;Resize=(412,232))
ನವದೆಹಲಿ: ದೇಶದ ಆರ್ಥಿಕತೆ ಮತ್ತು ಕೃಷಿ ಚಟುವಟಿಕೆಗಳ ಜೀವನಾಡಿಯಾದ ಮುಂಗಾರು ಮಾರುತಗಳು ಮೇ 26ಕ್ಕೆ ಕೇರಳ ಪ್ರವೇಶ ಮಾಡಬಹುದು ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಸಾಮಾನ್ಯವಾಗಿ ಜೂ.1ಕ್ಕೆ ಮುಂಗಾರು ದಕ್ಷಿಣದ ತುತ್ತತುದಿಯ ಕರಾವಳಿ ರಾಜ್ಯ ಪ್ರವೇಶ ಮಾಡುತ್ತದೆ. ಆ ಲೆಕ್ಕಾಚಾರದಲ್ಲಿ 5 ದಿನಗಳ ಮೊದಲೇ ಆಗಮನ ಲೆಕ್ಕಾಚಾರವಿದೆ.
ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಆರಂಭವಾಗುವ ಮುಂಗಾರು ಮಳೆ ಮುಂದಿನ 4 ತಿಂಗಳ ಹಂತಹಂತವಾಗಿ ದೇಶಾದ್ಯಂತ ವ್ಯಾಪಿಸಿ ಕೃಷಿ ಚಟುವಟಿಕೆಗಳಿಗೆ ಜೀವ ತುಂಬುತ್ತದೆ. ಇದು ದೇಶದ ಒಟ್ಟು ಮಳೆಯಲ್ಲಿ ಶೇ.70ರಷ್ಟು ಪಾಲು ಹೊಂದಿರುತ್ತದೆ. ಪ್ರಸಕ್ತ ವರ್ಷ ದೇಶವ್ಯಾಪಿ ಸರಾಸರಿ 80 ಸೆಂ.ಮೀನಷ್ಟು ಮಳೆ ಸುರಿಯುವ ನಿರೀಕ್ಷೆ ಇದೆ. ಆದರೆ ಎಲ್‌ನಿನೋದ ಪರಿಣಾಮ ಈ ಬಾರಿ ದೇಶದಲ್ಲಿ ಮಳೆಯ ಪ್ರಮಾಣ ಕಡಿಮೆ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. ಜೊತೆಗೆ ಮುಂಗಾರು ಮಾರುತ ಕೇರಳ ಪ್ರವೇಶದಲ್ಲಿ 4 ದಿನ ವಿಳಂಬ ಅಥವಾ 4 ದಿನ ಮೊದಲೇ ಬರುವ ಸಾಧ್ಯತೆಯೂ ಇಲ್ಲದಿಲ್ಲ ಎಂದು ಹೇಳಿದೆ.
ಮುಂದಿನ 24 ಗಂಟೆಗಳಲ್ಲಿ ಮುಂಗಾರು ಮಾರುತಗಳು ಅಂಡಮಾನ್ ಸಮುದ್ರ ಮತ್ತು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪ ಪ್ರವೇಶಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ.