ದಸರಾ ಬಳಿಕ ಕಬ್ಬು ರೈತರ ಜತೆ ಸಭೆ - ಕಬ್ಬು ಬೆಳೆಗಾರರ ಅಹವಾಲು ಆಲಿಕೆ

Published : Oct 17, 2026, 08:12 AM IST
Prahlad Joshi

ಸಾರಾಂಶ

ಕಬ್ಬು ಬೆಳೆಗಾರರ ಎಲ್ಲಾ ನ್ಯಾಯಯುತ ಬೇಡಿಕೆಗಳು ಹಾಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪರಿಶೀಲನೆಗೆ ಕೇಂದ್ರದಿಂದ ಉನ್ನತ ಮಟ್ಟದ ಜಂಟಿ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ನವರಾತ್ರಿ ಮುಗಿದ ತಕ್ಷಣ, ಈ ಸಮಿತಿಯ ಮೊದಲ ಸಭೆ ನಡೆಯಲಿದ್ದು, ಸಮಿತಿ ಎಲ್ಲ ವಿಷಯಗಳನ್ನು ಪರಿಶೀಲಿಸಲಿದೆ.

ಗದಗ : ಕಬ್ಬು ಬೆಳೆಗಾರರ ಎಲ್ಲಾ ನ್ಯಾಯಯುತ ಬೇಡಿಕೆಗಳು ಹಾಗೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪರಿಶೀಲನೆಗೆ ಕೇಂದ್ರದಿಂದ ಉನ್ನತ ಮಟ್ಟದ ಜಂಟಿ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ನವರಾತ್ರಿ ಮುಗಿದ ತಕ್ಷಣ, ಈ ಸಮಿತಿಯ ಮೊದಲ ಸಭೆ ನಡೆಯಲಿದ್ದು, ಸಮಿತಿ ಎಲ್ಲ ವಿಷಯಗಳನ್ನು ಪರಿಶೀಲಿಸಲಿದೆ. ಅಧಿಕಾರಿಗಳ ತಂಡ ಸ್ಥಳೀಯವಾಗಿ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಲಿದೆ. ಹೀಗಾಗಿ, ರೈತರು ಆತಂಕಕ್ಕೆ ಒಳಗಾಗದೆ ಸಮಾಧಾನದಿಂದ ಇರಬೇಕು, ಹೋರಾಟ ಬಿಟ್ಟು ಕೆಲಸಕ್ಕೆ ಮರಳಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಭಟನಾನಿರತ ಕಬ್ಬು ಬೆಳೆಗಾರರಿಗೆ ಮನವಿ ಮಾಡಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಕಬ್ಬು ಬೆಳೆಗಾರರ ಹೋರಾಟ ಕುರಿತು ಪ್ರತಿಕ್ರಿಯಿಸದರು.

ಕೇಂದ್ರ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

‘ರಾಜ್ಯದ ಕಬ್ಬು ಬೆಳೆಗಾರರ ಹಿತ ಕಾಯುವಲ್ಲಿ ಕೇಂದ್ರ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ರೈತರ ಹಿತರಕ್ಷಣೆಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಸಕಾಲದಲ್ಲಿ ಬಾಕಿ ಬಿಲ್ ಪಾವತಿಯಾಗುವಂತೆ ಮಾಡಲು ಕೇಂದ್ರ ಸರ್ಕಾರ ಎಥೆನಾಲ್ ಖರೀದಿಯನ್ನು 38 ಕೋಟಿ ಲೀಟರ್‌ನಿಂದ 1,200 ಕೋಟಿ ಲೀಟರ್‌ಗೆ ಹೆಚ್ಚಿಸಿದೆ. ಒಟ್ಟು 30 ಲಕ್ಷ ಟನ್ ಸಕ್ಕರೆ ಉತ್ಪನ್ನವನ್ನು ಎಥೆನಾಲ್‌ಗೆ ಡೈವರ್ಟ್ ಮಾಡಲಾಗಿದೆ. ಇದರಲ್ಲಿ ಗರಿಷ್ಠ 12.5 ಲಕ್ಷ ಟನ್ ಪಾಲನ್ನು ಕರ್ನಾಟಕಕ್ಕೇ ನೀಡಲಾಗಿದೆ’ ಎಂದು ಅಂಕಿ-ಅಂಶ ಸಹಿತ ಸ್ಪಷ್ಟಪಡಿಸಿದರು.

ಇದೇ ವೇಳೆ, ರಾಜ್ಯ ಸರ್ಕಾರದ ಹೊಣೆಗಾರಿಕೆಯನ್ನು ಪ್ರಸ್ತಾಪಿಸಿದ ಸಚಿವರು, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ನಂತೆ ಕರ್ನಾಟಕ ಸರ್ಕಾರ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ನಿಗದಿಪಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಖಾನೆಗಳಲ್ಲಿ ನಡೆಯುವ ತೂಕದ ಮೋಸ ಹಾಗೂ ಶೇ.8ರಿಂದ 9ರಷ್ಟು ಕಟಿಂಗ್ ಕಡಿತವನ್ನು ನಿಯಂತ್ರಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಈ ವಿಷಯದಲ್ಲಿ ರೈತರಿಗೆ ಅನ್ಯಾಯವಾಗದಂತೆ ತಡೆಯಲು ಅಗತ್ಯ ಬಿದ್ದರೆ ಕೇಂದ್ರದಿಂದಲೇ ವಿಶೇಷ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಅವರು ಹೇಳಿದರು.

ಮಹಾರಾಷ್ಟ್ರದಲ್ಲಿ ಇಂತಹ ಸಮಸ್ಯೆ ಇಲ್ಲ, ಕರ್ನಾಟಕದಲ್ಲಿ ಮಾತ್ರ ಸಮಸ್ಯೆ ಎದುರಾಗಿದೆ. ಇದು ರಾಜ್ಯ ಸರ್ಕಾರದ ವೈಫಲ್ಯ ಎಂದು ಆರೋಪಿಸಿದ ಸಚಿವರು, ಹೋರಾಟ ನಡೆಸುತ್ತಿರುವ ರೈತರ ಬಗ್ಗೆ ನಮಗೆ ಯಾವುದೇ ಅಸಡ್ಡೆ ಇಲ್ಲ. ರೈತರು ಹೋರಾಟ ಬಿಟ್ಟು ಸಮಿತಿಯೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ರಾಜ್ಯದ ಪ್ರಸ್ತುತ ಸಾಲಿನ ಬರಗಾಲ ಪರಿಸ್ಥಿತಿಯ ಸಂಪೂರ್ಣ ವಿವರ ಕೇಂದ್ರಕ್ಕಿದೆ. ಮುಖ್ಯಮಂತ್ರಿಯವರ ಮನವಿ ಮೇರೆಗೆ ಈಗಾಗಲೇ ಕೇಂದ್ರ ಅಧ್ಯಯನ ತಂಡ ರಾಜ್ಯದಲ್ಲಿ ಬರ ಅಧ್ಯಯನ ನಡೆಸಿದೆ. ಮುಖ್ಯಮಂತ್ರಿಯವರು ಇತ್ತೀಚೆಗೆ ದೆಹಲಿಯಲ್ಲಿ ನನ್ನನ್ನು ಭೇಟಿ ಮಾಡಿದ್ದರು. ಎನ್‌ಡಿಆರ್‌ಎಫ್ ನಿಯಮಾವಳಿ ಅನ್ವಯ ರಾಜ್ಯದ ರೈತರ ಹಿತದೃಷ್ಟಿಯಿಂದ ಸಂಪೂರ್ಣ ನೆರವು ಮತ್ತು ಸಹಕಾರ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ.

- ಪ್ರಹ್ಲಾದ ಜೋಶಿ, ಕೇಂದ್ರ ಸಚಿವ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

4ನೇ ದಿನಕ್ಕೆ ರೈತ ಪಾದಯಾತ್ರೆ- ಇಂದು ಧಾರವಾಡ ಜಿಲ್ಲೆ ಪ್ರವೇಶ ಸಾಧ್ಯತೆ
ಸೂರ್‍ಯನಗರ ಸೈಟ್ ಹಂಚಿಕೆದಾರರಿಗೆ ಸಂಕಷ್ಟ