ಕರ್ನಾಟಕ ಹೈಕೋರ್ಟ್‌ ಜಡ್ಜ್‌ ನ್ಯಾ। ಶ್ರೀಶಾನಂದಗೆ ಸುಪ್ರೀಂ ತರಾಟೆ - ಮಾರ್ಕೆಟ್‌ ಫ್ಲೈಓವರ್‌, ಗೋರಿಪಾಳ್ಯ ಪಾಕ್‌ನಂತಿದೆ ಎಂದಿದ್ಡ ಜಡ್ಜ್‌

Published : Sep 21, 2024, 08:47 AM IST
Karnataka high court

ಸಾರಾಂಶ

ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶ ನ್ಯಾ। ವೇದವ್ಯಾಸಾಚಾರ್ ಶ್ರೀಶಾನಂದ ಅವರು 2 ಪ್ರತ್ಯೇಕ ಪ್ರಕರಣಗಳಲ್ಲಿ ವ್ಯಕ್ತಪಡಿಸಿದ ‘ಆಕ್ಷೇಪಾರ್ಹ ಅಭಿಪ್ರಾಯ’ಗಳ ಬಗ್ಗೆ ಸುಪ್ರೀಂಕೋರ್ಟ್‌ ಕಿಡಿ

ನವದೆಹಲಿ: ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶ ನ್ಯಾ। ವೇದವ್ಯಾಸಾಚಾರ್ ಶ್ರೀಶಾನಂದ ಅವರು 2 ಪ್ರತ್ಯೇಕ ಪ್ರಕರಣಗಳಲ್ಲಿ ವ್ಯಕ್ತಪಡಿಸಿದ ‘ಆಕ್ಷೇಪಾರ್ಹ ಅಭಿಪ್ರಾಯ’ಗಳ ಬಗ್ಗೆ ಸುಪ್ರೀಂಕೋರ್ಟ್‌ ಕಿಡಿಕಾರಿದ್ದು, 2 ದಿನದಲ್ಲಿ ವರದಿ ನೀಡುವಂತೆ ಕರ್ನಾಟಕ ಹೈಕೋರ್ಟ್‌ಗೆ ಸೂಚಿಸಿದೆ ಹಾಗೂ ನ್ಯಾಯಾಧೀಶರು ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.

ನ್ಯಾ। ಶ್ರೀಶಾನಂದ ಅವರು ಇತ್ತೀಚಗೆ ಮನೆ ಮಾಲೀಕ ಹಾಗೂ ಬಾಡಿಗೆದಾರರೊಬ್ಬರ ಪ್ರಕರಣದ ವಿಚಾರಣೆ ನಡೆಸುವಾಗ ಬೆಂಗಳೂರಿನ ಕೆ.ಅರ್‌. ಮಾರ್ಕೆಟ್‌ ಫ್ಲೈಓವರ್ ಮೇಲಿನ ವಾಹನ ಸಂಚಾರದ ಬಗ್ಗೆ ಪ್ರಸ್ತಾಪಿಸಿದ್ದರು. ‘ಈ ಫ್ಲೈ ಓವರ್‌ ಮೇಲೆ ಸಂಚಾರ ನಿಯಮಗಳನ್ನು ಗಾಳಿಗೆ ತೂರಲಾಗುತ್ತದೆ. ಒಂದು ಅಟೋದಲ್ಲಿ ಹತ್ತಾರು ಜನ ತುಂಬಿರುತ್ತಾರೆ. ಪೊಲೀಸರು ಏನೂ ಕ್ರಮ ಜರುಗಿಸಲ್ಲ. ಈ ಮಾರ್ಕೆಟ್‌ನಿಂದ ಗೋರಿಪಾಳ್ಯಕ್ಕೆ ಸಂಪರ್ಕಿಸುವ ಈ ರಸ್ತೆ ಪಾಕಿಸ್ತಾನದಲ್ಲಿದೆ ಎಂಬಂತೆ ಭಾಸವಾಗುತ್ತದೆ’ ಎಂದಿದ್ದರು.

ಇನ್ನೊಂದು ಪ್ರಕರಣದಲ್ಲಿ ಮಹಿಳಾ ವಕೀಲರೊಬ್ಬರು ವಿಪಕ್ಷಗಳ ಬಗ್ಗೆ ವಿವರಣೆ ನೀಡಿದಾಗ, ‘ನಿಮಗೆ ವಿಪಕ್ಷಗಳ ಬಗ್ಗೆ ಸಾಕಷ್ಟು ಗೊತ್ತಿದ್ದಂತಿದೆ. ವಿಪಕ್ಷಗಳ ನಾಯಕರು ಏನೇನು ಒಳ ಉಡುಪು ಧರಿಸುತ್ತಾರೆ ಎಂಬುದನ್ನೂ ನೀವು ಹೇಳಿಬಿಡುತ್ತೀರಿ’ ಎಂದಿದ್ದರು. ಅವರ ಈ ಅಭಿಪ್ರಾಯಗಳು ಹೈಕೋರ್ಟ್ ಕಲಾಪ ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಆಗುವ ಕಾರಣ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದವು.

ಈ ಬಗ್ಗೆ ಶುಕ್ರವಾರ ನಡೆದ ವಿಚಾರಣೆಯೊಂದರ ವೇಳೆ ಕಿಡಿಕಾರಿದ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ. ಚಂದ್ರಚೂಡ್‌ ಅವರಿದ್ದ ಪಂಚ ಸದಸ್ಯ ಪೀಠ, ‘ಇಂದು ಸೋಷಿಯಲ್‌ ಮೀಡಿಯಾ ಸಕ್ರಿಯ ಆಗಿದೆ. ಕೋರ್ಟ್‌ ಕಲಾಪ ನೇರಪ್ರಸಾರ ಆಗುವ ಕಾರಣ ಜನರು ಕಲಾಪದ ಮೇಲೆ ಕಣ್ಣಿಟ್ಟಿರುತ್ತಾರೆ. ಹೀಗಿದ್ದಾಗ ನ್ಯಾಯಾಂಗದ ಘನತೆಗೆ ಕುಂದು ತರುವಂಥ ಅಭಿಪ್ರಾಯ ವ್ಯಕ್ತಪಡಿಸುವುದರಿಂದ ಜಡ್ಜ್‌ಗಳು ದೂರ ಉಳಿದು ಶಿಸ್ತು ಕಾಪಾಡಿಕೊಳ್ಳಬೇಕು’ ಎಂದಿತು.

‘ಈ ಬಗ್ಗೆ ಕರ್ನಾಟಕ ಮುಖ್ಯ ನ್ಯಾಯಾಧೀಶರ ಸಲಹೆ ಪಡೆದುಕೊಂಡು ಹೈಕೋರ್ಟ್‌ ಒಂದು ವರದಿಯನ್ನು ನಮಗೆ 2 ದಿನದಲ್ಲಿ ನೀಡಬೇಕು. ಇದನ್ನು ಆಧರಿಸಿ ಜಡ್ಜ್‌ಗಳು ಎಂಥ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂಬ ಮಾರ್ಗಸೂಚಿಯನ್ನು ನಾವು ಹೊರಡಿಸುತ್ತೇವೆ. ಮುಂದಿನ ಬುಧವಾರ ಈ ಬಗ್ಗೆ ಮತ್ತೆ ವಿಚಾರಣೆ ನಡೆಸುತ್ತೇವೆ’ ಎಂದಿತು.

PREV

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌