ಕೆಪಿಎಸ್‌ಸಿ ಹಗರಣ: ಸಾಹುಕಾರ್ ವಿರುದ್ಧ 580 ಪುಟ ಚಾರ್ಜ್‌ಶೀಟ್

Published : Nov 14, 2026, 09:17 AM IST
Shivashankarappa S Sahukar

ಸಾರಾಂಶ

‘ಕನ್ನಡಪ್ರಭ’ ಬಯಲಿಗೆ ಎಳೆದಿದ್ದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಜಾರಿ ನಿರ್ದೇಶನಾಲಯವು (ಇ.ಡಿ) ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್‌.ಸಾಹುಕಾರ್‌ ಸೇರಿ ನಾಲ್ವರು ಆರೋಪಿಗಳ ವಿರುದ್ಧ ಇ.ಡಿ ವಿಶೇಷ ನ್ಯಾಯಾಲಯಕ್ಕೆ 580ಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಬೆಂಗಳೂರು : ‘ಕನ್ನಡಪ್ರಭ’ ಬಯಲಿಗೆ ಎಳೆದಿದ್ದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಜಾರಿ ನಿರ್ದೇಶನಾಲಯವು (ಇ.ಡಿ) ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್‌.ಸಾಹುಕಾರ್‌ ಸೇರಿ ನಾಲ್ವರು ಆರೋಪಿಗಳ ವಿರುದ್ಧ ಇ.ಡಿ ವಿಶೇಷ ನ್ಯಾಯಾಲಯಕ್ಕೆ 580ಕ್ಕೂ ಅಧಿಕ ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಪ್ರಕರಣದ ಆರೋಪಿಗಳಾದ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌, ಕೆಪಿಎಸ್ಸಿ ಸದಸ್ಯೆ ಬಿ.ವಿ.ಗೀತಾ ಮತ್ತು ಮಧ್ಯವರ್ತಿ ಬಸವರಾಜ ಕನ್ನಾಳೆ ವಿರುದ್ಧ ಈ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ.

ಈ ದೋಷಾರೋಪಪಟ್ಟಿಯಲ್ಲಿ 50ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ, ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳ ಹೇಳಿಕೆಗಳು, ಮಧ್ಯವರ್ತಿ ಬಸವರಾಜ ಕನ್ನಾಳೆ ಹಾಗೂ ಆತನ ಸಹಚರರು ಪರೀಕ್ಷೆ ಹಿಂದಿನ ದಿನ ಅಭ್ಯರ್ಥಿಗಳಿಗೆ ಉತ್ತರ ಸಹಿತ ಪ್ರಶ್ನೆಪತ್ರಿಕೆ ಕೊಟ್ಟು ಉತ್ತರಗಳನ್ನು ಕಂಠಪಾಠ ಮಾಡಿಸಿದ್ದ ದೇವನಹಳ್ಳಿ ಸಮೀಪದ ರೆಸಾರ್ಟ್‌ನ ಸಿಬ್ಬಂದಿ ಹೇಳಿಕೆಗಳು, ಅಭ್ಯರ್ಥಿಗಳಿಂದ ಲಂಚ ಹಣದ ವರ್ಗಾವಣೆ ಮಾಡಿಸಿಕೊಂಡಿದ್ದ ಬೀದರ್‌ನ ಸಹಕಾರಿ ಬ್ಯಾಂಕ್‌ನ ಸಿಬ್ಬಂದಿ ಹೇಳಿಕೆಗಳು, ಆರೋಪಿಗಳಿಗೆ ಲಂಚದ ಹಣ ನೀಡಿದ್ದ ಅಭ್ಯರ್ಥಿಗಳು ಹಾಗೂ ಅವರ ಪೋಷಕರ ಹೇಳಿಕೆಗಳು ಸೇರಿ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ.

ಹಣಕಾಸು ವಹಿವಾಟು, ಆಸ್ತಿ ವಿವರ ಉಲ್ಲೇಖ:

ಈ ಲಂಚದ ಹಣ ಬಳಸಿಕೊಂಡು ಆರೋಪಿ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಅವರ ಸ್ನೇಹಿತೆಗೆ ಸುಮಾರು 52 ಲಕ್ಷ ರು. ಮೌಲ್ಯದ ಚಿನ್ನಾಭರಣ ಖರೀದಿಸಿ ನೀಡಿದ್ದರ ಕುರಿತ ದಾಖಲೆಗಳು, ಹಣಕಾಸು ವಹಿವಾಟು, ಬ್ಯಾಂಕ್‌ ಸಿಬ್ಬಂದಿ ಹೇಳಿಕೆಗಳು, ಚಿನ್ನಾಭರಣ ಮಾರಾಟ ಅಂಗಡಿ ಸಿಬ್ಬಂದಿ ಹೇಳಿಕೆಗಳು, ಗಂಗ್ವಾರ್‌ ತನ್ನ ಸ್ನೇಹಿತೆ ಜತೆಗೆ ಚಿನ್ನಾಭರಣ ಅಂಗಡಿಗೆ ತೆರಳಿದ್ದ ಸಿಸಿಟಿವಿ ದೃಶ್ಯಾವಳಿಗಳು, ಫೋಟೋಗಳು ಸೇರಿ ನಾಲ್ವರು ಆರೋಪಿಗಳ ಕೋಟ್ಯಂತರ ರು. ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳ ವಿವರಗಳನ್ನು ದೋಷಾರೋಪಟ್ಟಿಯಲ್ಲಿ ಅಡಕಗೊಳಿಸಲಾಗಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ:

400 ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಇ.ಡಿ ಅಧಿಕಾರಿಗಳು ಕೆಪಿಎಸ್ಸಿ ಅಮಾನತುಗೊಂಡಿರುವ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಮಾಜಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌, ಕೆಪಿಎಸ್ಸಿ ಸದಸ್ಯೆ ಬಿ.ವಿ.ಗೀತಾ ಮತ್ತು ಮಧ್ಯವರ್ತಿ ಬಸವರಾಜ ಕನ್ನಾಳೆ ಅವರ ನಿವಾಸ, ಆಯೋಗದ ಕಚೇರಿ ಮತ್ತು ಸದಸ್ಯರ ನಿವಾಸ ಸೇರಿ ರಾಜ್ಯಾದ್ಯಂತ 21ಕ್ಕೂ ಹೆಚ್ಚಿನ ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಶೋಧಿಸಿದ್ದರು.

ಶೋಧ ಕಾರ್ಯ ವೇಳೆ ಅಭ್ಯರ್ಥಿಗಳು ಸಹಿ ಮಾಡಿದ ಖಾಲಿ ಚೆಕ್‌ಗಳು ಮತ್ತು ಪ್ರಾಮಿಸರಿ ನೋಟ್‌ಗಳು ಪತ್ತೆಯಾಗಿದ್ದವು. ಆರೋಪಿಗಳು ಅಭ್ಯರ್ಥಿಗಳಿಂದ ಲಕ್ಷಾಂತರ ರು. ಲಂಚ ಪಡೆದಿರುವುದು ಬೆಳಕಿಗೆ ಬಂದಿತ್ತು. ಅಕ್ರಮ ಹಣದ ಮೂಲ ಮರೆಮಾಚಲು ಆ ಹಣವನ್ನು ಬ್ಯಾಂಕ್ ವರ್ಗಾವಣೆಗಳು, ಚಿನ್ನದ ಆಭರಣಗಳ ಖರೀದಿ, ವಿಮಾನ ಪ್ರಯಾಣದ ಟಿಕೆಟ್ ಖರಿದಿಗೆ ನಗದು ಪಾವತಿ ಸೇರಿ ಇತರೆ ನಗದು ವಹಿವಾಟು ನಡೆಸಿರುವುದು ಬಯಲಾಗಿತ್ತು. ಇದರ ಬೆನ್ನಲ್ಲೇ ಇ.ಡಿ.ಅಧಿಕಾರಿಗಳು ಈ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.

ಪಶುವೈದ್ಯ ಹಗರಣ

- ಕರ್ನಾಟಕ ಲೋಕಸೇವಾ ಆಯೋಗದ ಪಶುವೈದ್ಯ ನೇಮಕ ಹಗರಣ

- ವಿಶೇಷ ಕೋರ್ಟ್‌ಗೆ ಇ.ಡಿ.ಯಿಂದ ದೋಷಾರೋಪ ಪಟ್ಟಿ ಸಲ್ಲಿಕೆ

- ಸಾಹುಕಾರ್‌ ಸೇರಿ ನಾಲ್ವರ ವಿರುದ್ಧ 580 ಪುಟಗಳ ಚಾರ್ಜ್‌ಶೀಟ್‌

- 50 ಸಾಕ್ಷಿ, ಅಭ್ಯರ್ಥಿಗಳ ಹೇಳಿಕೆ ಉಲ್ಲೇಖ, ಅಕ್ರಮಗಳು ದಾಖಲು

- ಅಭ್ಯರ್ಥಿಗಳು ನೀಡಿದ ಲಂಚದ ಹಣದ ವಿವರಗಳು ಕೂಡ ಉಲ್ಲೇಖ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಡಾ.ರಾಜ್‌ಕುಮಾರ್‌ ಯೋಗ ಶ್ಲಾಘಿಸಿದ ಮೋದಿ
ಬಮುಲ್‌ ಆಧುನೀಕರಣಕ್ಕೆ ಕ್ರಮ: ಶಾಸಕ ಶರತ್ ಬಚ್ಚೇಗೌಡ