ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಅವರಿಗೆ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನನ್ನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಡಿ.6 ಅಥವಾ 9ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.
ನವದೆಹಲಿ : ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಅವರಿಗೆ ಹೈಕೋರ್ಟ್ ನೀಡಿರುವ ಮಧ್ಯಂತರ ಜಾಮೀನನ್ನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಡಿ.6 ಅಥವಾ 9ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಬೆನ್ನುನೋವು ಚಿಕಿತ್ಸೆ ಕಾರಣಕ್ಕಾಗಿ ಪಡೆದ ಜಾಮೀನು ಅವಧಿಯನ್ನು ಮುಂದೂಡುವಂತೆ ದರ್ಶನ್ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಈ ಬೆನ್ನಲ್ಲೇ ಬುಧವಾರ ಕರ್ನಾಟಕ ಸರ್ಕಾರದ ಪ್ರಾಸಿಕ್ಯೂಷನ್ ಪರ ವಕೀಲರು ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ಅನುಮತಿ ನೀಡಿದ ಬಳಿಕವೇ ಪ್ರಾಸಿಕ್ಯೂಷನ್ ಕ್ರಮ ಕೈಗೊಂಡಿದೆ.
ರೇಣುಕಾಸ್ವಾಮಿ ಕೊಲೆ ಬಳಿಕ ಬಂಧನಕ್ಕೆ ಒಳಗಾಗಿದ್ದ ಎ2 ಆರೋಪಿ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು. ಆದರೆ, ಜೈಲಿನಲ್ಲಿ ರಾಜ್ಯಾತಿಥ್ಯ ಪಡೆದ ಆರೋಪದ ಮೇಲೆ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಜೈಲಿನಲ್ಲಿ ಅತಿಯಾದ ಬೆನ್ನುನೋವು ಕಾಣಿಸಿದ್ದು, ಶಸ್ತ್ರ ಚಿಕೆತ್ಸೆಗಾಗಿ ಜಾಮೀನು ನೀಡುವಂತೆ ದರ್ಶನ್ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ 6 ವಾರಗಳ ಕಾಲ ಷರತ್ತುಬದ್ಧ ಜಾಮೀನು ನೀಡಿತ್ತು. ಜೈಲಿನಿಂದ ಹೊರಬಂದ ದರ್ಶನ್ ಅವರು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇದುವರೆಗೂ ಶಸ್ತ್ರಚಿಕೆತ್ಸೆ ಪಡೆದಿಲ್ಲ. ಅಲ್ಲದೆ, ದರ್ಶನ್ ಸರ್ಜರಿ ನಿರಾಕರಿಸಿದ್ದಾರೆ. ಹಾಗಾಗಿ ವೈದ್ಯಕೀಯ ಕಾರಣಕ್ಕಾಗಿ ಪಡೆದ ಜಾಮೀನನ್ನು ರದ್ದು ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.