ಹಾಲು ದರ ಏರಿಕೆಯಿಂದ ಉದ್ಯೋಗ ಸೃಷ್ಟಿ : ಸರ್ಕಾರ

Published : Oct 31, 2026, 10:35 AM IST
milk price hike

ಸಾರಾಂಶ

ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ ಪ್ರತಿ ಲೀಟರ್‌ಗೆ 8 ರು. ಹೆಚ್ಚಳ ಮಾಡಲಾಗಿದ್ದು, ಇದರಲ್ಲಿ ಸಿಂಹಪಾಲು ಅಂದರೆ 7 ರು. ನೇರವಾಗಿ ರೈತರ ಜೇಬಿಗೆ ಸೇರಲಿದೆ. ಉಳಿದ 1 ರು. ಕೆಎಂಎಫ್ ನಿರ್ವಹಣಾ ವೆಚ್ಚಕ್ಕೆ ಬಳಕೆಯಾಗಲಿದೆ.

ಬೆಂಗಳೂರು : ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ ಪ್ರತಿ ಲೀಟರ್‌ಗೆ 8 ರು. ಹೆಚ್ಚಳ ಮಾಡಲಾಗಿದ್ದು, ಇದರಲ್ಲಿ ಸಿಂಹಪಾಲು ಅಂದರೆ 7 ರು. ನೇರವಾಗಿ ರೈತರ ಜೇಬಿಗೆ ಸೇರಲಿದೆ. ಉಳಿದ 1 ರು. ಕೆಎಂಎಫ್ ನಿರ್ವಹಣಾ ವೆಚ್ಚಕ್ಕೆ ಬಳಕೆಯಾಗಲಿದ್ದು, ಇದು ಗ್ರಾಮೀಣ ಆರ್ಥಿಕತೆಯನ್ನು ಬಲಗೊಳಿಸುವ ಮೂಲಕ ಉದ್ಯೋಗ ಸೃಷ್ಟಿ ಹಾಗೂ ವಲಸೆ ತಡೆಯುವ ಗುರಿಯನ್ನು ಹೊಂದಿದೆ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿದೆ.

ದರ ಪರಿಷ್ಕರಣೆಯಿಂದಾಗಿ ಜಿಲ್ಲಾ ಹಾಲು ಒಕ್ಕೂಟಗಳು ರೈತರಿಗೆ ನೀಡುವ ಖರೀದಿ ದರ 35 ರಿಂದ 42 ರು.ಗೆ ಏರಿಕೆಯಾಗಲಿದೆ. ಇದರೊಂದಿಗೆ ಸರ್ಕಾರ ನೀಡುತ್ತಿರುವ 5 ರು. ಪ್ರೋತ್ಸಾಹಧನವೂ ಮುಂದುವರಿಯಲಿದ್ದು, ರೈತರಿಗೆ ಪ್ರತಿ ಲೀಟರ್‌ಗೆ ಒಟ್ಟು 47 ರು. ಸಿಗಲಿದೆ. ದಿನಕ್ಕೆ 10 ಲೀಟರ್ ಹಾಲು ಪೂರೈಸುವ ಸಣ್ಣ ಹೈನುಗಾರನಿಗೆ ಮಾಸಿಕ ಸರಾಸರಿ 2,100 ರು. ನಷ್ಟು ಹೆಚ್ಚುವರಿ ಆದಾಯ ಲಭಿಸಲಿದೆ ಎಂದು ವಿವರಿಸಿದೆ.

ಒಟ್ಟಾರೆಯಾಗಿ ರಾಜ್ಯದ ಗ್ರಾಮೀಣ ಭಾಗದ ಹಾಲು ಉತ್ಪಾದಕ ಕುಟುಂಬಗಳಿಗೆ ವಾರ್ಷಿಕ 1,850 ಕೋಟಿಯಿಂದ 2,100 ಕೋಟಿ ರು. ಹೆಚ್ಚುವರಿಯಾಗಿ ಹರಿದುಬರಲಿದೆ. ಇದೇ ವೇಳೆ ದಿನಕ್ಕೆ ಒಂದು ಲೀಟರ್ ಹಾಲು ಬಳಸುವ ಸಾಮಾನ್ಯ ಗ್ರಾಹಕನ ಮಾಸಿಕ ಬಜೆಟ್‌ನಲ್ಲಿ 240 ರು.ನಷ್ಟು ಹೊರೆ ಬೀಳಲಿದೆ ಎಂದು ತಿಳಿಸಿದೆ.

ಕಳೆದ ಐದು ವರ್ಷಗಳಲ್ಲಿ ರಾಗಿ ಹುಲ್ಲು ಸೇರಿದಂತೆ ಅಗತ್ಯ ಪಶು ಆಹಾರಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಶೇ. 29ರಿಂದ ಶೇ.54 ರಷ್ಟು ಏರಿಕೆಯಾಗಿದೆ. ಜತೆಗೆ ಡೀಸೆಲ್, ಪ್ಯಾಕೇಜಿಂಗ್ ಮತ್ತು ವಿದ್ಯುತ್ ದರ ಹೆಚ್ಚಳದಿಂದ ಹೈನುಗಾರಿಕೆ ನಷ್ಟದ ಹಾದಿ ಹಿಡಿದಿತ್ತು. ರಾಜ್ಯದಲ್ಲಿ ಉಂಟಾದ ಬರ ಪರಿಸ್ಥಿತಿಯಿಂದಾಗಿ ದೈನಂದಿನ ಹಾಲು ಸಂಗ್ರಹದಲ್ಲಿ ಸುಮಾರು 10 ಲಕ್ಷ ಲೀಟರ್ ಕೊರತೆ ಎದುರಾಗಿತ್ತು.

ನೆರೆಯ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳಗಳಲ್ಲಿ ಹಾಲಿನ ದರ ಹೆಚ್ಚಿದ್ದು, ರಾಜ್ಯದ ಗಡಿ ಭಾಗದಿಂದ ಹಾಲು ಹೊರರಾಜ್ಯಗಳಿಗೆ ಸೋರಿಕೆಯಾಗುವ ಆತಂಕ ಇದೆ. ದರ ಏರಿಕೆಯ ನಂತರವೂ ದೇಶದ ಇತರ ಪ್ರಮುಖ ಬ್ರ್ಯಾಂಡ್‌ಗಳಿಗೆ ಹೋಲಿಸಿದರೆ ನಂದಿನಿ ಅತ್ಯಂತ ಕಡಿಮೆ ಬೆಲೆಯದ್ದಾಗಿದೆ ಎಂದು ಸರ್ಕಾರ ಹೇಳಿದೆ.

5 ಲಕ್ಷ ಉದ್ಯೋಗ ಸೃಷ್ಟಿ:

ರಾಜ್ಯದಲ್ಲಿ ಹಾಲಿನ ದರ ಹೆಚ್ಚಳದಿಂದ ಗ್ರಾಮೀಣ ಪ್ರದೇಶದ ಆರ್ಥಿಕತೆಗೆ ಭಾರೀ ಉತ್ತೇಜನ ದೊರೆಯಲಿದ್ದು, ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಹಾಲಿನ ದರ ಪರಿಷ್ಕರಣೆಯಿಂದ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಸರಾಸರಿ ಒಂದು ಸಾವಿರ ಹಾಗೂ ಇಡೀ ರಾಜ್ಯದಲ್ಲಿ ಬರೋಬ್ಬರಿ 5 ಲಕ್ಷ ಸ್ವಯಂ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ವಲಸೆ ತಪ್ಪಿಸಲು ಸಹಕಾರಿ:

ಗ್ರಾಮೀಣ ಭಾಗದ ಯುವಕರು ಉದ್ಯೋಗ ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ಗ್ರಾಮ ಮಟ್ಟದಲ್ಲೇ ಸ್ವಾವಲಂಬನೆ ಮತ್ತು ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಪದವಿ ಮುಗಿಸಿ ನಗರಗಳಿಗೆ ಬಂದು 20ರಿಂದ 30 ಸಾವಿರ ರು.ಸಂಬಳಕ್ಕೆ ದುಡಿಯುವವರು ಅನೇಕರಿದ್ದಾರೆ. ಆದರೆ, ಹೈನುಗಾರಿಕೆಯನ್ನು ಉದ್ಯಮವಾಗಿ ಅಳವಡಿಸಿಕೊಂಡರೆ ಸ್ವಂತ ಊರಿನಲ್ಲೇ ತಿಂಗಳಿಗೆ 50ಸಾವಿರಕ್ಕೂ ಹೆಚ್ಚು ಗಳಿಸುವ ಉತ್ತಮ ಅವಕಾಶ ಲಭಿಸಲಿದೆ. ಜೊತೆಗೆ ಸರ್ಕಾರ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಯುವಕರಿಗೆ ಸಹಕಾರ ಬ್ಯಾಂಕ್‌ಗಳ ಮೂಲಕ ಶೇ.3ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಒದಗಿಸುತ್ತಿದೆ ಎಂದು ಹೇಳಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾತ್ರಿ 8ರಿಂದ 10ರವರೆಗಷ್ಟೇ ಪಟಾಕಿಗೆ ಅವಕಾಶ
ಯುವಕನನ್ನು ಬೆದರಿಸಿ 20 ಲಕ್ಷ ಮೌಲ್ಯದ ಚಿನ್ನ ಸುಲಿಗೆಗೈದ ತೃತಿಯಲಿಂಗಿಗಳ ಸೆರೆ