ವಿಷ್ಣುವರ್ಧನ್‌, ಸರೋಜಾದೇವಿ ‘ಕರ್ನಾಟಕ ರತ್ನ’ ಗೌರವ

Published : Oct 31, 2026, 07:06 AM IST
Dr Vishnuvardhan B Saroja Devi

ಸಾರಾಂಶ

ಚಲನಚಿತ್ರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಟ ಡಾ. ವಿಷ್ಣುವರ್ಧನ್‌ ಮತ್ತು ನಟಿ ಬಿ. ಸರೋಜಾದೇವಿ ಅವರಿಗೆ ರಾಜ್ಯದ ಅತ್ಯುಚ್ಚ ನಾಗರಿಕ ಪುರಸ್ಕಾರವಾಗಿರುವ ‘ಕರ್ನಾಟಕ ರತ್ನ’ವನ್ನು ಮರಣೋತ್ತರವಾಗಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು : ಚಲನಚಿತ್ರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ನಟ ಡಾ. ವಿಷ್ಣುವರ್ಧನ್‌ ಮತ್ತು ನಟಿ ಬಿ. ಸರೋಜಾದೇವಿ ಅವರಿಗೆ ರಾಜ್ಯದ ಅತ್ಯುಚ್ಚ ನಾಗರಿಕ ಪುರಸ್ಕಾರವಾಗಿರುವ ‘ಕರ್ನಾಟಕ ರತ್ನ’ವನ್ನು ಮರಣೋತ್ತರವಾಗಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಕುರಿತು ವಿಕಾಸಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಪ್ರಸಕ್ತ ಸಾಲಿನಲ್ಲಿ ಇಬ್ಬರು ಮಹನೀಯರಿಗೆ ಕರ್ನಾಟಕ ರತ್ನ ನೀಡಲು ನಿರ್ಧರಿಸಲಾಗಿದೆ ಎಂದರು.

ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ, ಕರ್ನಾಟಕದ ಗೌರವ ಹೆಚ್ಚಿಸಿದ ನಟ ಡಾ. ವಿಷ್ಣುವರ್ಧನ್‌ ಮತ್ತು ನಟಿ ಬಿ. ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ನೀಡಲಾಗುವುದು. ನ. 19ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ರತ್ನ ಪ್ರದಾನ ಮಾಡಲಾಗುವುದು ಎಂದರು.

ಡಾ. ವಿಷ್ಣುವರ್ಧನ್‌ ಮತ್ತು ಬಿ. ಸರೋಜಾದೇವಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ ಹಿರಿಯ ನಟ ಮತ್ತು ನಟಿಯರನ್ನು ಅತಿಥಿಗಳಾಗಿ ಕರೆಸಲು ಯೋಜಿಸಲಾಗಿದೆ. ಅದರಂತೆ ಬಹುಭಾಷಾ ನಟ ರಜನಿಕಾಂತ್‌ ಹಾಗೂ ನಟಿಯರಾದ ಲಕ್ಷ್ಮೀ ಮತ್ತು ಸುಹಾಸಿನಿ ಅವರನ್ನು ಅತಿಥಿಗಳಾಗಿ ಆಹ್ವಾನಿಸಲು ಚಿಂತನೆ ನಡೆಸಲಾಗಿದೆ. ಈ ಕುರಿತು ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದರು.

1992ರಲ್ಲಿ ಆರಂಭ:

ಕರ್ನಾಟಕದ ಏಳಿಗೆ ಮತ್ತು ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಸಾಧಕರಿಗೆ ಗೌರವ ಸಲ್ಲಿಸುವ ಉದ್ದೇಶದೊಂದಿಗೆ ಎಸ್‌. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಸಂಪ್ರದಾಯ ಆರಂಭಿಸಲಾಯಿತು. ಮೊದಲಿಗೆ ರಾಷ್ಟ್ರಕವಿ ಕುವೆಂಪು ಮತ್ತು ವರನಟ ಡಾ. ರಾಜ್‌ಕುಮಾರ್‌ ಅವರನ್ನು ಆಯ್ಕೆ ಮಾಡಿ ಗೌರವಿಸಲಾಯಿತು. ಅದಾದ ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗುರುತಿಸಿ ನಿಯಮಿತವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಾ ಬರಲಾಗಿದೆ.

ಕುವೆಂಪು, ಡಾ. ರಾಜ್‌ಕುಮಾರ್‌ ಅವರ ನಂತರ ಸತತ 7 ವರ್ಷಗಳ ಕಾಲ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರಲಿಲ್ಲ. 1999ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರನ್ನು ಗೌರವಿಸುವ ಮೂಲಕ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಸಂಪ್ರದಾಯಕ್ಕೆ ಮತ್ತೆ ಚಾಲನೆ ನೀಡಲಾಯಿತು. ಆನಂತರ ವಿಜ್ಞಾನ, ವೈದ್ಯಕೀಯ, ಸಂಗೀತ, ಸಾಹಿತ್ಯ, ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಕೊನೆಯ ಬಾರಿಗೆ 2022ರಲ್ಲಿ ಡಾ. ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ಇದೀಗ ಮೂರು ವರ್ಷಗಳ ನಂತರ ಡಾ. ವಿಷ್ಣುವರ್ಧನ್‌ ಮತ್ತು ಬಿ. ಸರೋಜಾದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಘೋಷಿಸಲಾಗಿದೆ. ನ. 19ರಂದು ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಕರ್ನಾಟಕ ರತ್ನ ಪುರಸ್ಕೃತರ ಪಟ್ಟಿ:

ಕುವೆಂಪು-ಸಾಹಿತ್ಯ (1992), ಡಾ. ರಾಜ್‌ಕುಮಾರ್‌- ಚಲನಚಿತ್ರ (1992), ಎಸ್‌. ನಿಜಲಿಂಗಪ್ಪ- ರಾಜಕೀಯ (1999), ಡಾ. ಸಿಎನ್‌ಆರ್‌ ರಾವ್‌- ವಿಜ್ಞಾನ (2000), ಡಾ. ದೇವಿಪ್ರಸಾದ್‌ ಶೆಟ್ಟಿ- ವೈದ್ಯಕೀಯ (2001), ಭೀಮಸೇನ ಜೋಷಿ- ಸಂಗೀತ (2005), ಶ್ರೀ ಶಿವಕುಮಾರ ಸ್ವಾಮೀಜಿ- ಸಮಾಜ ಸೇವೆ (2007), ದೇ. ಜವರೇಗೌಡ- ಸಾಹಿತ್ಯ (2008), ಡಿ.ವೀರೇಂದ್ರ ಹೆಗ್ಗಡೆ- ಸಮಾಜ ಸೇವೆ (2009), ಡಾ. ಪುನೀತ್‌ ರಾಜ್‌ಕುಮಾರ್‌- ಚಲನಚಿತ್ರ ಮತ್ತು ಸಮಾಜ ಸೇವೆ (2022)

ಕನ್ನಡಿಗರ ಮನಸ್ಸಲ್ಲಿ ಉಳಿದ ಮೇರು ನಟ

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ತಮ್ಮ ಅಪೂರ್ವ ವ್ಯಕ್ತಿತ್ವ ಮತ್ತು ಅದ್ಭುತ ಅಭಿನಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಧೀಮಂತ ನಟ ಡಾ. ವಿಷ್ಣುವರ್ಧನ್. 1972ರಲ್ಲಿ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರದ ‘ರಾಮಾಚಾರಿ’ ಪಾತ್ರದ ಮೂಲಕ ಬೆಳ್ಳಿಪರದೆ ಪ್ರವೇಶಿಸಿದ ಸಂಪತ್ ಕುಮಾರ್, ಮುಂದೆ ‘ವಿಷ್ಣುವರ್ಧನ್’ ಆಗಿ ಕನ್ನಡ ಸಿನಿರಂಗದ ಅಗ್ರಮಾನ್ಯ ನಾಯಕನಾಗಿ ಬೆಳೆದು ನಿಂತರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗವನ್ನು ಆಳಿದ ವಿಷ್ಣು, 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಭಾರತೀಯ ಚಿತ್ರರಂಗದ ಅಭಿನಯ ಸರಸ್ವತಿ

ಭಾರತೀಯ ಚಿತ್ರರಂಗದಲ್ಲಿ ತಮ್ಮ ಅದ್ಭುತ ಸೌಂದರ್ಯ, ಗಾಂಭೀರ್ಯ ಮತ್ತು ಅಪೂರ್ವ ನಟನಾ ಸಾಮರ್ಥ್ಯದ ಮೂಲಕ ದಕ್ಷಿಣ ಭಾರತದ ಬೆಳ್ಳಿಪರದೆಯನ್ನು ದಶಕಗಳ ಕಾಲ ಆಳಿದ ಮಹಾನ್ ನಟಿ ಬಿ. ಸರೋಜಾದೇವಿ. 1955ರಲ್ಲಿ ಬಿ.ಆರ್. ಪಂತುಲು ನಿರ್ದೇಶನದ ‘ಮಹಾಕವಿ ಕಾಳಿದಾಸ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ಅಲ್ಪಾವಧಿಯಲ್ಲೇ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದ ಅಗ್ರಮಾನ್ಯ ತಾರೆಯಾಗಿ ಹೊರಹೊಮ್ಮಿದರು. ಸುಮಾರು ಆರು ದಶಕಗಳ ಸುದೀರ್ಘ ಸಿನಿಪಯಣದಲ್ಲಿ 200ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ ಇವರಿಗೆ ಪ್ರೇಕ್ಷಕರು ಪ್ರೀತಿಯಿಂದ ‘ಅಭಿನಯ ಸರಸ್ವತಿ’ ಎಂದು ಬಿರುದು ನೀಡಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯೋತ್ಸವಕ್ಕೆ ಎಚ್‌ಎಂಟಿ ಹೊಸ ಕೈಗಡಿಯಾರಗಳು ಇಂದು ಬಿಡುಗಡೆ
ರೈತರ ಭೂಮಿ ರಕ್ಷಣೆ 6ನೇ ಗ್ಯಾರಂಟಿ : ಡಿಕೆ