ಕರ್ನಾಟಕ ಒನ್‌, ಗ್ರಾಮ ಒನ್‌ ಇನ್ನು ‘ಪ್ರಜಾಸೇವಾ ಕೇಂದ್ರ’

Published : Nov 20, 2026, 06:45 AM IST
Karnataka Government

ಸಾರಾಂಶ

ರಾಜ್ಯಾದ್ಯಂತ ವಿವಿಧ ಹೆಸರುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ನಾಗರಿಕ ಸೇವಾ ಕೇಂದ್ರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ‘ಪ್ರಜಾ ಸೇವಾ ಕೇಂದ್ರ’ ಎಂದು ಮರುನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಬೆಂಗಳೂರು : ರಾಜ್ಯಾದ್ಯಂತ ವಿವಿಧ ಹೆಸರುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ನಾಗರಿಕ ಸೇವಾ ಕೇಂದ್ರಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ‘ಪ್ರಜಾ ಸೇವಾ ಕೇಂದ್ರ’ ಎಂದು ಮರುನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

​ಪ್ರಜಾಸೇವಾ ಇಲಾಖೆಯ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ (ಇಡಿಸಿಎಸ್‌) ಅಡಿಯಲ್ಲಿ ಬೆಂಗಳೂರು ನಗರದಲ್ಲಿ ‘ಬೆಂಗಳೂರು ಒನ್’, ಇತರೆ ನಗರ ಹಾಗೂ ಪಟ್ಟಣಗಳಲ್ಲಿ ‘ಕರ್ನಾಟಕ ಒನ್’ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ‘ಗ್ರಾಮ ಒನ್’ ಎಂಬ ಹೆಸರುಗಳಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲಾಗುತ್ತಿತ್ತು. ಇದೀಗ ಏಕರೂಪತೆ ತರುವ ಉದ್ದೇಶದಿಂದ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಪ್ರಜಾ ಸೇವಾ ಕೇಂದ್ರ ಎಂದು ಮರುನಾಮಕರಣ ಮಾಡಲಾಗಿದೆ.

‘ಪ್ರಜಾ ಸೇವಾ ಕೇಂದ್ರ’ ಎಂಬ ಹೆಸರನ್ನೇ ಬಳಸಲು ಸೂಚಿಸಲಾಗಿದೆ

ಇನ್ನು ಮುಂದೆ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳು, ನಾಮಫಲಕಗಳು, ವೆಬ್ ಪೋರ್ಟಲ್‌ಗಳು, ತಂತ್ರಾಂಶಗಳು, ರಸೀದಿಗಳು ಹಾಗೂ ಪ್ರಚಾರ ಸಾಮಗ್ರಿಗಳಲ್ಲಿ ‘ಪ್ರಜಾ ಸೇವಾ ಕೇಂದ್ರ’ ಎಂಬ ಹೆಸರನ್ನೇ ಬಳಸಲು ಸೂಚಿಸಲಾಗಿದೆ.

ರಾಜ್ಯದ ಎಲ್ಲಾ ಪ್ರಜಾ ಸೇವಾ ಕೇಂದ್ರಗಳಿಗೆ ಏಕರೂಪದ ಬ್ರಾಂಡಿಂಗ್, ನಾಮಫಲಕದ ವಿನ್ಯಾಸ, ಲಾಂಛನ, ಬಣ್ಣದ ವಿನ್ಯಾಸ ಇತ್ಯಾದಿ‌ ರೂಪಿಸಿ ಸರ್ಕಾರದಿಂದ ಅನುಮೋದನೆ ಪಡೆಯುವಂತೆ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.

ಕೇಂದ್ರಗಳ ನಿರ್ವಾಹಕರು ಹಾಗೂ ಫ್ರಾಂಚೈಸಿಗಳೊಂದಿಗಿನ ಒಪ್ಪಂದಗಳಲ್ಲಿಯೂ ಹೊಸ ಹೆಸರನ್ನು ಅಳವಡಿಸಿ, ಈ ಆದೇಶವನ್ನು ರಾಜ್ಯಾದ್ಯಂತ ಅತ್ಯಂತ ಆದ್ಯತೆಯ ಮೇರೆಗೆ ಜಾರಿಗೊಳಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

 ಒಂದೇ ಸೂರಿನಡಿ ಅಹವಾಲು ವಿಲೇವಾರಿ ಮಾಡಲು ಪ್ರಜಾಸೇವಾ ಆಯುಕ್ತಾಲಯ

ಬೆಂಗಳೂರು : ಆಡಳಿತಾತ್ಮಕ ದಕ್ಷತೆ ಹೆಚ್ಚಿಸುವ ಮತ್ತು ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರಜಾಸೇವಾ ಇಲಾಖೆಯ ಅಡಿಯಲ್ಲಿ ಹೊಸದಾಗಿ ‘ಪ್ರಜಾಸೇವಾ ಆಯುಕ್ತಾಲಯ’ವನ್ನು ಸ್ಥಾಪಿಸಿ ಅಧಿಕೃತ ಆದೇಶ ಹೊರಡಿಸಿದೆ.

ಈವರೆಗೆ ಇದ್ದ ಸಕಾಲ ಮಿಷನ್ ಅಪರ ನಿರ್ದೇಶಕ ಹುದ್ದೆಯನ್ನು ಇನ್ನು ಮುಂದೆ ಪ್ರಜಾಸೇವಾ ಇಲಾಖೆ ಆಯುಕ್ತ ಎಂದು ಮರುಪದನಾಮೀಕರಿಸಲಾಗಿದೆ. ಇನ್ನು ಮುಂದೆ ಇವರು ನೂತನ ಪ್ರಜಾಸೇವಾ ಆಯುಕ್ತಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಆಯುಕ್ತಾಲಯದ ಕಾರ್ಯಭಾರ ಸುಗಮಗೊಳಿಸಲು ಪ್ರಜಾಸೇವಾ ಆಯುಕ್ತಾಲಯದ ವಿಶೇಷ ಆಯುಕ್ತ ಎಂಬ ಒಂದು ಹೊಸ ಹುದ್ದೆಯನ್ನು ಸೃಜಿಸಲಾಗಿದೆ. ಈ ಹುದ್ದೆಗೆ ಕಿರಿಯ ಶ್ರೇಣಿಯ ಐಎಎಸ್ ಅಥವಾ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಯನ್ನು ನೇಮಿಸಲಾಗುತ್ತದೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಕೆಎಎಸ್ ಹುದ್ದೆಗಳ ಪೈಕಿ ಯೋಜನಾ ನಿರ್ದೇಶಕರು- ಇ-ಕಚೇರಿ, ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (ಐಪಿಜಿಆರ್‌ಎಸ್‌), ನ್ಯಾಯಾಲಯ ಪ್ರಕರಣ ಮೇಲ್ವಿಚಾರಣಾ ವ್ಯವಸ್ಥೆ (ಸಿಸಿಎಂಎಸ್‌) ಹಾಗೂ ಆಡಳಿತಾಧಿಕಾರಿ- ಸಕಾಲ ಎರಡು ಹುದ್ದೆಗಳನ್ನು ಪ್ರಜಾಸೇವಾ ಇಲಾಖೆಯಲ್ಲಿಯೇ ಉಳಿಸಿಕೊಂಡು ಉಳಿದ ಎರಡು ಹುದ್ದೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಗೆ ವರ್ಗಾಯಿಸಲಾಗಿದೆ.

ಪ್ರಜಾಸೇವಾ ಇಲಾಖೆಯ ಆಡಳಿತಾತ್ಮಕ ಬಲವರ್ಧನೆಗಾಗಿ ಹೆಚ್ಚುವರಿಯಾಗಿ ಎರಡು ಕೆಎಎಸ್ (ಕಿರಿಯ ಶ್ರೇಣಿ) ಹುದ್ದೆಗಳನ್ನು ಹೊಸದಾಗಿ ಸೃಜಿಸಲಾಗಿದೆ.

ಈ ಪ್ರಜಾಸೇವಾ ಇಲಾಖೆಯು ​ಸಕಾಲ ಸೇವೆಗಳ ಖಾತರಿಯ ವಿತರಣೆ, ಐಪಿಜಿಆರ್‌ಎಸ್‌, ಮಾಹಿತಿ ಹಕ್ಕು (ಆರ್‌ಟಿಐ) ಆನ್‌ಲೈನ್ ವ್ಯವಸ್ಥೆ,‌ ಸರ್ಕಾರಿ ಪ್ರಕ್ರಿಯೆಗಳ ಮರು-ವಿನ್ಯಾಸ ಹಾಗೂ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನುಷ್ಠಾನ, ​ಸಚಿವಾಲಯ ಕಚೇರಿ ಕೈಪಿಡಿ, ಇ-ಕಚೇರಿ ಮತ್ತು ಸಿಸಿಎಂಎಸ್‌, ​ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ (ಇಡಿಸಿಎಸ್‌), ತರಬೇತಿ ಹಾಗೂ ಪ್ರಜಾಸೇವಾ ಅಭಿಯಾನದಂತಹ ಪ್ರಮುಖ ನಾಗರಿಕ ಸೇವೆಗಳು ಮತ್ತು ಆಡಳಿತ ಸುಧಾರಣಾ ವಿಷಯಗಳನ್ನು ನಿರ್ವಹಿಸಲಿದೆ.

​ಈ ನೂತನ ಆಯುಕ್ತಾಲಯದ ಸ್ಥಾಪನೆಯಿಂದ ರಾಜ್ಯದ ಜನತೆಗೆ ಸರ್ಕಾರಿ ಸೇವೆಗಳು ಮತ್ತಷ್ಟು ಪಾರದರ್ಶಕವಾಗಿ ಮತ್ತು ಕಾಲಮಿತಿಯೊಳಗೆ ಲಭ್ಯವಾಗಲಿವೆ ಎಂದು ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಆದೇಶದಲ್ಲಿ ತಿಳಿಸಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನೂತನ ಪಂಚ ಆಯುಕ್ತರಿಂದ ಅಧಿಕಾರ ಸ್ವೀಕಾರ
ಯುಬಿ ಸಿಟಿಯ 21 ಸ್ವತ್ತುಗಳಿಂದ ₹2.65 ಕೋಟಿ ತೆರಿಗೆ ವಸೂಲಿ