು ಎಂದು ಕೋರಿದ್ದಾರೆ.
--
ಸಾರಿಗೆ ಇಲಾಖೆ ಗುರುತಿಸಿರುವ ಖಾಸಗಿ ವಾಹನಗಳ ಸಂಖ್ಯೆ:
ಬಸ್ ಸಾರ್ವಜನಿಕ ಸೇವಾ ವಾಹನ ಶಾಲಾ ವಾಹನ ಮ್ಯಾಕ್ಸಿ ಕ್ಯಾಬ್ ಒಟ್ಟು
5197 5032 11394 10969 32592
--
ಮುಷ್ಕರಕ್ಕೆ ಸಂಬಂಧಿಸಿ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಅರ್ಜಿಯಲ್ಲಿ ಜಂಟಿ ಕ್ರಿಯಾ ಸಮಿತಿಯನ್ನು ಪ್ರತಿವಾದಿಯಾಗಿಸಿಲ್ಲ. ಅಲ್ಲದೆ, ಹೈಕೋರ್ಟ್ ಆದೇಶದ ಪ್ರತಿ ಸಿಗುವಲ್ಲಿ ತಡವಾದ ಕಾರಣ, ಈ ಹಿಂದೆ ಕರೆ ನೀಡಲಾಗಿದ್ದಂತೆ ಮುಷ್ಕರ ಆರಂಭಿಸಲಾಗುತ್ತಿದೆ. ಈ ಬಗ್ಗೆ ಮಂಗಳವಾರ ಕಾನೂನು ತಜ್ಞರ ಸಲಹೆಯನ್ನೂ ಪಡೆದು, ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೆ ನೌಕರರ ಮುಷ್ಕರ ಮುಂದುವರಿಯಲಿದೆ.
- ಅನಂತ ಸುಬ್ಬರಾವ್
ಅಧ್ಯಕ್ಷ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ
--
ಹೈಕೋರ್ಟ್ ಆದೇಶದಿಂದಾಗಿ ಮಂಗಳವಾರದ ಮುಷ್ಕರಕ್ಕೆ ನಾವು ಬೆಂಬಲ ನೀಡುತ್ತಿಲ್ಲ. ಕಾನೂನು ತಜ್ಞರ ಸಲಹೆ ಕೇಳಿದ್ದೇವೆ. ನ್ಯಾಯಾಲಯದ ವಿಚಾರವಾಗಿರುವುದರಿಂದಾಗಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕಿದೆ. ಮಂಗಳವಾರ ಹೈಕೋರ್ಟ್ ಮಾಡುವ ಆದೇಶದ ನಂತರ ಮುಷ್ಕರದ ಕುರಿತು ನಿರ್ಧರಿಸುತ್ತೇವೆ.
- ಚಂದ್ರಶೇಖರ್,
ಅಧ್ಯಕ್ಷ, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟ
---
ವಾಯುವ್ಯ ಸಾರಿಗೆ ಕಲ್ಯಾಣ ಸಾರಿಗೆ ಕೆಎಸ್ಸಾರ್ಟಿಸಿ ಬಿಎಂಟಿಸಿ
ಒಟ್ಟು ಬಸ್‌ಗಳು 5300 4500 8893 6835
ಸಿಬ್ಬಂದಿ 23,000 20,000 33,000 28,100
ಪ್ರಯಾಣಿಕರು 26 ಲಕ್ಷ 11 ಲಕ್ಷ 35 ಲಕ್ಷ 45 ಲಕ್ಷ
ಸೇವೆ ವ್ಯಾಪ್ತಿ 6 ಜಿಲ್ಲೆ 8 ಜಿಲ್ಲೆ 17 ಜಿಲ್ಲೆ 3 ಜಿಲ್ಲೆ
---
25,528 ರಾಜ್ಯ ಸಾರಿಗೆ ಒಟ್ಟು ಬಸ್ಸುಗಳು
1.17 ಕೋಟಿ ರಾಜ್ಯದ ಒಟ್ಟು ಪ್ರಯಾಣಿಕರು
1.04 ಲಕ್ಷ ರಾಜ್ಯದ ಒಟ್ಟುಸಾರಿಗೆ ಸಿಬ್ಬಂದಿ
31 ಮುಷ್ಕರದಿಂದ ಬಾಧಿತ ಜಿಲ್ಲೆಗಳು