ಗೃಹಲಕ್ಷ್ಮೀಯರ ಬಾಕಿ ಹಣ ಬಿಡುಗಡೆಗೆ ಲಕ್ಷ್ಮೀ ತಥಾಸ್ತು : ಸುಳ್ಳಲ್ಲೇ 7 ಗಂಟೆ ರೈಲು ಓಡಿಸಿದ್ರು

Published : Aug 11, 2025, 10:29 AM IST
Reporters Diary

ಸಾರಾಂಶ

ವರಮಹಾಲಕ್ಷ್ಮೀ ಹಬ್ಬದಲ್ಲಿ ಗರಿ ಗರಿಯಾದ ನೋಟುಗಳಿಂದ ಅಲಂಕರಿಸಿದ್ದ ಒಂದೇ ಒಂದು ನೋಟು ಕೆಳಗೆ ಜಾರಿ ಬಿದ್ದರೆ ಏನರ್ಥ? ವೆರಿ ಸಿಂಪಲ್‌.

ಭಕ್ತರು ಪೂಜೆ ಸಲ್ಲಿಸುವ ವೇಳೆ ಗೃಹಿಣಿಯೊಬ್ಬರು ಪ್ರಾರ್ಥನೆ ಮುಗಿಸಿ ಕಣ್ಣು ತೆರೆದಾಗ ದೇಗುಲದಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲಾಗಿ ಶೃಂಗರಿಸಿದ ಐವತ್ತು, ನೂರು, ಇನ್ನೂರು ನೋಟುಗಳ ಪೈಕಿ ಒಂದು ನೋಟು ಕೆಳಗೆ ಜಾರಿ ಬಿತ್ತು. ಅದನ್ನು ನೋಡಿದ ಗೃಹಿಣಿ ನನಗೆ ಲಕ್ಷ್ಮೀ ತಥಾಸ್ತು ಆತು ಎಂದು ಖುಷಿಯೋ ಖುಷಿ.

ವರಮಹಾಲಕ್ಷ್ಮೀ ಹಬ್ಬದಲ್ಲಿ ಗರಿ ಗರಿಯಾದ ನೋಟುಗಳಿಂದ ಅಲಂಕರಿಸಿದ್ದ ಒಂದೇ ಒಂದು ನೋಟು ಕೆಳಗೆ ಜಾರಿ ಬಿದ್ದರೆ ಏನರ್ಥ? ವೆರಿ ಸಿಂಪಲ್‌... ಎರಡ್ಮೂರು ದಿನದಲ್ಲಿ ಗೃಹ ಲಕ್ಷ್ಮೀ ಹಣ ಖಾತೆಗೆ ಬಂದು ಬೀಳುತ್ತದೆ ಎಂದು ಅರ್ಥ!!! ಇದು ಬೇರೆ ಯಾರೋ ಹೇಳಿದ ಮಾತಲ್ಲ. ಎರಡು-ಮೂರು ತಿಂಗಳಿಂದ ಗೃಹಲಕ್ಷ್ಮೀ ಹಣಕ್ಕಾಗಿ ಕಾದು ಕುಳಿತಿರುವ ಮನೆ ಮನೆ ಮಹಾಲಕ್ಷ್ಮೀಯರು ಹೇಳಿದ ಮಾತಿದು. ಇಂತಹ ‘ಅರ್ಥ’ಗರ್ಭಿತ ಮಾತುಗಳು ಕೇಳಿ ಬಂದಿದ್ದು ನಮ್ಮ ಹುಬ್ಬಳ್ಳಿಯಲ್ಲಿ. ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ ಶ್ರದ್ಧಾಭಕ್ತಿಯಿಂದ ಎಲ್ಲಡೆ ನೆರವೇರಿದೆ.

ಹುಬ್ಬಳ್ಳಿ ಕೇಶ್ವಾಪುರ ರಸ್ತೆಯಲ್ಲಿರುವ ವರಮಹಾಲಕ್ಷ್ಮೀ ದೇವಾಲಯದಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಲಕ್ಷ್ಮೀಗೆ ನಮಿಸುವ ಮುನ್ನ ಸೇರಿದ ಗೃಹಿಣಿಯರಿಬ್ಬರು ಗೃಹಲಕ್ಷ್ಮೀ ಹಣದ ಕುರಿತು ಮಾತನಾಡುತ್ತಿದ್ದರು. ಭಕ್ತರು ಪೂಜೆ ಸಲ್ಲಿಸುವ ವೇಳೆ ಗೃಹಿಣಿಯೊಬ್ಬರು ಪ್ರಾರ್ಥನೆ ಮುಗಿಸಿ ಕಣ್ಣು ತೆರೆದಾಗ ದೇಗುಲದಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಸಾಲು ಸಾಲಾಗಿ ಶೃಂಗರಿಸಿದ ಐವತ್ತು, ನೂರು, ಇನ್ನೂರು ನೋಟುಗಳ ಪೈಕಿ ಒಂದು ನೋಟು ಕೆಳಗೆ ಜಾರಿ ಬಿತ್ತು. ಅದನ್ನು ನೋಡಿದ ಗೃಹಿಣಿ ನನಗೆ ಲಕ್ಷ್ಮೀ ತಥಾಸ್ತು ಆತು ಎಂದು ಖುಷಿಯೋ ಖುಷಿ. ಪೂಜಾರಪ್ಪ ಸಹ ಬಳಿಕ ಆ ಗೃಹಿಣಿಗೆ ಎಲ್ಲ ಭಕ್ತರಂತೆ ಹಣ್ಣು ಪ್ರಸಾದ, ಪುಷ್ಪ, ತೀರ್ಥ ಕೊಟ್ಟು ಕಳುಹಿಸಿದರು.

 ಗೃಹಿಣಿ ಹೊರಬರುತ್ತಿದ್ದಂತೆ ಪರಿಚಿತ ಇನ್ನೊಬ್ಬ ಗೃಹಿಣಿ ಅವರನ್ನು ಗೃಹ ಲಕ್ಷ್ಮಿ ಹಣ ಜಮಾ ಆಗಿದೆಯಾ? ಎಂದು ಕೇಳಿದರು. ಅದಕ್ಕೆ ಇನ್ನೂ ಜಮಾ ಆಗಿಲ್ಲ. ಈಗಷ್ಟೇ ಪೂಜೆ ವೇಳೆ ವರಮಹಾಲಕ್ಷ್ಮೀ ಹಣ ಕೆಳಗೆ ಜಾರಿಸಿ ಆಶೀರ್ವದಿಸಿದ್ದಾಳೆ. ಎರಡ್ಮೂರು ದಿನದಲ್ಲಿ ಹಣ ಜಮಾ ಆಗಬಹುದು ಎಂದು ಹೇಳಿದ್ದು ಅಲ್ಲಿದ್ದ ಇತರ ಮಹಿಳೆಯರು, ನಮಗೂ ಗೃಹಲಕ್ಷ್ಮೀ ಹಣ ಬರತೈತಿ, ವರಮಹಾಲಕ್ಷ್ಮೀ ನಮಗೂ ಆಶೀರ್ವದಿಸುತ್ತಾಳೆ, ಅದಕ್ಕೆ ಅಲ್ಲವೇ ಪೂಜೆಗೆ ಬಂದಿದ್ದು ಎಂದು ಪರಸ್ಪರ ಹೇಳಿಕೊಂಡು ಖುಷಿಯಿಂದ ಹೊರಟರು.

ರೈಲು ಓಡಿಸೋದು ಅಂದ್ರೆ ತಡವಾಗಿ ಬರಬಹುದೇ..!

ಯಾರಾದ್ರೂ ಮಾತ್‌ ಮಾತಲ್ಲೇ ಅತೀ ಸುಳ್ಳು ಹೇಳ್ತಾರೆ ಅಂತ ಗೊತ್ತಾದಾಗ ಎದುರಿನವರು ರೈಲು ಬಿಡೋ ಆಸಾಮಿ ಎಂದು ಗೇಲಿ ಮಾಡೋದಿದೆ. ಆದ್ರೆ ಮೊನ್ನೆ ಕಲಬುರಗಿ ನಿಲ್ದಾಣದಲ್ಲಿ ರೇಲ್ವೆ ಅಧಿಕಾರಿಗಳು ಬಸವ ಎಕ್ಸಪ್ರೆಸ್‌ ಕಲಬುರಗಿ ಆಗಮನದ ಬಗ್ಗೆ ಸುಳ್ಳು ಹೇಳ್ತಾ 7 ಗಂಟೆ ರೈಲು ಓಡಿಸಿದ್ರೆನ್ನಿ! ಬಾಗಲಕೋಟೆಯಿಂದ ಮೈಸೂರಿಗೆ ನಿತ್ಯ ಸಂಚರಿಸೋ ಬಸವ ಎಕ್ಸಪ್ರೆಸ್‌ ಪ್ರತಿದಿನ ರಾತ್ರಿ 9.15ಕ್ಕೆ ಕಲಬುರಗಿಗೆ ಬರ್ತಿತ್ತಾದ್ರೂ ಈ ರೈಲಿಗಾಗಿ ಸಾವಿರಾರು ಜನ ಕಾದು ಕುಳಿತ ದಿನ ಅದ್ಯಾಕೋ ನಿಗದಿತ ಸಮಯಕ್ಕೆ ಬರಲೇ ಇಲ್ಲ!

ಆದ್ರೆ ರೈಲು ಈಗ ಬರ್ತದೆ, ಆಗ ಬರ್ತದೆ, ಈಗ ಬರ್ತದೆ, ನಿರ್ಧಾರಿತ ಸಮಯಕ್ಕಿಂತ 10 ನಿಮಿಷ, 20 ನಿಮಿಷ ವಿಳಂಬವಾಗ್ತಿದೆ ಎಂದೆಲ್ಲಾ ಪುಂಖಾನುಪುಂಖ ರೇಲ್ವೆಯವರು ಅನೌನ್ಸ್‌ಮೆಂಟ್‌ ಹಂಗೇ ಕೊಡ್ತಾನೆ ಇದ್ರೆನ್ನಿ. ಆದ್ರೆ ಅಂದು ರೈಲು ತನ್ನ ನಿರ್ಧಾರಿತ ಸಮಯ ರಾತ್ರಿ 9.15ಕ್ಕೆ ಬದಲಾಗಿ ಮಾರನೆ ದಿನ ಬೆಳಗಿನ ಜಾವ ಬರೋಬ್ಬರಿ 4.30ಕ್ಕೆ ಕಲಬುರಗಿ ನಿಲ್ದಾಣಕ್ಕೆ ಬಂತಂತೆ!

ಈ ವಿಳಂಬಕ್ಕೆ ಟೆಕ್ನಿಕಲ್‌ ಪ್ರಾಬ್ಲಂ ಕಾರಣವೆಂದು ರೇಲ್ವೆ ನಂತರ ಹೇಳಿತಾದರೂ ಅನೌನ್ಸ್‌ಮೆಂಟ್‌ನಲ್ಲಿ ತಾವು ರೈಲು ಬಿಟ್ಟಿದ್ಯಾಕೆಂಬುದಕ್ಕೆ ಕಾರಣ ಹೇಳಿಲ್ಲ, ಇದ್ದದ್ದು ಇದ್ಹಂಗೇ ಹೇಳಿಬಿಟ್ಟಿದ್ರೆ ಇಡೀ ರಾತ್ರಿ ನಿಲ್ದಾಣದಲ್ಲಿ ಮಳೆಯಲ್ಲಿ ಕೊಳೆಯೋದು ತಪ್ತಿತ್ತಲ್ಲ ಅಂತ ಪ್ರಯಾಣಿಕರು ಈ ರೈಲು ಬಿಡೋರ ಸಹವಾಸವೇ ಸಾಕಾಯ್ತಪ್ಪ ಅಂತ ಹಿಡಿಶಾಪ ಹಾಕಿದ್ರೆನ್ನಿ. ಮೊದ್ಲೇ 7 ಗಂಟೆ ತಡವಾಗಿ ಬಂದ ಬಸವ ಎಕ್ಸ್‌ಪ್ರೆಸ್‌ ರಾತ್ರಿ 12 ಗಂಟೆಯಾದ್ರೂ ರಾಜಧಾನಿ ಬೆಂಗಳೂರು ತಲುಪಿರಲಿಲ್ಲ ಎಂದು ಪ್ರಯಾಣಿಕರು ಪ್ರವಾಸದುದ್ದಕ್ಕೂ ಪರದಾಡಿದರೆನ್ನಿ.

-ಶಿವಾನಂದ ಅಂಗಡಿ

-ಶೇಷಮೂರ್ತಿ ಅವಧಾನಿ

PREV
Read more Articles on

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ