ಪ್ರವೀಣ್‌ ನೆಟ್ಟಾರು ಆರೋಪಿಗಳ ಶೋಧಕ್ಕಾಗಿ ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಎನ್‌ಐಎ ದಾಳಿ

Published : Dec 06, 2024, 04:30 AM IST
BJP Yuva Morcha leader Praveen Nettaru

ಸಾರಾಂಶ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾ‌ರ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿದ ಆರು ಮಂದಿ ಆರೋಪಿಗಳ ಬಂಧನಕ್ಕೆ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ಅಧಿಕಾರಿಗಳು ಗುರುವಾರ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ 16ಕ್ಕೂ ಅಧಿಕ ಸ್ಥಳಗಳಲ್ಲಿ ಏಕಕಾಲಕ್ಕೆ ಸ್ಥಳೀಯ ಪೊಲೀಸರ ನೆರವಿನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ

ಮಂಗಳೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾ‌ರ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿದ ಆರು ಮಂದಿ ಆರೋಪಿಗಳ ಬಂಧನಕ್ಕೆ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ಅಧಿಕಾರಿಗಳು ಗುರುವಾರ ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ 16ಕ್ಕೂ ಅಧಿಕ ಸ್ಥಳಗಳಲ್ಲಿ ಏಕಕಾಲಕ್ಕೆ ಸ್ಥಳೀಯ ಪೊಲೀಸರ ನೆರವಿನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.

ದ.ಕ. ಜಿಲ್ಲೆ ಸೇರಿದಂತೆ ಬೆಂಗಳೂರು ನಗರ, ಕೊಡಗು, ಕೇರಳದ ಎರ್ನಾಕುಲಂ, ತಮಿಳುನಾಡಿನ ಚೆನ್ನೈಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ದ.ಕ. ಜಿಲ್ಲೆಯ ಪುತ್ತೂರು, ಸುಳ್ಯ, ಬೆಳ್ತಂಗಡಿಗಳಲ್ಲಿ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳ ಮನೆಗಳಿಗೆ ದಾಳಿ ನಡೆಸಲಾಗಿದೆ.

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಬಳಿಕ ನಾಪತ್ತೆಯಾಗಿರುವ ಪುತ್ತೂರಿನ ಕೆಯ್ಯೂರು ನಿವಾಸಿ ಉಮ್ಮರ್, ಉಪ್ಪಿನಂಗಡಿಯ ಮಸೂದ್‌ ಅಗ್ನಾಡಿ ಹಾಗೂ ಸುಳ್ಯ ತಾಲೂಕಿನ ಬೆಳ್ಳಾರೆಯ ಅಬೂಬಕ್ಕರ್‌ ಸಿದ್ದಿಕ್‌ ಮತ್ತು ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪೊಯ್ಯಗುಡ್ಡೆ ನಿವಾಸಿ ನೌಷಾದ್ ಎನ್ನುವವರ ಮನೆಗೆ ದಾಳಿ ನಡೆಸಿದ್ದಾರೆ. ಬೆಂಗಳೂರಿನಿಂದ ಬಂದಿರುವ ಎನ್‌ಐಎ ಅಧಿಕಾರಿಗಳು ಏಕಕಾಲದಲ್ಲಿ ಬೆಳ್ಳಂಬೆಳಗ್ಗೆ ದಾಳಿ ಕಾರ್ಯಾಚರಣೆ ನಡೆಸಿದ್ದಾರೆ.

ಈ ಮೂವರಿಗೆ ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಎ ನೋಟಿಸ್‌ ಜಾರಿಗೊಳಿಸಿತ್ತು. ಮೂವರ ಮನೆಗಳಲ್ಲೂ ಪರಿಶೀಲನೆ ನಡೆಸಲಾಗಿದೆ. ನೌಷದ್ ಪತ್ತೆಗಾಗಿ ಎನ್‌ಐಎ 2 ಲಕ್ಷ ರು.ಗಳ ಬಹುಮಾನ ಘೋಷಿಸಿತ್ತು. ಅಲ್ಲದೆ ಈತನ ಪತ್ನಿ, ತಾಯಿ ಹಾಗೂ ತಂಗಿಗೂ ನೋಟಿಸ್‌ ಜಾರಿಗೊಳಿಸಲಾಗಿತ್ತು. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಅಬೂಬಕ್ಕರ್ ಸಿದ್ದಿಕ್‌ನ ಪತ್ನಿಯ ಸಹೋದರನಾಗಿರುವ ಉಮ್ಮರ್, ಶಿವಮೊಗ್ಗದ ಮಸೀದಿಯೊಂದರಲ್ಲಿ ಧರ್ಮಗುರುವಾಗಿದ್ದನು. ಈ ಪ್ರಕರಣದಲ್ಲಿ ಶಾಮೀಲಾಗಿರುವ ಕಾರಣಕ್ಕೆ ನೋಟಿಸ್‌ ನೀಡಲಾಗಿದೆ. ಸಿದ್ದಿಕ್‌ ಪತ್ತೆಗೂ 2 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು. ಸಿದ್ದಿಕ್ ಮನೆಗೆ ಹಲವು ಬಾರಿ ನೋಟಿಸ್‌ ನೀಡಿದ ಎನ್‌ಐಎ ಅಧಿಕಾರಿಗಳು ಇದೀಗ ಮತ್ತೆ ಮನೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಇಬ್ಬರು ವಿಚಾರಣೆ:

ಮನೆಗೆ ಬೀಗ ಹಾಕಿ ಪರಾರಿಯಾದ ಬೆಳ್ತಂಗಡಿಯ ನೌಷದ್‌ನ ತಾಯಿ ಮತ್ತು ತಂಗಿಯನ್ನು ವಿಚಾರಣೆಗಾಗಿ ಎನ್‌ಐಎ ತಂಡ ವಶಕ್ಕೆ ಪಡೆದುಕೊಂಡಿದೆ. ಇವರನ್ನು ಪಡಂಗಡಿಯ ಮನೆಗೆ ಕರೆತಂದು ಬೀಗ ತೆಗೆದು ಎನ್ಐಎ ತಂಡ ಶೋಧ ಕಾರ್ಯ ಕೈಗೊಂಡಿದೆ. ನೌಷದ್‌ನ ಪತ್ನಿ ಸೈನಾಝ್‌ ಕೂಡ ಪರಾರಿಯಾಗಿದ್ದು, ಆಕೆಯ ಶೋಧ ಕಾರ್ಯ ನಡೆಯುತ್ತಿದೆ. ಕುಟುಂಬಸ್ಥರೊಂದಿಗೆ ನೌಷದ್ ಸಂಪರ್ಕದಲ್ಲಿರುವ ಮಾಹಿತಿ ಮೇರೆಗೆ ಎನ್‌ಐಎ ತಂಡ ಇವರನ್ನು ವಿಚಾರಣೆ ನಡೆಸಿದೆ ಎಂದು ಹೇಳಲಾಗಿದೆ.

ಪ್ರವೀಣ್ ನೆಟ್ಟಾರ್ ಹತ್ಯೆ ಸಹಿತ ಗಂಭೀರ ಪ್ರಕರಣದಲ್ಲಿ ಭಾಗಿಗಳಾಗಿ ತಲೆಮರೆಸಿಕೊಂಡಿರುವ ೩೪ನೇ ನೆಕ್ಕಿಲಾಡಿ ನಿವಾಸಿ ಮಸೂದ್ ಅಗ್ನಾಡಿ ಹಾಗೂ ಉಪ್ಪಿನಂಗಡಿ ಗ್ರಾಮದ ಕೊಪ್ಪಳ ನಿವಾಸಿ ಅಬ್ದುಲ್ ಖಾದರ್ ಯಾನೆ ಮುಸ್ತಾಫ ಪತ್ತೆಗಾಗಿ ಎನ್‌ಐಎ ದಾಳಿ ನಡೆಸಿದೆ.

ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಘೋಷಿತ ಆರೋಪಿ ಮಸೂದ್ ಅಗ್ನಾಡಿ ಇದ್ದಾನೆ ಎಂಬ ಮಾಹಿತಿ ಮೇರೆಗೆ ಉಪ್ಪಿನಂಗಡಿ ಲಕ್ಷ್ಮೀನಗರದಲ್ಲಿರುವ ಆತನ ಅಣ್ಣನ ಮನೆಗೆ ಆಗಮಿಸಿದ ಅಧಿಕಾರಿಗಳ ತಂಡ ಮಸೂದ್ ಅಗ್ನಾಡಿ ಬಗ್ಗೆ ವಿಚಾರಣೆ ನಡೆಸಿತು. ಆ ವೇಳೆ ಇದು ಮಸೂದ್ ಮನೆಯಲ್ಲ. ಆತನ ಅಣ್ಣನ ಮನೆ, ಆತನ ಮನೆ ನೆಕ್ಕಿಲಾಡಿ ಗ್ರಾಮದಲ್ಲಿರುವುದಾಗಿ ತಿಳಿಸಿದ ಬಳಿಕ 7 ಮಂದಿಯನ್ನು ಒಳಗೊಂಡ ಎನ್‌ಐಎ ತಂಡ ಅಲ್ಲಿಂದ ನಿರ್ಗಮಿಸಿತು.

ಮಸೂದ್ ಅಗ್ನಾಡಿಯ ಪತ್ತೆಗಾಗಿ ಎನ್‌ಐಎ ಈಗಾಗಲೇ ಹಲವು ಬಾರಿ ಕಾರ್ಯಾಚರಣೆ ನಡೆಸಿದೆ. ನೆಕ್ಕಿಲಾಡಿಯಲ್ಲಿರುವ ಆತನ ಮನೆಯನ್ನು ಜಫ್ತಿ ಮಾಡುವ ಸಲುವಾಗಿ ಎರಡು ಬಾರಿ ನೋಟಿಸ್ ಕೂಡ ಜಾರಿಗೊಳಿಸಿತ್ತು. ಸಾರ್ವಜನಿಕ ಭಿತ್ತಿ ಪತ್ರದ ಮೂಲಕ ಪ್ರಕಟಣೆ ಹೊರಡಿಸಿ ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನವನ್ನೂ ಘೋಷಿಸಿತ್ತು.

ಇನ್ನೊಂದೆಡೆ ಕೊಲೆಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಅಬ್ದುಲ್ ಖಾದರ್ ಯಾನೆ ಮುಸ್ತಾಫ ಎಂಬಾತನಿಗಾಗಿ ಕೊಪ್ಪಳ ಎಂಬಲ್ಲಿನ ಆತನ ಮನೆಗೆ ಉಪ್ಪಿನಂಗಡಿ ಪೊಲೀಸರೊಂದಿಗೆ ಎನ್‌ಐಎ ತಂಡ ದಾಳಿ ನಡೆಸಿತು. ಆದರೆ ಅಲ್ಲಿ ಶಂಕಿತ ಆರೋಪಿ ಪತ್ತೆಯಾಗದ ಕಾರಣ ಅಲ್ಲಿಂದಲೂ ನಿರ್ಗಮಿಸಿದೆ.

2022ರ ಜುಲೈ 26 ರಂದು ಸುಳ್ಯದ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಇದರ ವಿಚಾರಣೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು 20 ಮಂದಿ ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಬಳಿಕ ಎನ್‌ಐಎ 14 ಮಂದಿಯನ್ನು ಬಂಧಿಸಿದ್ದು, ತಲೆಮರೆಸಿರುವ ಆರು ಮಂದಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸುಮಾರು 240 ಸಾಕ್ಷಿಗಳ ಹೇಳಿಕೆ ಸೇರಿದಂತೆ 1,500 ಪುಟಗಳ ಆರೋಪಪಟ್ಟಿಯನ್ನು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

PREV

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌