ಎರಡು ಹಂತದಲ್ಲಿ ಮೆಟ್ರೋ ನೀಲಿಮಾರ್ಗ ಸಾರ್ವಜನಿಕರ ಸೇವೆಗೆ? ಏರ್‌ಪೋರ್ಟ್‌-ಹೆಬ್ಬಾಳ, ಕೆ.ಆರ್‌.ಪುರ-ಹೆಬ್ಬಾಳ ಮಾರ್ಗ

ಸಾರಾಂಶ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನಮ್ಮ ಮೆಟ್ರೋದ ಮುಂಬರುವ ನೀಲಿ ಮಾರ್ಗವನ್ನು ಎರಡು ಹಂತದಲ್ಲಿ ವಾಣಿಜ್ಯ ಸೇವೆಗೆ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಯೋಜಿಸಿದೆ.

ಬೆಂಗಳೂರು : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ನಮ್ಮ ಮೆಟ್ರೋದ ಮುಂಬರುವ ನೀಲಿ ಮಾರ್ಗವನ್ನು ಎರಡು ಹಂತದಲ್ಲಿ ವಾಣಿಜ್ಯ ಸೇವೆಗೆ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಯೋಜಿಸಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ನೇರಳೆ, ಹಸಿರು ಮಾರ್ಗಗಳು ಕೂಡ ಎರಡು, ಮೂರು ಹಂತಗಳಲ್ಲಿ ಲೋಕಾರ್ಪಣೆ ಆಗಿವೆ. ಕಾಳೇನ ಅಗ್ರಹಾರ (ಗೊಟ್ಟಿಗೆರೆ) ಹಾಗೂ ನಾಗವಾರ ಸಂಪರ್ಕಿಸುವ ಗುಲಾಬಿ ಮಾರ್ಗವನ್ನು ಕೂಡ ಎರಡು ಹಂತದಲ್ಲಿ ಜನಸಂಚಾರಕ್ಕೆ ತೆರೆಯಲು ಬಿಎಂಆರ್‌ಸಿಎಲ್‌ ಯೋಜಿಸಿದೆ. ಈಗ ನೀಲಿ ಮಾರ್ಗವನ್ನು ಕೂಡ ಇದೇ ಮಾದರಿಯಲ್ಲಿ ತೆರೆಯಲಾಗುವುದು ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಒಟ್ಟು 38 ಕಿ.ಮೀ. ಇರುವ ನೀಲಿ ಮಾರ್ಗದಲ್ಲಿ ವಿಮಾನ ನಿಲ್ದಾಣದಿಂದ ಹೆಬ್ಬಾಳದವರೆಗಿನ ಕಾಮಗಾರಿಗಳು ಚುರುಕಿನಿಂದ ನಡೆಯುತ್ತಿವೆ. ಹೀಗಾಗಿ ಮೊದಲು ಈ ಹಂತವನ್ನು ಪೂರ್ಣಗೊಳಿಸಿ 2026ರ ಸೆಪ್ಟೆಂಬರ್‌ನಲ್ಲಿ ಸಂಚಾರಕ್ಕೆ ತೆರೆಯುವ ಹಾಗೂ ಬಳಿಕ ಹೆಬ್ಬಾಳದಿಂದ ಕೆ.ಆರ್‌.ಪುರದವರೆಗಿನ ಹಂತವನ್ನು 2026ರ ಅಂತ್ಯ ಅಥವಾ 2027ರಲ್ಲಿ ತೆರೆಯಲು ಯೋಜಿಸಲಾಗಿದೆ. ಒಟ್ಟಾರೆ ಮಾರ್ಗದ ಕಾಮಗಾರಿ ಮುಗಿಸಿ ವಾಣಿಜ್ಯ ಸಂಚಾರ ಆರಂಭಿಸುವುದು ವಿಳಂಬವಾಗುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.

ನೀಲಿ ಹಾಗೂ ಗುಲಾಬಿ ಮಾರ್ಗಕ್ಕೆ ಭಾರತ್‌ ಅರ್ಥ್‌ ಮೂವರ್ಸ್‌ ಲಿ. ಈ ಮಾರ್ಗಕ್ಕಾಗಿ ರೈಲುಗಳನ್ನು (318 ಬೋಗಿ) ಪೂರೈಸಲಿದೆ. ಆರು ಬೋಗಿಗಳ 16 ರೈಲುಗಳು ಗುಲಾಬಿ ಮಾರ್ಗಕ್ಕೆ, ಆರು ಬೋಗಿಗಳ 16 ರೈಲು ಕೇಂದ್ರ ರೇಷ್ಮೆ ಮಂಡಳಿಯಿಂದ- ಕೆ.ಆರ್‌.ಪುರ ಹಾಗೂ ಆರು ಬೋಗಿಗಳ 21 ರೈಲುಗಳನ್ನು ಕೆ.ಆರ್‌.ಪುರ-ವಿಮಾನ ನಿಲ್ದಾಣ ಮಾರ್ಗಕ್ಕೆ ನಿಯೋಜನೆ ಆಗಲಿವೆ. 2025ರ ಡಿಸೆಂಬರ್‌ನಿಂದ ಈ ಮಾರ್ಗಗಳಿಗೆ ರೈಲು ಪೂರೈಸುವ ಸಂಬಂಧ ಒಪ್ಪಂದವಾಗಿದೆ.

Share this article