‘108’ಕ್ಕೆ ಕರೆ ಮಾಡಿದರೆ ಇಂದು ರಾತ್ರಿಯಿಂದ ಆ್ಯಂಬುಲೆನ್ಸ್ ಬರಲ್ಲ!

Published : Oct 14, 2026, 05:41 AM IST
108 Ambulance Services bandh

ಸಾರಾಂಶ

ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಸದಿದ್ದರೆ ಬುಧವಾರ ರಾತ್ರಿ 10 ಗಂಟೆಯಿಂದ ಕರ್ತವ್ಯ ಬಹಿಷ್ಕರಿಸಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ 108 ಆ್ಯಂಬುಲೆನ್ಸ್‌ ನೌಕರರು ಹೇಳಿದ್ದಾರೆ.

ಬೆಂಗಳೂರು : ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆ ಈಡೇರಿಸದಿದ್ದರೆ ಬುಧವಾರ ರಾತ್ರಿ 10 ಗಂಟೆಯಿಂದ ಕರ್ತವ್ಯ ಬಹಿಷ್ಕರಿಸಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಆರೋಗ್ಯ ಕವಚ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ 108 ಆ್ಯಂಬುಲೆನ್ಸ್‌ ನೌಕರರು ಹೇಳಿದ್ದಾರೆ.

ಮತ್ತೊಂದೆಡೆ, 108 ಆ್ಯಂಬುಲೆನ್ಸ್‌ ನೌಕರರ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.

ಹೀಗಾಗಿ 108 ಆ್ಯಂಬುಲೆನ್ಸ್‌ ನೌಕರರ ಮುಷ್ಕರ ಬಹುತೇಕ ಖಚಿತ ಎಂಬಂತಾಗಿದ್ದು, ಬುಧವಾರ ರಾತ್ರಿಯಿಂದ 108 ಆ್ಯಂಬುಲೆನ್ಸ್‌ ಸೇವೆಯಲ್ಲಿ ತೀವ್ರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ವೇತನ ಪರಿಷ್ಕರಣೆ, ದೈನಂದಿನ ಕರ್ತವ್ಯದ ವೇಳಾಪಟ್ಟಿ ಬದಲಾವಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಸೆ.21ರ ಗಡುವು ನೀಡಲಾಗಿತ್ತು. ಸೆ.22 ರಂದು ನಡೆದ ಸಭೆಯಲ್ಲಿ ಬೇಡಿಕೆ ಈಡೇರಿಕೆಗೆ ಜಿವಿಕೆ ಕಂಪನಿ ಒಪ್ಪಿದ್ದು, ಮುಷ್ಕರ ಹಿಂಪಡೆಯುತ್ತಿರುವುದಾಗಿ ನೌಕರರು ಹೇಳಿದ್ದರು. ಆದರೆ, ಈವರೆಗೆ ಭರವಸೆ ಈಡೇರಿಸದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದ ಮುಷ್ಕರ ಹೂಡುತ್ತಿರುವುದಾಗಿ ನೌಕರರು ಸ್ಪಷ್ಟಪಡಿಸಿದ್ದಾರೆ.

ಅನ್ಯ ರಾಜ್ಯದಲ್ಲಿ ಉತ್ತಮ ವೇತನ:

ಈ ಬಗ್ಗೆ ಮಾತನಾಡಿರುವ ಕರ್ನಾಟಕ ರಾಜ್ಯ ಆರೋಗ್ಯ ಕವಚ (108) ನೌಕರರ ಸಂಘದ ಅಧ್ಯಕ್ಷ ಪರಮಶಿವಯ್ಯ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿವಿಕೆ ಇಎಂಆರ್‌ಯ ಕಂಪನಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇದೇ ಕಂಪನಿ ಬೇರೆ ರಾಜ್ಯಗಳಲ್ಲಿ ಉತ್ತಮ ವೇತನ ನೀಡುತ್ತಿದ್ದು, ರಾಜ್ಯದಲ್ಲಿ ಮಾತ್ರ ನಮ್ಮನ್ನು ಶೋಷಿಸುತ್ತಿದೆ. ರಾಜ್ಯದಲ್ಲಿ 108 ಸೇವೆಯಲ್ಲಿ ಚಾಲಕರು, ಸ್ಟಾಫ್ ನರ್ಸ್ ಸೇರಿ 3,200 ಸಿಬ್ಬಂದಿ ಇದ್ದು, ಎಲ್ಲರೂ ರಾಜೀನಾಮೆ ನೀಡಿ ಪರ್ಯಾಯ ಕೆಲಸ ನೋಡಿಕೊಳ್ಳುತ್ತೇವೆ. 108 ಆಂಬ್ಯುಲೆನ್ಸ್ ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾದರೆ ನಾವು ಜವಾಬ್ದಾರರಲ್ಲ. ಬದಲಿಗೆ ಗುತ್ತಿಗೆ ವಹಿಸಿಕೊಂಡಿರುವ ಜಿವಿಕೆ ಇಎಂಆರ್‌ಯ ಕಂಪನಿ ಹಾಗೂ ಸರ್ಕಾರವೇ ಹೊಣೆಯಾಗಲಿದೆ ಎಂದು ಹೇಳಿದರು.

ಬೇಡಿಕೆಗಳೇನು?:

2017 ರಿಂದ 2022ರವರೆಗೆ ಯಾವುದೇ ವೇತನ ಹೆಚ್ಚಳ ಆಗಿಲ್ಲ. ಹೀಗಾಗಿ ಪ್ರತಿ ವರ್ಷ 108 ಆ್ಯಂಬುಲೆನ್ಸ್ ನೌಕರರ ವೇತನ ಪರಿಷ್ಕರಣೆ ಮಾಡಬೇಕು, 3 ಪಾಳಿಯಲ್ಲಿ ಆ್ಯಂಬುಲೆನ್ಸ್​ ವಾಹನದ ಸೌಕರ್ಯ ಮಾಡಬೇಕು. ⁠ವಲಯವಾರು ವಿಂಗಡಣೆ ಮಾಡಿ ನಿಗದಿ ಮಾಡಿರುವ ವೇತನ ರದ್ದುಪಡಿಸಿ ಏಕರೂಪ ವಲಯವಾಗಿ ಬದಲಾವಣೆ ಮಾಡಬೇಕು. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 50 ಲಕ್ಷ ರು. ಪರಿಹಾರ, ಜ್ಯೇಷ್ಠತೆ ಆಧಾರದ ಮೇಲೆ ಸಿಬ್ಬಂದಿಗೆ ವೇತನ ನಿಗದಿ ಮಾಡಬೇಕು. ಕಾರ್ಮಿಕ ಇಲಾಖೆ ಪ್ರಕಾರ ಪ್ರತಿ ತಿಂಗಳು 7ರ ಒಳಗೆ ವೇತನ ನೀಡಬೇಕು. ಎಲ್ಲಾ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರಿಗೆ ಶೌಚಾಲಯ, ವಿಶ್ರಾಂತಿ ಕೊಠಡಿ, ಆ್ಯಂಬುಲೆನ್ಸ್ ಸ್ವಚ್ಛಗೊಳಿಸಲು ನೀರಿನ ವ್ಯವಸ್ಥೆ ಮಾಡಬೇಕು ಎಂದು ನೌಕರರ ಸಂಘ ಆಗ್ರಹಿಸಿದೆ.

ಬ್ಲ್ಯಾಕ್‌ಮೇಲ್‌ಗೆ ಜಗ್ಗಲ್ಲ, 2 ತಿಂಗಳು ಟೈಂ ಕೊಡಿ

108 ಆ್ಯಂಬುಲೆನ್ಸ್‌ ಸಿಬ್ಬಂದಿ ಬ್ಲ್ಯಾಕ್‌ಮೇಲ್‌ಗೆ ನಾವು ಜಗ್ಗುವುದಿಲ್ಲ. ಸಾರ್ವಜನಿಕರು ಮುಂದಿನ ಎರಡು ತಿಂಗಳು 108 ಆ್ಯಂಬುಲೆನ್ಸ್ ಮೇಲೆ ಅವಲಂಬಿಸಬೇಡಿ. 2 ತಿಂಗಳ ಬಳಿಕ ಅತ್ಯುತ್ತಮ ಆ್ಯಂಬುಲೆನ್ಸ್‌ ಸೇವೆ ವ್ಯವಸ್ಥೆ ಮಾಡುತ್ತೇವೆ.

- ಯು.ಟಿ. ಖಾದರ್‌, ಆರೋಗ್ಯ ಸಚಿವ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಎನ್‌ಡಿಎ ಅಭ್ಯರ್ಥಿ ರಂಗನಾಥ್ ಬೆಂಬಲಿಸಲು ಇ.ಕೃಷ್ಣಪ್ಪ ಕರೆ
ನೆಲಮಂಗಲಕ್ಕೆ ಆದಿಚುಂಚನಗಿರಿ ಶ್ರೀಗಳ ಪ್ರವಾಸ