ನೈಸ್ ಯೋಜನೆಗೆ ವಶಪಡಿಸಿಕೊಂಡ 300 ಎಕ್ರೆ ಜಮೀನು ಭೂಸ್ವಾಧೀನ ರದ್ದು

Published : Jul 6, 2025 10:20 AM IST
Nice Road

ಸಾರಾಂಶ

 ಎಕ್ಸ್‌ಪ್ರೆಸ್‌ ವೇ ನಿರ್ಮಾಣಕ್ಕಾಗಿ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ ಪ್ರೈಸಸ್‌ ಲಿಮಿಟೆಡ್‌ಗೆ (ನೈಸ್) ನೀಡಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ   ವಶಪಡಿಸಿಕೊಂಡಿದ್ದ ಸುಮಾರು 300 ಎಕರೆಗೂ ಹೆಚ್ಚು ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ.

 ಬೆಂಗಳೂರು :  ಬೆಂಗಳೂರು-ಮೈಸೂರು ನಡುವೆ 111 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ ವೇ ನಿರ್ಮಾಣಕ್ಕಾಗಿ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ ಪ್ರೈಸಸ್‌ ಲಿಮಿಟೆಡ್‌ಗೆ (ನೈಸ್) ನೀಡಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವಶಪಡಿಸಿಕೊಂಡಿದ್ದ ಸುಮಾರು 300 ಎಕರೆಗೂ ಹೆಚ್ಚು ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ.

ಭೂಸ್ವಾಧೀನ ಅಧಿಸೂಚನೆ ಪ್ರಶ್ನಿಸಿ ಪಿ.ಶ್ರೀಧರಮೂರ್ತಿ ಸೇರಿದಂತೆ 50ಕ್ಕೂ ಹೆಚ್ಚು ಭೂಮಾಲೀಕರು ಸಲ್ಲಿಸಿದ್ದ ಪ್ರತ್ಯೇಕ ರಿಟ್ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

ಉದ್ದೇಶಿತ ಯೋಜನೆಗೆ ಜಮೀನು ಸ್ವಾಧೀನ ಪ್ರಕ್ರಿಯೆ ನಡೆಸಿ 23 ವರ್ಷಗಳಾದರೂ ಅಂತಿಮ ಆದೇಶ ಹೊರಡಿಸಿಲ್ಲ. ನಿಗದಿತ ಉದ್ದೇಶಕ್ಕೆ ಭೂಮಿಯನ್ನು ಬಳಕೆ ಕೂಡ ಮಾಡಿಲ್ಲ. ಇದರಿಂದ ಕೃಷಿ ಕೆಲಸ ಮಾಡುವ ಭೂ ಮಾಲೀಕರ ಉಪಜೀವನಕ್ಕೆ ತೊಂದರೆಯಾಗಿದೆ. ಬೇರೆ ಪ್ರಕರಣಗಳಲ್ಲಿ ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠ ಮತ್ತು ಸುಪ್ರೀಂಕೋರ್ಟ್ ನೀಡಿರುವ ತೀರ್ಪುಗಳನ್ನು ಆಧಾರವಾಗಿಟ್ಟುಕೊಂಡು ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

ಇಂಟರ್‌ಚೇಂಜ್, ಟೋಲ್ ಪ್ಲಾಜಾ, ಫೆರಿಫೇರಲ್ ರೋಡ್, ಲಿಂಕ್ ರೋಡ್ ಸೇರಿದಂತೆ 111 ಕಿ.ಮೀ ಉದ್ದದ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಮಾಡಲು ಸುಮಾರು 6,800 ಎಕರೆಗೂ ಹೆಚ್ಚು ಜಮೀನು ಭೂಸ್ವಾಧೀನಪಡಿಸಿಕೊಳ್ಳಲು ಕೆಐಎಡಿಬಿ ಜಮೀನುಗಳನ್ನು ನೋಟಿಫೈ ಮಾಡಿತ್ತು. ಅದರಲ್ಲಿ 300 ಎಕರೆ ಜಮೀನಿಗೆ ಸಂಬಂಧಿಸಿದಂತೆ ಭೂ ಮಾಲೀಕರು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

PREV
Read more Articles on