;Resize=(412,232))
ಬೆಂಗಳೂರು : ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕ ಹಾಗೂ ಇತರ ಸಮಾನಾಂತರ 5,431 ಹುದ್ದೆಗಳ ನೇಮಕಾತಿಗೆ ಶುಕ್ರವಾರದಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಇದೇ ಮೊದಲ ಬಾರಿಗೆ ವಿವಿಧ ಹುದ್ದೆಗಳ ನೇಮಕಾತಿಗೂ ಒಂದೇ ಪರೀಕ್ಷೆಯ ನೂತನ ಉಪಕ್ರಮ ಅಳವಡಿಸಿಕೊಂಡಿದೆ.
ಇದುವರೆಗೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಇದ್ದಂತಹ ನೇಮಕಾತಿ ಪ್ರಾಧಿಕಾರದ ಮಾನ್ಯತೆಯನ್ನು ರಾಜ್ಯ ಸರ್ಕಾರ ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೂ ನೀಡಿದೆ. ಈ ಹಿನ್ನೆಲೆಯಲ್ಲಿ ಸಮಾನಾಂತರ ಶೈಕ್ಷಣಿಕ ಅರ್ಹತೆಯ ವಿವಿಧ ಇಲಾಖೆಗಳ ಹುದ್ದೆಗಳಿಗೆ ಒಮ್ಮೆಗೇ ಪರೀಕ್ಷೆ ನಡೆಸುವುದರ ಮೂಲಕ ನೇಮಕಾತಿ ಪ್ರಕ್ರಿಯೆ ಮುಗಿಸಲು ಕೆಇಎ ಹೊಸ ಹೆಜ್ಜೆ ಹಾಕಿದೆ. ಒಟ್ಟು 33 ಇಲಾಖೆಗಳ ವಿವಿಧ ಸಮಾನಾಂತರ ಹುದ್ದೆಗಳಿಗೆ ಒಮ್ಮೆಗೇ ಪರೀಕ್ಷೆ ನಡೆಸಿ, ತ್ವರಿತವಾಗಿ ನೇಮಕಾತಿ ನಡೆಸಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಮೊದಲೆಲ್ಲ, ಸಮಾನಾಂತರ ಹುದ್ದೆಗಳಿದ್ದರೂ ಪ್ರತಿ ಇಲಾಖೆಗೂ ಪ್ರತ್ಯೇಕವಾದ ಅಧಿಸೂಚನೆ, ಅರ್ಜಿ ಮತ್ತು ಲಿಖಿತ ಪರೀಕ್ಷೆ ನಡೆಸಬೇಕಿತ್ತು. ಇದರಿಂದ ಅಭ್ಯರ್ಥಿಗಳಿಗೂ ಆರ್ಥಿಕ ಹೊರೆ ಆಗುತ್ತಿತ್ತು. ಈ ಸುಧಾರಣಾ ಕ್ರಮದಿಂದ ಒಂದೇ ಅರ್ಜಿ ಮತ್ತು ಒಂದೇ ಶುಲ್ಕದಲ್ಲಿ ವಿವಿಧ ಇಲಾಖೆಗಳ ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ವಿಳಂಬ ಮತ್ತು ಕಿರಿಕಿರಿ ಕೂಡ ತಪ್ಪಲಿದೆ ಎಂದು ಅವರು ವಿವರಿಸಿದರು.
ಈ ಹಿಂದೆ ಕೆಇಎ ನಡೆಸಿದ ಗ್ರಾಮ ಆಡಳಿತಾಧಿಕಾರಿ, ಭೂ ಮಾಪಕ, ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳ ಮಾಹಿತಿ ಎಫ್‌ಡಿಎ ಮತ್ತು ಎಸ್‌ಡಿಎ ಅರ್ಜಿಯಲ್ಲೂ ಪ್ರತಿಬಿಂಬಿಸುವ ಹಾಗೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದು ಅಂತಹವರು ಕೇವಲ ಲಾಗಿನ್ ಆಗಿ ಶುಲ್ಕ ಪಾವತಿಸಿದರೆ ಅರ್ಜಿ ಸಲ್ಲಿಸಿದಂತಾಗುತ್ತದೆ ಎಂದು ಅವರು ವಿವರಿಸಿದರು.
ಈ ಹಿಂದಿನ ಯೂಸರ್ ನೇಮ್, ಪಾಸ್ ವರ್ಡ್ ಮೂಲಕವೇ ಲಾಗಿನ್ ಆಗಬಹುದು. ಬಳಿಕ ಅಗತ್ಯಬಿದ್ದರೆ ಏನಾದರೂ ತಿದ್ದುಪಡಿ ಮಾಡಿಕೊಳ್ಳಬಹುದು. ನಂತರ ಶುಲ್ಕ ಪಾವತಿಸಿ ಸಬ್ ಮಿಟ್ ಮಾಡಿದರೆ ಅರ್ಜಿ ಸಲ್ಲಿಸಿದಂತಾಗುತ್ತದೆ. ಯಾರು ಇದುವರೆಗೂ ನೋಂದಣಿ ಮಾಡಿಕೊಂಡಿಲ್ಲವೊ ಅಂತಹವರು ಮಾತ್ರ ಆಧಾರ್ ದೃಢೀಕರಣದ ಮೂಲಕ ಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಸಮಾನಾಂತರ ಹುದ್ದೆಗಳಿಗೆ ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸುವ ಬಗ್ಗೆ ಚಿಂತನೆ ಇದೆ. ಉದಾಹರಣೆಗೆ ಜನವರಿಯಿಂದ ಜೂನ್ ವರೆಗೂ ವಿವಿಧ ಇಲಾಖೆಗಳ ನೇಮಕಾತಿ ಕೋರಿಕೆಗಳಿಗೆ ಒಮ್ಮೆಗೆ ಅರ್ಜಿ ಕರೆದು ಪರೀಕ್ಷೆ ನಡೆಸುವುದು. ಅದರ ನಂತರ ಬರುವ ಇಲಾಖೆಗಳ ಕೋರಿಕೆಗಳಿಗೆ ಡಿಸೆಂಬರ್ ನಲ್ಲಿ ಪರೀಕ್ಷೆ ನಡೆಸಿ, ನೇಮಕಾತಿ ಪಟ್ಟಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.
ಸಿಇಟಿ ಮಾದರಿ ಕೌನ್ಸೆಲಿಂಗ್ ಮೂಲಕ ನೇಮಕಾತಿ
ನೇಮಕಾತಿ ಪರೀಕ್ಷಾ ಫಲಿತಾಂಶದ ಬಳಿಕ ಸಿಇಟಿ ಮಾದರಿ ಕೌನ್ಸೆಲಿಂಗ್ ಮೂಲಕ ಅಭ್ಯರ್ಥಿಗಳಿಗೆ ಹುದ್ದೆಗಳ ಹಂಚಿಕೆ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಹೇಗೆ ಕಾಲೇಜು/ಕೋರ್ಸ್ ಆಯ್ಕೆಗೆ ಆದ್ಯತಾ ಕ್ರಮದಲ್ಲಿ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗಿದೆಯೊ ಅದೇ ರೀತಿ ನೇಮಕಾತಿಗಾಗಿ ಅಭ್ಯರ್ಥಿಗಳು ತಮಗೆ ಬೇಕಾದ ಇಲಾಖೆ/ ಹುದ್ದೆಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬೇಕು. ನಂತರ ಅಭ್ಯರ್ಥಿಗಳು ಗಳಿಸಿದ ಅಂಕಗಳ ಆಧಾರದ ಮೇಲೆ ಹುದ್ದೆಗಳು ಹಂಚಿಕೆಯಾಗಲಿವೆ. ಒಟ್ಟಿನಲ್ಲಿ ಒಬ್ಬರಿಗೆ ಒಂದು ಹುದ್ದೆ ಹಂಚಿಕೆಯಾಗಲಿದೆ ಎಂದು ಪ್ರಸನ್ನ ವಿವರಿಸಿದ್ದಾರೆ.