;Resize=(412,232))
ನವದೆಹಲಿ: ‘ಭಾರತದಲ್ಲಿರುವ ಮುಸಲ್ಮಾನರು ಸೂರ್ಯ ನಮಸ್ಕಾರ ಮಾಡಿದರೆ ಯಾವುದೇ ತೊಂದರೆಯಾಗದು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ್ದಾರೆ.
ಉತ್ತರಪ್ರದೇಶದ ಸಂತ ಕಬೀರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಂದೂ ಧರ್ಮ ಶ್ರೇಷ್ಠವಾದದ್ದು. ಆದ್ದರಿಂದ ಭಾರತದಲ್ಲಿರುವ ಮುಸಲ್ಮಾನರು ಕೂಡ ನೈಸರ್ಗಿಕ ಕಾರಣಗಳಿಗಾಗಿ ಸೂರ್ಯ ಹಾಗೂ ನದಿಗಳನ್ನು ಪೂಜಿಸಬೇಕು. ಸೂರ್ಯನಮಸ್ಕಾರ ಮಾಡುವುದು ಅವರನ್ನು ಮಸೀದಿಗೆ ಹೋಗುವುದರಿಂದ ತಡೆಯುವುದಿಲ್ಲ. ಬದಲಿಗೆ ಅದು ವೈಜ್ಞಾನಿಕ ಮತ್ತು ಆರೋಗ್ಯಕರ ಅಭ್ಯಾಸ. ಪ್ರಾಣಾಯಾಮ ಮಾಡುವುದರಲ್ಲಿ ತಪ್ಪೇನು? ಹಾಗೆ ಮಾಡುವವರನ್ನು ನಮಾಜ್ ಮಾಡುವುದರಿಂದ ನಾವು ತಡೆಯುವುದಿಲ್ಲ’ ಎಂದರು.
ಇದೇ ವೇಳೆ, ‘ಜನ ಯಾವ ಧರ್ಮವನ್ನು ಬೇಕಾದರೂ ಅನುಸರಿಸಲು ಮುಕ್ತರು. ಆದರೆ ಮಾನವೀಯ ಧರ್ಮಕ್ಕೆ ಎಲ್ಲರೂ ಆದ್ಯತೆ ನೀಡಬೇಕು. ಹಿಂದೂ ತತ್ವಶಾಸ್ತ್ರವು ಎಲ್ಲಾ ಜೀವಿಗಳು ಮತ್ತು ಪ್ರಕೃತಿಯ ಪ್ರತಿ ಅಹಿಂಸೆಯನ್ನು ಕಲಿಸುತ್ತದೆ. ಮಕ್ಕಳಿಗೆ ದೇವತೆಗಳ ಹೆಸರಿಡುವ ವಿಶಿಷ್ಟ ಸಂಪ್ರದಾಯವೂ ಭಾರತದಲ್ಲಿದೆ’ ಎಂದು ಹೊಸಬಾಳೆ ಹೇಳಿದರು.