ಭಾವಿ ಶಾಸಕನೆಂದು ಮಹಿಳೆಯರ ವಂಚಿಸುತ್ತಿದ್ದವರ ಸೆರೆ

Published : Sep 05, 2026, 09:31 AM IST
Arrest

ಸಾರಾಂಶ

ಸಾಮಾಜಿಕ ಜಾಲತಾಣಗಳಲ್ಲಿ ಸುರಸುಂದರನಂತೆ ಫೋಟೋ ಹಾಕಿ ವಿವಾಹಿತ ಮಹಿಳೆಯರಿಗೆ ತಾನು ಭಾವಿ ಶಾಸಕ ಎಂದು ನಂಬಿಸಿ ಲಾಡ್ಜ್‌ಗಳಿಗೆ ಏಕಾಂತದ ಭೇಟಿಗೆ ಕರೆಸಿ ಚಿನ್ನಾಭರಣ ದೋಚುತ್ತಿದ್ದ ಕಿಲಾಡಿ ಮೋಸಗಾರ ಹಾಗೂ ಆತನ ಸಹಚರ ಸೇರಿ ಇಬ್ಬರು ದುಷ್ಕರ್ಮಿಗಳು ಯಶವಂತಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಸುರಸುಂದರನಂತೆ ಫೋಟೋ ಹಾಕಿ ವಿವಾಹಿತ ಮಹಿಳೆಯರಿಗೆ ತಾನು ಭಾವಿ ಶಾಸಕ ಎಂದು ನಂಬಿಸಿ ಲಾಡ್ಜ್‌ಗಳಿಗೆ ಏಕಾಂತದ ಭೇಟಿಗೆ ಕರೆಸಿ ಚಿನ್ನಾಭರಣ ದೋಚುತ್ತಿದ್ದ ಕಿಲಾಡಿ ಮೋಸಗಾರ ಹಾಗೂ ಆತನ ಸಹಚರ ಸೇರಿ ಇಬ್ಬರು ದುಷ್ಕರ್ಮಿಗಳು ಯಶವಂತಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಬತ್ತನಹಳ್ಳಿ ನಿವಾಸಿ ಎಸ್‌.ಎಲ್‌.ಸಂತೋಷ್ ಅಲಿಯಾಸ್ ಮಿಥುನ್ ಗೌಡ ಹಾಗೂ ಹರಪ್ಪನಹಳ್ಳಿ ತಾಲೂಕಿನ ಹೊನ್ನೇಹಳ್ಳಿ ಗ್ರಾಮದ ಪುನೀತ್‌ ಕುಮಾರ್‌ ಬಂಧಿತರಾಗಿದ್ದು, ಆರೋಪಿಗಳಿಂದ 130 ಗ್ರಾಂ ಚಿನ್ನಾಭರಣ ಹಾಗೂ ಮೊಬೈಲ್ ಸೇರಿದಂತೆ 19 ಲಕ್ಷ ರು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಈ ವಂಚನೆ ಜಾಲದ ಮತ್ತೊಬ್ಬ ಆರೋಪಿ ಶಿವಶಂಕರ್ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇತ್ತೀಚಿಗೆ ಚಿತ್ರ ರಂಗದ ಕಂಠದಾನ ಕಲಾವಿದೆಯೊಬ್ಬರಿಗೆ ಜಿಪಂ ಅಧ್ಯಕ್ಷನ ಸೋಗಿನಲ್ಲಿ ಲಾಡ್ಜ್‌ ಕರೆಸಿ ಚಿನ್ನದ ಸರವನ್ನು ದೋಚಿ ಪರಾರಿಯಾಗಿದ್ದ. ಈ ಬಗ್ಗೆ ಸಂತ್ರಸ್ತೆ ದೂರಿನನ್ವಯ ಉತ್ತರ ವಿಭಾಗದ ಡಿಸಿಪಿ ಬಿ.ಎಸ್‌.ನೇಮಗೌಡ ಮಾರ್ಗ ದರ್ಶನದಲ್ಲಿ ಯಶವಂತಪುರ ಉಪ ವಿಭಾಗದ ಎಸಿಪಿ ರೇಣುಕಾಪ್ರಸಾದ್ ಹಾಗೂ ಇನ್ಸ್‌ಪೆಕ್ಟರ್ ಶಿವಶಂಕರ್ ಸಾರಥ್ಯದಲ್ಲಿ ತನಿಖೆಗಿಳಿದ ತಂಡವು, ಒಂದು ತಿಂಗಳ ಸತತ ಕಾರ್ಯಾಚರಣೆ ಬಳಿಕ ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಫೀಚಲು ದೇಹದ ಸುಂದರ

ಸಂತೋಷ್ ಹಾಗೂ ಪುನೀತ್ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಈ ಇಬ್ಬರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕೆಲಸವಿಲ್ಲದೆ ಅಲೆಯುತ್ತಿದ್ದ ಆರೋಪಿಗಳು, ವಿವಾಹಿತ ಮಹಿಳೆಯರಿಗೆ ವಂಚಿಸಿ ಹಣ ಗಳಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದರು. ಈ ವಂಚನೆಗೆ ಗ್ಯಾಂಗ್‌ಗೆ ಸಂತೋಷ್ ಕಿಂಗ್ ಪಿನ್‌ ಆಗಿದ್ದು, ಮಹಿಳೆಯರನ್ನೇ ಮರಳು ಮಾಡಿ ಮೋಸದ ಜಾಲಕ್ಕೆ ಬೀಳಿಸಿ ಚಿನ್ನಾಭರಣ ದೋಚುವುದಕ್ಕೆ ಕುಖ್ಯಾತನಾಗಿದ್ದಾನೆ. ನೋಡಲು ಫೀಚಲು ದೇಹದ ನರಪೇತಲನಂತೆ ಇದ್ದ ಸಂತೋಷ್‌, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಸುರಸುಂದರನಂತೆ ಕೃತಕ ಬುದ್ಧಿಮತ್ತೆ (ಎಐ) ಗಳಲ್ಲಿ ಫೋಟೋ ಶಾಪ್ ಮಾಡಿಸಿದ ಪೋಟೋಗಳನ್ನು ಅಪ್‌ಲೋಡ್ ಮಾಡಿ ವಿವಾಹಿತ ಮಹಿಳೆಯರಿಗೆ ಸ್ನೇಹ ಬಯಸಿ ರಿಕ್ವೆಸ್ಟ್ ಕಳುಹಿಸುತ್ತಿದ್ದ. ನಂತರ ಆ ಮಹಿಳೆಯರ ಜತೆ ಸಂತೋಷ್ ಚಾಟಿಂಗ್ ಮಾಡಿ ಅವರ ನಂಬಿಕೆ ಸಂಪಾದಿಸುತ್ತಿದ್ದ. ತಾನು ಜಿಲ್ಲಾ ಪಂಚಾಯತ್ ಅಧ್ಯಕ್ಷನಾಗಿದ್ದೇನೆ. ಮುಂದಿನ ಚುನಾವಣೆಯಲ್ಲಿ ಶಾಸಕನಾಗುತ್ತೇನೆ. ಅಲ್ಲದೆ ನಾನು ಕೆಲ ಸಿನಿಮಾಗಳಿಗೆ ಹಣ ಹೂಡಿರುವ ನಿರ್ಮಾಪಕ ಎಂದು ಹೇಳಿಕೊಂಡಿದ್ದ. ಅದೇ ರೀತಿ ಚಿತ್ರರಂಗದ ಕಂಠದಾನ ಕಲಾವಿದೆಗೂ ಸಹ ಇದೇ ರೀತಿ ವಂಚಿಸಿದ್ದ.

ಲಾಡ್ಜ್‌ಗೆ ಬಂದ್ರು ಭೇಟಿ ಇಲ್ಲ

ತನ್ನ ಬಲೆಗೆ ಬಿದ್ದ ಮಹಿಳೆಯರನ್ನು ಏಕಾಂತಕ್ಕೆ ಲಾಡ್ಜ್‌ಗೆ ಕರೆಸಿದರೂ ಸಂತೋಷ್ ಭೇಟಿ ಮಾಡುತ್ತಿರಲಿಲ್ಲ. ಮೊಬೈಲ್‌ನಲ್ಲಿ ಮಾತನಾಡುತ್ತಲೇ ನೀವು ಹೋಟೆಲ್‌ಗೆ ಬರುವ ಮುನ್ನ ಮಾಂಗಲ್ಯ ಸರ ಎಲ್ಲ ತೆಗೆದು ಬ್ಯಾಗ್‌ನಲ್ಲಿಟ್ಟುಕೊಂಡು ಬನ್ನಿ. ನೀವು ಫ್ರೆಶ್ ಆಪ್ ಆಗಿ ಅಷ್ಟರಲ್ಲಿ ನನ್ನ ಪಿಎ ಬಂದು ನಿಮ್ಮನ್ನು ಕರೆದುಕೊಂಡು ಬರುತ್ತಾನೆ. ನಾನು ಮುಂದೆ ಶಾಸಕನಾಗುವವನು. ಯಾರಾದರೂ ನೋಡಿದರೆ ರಾಜಕೀಯವಾಗಿ ಕಷ್ಟವಾಗುತ್ತದೆ ಎಂದು ಹೇಳುತ್ತಿದ್ದ.

ಅಂತೆಯೇ ಆ ಮಹಿಳೆಯರ ಹೋಟೆಲ್‌ ರೂಮ್‌ಗೆ ಹೋದಾಗ ಜಿಪಂ ಪಿಎ ಎಂದು ಹೇಳಿ ಸಂತೋಷ್ ಭೇಟಿ ಮಾಡುತ್ತಿದ್ದ. ನೀವು ಫ್ರೆಶ್ ಆಪ್ ಆಗಿ ಬನ್ನಿ ಎಂದು ಹೇಳಿ ರೆಸ್ಟ್‌ ರೂಮ್‌ಗೆ ಕಳುಹಿಸಿ ಸಂತ್ರಸ್ತೆಯರನ್ನು ಆತ ಕಳುಹಿಸುತ್ತಿದ್ದ. ಈತನ ಮಾತಿನಂತೆ ರೆಸ್ಟ್‌ ರೂಮ್‌ಗೆ ಹೋದ ಕೂಡಲೇ ಅವರ ಬ್ಯಾಗ್ ಎಗರಿಸಿ ಆತ ಪರಾರಿಯಾಗುತ್ತಿದ್ದ. ಇದೇ ರೀತಿ ಯಶವಂತಪುರ ಲಾಡ್ಜ್‌ನಲ್ಲಿ ಕಂಠದಾನ ಕಲಾವಿದೆ ಸಂತೋಷ್ ವಂಚಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಒಂದೇ ಬಾರಿಗೆ ಒಂದೇ ಸಿಮ್

ಪೊಲೀಸರಿಗೆ ಸಿಕ್ಕಿಬೀಳುವ ಭಯದಿಂದ ಒಮ್ಮೆ ಬಳಸಿದ ಸಿಮ್ ಅನ್ನು ಮತ್ತೊಂದು ಕೃತ್ಯಕ್ಕೆ ಆತ ಬಳಸುತ್ತಿರಲಿಲ್ಲ. ಈತನ ಬಗ್ಗೆ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ಮಾಹಿತಿ ಬೆನ್ನತ್ತಿದ್ದಾಗ ಕೊನೆಗೆ ಸಂತೋಷ್ ಸಿಕ್ಕಿಬಿದ್ದ. ಈ ವಂಚನೆ ಕೃತ್ಯಗಳಿಗೆ ಸಂತೋಷ್‌ಗೆ ಪುನೀತ್ ಹಾಗೂ ಶಿವಶಂಕರ್ ನೆರವಾಗಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಮೂವರು ಮಹಿಳೆಯರಿಗೆ ವಂಚನೆ

ಕಂಠದಾನ ಕಲಾವಿದೆ ಸೇರಿದಂತೆ ನಗರದಲ್ಲಿ ಮೂವರು ಮಹಿಳೆಯರಿಗೆ ಸಂತೋಷ್ ಗ್ಯಾಂಗ್ ವಂಚಿಸಿರುವುದು ತನಿಖೆಯಲ್ಲಿ ಬಯಲಾಯಿತು. ಕೆಂಗೇರಿಯಲ್ಲಿ ಟ್ರಾವೆಲ್ಸ್ ಏಜನ್ಸಿ ಮಾಲೀಕಿಗೆ ಸಂತೋಷ್ ಮೋಸ ಮಾಡಿದ್ದಾನೆ. ತನ್ನ ಕ್ಷೇತ್ರದ 10 ಸಾವಿರ ಕಾರ್ಯಕರ್ತರನ್ನು ಪ್ರವಾಸ ಕರೆದೊಯ್ಯುವ ಪ್ಯಾಕೇಜ್ ಕೊಡುವುದಾಗಿ ನಂಬಿಸಿ ಲಾಡ್ಜ್‌ ಕರೆಸಿ ಆತ ವಂಚಿಸಿದ್ದ. ಕಾಮಾಕ್ಷಿಪಾಳ್ಯ ಬಳಿ ಮತ್ತೊಬ್ಬ ಗೃಹಿಣಿಗೆ ಆತ ಮಂಕೂಬೂದಿ ಎರಚಿ ಚಿನ್ನ ದೋಚಿದ್ದ ಎಂದು ಪೊಲೀಸರು ಹೇಳಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

3700 ಸರ್ಕಾರಿ ಶಾಲೆ, ಕಾಲೇಜಲ್ಲಿ ಸದ್ಯದಲ್ಲೇ ಸ್ಮಾರ್ಟ್‌ ಕ್ಲಾಸ್‌ ಶುರು
ಫುಟ್‌ಪಾತ್ ಮರು ಒತ್ತುವರಿ ತಡೆಗೆ ಟಾಸ್ಕ್‌ಫೋರ್ಸ್: ಕೃಷ್ಣ