;Resize=(412,232))
ಬೆಂಗಳೂರು: ಒಂದು ದಿನದ ಭೇಟಿಗಾಗಿ ಶುಕ್ರವಾರ ಕರ್ನಾಟಕಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಮತ್ತು ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 10.45ಕ್ಕೆ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ವಸತಿ ಪ್ರಧಾನ ಕಚೇರಿಯ ಆವರಣದಲ್ಲಿ ನಡೆಯುವ ಪ್ರಶಾಂತಿ ಕುಟೀರದ ಸ್ವರ್ಣ ಜಯಂತಿ ಆಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಸ್ವರ್ಣ ಜಯಂತಿ ಆಡಳಿತ ಮಂಡಳಿಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಕೇರಳಂನ ತಿರುವನಂತಪುರಂನಲ್ಲಿ ಎಸ್-ವ್ಯಾಸ ಆಫ್-ಕ್ಯಾಂಪಸ್‌ಗೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 12.45ಕ್ಕೆ ಸುಮಾರು 3,470 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಕಾಳೇನ ಅಗ್ರಹಾರ-ತಾವರೆಕೆರೆ ನಡುವಿನ ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಲಿದ್ದಾರೆ. ಬಳಿಕ ತಾವರೆಕೆರೆ ಮೆಟ್ರೋ ರೈಲು ನಿಲ್ದಾಣದಿಂದ ಐಐಎಂ ಬೆಂಗಳೂರು ಮೆಟ್ರೋ ರೈಲು ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. ಮಧ್ಯಾಹ್ನ 1.15ಕ್ಕೆ ಸುಮಾರು 15,600 ಕೋಟಿ ರು.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ಮಾಡಲಿದ್ದಾರೆ. ನಂತರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಾಗಾರ ಉದ್ಘಾಟಿಸಿ, ಬೆಂಗಳೂರು- ಗೋವಾ ವಂದೇ ಭಾರತ್ ಸ್ಲೀಪರ್ ರೈಲಿಗೆ ನಿಶಾನೆ ತೋರಲಿದ್ದಾರೆ.
ಮಧ್ಯಾಹ್ನ 3.30ಕ್ಕೆ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ಪ್ರಧಾನಿ ಮೋದಿ ಪ್ರಯಾಣಿಸಲಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಕಾಸ್ಮೋಸ್ ಮೈಸೂರು ಎಂಬ ದೇಶದ ಮೊದಲ ಟಿಲ್ಟೆಡ್ ಪ್ಲಾನಿಟೋರಿಯಂ ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ವಿಶೇಷ ವಿಮಾನದಲ್ಲಿ ಗುಜರಾತ್‌ನತ್ತ ಪ್ರಯಾಣಿಸಲಿದ್ದಾರೆ.
* 3,470 ಕೋಟಿ ರು. ವೆಚ್ಚದ ಕಾಳೇನ ಅಗ್ರಹಾರ-ತಾವರೆಕೆರೆ ನಡುವಿನ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆ
* ಸುಮಾರು 4,450 ಕೋಟಿ ರು. ಹೂಡಿಕೆಯಲ್ಲಿ ಅಭಿವೃದ್ಧಿಪಡಿಸಲಾದ ಕೊಪ್ಪಳ- 2 ಮತ್ತು ಗದಗ-2ರಲ್ಲಿ ನವೀಕರಿಸಬಹುದಾದ ಇಂಧನ ವಲಯಗಳ ಪ್ರಸರಣ ಯೋಜನೆ ಹಂತ 2 ಉದ್ಘಾಟನೆ
* ಸುಮಾರು 1,370 ಕೋಟಿ ರು. ವೆಚ್ಚದ ಬೀದರ್‌ನ ಸೌರ ವಿದ್ಯುತ್ ವಲಯದ ಪ್ರಸರಣ ಯೋಜನೆ ಉದ್ಘಾಟನೆ
* ಸುಮಾರು 3,450 ಕೋಟಿ ರು.ಗೂ ಅಧಿಕ ವೆಚ್ಚದ ದಾವಣಗೆರೆ/ಚಿತ್ರದುರ್ಗ ಮತ್ತು ಬಳ್ಳಾರಿ ನವೀಕರಿಸಬಹುದಾದ ಇಂಧನ ವಲಯಗಳ ಪ್ರಸರಣ ಯೋಜನೆಗೆ ಶಂಕು ಸ್ಥಾಪನೆ
* ದಾವಣಗೆರೆ ಮತ್ತು ಬಳ್ಳಾರಿಯಲ್ಲಿ ಹೆಚ್ಚುವರಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಸಂಯೋಜನೆಗಾಗಿ ಸುಮಾರು 1,100 ಕೋಟಿ ರು. ವೆಚ್ಚದ ಪ್ರಸರಣ ವ್ಯವಸ್ಥೆ ಬಲವರ್ಧನೆ ಯೋಜನೆಗೆ ಶಂಕು ಸ್ಥಾಪನೆ
* ಮಂಗಳೂರಿನಲ್ಲಿ 850 ಕೋಟಿ ರು. ವೆಚ್ಚದ ಭಾರತದ ಅತಿದೊಡ್ಡ ಭೂಗತ ಎಲ್‌ಪಿಜಿ ಶೇಖರಣಾ ಕೇವರ್ನ್ ಮತ್ತು 330 ಕೋಟಿ ರು. ವೆಚ್ಚದ ಎಂಆರ್‌ಪಿಎಲ್‌ನ ಬೆಂಗಳೂರಿನ ದೇವನಗೊಂದಿ ಮಾರ್ಕೆಟಿಂಗ್ ಟರ್ಮಿನಲ್ ಲೋಕಾರ್ಪಣೆ
* ಬೆಂಗಳೂರಿನ ಹರಳಕುಂಟೆಯಲ್ಲಿ ಗೇಲ್ ಸಂಸ್ಥೆಯ ಜೈವಿಕ ಅನಿಲ ಸ್ಥಾವರಕ್ಕೆ ಶಂಕು ಸ್ಥಾಪನೆ
* ಅಮೃತ ಭಾರತ್ ನಿಲ್ದಾಣ ಯೋಜನೆಯಡಿ ಮರು ಅಭಿವೃದ್ಧಿಗೊಂಡ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಗಳ ಉದ್ಘಾಟನೆ
* ಗದಗ-ಹೊಟಗಿ 284 ಕಿ.ಮೀ. ದ್ವಿಪಥ ರೈಲು ಮಾರ್ಗದ ಪೈಕಿ ಬಾಗಲಕೋಟೆ-ವಂಡಾಲ್ ನಡುವಿನ 45 ಕಿ.ಮೀ. ದ್ವಿಪಥ ರೈಲು ಮಾರ್ಗ ಲೋಕಾರ್ಪಣೆ
* ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ರೈಲು ವಿಭಾಗದ 55 ಕಿ.ಮೀ. ಉದ್ದದ ವಿದ್ಯುದ್ದೀಕರಣ ಉದ್ಘಾಟನೆ
* ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ