;Resize=(412,232))
ಬೆಂಗಳೂರು : ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೈಸೂರು ಜಿಲ್ಲಾ ರಾಜಕಾರಣದ ಪ್ರಾಬಲ್ಯಕ್ಕಾಗಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ನಡುವೆ ಪೈಪೋಟಿ ಶುರುವಾಗಿದೆಯೇ ?
ಇಂತಹದೊಂದು ಪ್ರಶ್ನೆ ಮೂಡುವಂತಹ ಬೆಳವಣಿಗೆಗಳು ನಡೆದಿದ್ದು, ಮಹದೇವಪ್ಪ ಅವರು ದಲಿತ ಸಂಘಟನೆಗಳನ್ನು ಒಗ್ಗೂಡಿಸಿ ನ.26ರಂದು ರಾಜ್ಯ ಮಟ್ಟದ ಸಂವಿಧಾನ ದಿನ ಆಯೋಜಿಸಲು ಮುಂದಾಗಿದ್ದರೆ, ಅದೇ ದಿನ ಸರ್ಕಾರದ ವತಿಯಿಂದ ಸಂವಿಧಾನ ದಿನ ಆಚರಣೆಗೆ ಸಿದ್ಧತೆ ನಡೆದಿದೆ. ಇದಕ್ಕೆ ಯತೀಂದ್ರ ಅವರು ನೇತೃತ್ವ ವಹಿಸಿದ್ದಾರೆ.
ಗುರುವಾರ ಯತೀಂದ್ರ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ಸಂವಿಧಾನ ದಿನಾಚರಣೆ ಕುರಿತು ಚರ್ಚಿಸಲು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸಚಿವ, ಶಾಸಕರ ಸಭೆ ನಡೆಸಲಾಗಿದೆ.
ಈ ಸಭೆಯಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಯು.ಟಿ.ಖಾದರ್, ಎನ್.ಚಲುವರಾಯಸ್ವಾಮಿ, ಪುಟ್ಟರಂಗಶೆಟ್ಟಿ, ಪಿ.ಎಂ. ನರೇಂದ್ರಸ್ವಾಮಿ ಸೇರಿದಂತೆ ಮೈಸೂರು ಭಾಗದ ಸಚಿವರು, ಶಾಸಕರು, ಹಿರಿಯ ರಾಜಕೀಯ ನಾಯಕರು ಉಪಸ್ಥಿತರಿದ್ದರು. ಆದರೆ ಡಾ. ಎಚ್.ಸಿ. ಮಹದೇವಪ್ಪ ಸಭೆಯಲ್ಲಿ ಇರಲಿಲ್ಲ.
ಸಭೆಯ ಕುರಿತಾಗಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿಲ್ಲ. ನವೆಂಬರ್ 26ರಂದು ಸಂವಿಧಾನ ದಿನಾಚರಣೆ ಸರ್ಕಾರದಿಂದ ನಡೆಯಲಿದೆ. ಹಾಗಾಗಿ ಸರ್ಕಾರದ ವತಿಯಿಂದ ಸಭೆ ಕರೆದಿದ್ದು, ಚರ್ಚೆ ಮಾಡಿದ್ದೇವೆ ಎಂದರು.
ಇನ್ನು, ಎಚ್.ಸಿ. ಮಹದೇವಪ್ಪ ಅವರು ಹಮ್ಮಿಕೊಂಡಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಕುರಿತ ಪ್ರಶ್ನೆಗೆ, ನ.26ರಂದೇ ಮೈಸೂರಿನಲ್ಲಿ ಡಾ. ಎಚ್.ಸಿ. ಮಹದೇವಪ್ಪ ಅವರು ಹಮ್ಮಿಕೊಂಡಿರುವ ಕಾರ್ಯಕ್ರಮದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದರು.