‘ಪ್ರಾಮಾಣಿಕರ ತಂಡ ಕಟ್ಟಿದರಷ್ಟೇ ಕೆಪಿಎಸ್ಸಿ ಪರಿಶುದ್ಧ’ - ನಂಬಿಕೆ ಕಳೆದುಕೊಳ್ಳುತ್ತಿದೆ

Published : Feb 27, 2025, 10:56 AM IST
KPSC New 02

ಸಾರಾಂಶ

ರಾಜ್ಯದ ವಿವಿಧ ನಾಗರಿಕ ಸೇವೆಗಳ ನೇಮಕಾತಿಗೆ ಶಿಸ್ತುಬದ್ಧ, ಪಾರದರ್ಶಕ ಪರೀಕ್ಷೆ ನಡೆಸುತ್ತಿದ್ದ ಹೆಗ್ಗಳಿಕೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಇತ್ತೀಚಿನ ಕೆಲ ವರ್ಷಗಳಿಂದ ಕೇವಲ ವಿವಾದ ಹಾಗೂ ಎಡವಟ್ಟುಗಳಿಂದಲೇ ಚರ್ಚೆಯಲ್ಲಿದೆ.

 ಮಂಜುನಾಥ್ ನಾಗಲೀಕರ್‌

ರಾಜ್ಯದ ವಿವಿಧ ನಾಗರಿಕ ಸೇವೆಗಳ ನೇಮಕಾತಿಗೆ ಶಿಸ್ತುಬದ್ಧ, ಪಾರದರ್ಶಕ ಪರೀಕ್ಷೆ ನಡೆಸುತ್ತಿದ್ದ ಹೆಗ್ಗಳಿಕೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಇತ್ತೀಚಿನ ಕೆಲ ವರ್ಷಗಳಿಂದ ಕೇವಲ ವಿವಾದ ಹಾಗೂ ಎಡವಟ್ಟುಗಳಿಂದಲೇ ಚರ್ಚೆಯಲ್ಲಿದೆ. ವರ್ಷಗಟ್ಟಲೆ ಶ್ರಮವಹಿಸಿ ನೂರಾರು ಕನಸು ಕಟ್ಟಿ ಓದಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗೆ ಕನಿಷ್ಠ ಪಕ್ಷ ತಪ್ಪಿಲ್ಲದ ಪ್ರಶ್ನೆ ಪತ್ರಿಕೆ ಒದಗಿಸಲೂ ಸಾಧ್ಯವಾಗದಷ್ಟು ವ್ಯವಸ್ಥೆ ಹಾಳಾಗಿದೆ. ಇದನ್ನು ಸರಿದಾರಿಗೆ ತರುವುದು ಹೇಗೆ? ವಾಸ್ತವವಾಗಿ ಕೆಪಿಎಸ್ಸಿಯಲ್ಲಿ ನಡೆಯುತ್ತಿರುವುದೇನು? ಅವ್ಯವಸ್ಥೆಗಳಿಗೆ ಕಾರಣ ಹಾಗೂ ಪರಿಹಾರಗಳೇನು? ಎಂಬಿತ್ಯಾದಿ ವಿಷಯಗಳ ಆಳ ಅಗಲದ ಬಗ್ಗೆ ಇನ್‌ಸೈಟ್‌ ಐಎಎಸ್ ಅಕಾಡೆಮಿಯ ಸಂಸ್ಥಾಪಕ ಜಿ.ಬಿ.ವಿನಯ್ ಕುಮಾರ್ ಅವರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ್ದಾರೆ.

-ವಿಶ್ವಾಸಾರ್ಹತೆಗೆ ಪರ್ಯಾಯ ಹೆಸರಿನಂತಿದ್ದ ಕೆಪಿಎಸ್ಸಿಯಲ್ಲಿ ಈಗ ಆಗುತ್ತಿರುವುದೇನು?*ವಿಶ್ವಾಸಾರ್ಹತೆಗೆ ಹೆಸರಾಗಿದ್ದ ಕೆಪಿಎಸ್ಸಿ ಈಗ ವಿದ್ಯಾರ್ಥಿಗಳ ನಂಬಿಕೆ ಕಳೆದುಕೊಳ್ಳುತ್ತಿದೆ. ಕೆಪಿಎಸ್ಸಿಯಲ್ಲಿ ಎಲ್ಲವೂ ನಿಯಂತ್ರಣ ತಪ್ಪಿದೆ. ವೈಯಕ್ತಿಕ ಹಿತಾಸಕ್ತಿ ಕಾಪಾಡಿಕೊಳ್ಳಲು ಅಲ್ಲಿನವರು ಪೈಪೋಟಿಗೆ ಬಿದ್ದಿದ್ದಾರೆ. ರಾಜಕೀಯ ಮಧ್ಯಪ್ರವೇಶ, ಸ್ವಜನಪಕ್ಷಪಾತದಂಥ ಅದ್ವಾನಗಳ ಜತೆಗೆ ಪರೀಕ್ಷಾ ಅಕ್ರಮಗಳು ಅತಿಯಾಗಿವೆ. ಈ ಆರೋಪಗಳನ್ನು ದೂರ ಮಾಡಿಕೊಳ್ಳದಿದ್ದರೆ ಕೆಪಿಎಸ್ಸಿಗೆ ಪೂರ್ವದ ವೈಭವ ಬರುವುದಿಲ್ಲ.

-ನಿಜಕ್ಕೂ ಕೆಪಿಎಸ್ಸಿ ವಿಶ್ವಾಸ ಮರುಸ್ಥಾಪನೆ ಆಗಬಹುದೇ? ಇದನ್ನು ಸರಿದಾರಿಗೆ ತರಲು ಸಾಧ್ಯವಿದೆಯೇ?

*ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಕೆಪಿಎಸ್ಸಿ ಸುಧಾರಣೆಗೆ ಇಚ್ಛಾಶಕ್ತಿ, ಬದ್ಧತೆ, ಪ್ರಾಮಾಣಿಕತೆ ಇರುವವರು ಬೇಕಾಗಿದ್ದಾರೆ. ಜತೆಗೆ ಸಾಮಾಜಿಕ ವ್ಯವಸ್ಥೆ ಕುರಿತು ಕಾಳಜಿ ಬೇಕಾಗಿದೆ. ತಕ್ಷಣ ಬದಲಿಸಲಾಗದಿದ್ದರೂ ತಕ್ಷಣದ ಕ್ರಮಗಳಿಂದ ಕಾಲಕ್ರಮೇಣ ಕೆಪಿಎಸ್ಸಿಯನ್ನು ಸರಿದಾರಿಗೆ ತರಬಹುದು. ನೇಮಕಾತಿ ವಿಳಂಬ, ಪ್ರಶ್ನೆಪತ್ರಿಕೆಗಳಲ್ಲಿನ ಲೋಪಗಳು, ಭ್ರಷ್ಟಾಚಾರ ಎಲ್ಲವನ್ನೂ ನಿಯಂತ್ರಿಸಬಹುದು.

-ಕೆಪಿಎಸ್ಸಿಯನ್ನು ಕೇಂದ್ರ ಲೋಕಸೇವಾ ಆಯೋಗದಂತೆ ಸದೃಢ ಮಾಡಲು ಆಗುವುದಿಲ್ಲವೇ?

*ಕೇಂದ್ರ ಲೋಕಸೇವಾ ಆಯೋಗವು ತನ್ನ ವಿಶ್ವಾಸಾರ್ಹತೆಯನ್ನು ದಶಕಗಳಿಂದ ಉಳಿಸಿ ಬೆಳೆಸಿಕೊಂಡು ಬಂದಿದೆ. ಪರೀಕ್ಷಾ ಪ್ರಕ್ರಿಯೆಯ ಎಲ್ಲಾ ದಿನಾಂಕಗಳನ್ನು ಮೊದಲೇ ಬಿಡುಗಡೆ ಮಾಡಿ ಅದರಂತೆ ಒಂದು ವರ್ಷದಲ್ಲೇ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಯುಪಿಎಸ್ಸಿ ಮಾದರಿಯನ್ನು ಕೆಪಿಎಸ್ಸಿಯಲ್ಲಿ ಪಾಲಿಸಬೇಕಿರುವುದು ಇಂದಿನ ಅನಿವಾರ್ಯ. ಆದರೆ ಅದಕ್ಕೆ ಬದ್ಧತೆಬೇಕು.

-ಪ್ರಶ್ನೆ ಪತ್ರಿಕೆಯ ಸರಿಯಾದ ಅನುವಾದವೇ ಕೆಪಿಎಸ್ಸಿ ಕೈಯಲ್ಲಿ ಆಗುತ್ತಿಲ್ಲವಲ್ಲ?

*ಕನ್ನಡನಾಡಿನಲ್ಲಿನ ನೇಮಕಾತಿಗಳ ಪ್ರಶ್ನೆಪತ್ರಿಕೆ ಮೊದಲು ಕನ್ನಡದಲ್ಲೇ ಸಿದ್ಧಪಡಿಸಬೇಕು. ನಂತರ ಇಂಗ್ಲಿಷಿಗೆ ಅನುವಾದಿಸಬೇಕು. ಆದರೆ, ಈ ವಿಚಾರದಲ್ಲಿ ಕೆಲ ಸಮಸ್ಯೆಗಳು ಇವೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸಿದವರು ನಾನೇ ಸಿದ್ದಪಡಿಸಿದ್ದು ಎಂದು ಬಹಿರಂಗ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಇಂತಹ ಘಟನೆಗಳಿಂದ ಪರೀಕ್ಷೆಯ ಸಮಗ್ರತೆ, ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ. ಇದು ಸರಿಯಾಗಲೇಬೇಕು. ಯುಪಿಎಸ್ಸಿಯಲ್ಲೂ ಇಂಗ್ಲಿಷ್‌ ಹಾಗೂ ಹಿಂದಿಯಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗುತ್ತದೆ. ಅಲ್ಲಿ ಇಂತಹ ದೂರುಗಳೇ ವಿರಳ. ಪ್ರಾಮಾಣಿಕರ ತಂಡವನ್ನು ಕೆಪಿಎಸ್ಸಿಯಲ್ಲಿ ಕಟ್ಟಿದರೆ ಮಾತ್ರ ಪರಿವರ್ತನೆ ಸಾಧ್ಯ.

-ಕೆಪಿಎಸ್ಸಿಯನ್ನು ಯುಪಿಎಸ್ಸಿಯಾಗಿ ಮಾಡಲು ಕೆಪಿಎಸ್ಸಿಗೆ ಹಲವು ಕಾನೂನು ತೊಡಕುಗಳಿವೆ. ಹೀಗಾಗಿ ಇಲ್ಲಿ ನೇಮಕಾತಿಗಳು ವಿಳಂಬ ಎನ್ನುತ್ತಾರಲ್ಲ?

*ಕೆಪಿಎಸ್ಸಿ ಬಗ್ಗೆ ಅಪನಂಬಿಕೆ ಇದೆ. ಹೀಗಾಗಿ ಸಣ್ಣಪುಟ್ಟ ಸಮಸ್ಯೆಗಳಾದರೂ ಅನುಮಾನದಿಂದ ನೋಡುವ ವಾತಾವರಣ ನಿರ್ಮಾಣವಾಗಿದೆ. ಸ್ವಲ್ಪ ಅನುಮಾನ ಬಂದರೂ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತಾರೆ. ಹಿಂದಿನ ಕೆಲ ಘಟನೆಗಳಿಂದ ಅನುಮಾನ ಪಡುವುದು ಸಹಜ ಕೂಡ. ಸಂಸ್ಥೆಯೊಂದು ವಿಶ್ವಾಸ ಕಳೆದುಕೊಂಡರೆ ಹೀಗೆಯೇ ಆಗುತ್ತದೆ. ಯುಪಿಎಸ್ಸಿ ಉಳಿಸಿಕೊಂಡಿರುವ ವಿಶ್ವಾಸಾರ್ಹತೆಯಿಂದ ಅಲ್ಲಿ ಆಯ್ಕೆಯಾಗದಿದ್ದರೂ ಅಭ್ಯರ್ಥಿಗಳು ನ್ಯಾಯಾಲಯದಲ್ಲಿ ಪ್ರಶ್ನಿಸುವುದು ವಿರಳ. ಇಲ್ಲಿನ ನೇಮಕಾತಿಗಳ ವಿಳಂಬಕ್ಕೆ ಕೆಪಿಎಸ್ಸಿ ಮೇಲಿನ ವಿಶ್ವಾಸಾರ್ಹತೆಯ ಕೊರತೆ ಕಾರಣ.

-ಈ ವಿಶ್ವಾಸಾರ್ಹತೆ ಕೊರತೆ ಯಾಕೆ ಉಂಟಾಗಿದೆ? ಕೆಪಿಎಸ್ಸಿಯಲ್ಲಿ ಅಂತಹದ್ದು ಏನಾಗುತ್ತಿದೆ?

*ಕೆಪಿಎಸ್ಸಿಯನ್ನು ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ, ಸ್ವಜನಪಕ್ಷಪಾತದಂಥ ಆರೋಪಗಳು ಮೇಲಿಂದ ಮೇಲೆ ಕಾಡುತ್ತಿವೆ. ಯುಪಿಎಸ್ಸಿಯಲ್ಲಿ ಎಂಟು ಸದಸ್ಯರಿದ್ದರೆ, ಕೆಪಿಎಸ್ಸಿಯಲ್ಲಿ 16 ಸದಸ್ಯರಿದ್ದಾರೆ. ಕೆಪಿಎಸ್ಸಿ ಸದಸ್ಯರ ನೇಮಕಾತಿಯ ಮಾನದಂಡಗಳು ಏನೆಂಬುದು ಜಗತ್ತಿಗೇ ತಿಳಿದಿದೆ. ಜಾತಿ ಮತ್ತು ರಾಜಕೀಯ ಶಿಫಾರಸುಗಳ ಮೇಲೆ ನೇಮಕವಾಗಿರುತ್ತಾರೆ. ಅಲ್ಲಿಗೆ ಹೋದವರೂ ಅದೇ ರೀತಿ ಆಲೋಚಿಸುವುದರಿಂದ ಎಲ್ಲಾ ರೀತಿಯ ಆರೋಪಗಳು ಬರುತ್ತಿವೆ. ರಾಜಕೀಯ ಒತ್ತಡ, ನೇಮಕಾತಿ ಲಾಬಿ ಬದಲು ಅರ್ಹತೆ ಮೇಲೆ ನೇಮಕವಾದರೆ ಕೆಟ್ಟ ದೃಷ್ಟಿಯಿಂದ ಕೆಪಿಎಸ್ಸಿ ಹೊರ ಬರಬಹುದು.

-ಇಷ್ಟೇ ಅಲ್ಲ, ಸುಸೂತ್ರವಾಗಿ ಪರೀಕ್ಷೆಗಳನ್ನು ನಡೆಸಲೂ ಕೆಪಿಎಸ್ಸಿಗೆ ಆಗುತ್ತಿಲ್ಲ ಎಂದು ಅಭ್ಯರ್ಥಿಗಳೇ ಆರೋಪಿಸುತ್ತಿದ್ದಾರಲ್ವ?

*ಹೌದು, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು, ಪ್ರಿಂಟಿಂಗ್, ಸಾಗಣೆ, ಲಾಜಿಸ್ಟಿಕ್ಸ್, ಭದ್ರತೆ, ಮೌಲ್ಯಮಾಪನ ಸೇರಿ ಸೂಕ್ತ ಪರೀಕ್ಷಾ ವ್ಯವಸ್ಥೆಯ ಬಲವಾದ ನೆಟ್‌ವರ್ಕ್‌ ಅನ್ನು ಯುಪಿಎಸ್ಸಿ ಅನೇಕ ವರ್ಷಗಳಿಂದ ಬೆಳೆಸಿದೆ. ಇಂತಹ ವ್ಯವಸ್ಥೆಯ ಅನುಪಸ್ಥಿತಿಯನ್ನು ಇದೀಗ ಎದುರಿಸುತ್ತಿದೆ. ಹೀಗಾಗಿ ಪರೀಕ್ಷೆಗಳಲ್ಲಿ ಆಗಾಗ ಇಂತಹ ಅದ್ವಾನಗಳು, ಅಕ್ರಮದ ಆರೋಪಗಳು ಕೇಳಿ ಬರುತ್ತಿರುತ್ತವೆ.

-ಯುಪಿಎಸ್ಸಿ ಪರೀಕ್ಷಾ ಪದ್ಧತಿಗೆ ಹೋಲಿಸಿದರೆ ಕೆಪಿಎಸ್ಸಿಯಲ್ಲಿ ಬದಲಾವಣೆಗಳ ಅಗತ್ಯವಿದೆಯೇ?

*ಪರೀಕ್ಷಾ ಪ್ರಕ್ರಿಯೆಯಲ್ಲಿ ವ್ಯಕ್ತಿತ್ವ ಪರೀಕ್ಷೆ ಬಹಳ ಮುಖ್ಯವಾದ ಭಾಗ. ಅಧಿಕಾರಿಯಾದವರು ತ್ವರಿತ ನಿರ್ಧಾರ, ಸಮಸ್ಯೆಗಳಿಗೆ ಶೀಘ್ರ ಪರಿಹಾರ ಹುಡುಕಲು ಮಾನಸಿಕ ಸಾಮರ್ಥ್ಯ ಅಳೆಯಬೇಕು. ಹೀಗಾಗಿಯೇ ಯುಪಿಎಸ್ಸಿಯಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಮಹತ್ವ ಇದೆ. ಆದರೆ, ಕೆಪಿಎಸ್ಸಿಯ ಸಂದರ್ಶನದಲ್ಲಿ ಗೋಲ್ಮಾಲ್ ಆಗಿದ್ದ ಕಾರಣ ವ್ಯಕ್ತಿತ್ವ ಪರೀಕ್ಷೆ ಅಂಕಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಆದರೂ, ಸುಧಾರಣೆ ಸಂದರ್ಭದಲ್ಲಿ ವ್ಯಕ್ತಿತ್ವ ಪರೀಕ್ಷೆಯ ಮಹತ್ವ ಹೆಚ್ಚಾಗಬೇಕು ಮತ್ತು ನ್ಯಾಯಬದ್ಧವಾಗಿ ಅಂಕ ನೀಡುವ ವ್ಯವಸ್ಥೆ ಬರಬೇಕು.

-ಕೆಪಿಎಸ್ಸಿಯಲ್ಲಿ ಅಧಿಕಾರಿ ಮತ್ತು ಸದಸ್ಯರ ನಡುವೆ ಸಂಘರ್ಷ ಇದೆಯೇ? ಇದು ತಪ್ಪಿಸುವುದು ಹೇಗೆ?

*ಕೆಪಿಎಸ್ಸಿಯಲ್ಲಿ ಶಿಸ್ತಿಲ್ಲದೆ ಎಲ್ಲವೂ ನಿಯಂತ್ರಣ ತಪ್ಪಿರುವುದರಿಂದ ಅಲ್ಲಿರುವವರು ಅವರವರ ಹಿತಾಸಕ್ತಿ ಕಾಪಾಡಿಕೊಳ್ಳಲು ಪೈಪೋಟಿ ನಡೆಸುತ್ತಾರೆ. ಹಿತಾಸಕ್ತಿಗಳು, ರಾಜಕೀಯ ಮಧ್ಯಪ್ರವೇಶದಿಂದಾಗಿ ಆಯೋಗದ ಸದಸ್ಯರು ಮತ್ತು ಅಧಿಕಾರಿಗಳ ನಡುವೆ ಸಂಘರ್ಷಗಳು ಆಗುತ್ತಿರಬಹುದು. ರಾಜಕೀಯ ಹೊರಗಿಟ್ಟರೆ ಎಲ್ಲವೂ ಸರಿ ಹೋಗಬಹುದು.

-ಈ ಎಲ್ಲಾ ಸಮಸ್ಯೆಗಳ ನಡುವೆ ವರ್ಷಾನುಗಟ್ಟಲೆ ಪರೀಕ್ಷೆಗಾಗಿ ತಯಾರಿ ನಡೆಸಿರುವ ಅಭ್ಯರ್ಥಿಗಳ ಭವಿಷ್ಯವೇನು?

*ಬಹುತೇಕ ವಿದ್ಯಾರ್ಥಿಗಳು 22ನೇ ವರ್ಷಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗೆ ಗಂಭೀರ ತಯಾರಿ ಆರಂಭಿಸುತ್ತಾರೆ. ಆದರೆ, ನೇಮಕಾತಿ ಸಂಸ್ಥೆಗಳು ನಾಲ್ಕೈದು ವರ್ಷಕ್ಕೊಮ್ಮೆ ನೇಮಕಾತಿ ಮಾಡುತ್ತಿವೆ. ಅನೇಕ ಹುದ್ದೆಗಳಿಗೆ ಐದಾರು ವರ್ಷಗಳಿಂದ ನೇಮಕಾತಿಯೇ ಆಗಿಲ್ಲ. ಅವಕಾಶ ಕಡಿಮೆ, ವಯೋಮಿತಿ ಮೀರುತ್ತದೆ. ಇದರಿಂದ ವಿದ್ಯಾರ್ಥಿಗಳು ನಿರಾಶರಾಗುತ್ತಾರೆ. ಖಾಲಿ ಹುದ್ದೆ ಭರ್ತಿ ಆಗಬೇಕು. ಕೆಲ ಪ್ರಮುಖ ಹುದ್ದೆಗಳ ಮುಂಬಡ್ತಿ ಲಾಬಿಗೆ ಸರ್ಕಾರ ಮಣಿಯದೆ ಸರ್ಕಾರ ನೇಮಕಾತಿ ಮಾಡಬೇಕು.

-ಕೆಪಿಎಸ್ಸಿ ವಿಳಂಬ ಧೋರಣೆಯಿಂದ ನಲುಗಿರುವ ಆಕಾಂಕ್ಷಿಗಳ ಸ್ಥಿತಿ ಏನು?

*ಬಡತನ, ಆರ್ಥಿಕ ಸಂಕಷ್ಟದ ನಡುವೆ ಛಲದೊಂದಿಗೆ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆಗೆ ಸಿದ್ಧರಾಗುವುದನ್ನು ನೋಡುತ್ತಿರುತ್ತೇನೆ. ಇದಕ್ಕಾಗಿಯೇ ನೂರಾರು ಕಿ.ಮೀ. ದೂರದಿಂದ ಬಂದು ತರಬೇತಿ ಪಡೆಯುತ್ತಾರೆ. ಹೀಗಿದ್ದಾಗ ಕೆಪಿಎಸ್ಸಿಯ ಲೋಪಗಳಿಂದ ಯಶಸ್ಸು ಸಿಗದೆ ಅನೇಕರು ಖಿನ್ನತೆ, ಒತ್ತಡಕ್ಕೆ ಒಳಗಾಗುತ್ತಾರೆ. ಸಾಮರ್ಥ್ಯವಿದ್ದರೂ ನೇಮಕಾತಿ ವಿಳಂಬದಿಂದ ಅನೇಕರು ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುವುದನ್ನೂ ನೋಡಿದ್ದೇನೆ. ಇದು ನಮ್ಮ ವ್ಯವಸ್ಥೆಯ ವೈಫಲ್ಯದ ಫಲ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ