;Resize=(412,232))
ಮಯೂರ್ ಹೆಗಡೆ
ಬೆಂಗಳೂರು : ಉತ್ತರ ಭಾರತದಿಂದ ವಲಸೆ ಬರುತ್ತಿರುವ ಕಾರ್ಮಿಕರು ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಬೀಡುಬಿಡುತ್ತಿರುವುದು ಹೊಸ ಸಾಮಾಜಿಕ ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ. ಪರಿಣಾಮ ವಿವಿಧೆಡೆ ಸ್ಥಳೀಯರಿಂದ ಬದುಕಿಗಾಗಿ ಹೋರಾಟ ರೂಪುಗೊಳ್ಳುತ್ತಿದೆ.
ಈಚೆಗೆ (ನ.3) ದೊಡ್ಡಬಳ್ಳಾಪುರದಲ್ಲಿ ‘ನ್ಯಾಯಕ್ಕಾಗಿ ನೊಂದ ಕೂಲಿ ನೇಕಾರ ಕಾರ್ಮಿಕರ ಹೋರಾಟ’ ಹೆಸರಿನಡಿ ಸ್ಥಳೀಯ ನೇಕಾರಿಕೆ ಕಾರ್ಮಿಕರು ಹೊರರಾಜ್ಯದ ವಲಸೆ ಕಾರ್ಮಿಕರಿಂದ ಆಗುತ್ತಿರುವ ಅನ್ಯಾಯ ವಿರುದ್ಧ ಪ್ರತಿಭಟನಾ ಸಭೆ ನಡೆಸಿದ್ದಾರೆ. ಉದ್ಯೋಗದ ಹಕ್ಕು ನೀಡುವಂತೆ ಜವಳಿ ಇಲಾಖೆಗೆ ಒತ್ತಾಯಿಸಿದ್ದಾರೆ.
ಜವಳಿ ಇಲಾಖೆಯಿಂದ ನೇಕಾರರ ಗುರುತಿನ ಪತ್ರ ಹೊಂದಿದ್ದರೂ ಸ್ಥಳೀಯರಿಗೆ ಮಗ್ಗಗಳ ಮಾಲೀಕರು ಕೆಲಸ ನೀಡುತ್ತಿಲ್ಲ. ಕಡಿಮೆ ಸಂಬಳ, ಹೆಚ್ಚು ದುಡಿಮೆ ಕಾರಣಕ್ಕೆ ವಲಸಿಗರಿಗೆ ಮಣೆ ಹಾಕುತ್ತಿದ್ದಾರೆ. ಒಟ್ಟಾರೆ ಮಗ್ಗದ ಮಾಲೀಕರು ಮತ್ತು ಕಾರ್ಮಿಕರ ನಡುವಿನ ಸಂಬಂಧ ವಲಸಿಗರಿಂದ ಕೆಡುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿದ್ದ ಶಾಸಕ ಧೀರಜ್ ಮುನಿರಾಜು, ನೇಕಾರರ ಗುರುತಿನ ಚೀಟಿ ಹೊಂದಿದವರಿಗೆ ಉದ್ಯೋಗ ಕೊಡಿಸುವ, ಕೂಲಿ ವಿಚಾರದಲ್ಲಿ ಮಾಲೀಕರ ಜತೆ ಮಾತನಾಡುವ ಭರವಸೆ ಕೊಟ್ಟಿದ್ದರು. ಜತೆಗೆ ಹೊರರಾಜ್ಯದ ಕಾರ್ಮಿಕರ ನೇಮಕಕ್ಕೂ ಮುನ್ನ ಪೊಲೀಸ್ ಇಲಾಖೆಯ ವೆರಿಫಿಕೇಶನ್‌ಗೆ ತಿಳಿಸಿದ್ದರು. ಜವಳಿ ಇಲಾಖೆ, ಶೇ.75ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ಕೊಡಬೇಕು ಎಂಬ ನಿಯಮ ಪಾಲಿಸುವಂತೆ, ಸ್ಥಳೀಯರನ್ನು ಕಡೆಗಣಿಸಿದಲ್ಲಿ ಕ್ರಮದ ಭರವಸೆಯನ್ನು ನೀಡಿದ್ದರು.
ಸ್ಥಳೀಯ ಕಾರ್ಮಿಕರು ಮಾತನಾಡಿ, ಕೆಲ ನೇಕಾರಿಕಾ ಮಾಲೀಕರು ನಮ್ಮನ್ನು ಕಡೆಗಣಿಸಿ ವಲಸಿಗರಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ವಲಸಿಗ ಕಾರ್ಮಿಕರಿಂದ ನೇಕಾರ ಕೂಲಿ ಕಾರ್ಮಿಕರಿಗೆ, ನೇಯ್ಗೆ ಕಾರ್ಮಿಕರಿಗೆ ಬಹುದೊಡ್ಡ ಅನ್ಯಾಯ ಆಗುತ್ತಿದೆ. ದೊಡ್ಡ ಬಾರ್ಡರ್ ಸೀರೆಗೆ ಸ್ಥಳೀಯರಿಗೆ ಹಿಂದೆ ₹550 ಸಿಗುತ್ತಿತ್ತು. ಈಗ ವಲಸಿಗರಿಗೆ ವಸತಿ, ದಿನಸಿ ಕೊಟ್ಟು ₹350, ₹400ಗೆ ಮಾಡಿಸುತ್ತಿದ್ದಾರೆ. ಹೀಗಾದಲ್ಲಿ ಬದುಕುವುದೇ ಕಷ್ಟವಾಗಲಿದೆ. ಹೀಗಾಗಿ ಹೋರಾಟ ಆರಂಭಿಸಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಇತರ ಜಿಲ್ಲೆಗಳಲ್ಲೂ ಇದೇ ರೀತಿಯ ಸಮಸ್ಯೆ ಉದ್ಭವ ಆಗುತ್ತಿದೆ. ನೇಕಾರಿಕೆ ಮಾತ್ರವಲ್ಲದೆ, ಉತ್ತರ ಭಾರತದಿಂದ ಬರುವ ಕಾರ್ಮಿಕ ಪರಿವಾರದ ಮಹಿಳೆಯರು ಬೆಂಗಳೂರಿನಲ್ಲಿ ಗಾರ್ಮೆಂಟ್ ಸೇರಿ ಇತರೆ ಇಂಡಸ್ಟ್ರಿಯಲ್ ಪರಿಚಾರಿಕೆ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆ ಆಗುತ್ತಿದ್ದಾರೆ. ಈ ಸಮಸ್ಯೆ ನೇಕಾರಿಕೆಗಷ್ಟೇ ಸೀಮಿತವಾಗಿಲ್ಲ ಹೋಟೆಲ್, ಆತಿಥ್ಯ ಉದ್ಯಮದಲ್ಲೂ ಇದೇ ಸಮಸ್ಯೆ ಸೃಷ್ಟಿಯಾಗಿದೆ.
ಉತ್ತರ ಭಾರತೀಯ ತಿನಿಸುಗಳಿಗೆ ಆ ಭಾಗದ ಅಡುಗೆಯವರೇ ಬೇಕೆಂದು ಮೊದಲು ಅವರನ್ನು ಕರೆತರಲಾಯಿತು. ಈಗ ಸ್ಥಳೀಯ ತಿನಿಸುಗಳನ್ನೂ ಅವರೇ ಮಾಡುತ್ತಿದ್ದಾರೆ. ಹೆಚ್ಚುವರಿ ಸಿಬ್ಬಂದಿ ಯಾಕೆಂದು ನಮ್ಮನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿಲ್ಲ ಎಂದು ಹೋಟೆಲ್ ಅಡುಗೆ ಕಾರ್ಮಿಕರು ದೂರುತ್ತಾರೆ. ಜತೆಗೆ ಬಡಿಸುವ, ಸ್ವಚ್ಛತೆ ಕಾರ್ಯಕ್ಕೂ ಅವರೇ ನೇಮಕ ಆಗುತ್ತಿದ್ದಾರಂತೆ.
ಇದಕ್ಕೆ ವ್ಯತಿರಿಕ್ತವಾದ ವಾದವನ್ನು ಮಾಲೀಕ ವರ್ಗ ಮಾಡುತ್ತಿದೆ. ಉದಾಹರಣೆಗೆ ರಾಜ್ಯದಲ್ಲಿ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಕಾರ್ಮಿಕ ಕೊರತೆ ಎದುರಾಗಿದೆ. ಇದಕ್ಕೆ ಪರ್ಯಾಯವಾಗಿ ಬಿಹಾರದಿಂದ ಕೂಲಿ ಕಾರ್ಮಿಕರನ್ನು ಕರೆತರಲಾಗುತ್ತಿದೆ ಎನ್ನುತ್ತಾರೆ. ಹೀಗಾಗಿ ಆರಂಭದಲ್ಲಿ ಕಟ್ಟದ ನಿರ್ಮಾಣ ಇತರೆ ಕಾಮಗಾರಿ, ಹೋಟೆಲ್ ಕೆಲಸಗಳಿಗೆ ಸೀಮಿತವಾಗಿದ್ದ ಬಿಹಾರಿಗಳು ಈಗ ಕೃಷಿ ವಲಯಕ್ಕೂ ಲಗ್ಗೆ ಇಟ್ಟಿದ್ದಾರೆ.
ವಲಸಿಗರಿಂದಾಗಿ ದೊಡ್ಡಬಳ್ಳಾಪುರದಲ್ಲಿ ಸ್ಥಳೀಯ ನೇಕಾರಿಕೆ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದೇವೆ. ಕೆಲಸ ಸಿಕ್ಕರೂ ಕಡಿಮೆ ಕೂಲಿ ಪಡೆಯುತ್ತಿದ್ದೇವೆ. ಈ ನಿಟ್ಟಿನಲ್ಲಿ ಸ್ಥಳೀಯರು ಒಟ್ಟಾಗಿ ಸಭೆ ನಡೆಸಿದ್ದು, ನಮಗೆ ಆದ್ಯತೆ ಸಿಗುವವರೆಗೆ ಹೋರಾಟ ನಡೆಯಲಿದೆ.
-ಶಂಭುಶಂಕರ್, ದೊಡ್ಡಬಳ್ಳಾಪುರ ನೇಕಾರ