ರಾಜ್ಯ ಸರ್ಕಾರ ಕೊಡಮಾಡುವ 2024-25ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಧಾರವಾಡದ ಡಾ। ಎಸ್.ಆರ್.ಗುಂಜಾಳ, ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಗೆ ಬಾಗಲಕೋಟೆಯ ಬಸಪ್ಪ ಎಚ್.ಭಜಂತ್ರಿ ಅವರು ಭಾಜನರಾಗಿದ್ದಾರೆ.
ಬೆಂಗಳೂರು : ರಾಜ್ಯ ಸರ್ಕಾರ ಕೊಡಮಾಡುವ 2024-25ನೇ ಸಾಲಿನ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಧಾರವಾಡದ ಡಾ। ಎಸ್.ಆರ್.ಗುಂಜಾಳ, ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಗೆ ಬಾಗಲಕೋಟೆಯ ಬಸಪ್ಪ ಎಚ್.ಭಜಂತ್ರಿ ಅವರು ಭಾಜನರಾಗಿದ್ದಾರೆ.
ಅಂತೆಯೇ ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿಗೆ ಬೆಂಗಳೂರಿನ ಪಂಡಿತ ರತ್ನ ಎ.ಶಾಂತಿರಾಜ ಶಾಸ್ತ್ರಿ ಟ್ರಸ್ಟ್ ಮತ್ತು ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿಗೆ ಮುಂಬೈನ ಬೇಗಂ ಪರ್ವೀನ್ ಸುಲ್ತಾನಾ ಆಯ್ಕೆಗೊಂಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಈ ಬಗ್ಗೆ ಮಾಹಿತಿ ನೀಡಿದರು. 2024-25ನೇ ಸಾಲಿನಲ್ಲಿ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು ಸೇರಿದಂತೆ 19 ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆಗೆಂದು ನೇಮಕ ಮಾಡಿದ್ದ ಸಮಿತಿಗಳು ಸಾಧಕರನ್ನು ಆಯ್ಕೆ ಮಾಡಿವೆ. ರಾಷ್ಟ್ರೀಯ ಪ್ರಶಸ್ತಿಗಳಿಗೆ ತಲಾ ₹10 ಲಕ್ಷ ನಗದು ಮತ್ತು ಇತರ ಪ್ರಶಸ್ತಿಗಳಿಗೆ ತಲಾ ₹5 ಲಕ್ಷ ನಗದು ಸೇರಿದಂತೆ ಪ್ರಶಸ್ತಿ ಫಲಕ, ಪ್ರಮಾಣ ಪತ್ರ, ಫಲತಾಂಬೂಲ ನೀಡಲಾಗುವುದು ಎಂದು ತಿಳಿಸಿದರು.
ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ ಕೆ.ರಾಜಕುಮಾರ್ (ಕೋಲಾರ), ಅಕ್ಕಮಹಾದೇವಿ ಪ್ರಶಸ್ತಿಗೆ ಡಾ। ಹೇಮಾ ಪಟ್ಟಣಶೆಟ್ಟಿ (ಧಾರವಾಡ), ಪಂಪ ಪ್ರಶಸ್ತಿಗೆ ಡಾ। ಬಿ.ಎ.ವಿವೇಕ ರೈ (ದಕ್ಷಿಣ ಕನ್ನಡ), ಪ್ರೊ.ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಸ.ರಘುನಾಥ (ಕೋಲಾರ), ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಡಾ। ವೈ.ಸಿ.ಭಾನುಮತಿ (ಹಾಸನ), ಬಿ.ವಿ.ಕಾರಂತ ಪ್ರಶಸ್ತಿಗೆ ಜೆ.ಲೋಕೇಶ್ (ಬೆಂಗಳೂರು), ಡಾ। ಗುಬ್ಬಿ ವೀರಣ್ಣ ಪ್ರಶಸ್ತಿಗೆ ಕೆ.ನಾಗರತ್ನಮ್ಮ (ವಿಜಯನಗರ) ಆಯ್ಕೆಯಾಗಿದ್ದಾರೆ.
ಡಾ। ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗೆ ಡಾ.ಎಲ್.ಹನುಮಂತಯ್ಯ (ಬೆಂಗಳೂರು), ವರ್ಣಶಿಲ್ಪ ವೆಂಕಟಪ್ಪ ಪ್ರಶಸ್ತಿಗೆ ಎಂ.ಜೆ.ಕಮಲಾಕ್ಷಿ (ಬೆಂಗಳೂರು), ಜಕಣಚಾರಿ ಪ್ರಶಸ್ತಿಗೆ ಎಂ.ರಾಮಮೂರ್ತಿ (ಬೆಂಗಳೂರು), ಜಾನಪದ ಶ್ರೀ ಪ್ರಶಸ್ತಿಗೆ ನಿಂಗಪ್ಪ ಭಜಂತ್ರಿ (ಕಲಬುರಗಿ), ದೊಡ್ಡಗವಿಬಸಪ್ಪ (ಚಾಮರಾಜನಗರ), ಶ್ರೀ ನಿಜಗುಣ-ಪುರಂದರ ಪ್ರಶಸ್ತಿಗೆ ಅನಂತ ತೇರದಾಳ (ಬೆಳಗಾವಿ), ಕುಮಾರವ್ಯಾಸ ಪ್ರಶಸ್ತಿಗೆ ಡಾ.ಎ.ವಿ.ಪ್ರಸನ್ನ (ಹಾಸನ), ಶಾಂತಲಾ ನಾಟ್ಯ ಪ್ರಶಸ್ತಿಗೆ ಪದ್ಮಿನಿ ರವಿ (ಬೆಂಗಳೂರು) ಮತ್ತು ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಪ್ರೊ.ಎಸ್.ಮಲ್ಲಣ್ಣ (ಚಾಮರಾಜನಗರ) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮಾರ್ಚ್ 3ರಂದು ಸಂಜೆ 6ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿವರಾಜ ತಂಗಡಗಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಧರಣಿದೇವಿ ಮಾಲಗತ್ತಿ ಉಪಸ್ಥಿತರಿದ್ದರು.