;Resize=(412,232))
ಬೆಂಗಳೂರು : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ರಾಜಾಜಿನಗರದ ಕ್ಯಾಬ್ ಚಾಲಕನೊಬ್ಬ ಪತ್ನಿ ಸೇರಿ ಆಕೆಯ ಪರಿವಾರದ ಏಳುಮಂದಿಯನ್ನು ರುಬ್ಬುಗುಂಡಿನಿಂದ ಹಲ್ಲೆ ಮಾಡಿ ಭೀಕರವಾಗಿ ಹತ್ಯೆ ನಡೆಸಿದ್ದ ಪ್ರಕರಣದಲ್ಲಿ ಆಘಾತಕಾರಿ ಸಂಗತಿಯೊಂದು ಇದೀಗ ಬೆಳಕಿಗೆ ಬಂದಿದೆ. ತನ್ನ ತಾಯಿ, ಅಜ್ಜಿ, ಅತ್ತೆ-ಸೋದರ ಮಾವಂದಿರು ಹಾಗೂ ಬಾಮೈದನ ಕೊಲೆಗೆ 17 ವರ್ಷದ ಅಪ್ರಾಪ್ತ ಪುತ್ರಿಯೇ ಹಂತಕನಿಗೆ ಸಾಥ್ ಕೊಟ್ಟಿದ್ದ ವಿಚಾರ ಮಲ್ಲೇಶ್ವರ ಉಪವಿಭಾಗದ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಜಾಜಿನಗರದ ಕ್ಯಾಬ್ ಚಾಲಕ ಇಂದುಶೇಖರ್ ಜತೆಗೆ ಆತನ ಪುತ್ರಿಯನ್ನೂ ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಕುಟುಂಬದ ಏಳು ಮಂದಿಯ ನರಮೇಧದಲ್ಲಿ ಆಕೆಯ ಪಾತ್ರ ಬಹಿರಂಗವಾಗಿದೆ. ತನ್ನ ಪುತ್ರಿ ಮೂಲಕವೇ ಆಕೆಯ ಅಜ್ಜಿ ಹಾಗೂ ಮಾವಂದಿರನ್ನು ಬಾಡೂಟಕ್ಕೆ ಬರುವಂತೆ ಕರೆಸಿಕೊಂಡಿದ್ದ ಆರೋಪಿ ಇಂದುಶೇಖರ್ ನಂತರ ಅವರನ್ನು ಹತ್ಯೆಗೈದಿದ್ದ. ಕೊಲೆಗೆ ಮಾತ್ರವಲ್ಲದೆ, ಮೃತದೇಹಗಳನ್ನು ಬೆಟ್ಟಗುಡ್ಡಗಳಿಗೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡಲೂ ಪಿಯುಸಿ ಓದುತ್ತಿದ್ದ ಅಪ್ರಾಪ್ತ ಪುತ್ರಿ ನೆರವಾಗಿದ್ದಳು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಇಂದು ಶೇಖರ್ ತನ್ನ ಪತ್ನಿ ಹಾಗೂ ಮಗಳ ಜತೆ ರಾಜಾಜಿನಗರದ ಭಾಷ್ಯಂ ಸರ್ಕಲ್ ಸಮೀಪದ ಎರಡು ಅಂತಸ್ತಿನ ಕಟ್ಟಡದ 2ನೇ ಮಹಡಿ ಮನೆಯಲ್ಲಿ ವಾಸವಾಗಿದ್ದ. ಮನೆ ಹೊರಗೆ ಖಾಲಿ ಜಾಗವಿದ್ದು, ಅಕ್ಕಪಕ್ಕದಲ್ಲಿ ವಾಣಿಜ್ಯ ಕಟ್ಟಡಗಳೂ ಇವೆ. ಆರೋಪಿ ನೆಲೆಸಿದ್ದ ಕಟ್ಟಡದ ಮೊದಲ ಮಹಡಿಯಲ್ಲಿ ‘ಇಂಡಿಯನ್ ಕಾಂಗ್ರೆಸ್ ಪಾರ್ಟಿ’ ಹೆಸರಿನ ಪಕ್ಷದ ಕೇಂದ್ರ ಕಚೇರಿ ಇದ್ದರೆ, ಕೆಳಮಹಡಿಯಲ್ಲಿ ನಾಲ್ಕು ಅಂಗಡಿಗಳಿವೆ. ಹೀಗಾಗಿ ತಾರಸಿ ಮನೆಯಲ್ಲಿ ಗಲಾಟೆ ನಡೆದರೂ ಅಕ್ಕಪಕ್ಕದ ಮನೆಗಳಿಗೆ ಕೇಳಿಸದಂತಹ ವಾತಾವರಣವಿತ್ತು.
ಕೌಟುಂಬಿಕ ಕಲಹ ಕಾರಣಕ್ಕೆ ತನ್ನ ಪತ್ನಿ, ಆಕೆಯ ಪರಿವಾರದವರ ಕೊಲೆಗೆ ನಿರ್ಧರಿಸಿದ್ದ ಇಂದುಶೇಖರ್, ಹಲವು ದಿನಗಳಿಂದ ಇದಕ್ಕಾಗಿ ಸಿನಿಮೀಯ ಶೈಲಿಯಲ್ಲಿ ಸಂಚು ರೂಪಿಸಿ ಕಾರ್ಯರೂಪಕ್ಕಿಳಿಸಿದ್ದಾನೆ. ತಂದೆಯ ಈ ನಿರ್ದಯ ಹತ್ಯಾಕಾಂಡಕ್ಕೆ ಅಪ್ರಾಪ್ತ ಪುತ್ರಿ ಕೈ ಜೋಡಿಸಿರುವುದು ಸ್ವತಃ ಪೊಲೀಸರಿಗೂ ಆಘಾತ ಮೂಡಿಸಿದೆ.
ಅ.16 ರಂದು ಮನೆಯಲ್ಲಿ ರುಬ್ಬುಗುಂಡಿನಿಂದ ಹಲ್ಲೆ ನಡೆಸಿ ಪತ್ನಿ ಸುನೀತಾಳನ್ನು ಇಂದುಶೇಖರ್ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಚೀಲದಲ್ಲಿ ತುಂಬಿಕೊಂಡು ತಂದೆ-ಮಗಳು ಕಾರಿನಲ್ಲಿ ತೆರಳಿ ನಗರದ ಹೊರಗೆಸೆದು ಬಂದಿದ್ದಾರೆ.
ಇದಾದ ಮರುದಿನ ಅತ್ತೆಗೆ ತನ್ನ ಪುತ್ರಿ ಮೂಲಕವೇ ಕರೆ ಮಾಡಿಸಿದ್ದ ಆರೋಪಿ ಮಾಂಸದ ಅಡುಗೆ ಸಿದ್ಧಪಡಿಸುವ ನೆಪದಲ್ಲಿ ಮನೆಗೆ ಕರೆಸಿಕೊಂಡಿದ್ದ. ಅಮ್ಮ ಗೆಳತಿಯರ ಜತೆ ತಮಿಳುನಾಡಿಗೆ ಪ್ರವಾಸ ಹೋಗಿದ್ದಾಳೆ. ಅಪ್ಪ ಮಾಂಸ ತಂದಿದ್ದು, ನನಗೆ ಅಡುಗೆ ಬರಲ್ಲ ಎಂದು ಸುನೀತಾ ಪುತ್ರಿ ತನ್ನ ಅಜ್ಜಿಗೆ ಕರೆ ಮಾಡಿ ಹೇಳಿದ್ದಳು. ಮೊಮ್ಮಗಳ ಕರೆ ಮೇರೆಗೆ ರಾಜಾಜಿನಗರದ ಮನೆಗೆ ಬಂದಿದ್ದ ರೂಪಾವತಿಯನ್ನು ಕೂಡ ರುಬ್ಬು ಕಲ್ಲಿನಿಂದ ಹೊಡೆದು ಭೀಕರವಾಗಿ ಇಂದುಶೇಖರ್ ಹತ್ಯೆ ಮಾಡಿದ್ದ. ಬಳಿಕ ಮೃತದೇಹವನ್ನು ತಂದೆ-ಮಗಳು ಕಾರಿನಲ್ಲಿ ತುಂಬಿಕೊಂಡು ಹೊರಗೆ ಸಾಗಿಸಿದ್ದಾರೆ.
ತರುವಾಯ ಮತ್ತೆ ಬಾಡೂಟ ತಯಾರಿಕೆ ನೆಪದಲ್ಲಿ ಹಿರಿಯ ಸೋದರ ಮಾವ ಶಿವಕುಮಾರ್ ಹಾಗೂ ದಿವ್ಯಾ ದಂಪತಿಯನ್ನೂ ಆರೋಪಿಗಳು ಆಹ್ವಾನಿಸಿದ್ದಾರೆ. ಇದನ್ನು ಒಪ್ಪಿಕೊಂಡು ಮನೆಗೆ ಬಂದ ಶಿವಕುಮಾರ್ ದಂಪತಿ ಹಾಗೂ ಅವರ ಏಳು ವರ್ಷದ ಪುತ್ರ ಪುನೀತ್ ಕೂಡ ಮಾವನ ಕ್ರೌರ್ಯಕ್ಕೆ ಬಲಿಯಾಗಿದ್ದಾನೆ. ಈ ಮೂವರನ್ನು ರುಬ್ಬು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಸಮೀಪದ ಕಂದಕಕ್ಕೆ ತಂದೆ-ಮಗಳು ಎಸೆದು ಬಂದಿದ್ದರು.
ಅ.31 ರಂದು ಮತ್ತೆ ಬಾಡೂಟಕ್ಕೆ ಕಿರಿಯ ಸೋದರ ಮಾವ ಶಂಕರ್ ಕುಟುಂಬಕ್ಕೆ ಅಪ್ರಾಪ್ತೆಯಿಂದ ಆಹ್ವಾನ ಹೋಗಿದೆ. ಅದರಂತೆ ಭಾವನ ಮನೆಗೆ 11 ವರ್ಷದ ಪುತ್ರನ ಜತೆ ಶಂಕರ್ ದಂಪತಿ ಬಂದಿದ್ದಾರೆ. ಅಂದು ರಾತ್ರಿ ಶಂಕರ್ ಜತೆ ಇಂದುಶೇಖರ್ ಮದ್ಯ ಸೇವಿಸಿದ್ದಾನೆ. ಕಂಠಮಟ್ಟ ಮದ್ಯ ಸೇವಿಸಿ ಹೊಟ್ಟೆ ತುಂಬಾ ಬಾಡುಂಡು ಮಲಗಿದ್ದಾಗ ಶಂಕರ್ ತಲೆ ಮೇಲೆಗೆ ಭಾವ ರುಬ್ಬುಗುಂಡು ಎತ್ತಿ ಹಾಕಿ ಕೊಂದು ಚೀಲಕ್ಕೆ ಮೃತದೇಹ ತುಂಬಿದ್ದಾನೆ. ತನ್ನ ಪುತ್ರ ಹಾಗೂ ಇಂದುಶೇಖರ್‌ನ ಪುತ್ರಿ ಜತೆ ಪ್ರತ್ಯೇಕ ಕೋಣೆಯಲ್ಲಿ ಶಂಕರ್ ಪತ್ನಿ ನಳಿನಿ ಮಲಗಿದ್ದರು. ಬೆಳಗ್ಗೆ ನಿದ್ರೆಯಿಂದ ಎಚ್ಚರಗೊಂಡ ಆಕೆ, ಪತಿಗೆ ಮನೆಗೆ ತೆರಳಲು ಸಿದ್ಧವಾಗುವಂತೆ ಹೇಳಲು ಕೋಣೆಯಿಂದ ಹೊರ ಬಂದಿದ್ದಾಳೆ. ಆಗ ಮನೆ ಹೊರಗೆ ಚೀಲದಲ್ಲಿ ಪತ್ನಿ ಮೃತದೇಹ ನೋಡಿ ಆಕೆ ಚೀರಿಕೊಂಡಿದ್ದಾಳೆ. ತಕ್ಷಣ ಆಕೆಯ ತಲೆಗೆ ಅದೇ ರುಬ್ಬುಗುಂಡಿನಿಂದ ಇಂದು ಶೇಖರ್ ಹಲ್ಲೆ ನಡೆಸಿದ್ದಾನೆ. ಈ ಕೂಗಾಟ ಕೇಳಿ ನಿದ್ರೆಯಿಂದ ಎಚ್ಚರಗೊಂಡು ಕೋಣೆಯಿಂದ ಶಂಕರ್ ಪುತ್ರ ಹೊರ ಬಂದಿದ್ದು, ಪಕ್ಕದ ಮನೆಯವರು ಜಗಳವಾಡುತ್ತಿದ್ದಾರೆಂದು ಹೇಳಿ ಆತನನ್ನು ಇಂದುಶೇಖರ್ ಪುತ್ರಿ ಕೋಣೆಗೆ ಕರೆದೊಯ್ದಿದ್ದಾಳೆ. ಬಳಿಕ ಆರೋಪಿ ಎರಡು ಮೃತದೇಹಗಳನ್ನು ಚೀಲಕ್ಕೆ ತುಂಬಿ ಮನೆ ಹೊರಾವರಣದಲ್ಲಿ ತುಂಬಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕೆಲ ಹೊತ್ತಿನ ಬಳಿಕ ಮೃತ ಶಂಕರ್ ಪುತ್ರನಿಗೆ ಅಪ್ಪ-ಅಮ್ಮ ಮನೆಗೆ ಹೋಗಿದ್ದಾರೆ. ನಿನ್ನನ್ನು ನಾವು ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ತಮ್ಮೊಂದಿಗೆ ಬಾಲಕನನ್ನು ಕಾರಿನಲ್ಲಿ ಧರ್ಮಸ್ಥಳದ ಕಡೆ ಕರೆದೊಯ್ದಿದ್ದಾರೆ. ಅದೇ ಕಾರಿನಲ್ಲಿ ಎರಡು ಚೀಲಗಳಿರುವುದನ್ನು ನೋಡಿ ಏನೆಂದು ಬಾಲಕ ಪ್ರಶ್ನಿಸಿದ್ದು, ಮನೆಯ ಕಸ ಎಂದು ಆರೋಪಿಗಳು ನಂಬಿಸಿದ್ದರು. ಮಾರ್ಗ ಮಧ್ಯೆ ಚಾರ್ಮಾಡಿ ಘಾಟ್‌ನಲ್ಲಿ ಕಾರು ನಿಲ್ಲಿಸಿ ಆ ಎರಡು ಮೃತದೇಹಗಳನ್ನು ಎಸೆದಿದ್ದರು.
ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!
ಬೆಂಗಳೂರಿನಲ್ಲಿ ರುಬ್ಬುಗುಂಡು ಬಳಸಿ 7 ಜನರನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿರುವ ಭಯಾನಕ ಘಟನೆ ಕುರಿತು ‘ಕನ್ನಡಪ್ರಭ’ ಮಾತ್ರ ನಿನ್ನೆ ವರದಿ ಮಾಡಿತ್ತು.