ಸ್ವಿಗ್ಗಿ, ಜೊಮೆಟೋ ಮಾದರಿ ಹಾಪ್‌ಕಾಮ್ಸ್‌ನಿಂದ ಮನೆಗೆ ಡೆಲಿವರಿ - ವಾಟ್ಸಪ್‌ಲ್ಲಿ ಬುಕ್‌ ಮಾಡಿದರೆ ಮನೆಗೆ ತರಕಾರಿ!

Published : Feb 27, 2025, 10:16 AM IST
vegetable

ಸಾರಾಂಶ

ನಗರದ ಅಪಾರ್ಟ್‌ಮೆಂಟ್‌ ವಾಸಿಗಳಿಗೆ ತಾಜಾ ಹಣ್ಣು, ತರಕಾರಿಗಳನ್ನು ಮನೆಬಾಗಿಲಿಗೆ ತಲುಪಿಸುವ ಗ್ರಾಹಕ ಸ್ನೇಹಿ ‘ವಾಟ್ಸಪ್‌ ಸೇಲ್ಸ್‌ ಚಾನಲ್‌’ ಪ್ರಾರಂಭಿಸಲು ಹಾಪ್‌ಕಾಮ್ಸ್‌ ಸಿದ್ಧತೆ ನಡೆಸಿದೆ.

ಸಂಪತ್‌ ತರೀಕೆರೆ

 ಬೆಂಗಳೂರು : ನಗರದ ಅಪಾರ್ಟ್‌ಮೆಂಟ್‌ ವಾಸಿಗಳಿಗೆ ತಾಜಾ ಹಣ್ಣು, ತರಕಾರಿಗಳನ್ನು ಮನೆಬಾಗಿಲಿಗೆ ತಲುಪಿಸುವ ಗ್ರಾಹಕ ಸ್ನೇಹಿ ‘ವಾಟ್ಸಪ್‌ ಸೇಲ್ಸ್‌ ಚಾನಲ್‌’ ಪ್ರಾರಂಭಿಸಲು ಹಾಪ್‌ಕಾಮ್ಸ್‌ ಸಿದ್ಧತೆ ನಡೆಸಿದೆ.

ಮಾರ್ಚ್‌ ಮೊದಲ ವಾರದಲ್ಲಿ ವಾಟ್ಸಪ್‌ ಸೇಲ್ಸ್‌ ಚಾನಲ್‌ ಆರಂಭಿಸಲು ಹಾಪ್‌ಕಾಮ್ಸ್‌ ಯೋಜಿಸಿದೆ. ಮೊದಲ ಹಂತದಲ್ಲಿ ನಗರದ ನಾಲ್ಕೈದು ಅಪಾರ್ಟ್‌ಮೆಂಟ್‌ಗಳಿಗೆ ಪ್ರಾಯೋಗಿಕವಾಗಿ ಹಣ್ಣು, ತರಕಾರಿಗಳನ್ನು ಸರಬರಾಜು ಮಾಡಲಿದೆ. ಯೋಜನೆ ಯಶಸ್ವಿಯಾದರೆ ನಗರದ ಎಲ್ಲ ಅಪಾರ್ಟ್‌ಮೆಂಟ್‌ಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ. ಈ ಮೂಲಕ ಪ್ರತಿದಿನ ಶೇ.30ರಷ್ಟು ವ್ಯರ್ಥವಾಗಿ ಹಾಳಾಗುತ್ತಿರುವ ಹಣ್ಣು, ತರಕಾರಿಗಳನ್ನು ಉಳಿಸುವ ಮಹತ್ತರ ಯೋಜನೆ ಇದಾಗಿದೆ ಎಂದು ಹಾಪ್‌ಕಾಮ್ಸ್‌ ಮಾರ್ಕೇಟಿಂಗ್‌ ಮ್ಯಾನೇಜರ್‌ ವಿನಾಯಕ ರೆಡ್ಡಿ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ವಾಟ್ಸಪ್‌ ಸೇಲ್ಸ್‌ ಚಾನಲ್‌ ಅಭಿವೃದ್ಧಿ ಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಮಾರ್ಚ್ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಗುರಿಯೊಂದಿಗೆ ಕಾರ್ಯ ನಡೆಯುತ್ತಿದೆ. ಆ್ಯಪ್‌ ನಿರ್ವಹಣೆಗಾಗಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ತಂಡವನ್ನು ರಚಿಸಲಾಗುತ್ತಿದೆ. ಆರಂಭಿಕ ಮೂರು ತಿಂಗಳು ಚಾನಲ್‌ ಅಭಿವೃದ್ಧಿಪಡಿಸುತ್ತಿರುವ ತಂಡವೇ ಇದರ ನಿರ್ವಹಣೆ ಮಾಡಲಿದೆ.

ಈ ಚಾನಲ್‌ ಮೂಲಕ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಹಾಪ್‌ಕಾಮ್ಸ್‌ನಲ್ಲಿ ಲಭ್ಯವಿರುವ ಋತುಮಾನ ಹಣ್ಣುಗಳು, ತರಕಾರಿಗಳ ಮಾಹಿತಿ ಒದಗಿಸಲಾಗುವುದು. ಆಸಕ್ತರು, ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ, ನೋಂದಣಿ ಆಗಬೇಕಿದೆ. ಈ ವಾಟ್ಸಪ್‌ ಸೇಲ್ಸ್‌ ಚಾನಲ್‌ನಲ್ಲೇ ಸುಮಾರು 150ಕ್ಕೂ ಹೆಚ್ಚು ಬಗೆಯ ತರಕಾರಿ, ಹಣ್ಣುಗಳ ಪಟ್ಟಿ, ದರ ಮತ್ತು ಸಿಗುವ ರಿಯಾಯಿತಿಯ ಮಾಹಿತಿ ದಾಖಲು ಮಾಡಲಾಗಿರುತ್ತದೆ. ಗ್ರಾಹಕರು ತಮಗೆ ಬೇಕಾದ ಹಣ್ಣು, ತರಕಾರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಗ್ರಾಹಕರು ಆಯ್ಕೆ ಮಾಡಿ ಕಳುಹಿಸಿದ ಹಣ್ಣು, ತರಕಾರಿಗಳು 24 ಗಂಟೆಯೊಳಗೆ ಆಯಾ ಅಪಾರ್ಟ್‌ಮೆಂಟ್‌ಗಳಲ್ಲಿರುವ ಫ್ಲಾಟ್‌ಗಳಿಗೆ ತಲುಪಲಿವೆ. ಆನ್‌ಲೈನ್‌ ಪೇಮೆಂಟ್‌ ಇಲ್ಲವೇ ಕ್ಯಾಶ್‌ ಆನ್‌ ಡೆಲಿವರಿ ವ್ಯವಸ್ಥೆಯೂ ಇರಲಿದೆ.

ಅಪಾರ್ಟ್‌ಮೆಂಟ್‌ ಫೆಡರೇಷನ್ಸ್‌ ಸಹಕಾರ:

ಹಾಪ್‌ಕಾಮ್ಸ್‌ ಬಳಿ ನಗರದ 200ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳ ಪಟ್ಟಿಯಿದ್ದು, ಅಲ್ಲಿನ ಅಪಾರ್ಟ್‌ಮೆಂಟ್‌ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಹಣ್ಣು, ತರಕಾರಿ ಪೂರೈಸುವ ಕುರಿತು ಮಾತುಕತೆ ನಡೆಸಲಾಗಿದೆ. 50ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ ಫೆಡರೇಷನ್‌ಗಳು ಒಪ್ಪಿಗೆ ನೀಡಿವೆ. ಉಳಿದ ಅಪಾರ್ಟ್‌ಮೆಂಟ್‌ ನಿವಾಸಿಗಳ ಸಹಕಾರವನ್ನು ಕೂಡ ಕೋರಲಾಗಿದೆ. ಮುಂದಿನ ದಿನಗಳಲ್ಲಿ ಅವುಗಳ ಸಹಕಾರವೂ ಕೂಡ ಸಿಗುವ ನಿರೀಕ್ಷೆ ಇದೆ ಎಂದು ವಿನಾಯಕ ರೆಡ್ಡಿ ತಿಳಿಸಿದರು.

ರಿಯಾಯಿತಿ ಸೌಲಭ್ಯ

ಸ್ವಿಗ್ಗಿ, ಜೊಮೆಟೋ ಮಾದರಿಯಲ್ಲಿ ಮನೆಬಾಗಿಲಿಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ಹಣ್ಣು, ತರಕಾರಿ ಡೆಲಿವರಿ ಮಾಡಲಾಗುವುದು. ಒಂದು ವಾಹನದಲ್ಲಿ ದಿನಕ್ಕೆ ಮೂರರಿಂದ ನಾಲ್ಕು ಅಪಾರ್ಟ್‌ಮೆಂಟ್‌ಗೆ ಹಣ್ಣು, ತರಕಾರಿ ಸರಬರಾಜು ಮಾಡುವ ಗುರಿ ಇದೆ. ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ ಗ್ರಾಹಕರಿಗೆ ರಿಯಾಯಿತಿಯೂ ಸಿಗಲಿದೆ. ಆದರೆ, ಅಪಾರ್ಟ್‌ಮೆಂಟ್‌ ಆವರಣಕ್ಕೆ ಬರುವ ವಾಹನದಲ್ಲಿ ಹಣ್ಣು, ತರಕಾರಿ ಖರೀದಿಸುವ ಗ್ರಾಹಕರಿಗೆ ಯಾವುದೇ ರಿಯಾಯಿತಿ ನೀಡುವುದಿಲ್ಲ. ಜೊತೆಗೆ ಕನಿಷ್ಠ ಇಂತಿಷ್ಟು ಕೇಜಿಯ ಹಣ್ಣು ಅಥವಾ ತರಕಾರಿಯನ್ನು ಆನ್‌ಲೈನ್‌ನಲ್ಲಿ ಬುಕ್‌ ಮಾಡಬೇಕೆಂಬ ನಿಯಮವನ್ನು ಶೀಘ್ರವೇ ಅಳವಡಿಸಲಾಗುವುದು. ಇಲ್ಲದಿದ್ದರೆ ನಷ್ಟ ಆಗುವ ಭೀತಿಯೂ ಇದೆ.

ವಾಟ್ಸ್‌ಆ್ಯಪ್‌ ಸೇಲ್ಸ್‌ ಚಾನಲ್‌ನ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದ ಕೂಡಲೇ ಹಣ್ಣು ತರಕಾರಿ, ದರದ ಪಟ್ಟಿ, ಸಿಗುವ ರಿಯಾಯಿತಿಯೂ ಗ್ರಾಹಕರಿಗೆ ತಿಳಿಯುವಂತೆ ಚಾನಲ್‌ ಅಭಿವೃದ್ಧಿ ಪಡಿಸುತ್ತಿದ್ದೇವೆ. ಮಾರ್ಚ್‌ ಮೊದಲ ಅಥವಾ 2ನೇ ವಾರದಲ್ಲಿ ಗ್ರಾಹಕರಿಗೆ ಮುಕ್ತಗೊಳಿಸುವ ಚಿಂತನೆ ಇದೆ.

-ಗೋಪಾಲಕೃಷ್ಣ, ಅಧ್ಯಕ್ಷ, ಹಾಪ್‌ಕಾಮ್ಸ್‌.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ