ಕೆಪಿಎಸ್ಸಿ ಎಕ್ಸಾಂ ಫುಲ್‌ ಟೈಟ್‌-ಎಲೆಕ್ಷನ್‌ ರೀತಿ ಕೆಎಎಸ್‌ ಪೂರ್ವಭಾವಿ ಪರೀಕ್ಷೆ

Published : Nov 13, 2026, 06:51 AM IST
KPSC

ಸಾರಾಂಶ

319 ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗಳಿಗೆ ನ.15ರ ಭಾನುವಾರ ನಡೆಯಲಿರುವ ಪೂರ್ವಭಾವಿ ಪರೀಕ್ಷೆಯನ್ನು ಚುನಾವಣೆ ಮಾದರಿಯಲ್ಲಿ ನಡೆಸಬೇಕು. ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಎಲ್ಲ ಪರೀಕ್ಷಾ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ಚುನಾವಣೆ ಮಾದರಿಯಲ್ಲಿ ತರಬೇತಿ ನಡೆಸಿ ವರದಿ ಕೊಡಬೇಕು

ಬೆಂಗಳೂರು : 319 ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗಳಿಗೆ ನ.15ರ ಭಾನುವಾರ ನಡೆಯಲಿರುವ ಪೂರ್ವಭಾವಿ ಪರೀಕ್ಷೆಯನ್ನು ಚುನಾವಣೆ ಮಾದರಿಯಲ್ಲಿ ನಡೆಸಬೇಕು. ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಎಲ್ಲ ಪರೀಕ್ಷಾ ಸಿಬ್ಬಂದಿಗೆ ಜಿಲ್ಲಾಧಿಕಾರಿಗಳು ಚುನಾವಣೆ ಮಾದರಿಯಲ್ಲಿ ತರಬೇತಿ ನಡೆಸಿ ವರದಿ ಕೊಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೆಪಿಎಸ್ಸಿಯಲ್ಲಿ ಸಾಲು ಸಾಲು ಅಕ್ರಮಗಳು ಪತ್ತೆಯಾದ ಹಿನ್ನೆಲೆಯಲ್ಲಿ ಈ ತಾಕೀತು ಮಾಡಿದ್ದಾರೆ.

ಅಭ್ಯರ್ಥಿಗಳಿಗೆ ಮೂರು ಪ್ರತಿಯ ಒಎಂಆರ್‌ ಹಾಳೆ ಕೊಡಬೇಕು, ಉತ್ತರ ಗೊತ್ತಿಲ್ಲದಿದ್ದರೆ ಕಡ್ಡಾಯವಾಗಿ ಗುರುತು ಹಾಕುವುದಕ್ಕೆ ಐದನೇ ಆಯ್ಕೆ ನೀಡಬೇಕು ಹಾಗೂ ಪರೀಕ್ಷೆ ನಡೆದ ದಿನವೇ ಸ್ಕ್ಯಾನ್‌ ಮಾಡಿದ ಒಎಂಆರ್‌ ಪ್ರತಿ ಅಪ್‌ಲೋಡ್‌ ಮಾಡಬೇಕು ಎಂಬ ನಿರ್ದೇಶನಗಳನ್ನು ನೀಡಲಾಗಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ನಡೆಸುತ್ತಿರುವ ಪೂರ್ವಭಾವಿ ಪರೀಕ್ಷೆಗಳ ಸಿದ್ಧತೆಯ ಕುರಿತು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಿಎಂ ವರ್ಚುವಲ್‌ ಸಭೆ ನಡೆಸಿದರು.

ಪರೀಕ್ಷಾ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದ ಅವರು, ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ, ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ನಡೆಸಬೇಕು. ಪರೀಕ್ಷಾ ಪ್ರಕ್ರಿಯೆಯಲ್ಲಿ ಹಲವಾರು ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಈ ಬಗ್ಗೆ ಕೆಪಿಎಸ್ಸಿ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ಅಭ್ಯರ್ಥಿಗಳು ಮೊಬೈಲ್‌ನೊಂದಿಗೆ ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ. ಅಂತಹ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಿವಕುಮಾರ್ ಎಚ್ಚರಿಕೆ ನೀಡಿದರು.

ನಿರಂತರ ನಿಗಾ ವಹಿಸಬೇಕು:

ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮೂಲಕ ನಿರಂತರ ನಿಗಾ ವಹಿಸಬೇಕು. ಪೊಲೀಸ್ ನೇಮಕಾತಿ ಪರೀಕ್ಷೆಯ ಮಾದರಿಯಲ್ಲಿಯೇ ಸೂಕ್ತ ಭದ್ರತೆ ವ್ಯವಸ್ಥೆ ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರದ ಆವರಣದಲ್ಲಿ ಯಾವುದೇ ಅನಧಿಕೃತ ವ್ಯಕ್ತಿಯ ಪ್ರವೇಶಕ್ಕೆ ಅವಕಾಶ ಇಲ್ಲ. ಪ್ರವೇಶಕ್ಕೆ ಅನುಮತಿ ಇರುವ ವ್ಯಕ್ತಿಯೂ ಭದ್ರತಾ ತಪಾಸಣೆಗೆ ಒಳಪಡಬೇಕು. ಕಲಬುರಗಿ, ರಾಯಚೂರು, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಬೆಳಗಾವಿ, ಉತ್ತರಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ದಾವಣಗೆರೆ, ತುಮಕೂರು, ಮೈಸೂರು, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಒಟ್ಟು 345 ಪರೀಕ್ಷಾ ಉಪ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿ ಎಲ್ಲ ರೀತಿಯ ಭದ್ರತೆ ಕಲ್ಪಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು.

ಪ್ರತಿ ಕೊಠಡಿಗೆ ಇಬ್ಬರು ಮೇಲ್ವಿಚಾರಕರ ನೇಮಕ:

ಇದೇ ಮೊದಲ ಬಾರಿಗೆ ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಇಬ್ಬರು ಮೇಲ್ವಿಚಾರಕರ ನಿಯೋಜನೆ ಮಾಡಲಾಗುತ್ತಿದೆ. ಅವರಲ್ಲಿ ಒಬ್ಬರು ಕಡ್ಡಾಯವಾಗಿ ಸರ್ಕಾರಿ ಕಾಲೇಜು ಸಿಬ್ಬಂದಿಯಾಗಿರಬೇಕು. ಅಭ್ಯರ್ಥಿಗಳು ಪರೀಕ್ಷಾ ಕೊಠಡಿ ಪರೀಕ್ಷಿಸಿದ ನಂತರ ಮತ್ತೊಮ್ಮೆ ತಪಾಸಣೆ ನಡೆಸುವುದು ಹಾಗೂ ಪರೀಕ್ಷಾ ಕೊಠಡಿಯಲ್ಲಿ ಕಟ್ಟೆಚ್ಚರಿಕೆ ವಹಿಸಲು ಇಬ್ಬರು ಮೇಲ್ವಿಚಾರಕರ ನಿಯೋಜನೆ ಮಾಡಲಾಗುತ್ತಿದೆ ಎಂದರು.

ವದಂತಿಗಳಿಗೆ ಕಿವಿಗೊಡಬೇಡಿ:

ಪರೀಕ್ಷೆ ಕುರಿತು ಸುಳ್ಳು ಸುದ್ದಿ ಹರಡುವುದಕ್ಕೆ ಅವಕಾಶ ನೀಡಬಾರದು. ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ನಿಗಾ ವಹಿಸಬೇಕು. ಪರೀಕ್ಷೆ ಕುರಿತು ಯಾವುದೇ ವದಂತಿ ಹಬ್ಬಿದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು. ಅಭ್ಯರ್ಥಿಗಳು ಹಾಗೂ ಮಾಧ್ಯಮದವರು ತಮಗೆ ಬಂದ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಖಾತರಿಪಡಿಸಿಕೊಳ್ಳುವುದು ಅತಿ ಅಗತ್ಯ ಎಂದು ಮುಖ್ಯಮಂತ್ರಿ ತಿಳಿಸಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಶ್ಮಿ ಮಹೇಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ, ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕೆಪಿಎಸ್ಸಿ ಕಾರ್ಯದರ್ಶಿ ಕೆ. ಜ್ಯೋತಿ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾದ ಎಚ್. ಪ್ರಸನ್ನ ಸೇರಿದಂತೆ ಹಲವರು ಹಾಜರಿದ್ದರು.

ಅಕ್ರಮ ತಡೆಗೆ ಸುಧಾರಣಾ ಕ್ರಮಗಳು:

1. ಪರೀಕ್ಷಾ ದಿನದಂದೇ ಒಎಂಆರ್‌ ಅಪ್ಲೋಡ್:

ಪರೀಕ್ಷೆ ನಡೆದ ದಿನವೇ ಎಲ್ಲಾ ಸ್ಕ್ಯಾನ್ ಮಾಡಿದ ಒಎಂಆರ್‌ ಪ್ರತಿಗಳನ್ನು ಕೆಪಿಎಸ್ಸಿ ಜಾಲತಾಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅಪ್‌ಲೋಡ್ ಮಾಡಲಾಗುವುದು. ಇದಕ್ಕಾಗಿ 12 ಜಿಲ್ಲೆಗಳಲ್ಲಿ ಒಎಂಆರ್‌ ಹಾಳೆ ಸ್ಕ್ಯಾನ್‌ ಮಾಡಲು ವ್ಯವಸ್ಥೆ ಮಾಡಲಾಗಿದೆ.

2. ಐದು ಆಯ್ಕೆಗಳ ಒಎಂಆರ್‌ ಪದ್ಧತಿ:

ಉತ್ತರ ಗೊತ್ತಿಲ್ಲದಿದ್ದರೆ ಐದನೇ ಆಯ್ಕೆಯನ್ನು ಕಡ್ಡಾಯವಾಗಿ ಗುರುತು ಮಾಡಬೇಕು. ಯಾವುದೇ ಪ್ರಶ್ನೆಗೆ ಉತ್ತರ ಖಾಲಿ ಬಿಡುವಂತಿಲ್ಲ.

3. ತ್ರಿಪ್ರತಿ ಒಎಂಆರ್‌ ಹಾಳೆ:

ಒಂದು ಪ್ರತಿ ಅಭ್ಯರ್ಥಿಗೆ, ಒಂದು ಪ್ರತಿ ಕೆಪಿಎಸ್ಸಿ ಮೌಲ್ಯಮಾಪನಕ್ಕೆ ಮತ್ತು ಮೂರನೆಯದನ್ನು ಜಿಲ್ಲಾಧಿಕಾರಿ/ಕೆಪಿಎಸ್ಸಿ ಸ್ಟ್ರಾಂಗ್ ರೂಮ್‌ನಲ್ಲಿ ಸುರಕ್ಷಿತವಾಗಿಡಲಾಗುವುದು. ಆ ಮೂಲಕ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು.

4. ಸಿಸಿಟಿವಿ ಮತ್ತು ಜಾಮರ್ ಅಳವಡಿಕೆ:

ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಮೊಬೈಲ್ ಜಾಮರ್‌ ಅಳವಡಿಕೆ.

5. ಇಬ್ಬರು ಮೇಲ್ವಿಚಾರಕರ ನಿಯೋಜನೆ:

ಗುರುತಿನ ಚೀಟಿ ಪರಿಶೀಲನೆ, ತಪಾಸಣೆ ಮತ್ತು ನಿಗಾ ವಹಿಸಲು ಇಬ್ಬರು ಮೇಲ್ವಿಚಾರಕರ ನೇಮಕ.

ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಎಚ್ಚರಿಕೆ:

ಖಾಸಗಿ ಅನುದಾನಿತ ಕಾಲೇಜುಗಳಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ಅವ್ಯವಹಾರಕ್ಕೆ ಅವಕಾಶ ನೀಡಿರುವುದು ಕಂಡು ಬಂದರೆ ಅಂತಹ ಖಾಸಗಿ ಕಾಲೇಜುಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು. ಅಕ್ರಮದಲ್ಲಿ ತೊಡಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಶಿವಕುಮಾರ್ ಎಚ್ಚರಿಕೆ ನೀಡಿದರು.

- 319 ಹುದ್ದೆಗೆ 1.47 ಲಕ್ಷ ಆಕಾಂಕ್ಷಿಗಳು:

- 202 ಗ್ರೂಪ್ ಬಿ ಹಾಗೂ 117 ಗ್ರೂಪ್ ಎ

- 91,238 ಪುರುಷರು ಮತ್ತು 53,074 ಮಹಿಳೆಯರಿಂದ ಅರ್ಜಿ ಸಲ್ಲಿಕೆ

- ಎರಡೂ ಪತ್ರಿಕೆ ಸೇರಿ ಒಟ್ಟು 2,94,134 ಒಎಂಆರ್‌ ಹಾಳೆ ಸ್ಕ್ಯಾನ್

- 345 ಪರೀಕ್ಷಾ ಉಪ ಕೇಂದ್ರ ಸ್ಥಾಪನೆ

ಪರೀಕ್ಷೆ ಹೇಗಿರಲಿದೆ?

- ಪರೀಕ್ಷೆಯ ವೇಳೆ ಪ್ರತಿ ಅಭ್ಯರ್ಥಿಗಳಿಗೆ 3 ಪ್ರತಿಯ ಒಎಂಆರ್‌ ಹಾಳೆ ಕೊಡಬೇಕು,

- 1 ಪ್ರತಿ ಅಭ್ಯರ್ಥಿಗೆ, 1 ಪ್ರತಿ ಕೆಪಿಎಸ್ಸಿ ಮೌಲ್ಯಮಾಪನಕ್ಕೆ, 1 ಪ್ರತಿ ಸ್ಟ್ರಾಂಗ್‌ ರೂಂಗೆ

- ಉತ್ತರ ಗೊತ್ತಿಲ್ಲದಿದ್ದರೆ ಕಡ್ಡಾಯವಾಗಿ ಗುರುತು ಹಾಕುವುದಕ್ಕೆ 5ನೇ ಆಯ್ಕೆ ನೀಡಬೇಕು

- ಪರೀಕ್ಷೆ ನಡೆದ ದಿನವೇ ಸ್ಕ್ಯಾನ್‌ ಮಾಡಿದ ಒಎಂಆರ್‌ ಪ್ರತಿ ಅಪ್‌ಲೋಡ್‌ ಮಾಡಬೇಕು

- ಈ ಕ್ರಮಗಳನ್ನು ಅನುಸರಿಸಿದರೆ ಪರೀಕ್ಷೆಯ ಬಳಿಕ ಒಎಂಆರ್‌ ತಿರುಚುವಿಕೆಗೆ ಬ್ರೇಕ್‌

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗಳೂರು, ಮೈಸೂರಲ್ಲಿ ಇಂದು ಮೋದಿ ಹವಾ- ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ
ಇಂದು ಕರ್ನಾಟಕದ ಅನೇಕ ಪ್ರಥಮಗಳಿಗೆ ಪಿಎಂ ಮೋದಿ ಚಾಲನೆ