ಬೆಂಗಳೂರು : ರಾಜ್ಯದ ಪ್ರಾದೇಶಿಕ ಸಾರಿಗೆ ಕಚೇರಿಗಳ ಕಾರ್ಯನಿರ್ವಹಣೆಗೆ ನೂತನ ವಾಹನ್ ತಂತ್ರಾಂಶ ಅಳವಡಿಸಿರುವ ಕಾರಣದಿಂದ ಇನ್ನು ಮುಂದೆ ವಾಹನಗಳ ಕ್ಲಿಯರೆನ್ಸ್ ಪ್ರಮಾಣಪತ್ರ ಮತ್ತು ನಿರಾಕ್ಷೇಪಣ ಪ್ರಮಾಣಪತ್ರ ಪಡೆಯಲು ಸೂಕ್ತ ಮಾಹಿತಿ ಒದಗಿಸುವುದು ಕಡ್ಡಾಯ ಎಂದು ಸಾರಿಗೆ ಇಲಾಖೆ ಸೂಚಿಸಿದೆ.
ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದ ಆರ್‌ಟಿಒ ಕಚೇರಿಗಳ ಕಾರ್ಯನಿರ್ವಹಣೆಗೆ ಕೇಂದ್ರೀಕೃತ ವೆಬ್ ಆಧಾರಿತ ವಾಹನ್ ತಂತ್ರಾಂಶ ಅಳವಡಿಸಲಾಗಿದೆ. ಈ ನೂತನ ತಂತ್ರಾಂಶದಲ್ಲಿ ವಾಹನದ ಹಾರ್ಸ್ ಪವರ್, ಕ್ಯೂಬಿಕ್ ಕೆಪಾಸಿಟಿ, ವ್ಹೀಲ್‌ಬೇಸ್, ವಾಹನದ ಮೊತ್ತ ಸೇರಿ ಮತ್ತಿತರ ಮಾಹಿತಿ ನಮೂದಿಸಬೇಕಿದೆ. ಒಂದು ವೇಳೆ ಈ ಮಾಹಿತಿಗಳು ನಮೂದಾಗದಿದ್ದರೆ ವಾಹನಗಳಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಮತ್ತು ನಿರಾಕ್ಷೇಪಣ ಪ್ರಮಾಣಪತ್ರ ಪಡೆಯಲು ಸಾಧ್ಯವಾಗುವುದಿಲ್ಲ.
ಹೀಗಾಗಿ ಎಲ್ಲ ವಾಹನ ಮಾಲೀಕರು ಈ ಕೂಡಲೇ ತಮ್ಮ ವಾಹನದ ಮಾಹಿತಿ ಮತ್ತು ದಾಖಲೆಗಳನ್ನು ಕೂಡಲೇ ಸಂಬಂಧಪಟ್ಟ ಆರ್‌ಟಿಒ ಕಚೇರಿಗೆ ಹಾಜರುಪಡಿಸಿ, ವಾಹನದ ಮಾಹಿತಿಯನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.