ರಾಜ್ಯದಲ್ಲಿ ಮತ್ತಷ್ಟು ಕ್ಷೀಣಿಸಿದ ಮುಂಗಾರು ಮಳೆ

Published : Jul 11, 2026, 12:01 PM IST
Karnataka Rain

ಸಾರಾಂಶ

ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣವಾಗಿದೆ. ಆದರೂ, ಮಹಾರಾಷ್ಟ್ರ ಮತ್ತು ಘಟ್ಟ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಸೇತುವೆಗಳು ಮುಳುಗಡೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಬಿಸಿಲು ಹೆಚ್ಚಿತ್ತು

  ಬೆಳಗಾವಿ / ಮಂಗಳೂರು :  ರಾಜ್ಯದಲ್ಲಿ ಮುಂಗಾರು ಮಳೆ ಕ್ಷೀಣವಾಗಿದೆ. ಆದರೂ, ಮಹಾರಾಷ್ಟ್ರ ಮತ್ತು ಘಟ್ಟ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ಸೇತುವೆಗಳು ಮುಳುಗಡೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಬಿಸಿಲು ಹೆಚ್ಚಿತ್ತು. ಈ ನಡುವೆ ತುಂಗಭದ್ರಾ ಜಲಾಶಯಕ್ಕೆ 4 ಟಿಎಂಸಿಗಿಂತ ಅಧಿಕ ಪ್ರಮಾಣದ ನೀರು ಶುಕ್ರವಾರ ಹರಿದು ಬಂದಿದೆ.

ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಇಳಿಕೆಯಾಗಿದ್ದು, ಖಾನಾಪುರ, ಕಣಕುಂಬಿ, ಜಾಂಬೋಟಿಯಲ್ಲಿಯೂ ಕ್ಷೀಣಗೊಂಡಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ, ವೇದಗಂಗಾ, ದೂಧಗಂಗಾ, ಹಿರಣ್ಯಕೇಶಿ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ನೀರಿನ ಹರಿವಿನಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ಆದರೆ, ಚಿಕ್ಕೋಡಿ ವ್ಯಾಪ್ತಿಯ ಉಗಾರ-ಕುಡಚಿ, ಮಲ್ಲಿಕವಾಡ-ದತ್ತವಾಡ, ಕಲ್ಲೋಳ-ಯಡೂರ, ಬೋಜ-ಕಾರದಗಾ ಸೇರಿದಂತೆ 7ಕ್ಕೂ ಹೆಚ್ಚು ಕೆಳಹಂತದ ಸೇತುವೆಗಳು ಇನ್ನೂ ಸಂಪೂರ್ಣ ಜಲಾವೃತಗೊಂಡಿದ್ದು, ಜನಜೀವನ ಇನ್ನೂ ಸಹಜಸ್ಥಿತಿಗೆ ಬಂದಿಲ್ಲ. ಸಾರ್ವಜನಿಕರು ಪರ್ಯಾಯ ಮಾರ್ಗಗಳ ಮೂಲಕವೇ ಸಂಚರಿಸಬೇಕಾದ ಸ್ಥಿತಿ ಮುಂದುವರಿದಿದೆ.

ಸದ್ಯ ಕೃಷ್ಣಾ ನದಿಗೆ ಸುಮಾರು 1.44 ಲಕ್ಷ ಕ್ಯೂಸೆಕ್ ನೀರು

ಸದ್ಯ ಕೃಷ್ಣಾ ನದಿಗೆ ಸುಮಾರು 1.44 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನದಿ ತೀರದ ನಿವಾಸಿಗಳು ಜಾಗರೂಕರಾಗಿರುವಂತೆ ಸ್ಥಳೀಯ ಆಡಳಿತ ಸೂಚಿಸಿದೆ. ನವಿಲುತೀರ್ಥ ನದಿಗೆ 7126 ಕ್ಯುಸೆಕ್‌ ಮತ್ತು ಹಿಡಕಲ್‌ ಜಲಾಶಯಕ್ಕೆ 21276 ಕ್ಯುಸೆಕ್‌ ನೀರು ಬರಿದುಬರುತ್ತಿದೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಶುಕ್ರವಾರ ಬಿಡುವು ನೀಡಿದ್ದು, ಬಿಸಿಲು ವಾತವರಣವಿತ್ತು. ಜಿಲ್ಲೆಯ ಹಲವೆಡೆ ಕೆಲಕಾಲ ಹನಿ ಬಿದ್ದದ್ದು ಹೊರತು ಪಡಿಸಿ ದಿನವಿಡೀ ಮಳೆ ಇರಲಿಲ್ಲ. ಕಳೆದ 24 ಗಂಟೆಯಲ್ಲಿ ಬೆಳ್ತಂಗಡಿಯಲ್ಲಿ 18.9 ಮಿ.ಮೀ., ಬಂಟ್ವಾಳದಲ್ಲಿ 7.3 ಮಿ.ಮೀ., ಮಂಗಳೂರಿನಲ್ಲಿ 5.8 ಮಿ.ಮೀ., ಪುತ್ತೂರಿನಲ್ಲಿ 18.3 ಮಿ.ಮೀ., ಸುಳ್ಯದಲ್ಲಿ 7.6 ಮಿ.ಮೀ., ಮೂಡುಬಿದಿರೆಯಲ್ಲಿ 15.2 ಮಿ.ಮೀ. ಮಳೆಯಾಗಿದೆ.

ತುಂಗಭದ್ರಾ ಡ್ಯಾಂಗೆ 4 ಟಿಎಂಸಿಗಿಂತ ಅಧಿಕ ನೀರು

ಮುನಿರಾಬಾದ್: ಕಲ್ಯಾಣ ಕರ್ನಾಟಕದ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯಕ್ಕೆ ಶುಕ್ರವಾರ 4 ಟಿಎಂಸಿಗಿಂತ ಅಧಿಕ ಪ್ರಮಾಣದ ನೀರು ಹರಿದು ಬಂದಿದ್ದು, ಈ ಪ್ರಸಕ್ತ ಸಾಲಿನಲ್ಲಿ 3 ದಿನದಲ್ಲಿ 8 ಟಿಎಂಸಿ ನೀರು ಹರಿದು ಬಂದಿದೆ. ಜು.8ರಂದು 24,000 ಕ್ಯೂಸೆಕ್, ಜು.9ರಂದು 31,456 ಕ್ಯೂಸೆಕ್, ಜು.10ರಂದು 49,726 ಕ್ಯೂಸೆಕ್ ನೀರು ಜಲಾಶಯಕ್ಕೆ ಬಂದಿದೆ. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನಾಲ್ಕು ವೋಟರ್‌ ಐಡಿ ಆರೋಪ: ನಟ ಪ್ರಕಾಶ್‌ ರಾಜ್‌ಗೆ ಜಾಮೀನು
ಬರದ ಛಾಯೆ ಇದ್ರೂ ವಿಜೃಂಭಣೆಯ ದಸರಾ: ಸಿಎಂ