ಶಿವರಾಮ ಕಾರಂತ ಲೇಔಟ್‌ ಸೈಟ್‌ಗೆ ಅರ್ಜಿ ಸಲ್ಲಿಕೆ ವಿಸ್ತರಣೆ?

Published : Oct 13, 2026, 10:16 AM IST
BDA begins plot allotment for Shivaram Karanth Layout in Bengaluru

ಸಾರಾಂಶ

ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಖರೀದಿಸಬೇಕೆಂಬ ಅಭಿಲಾಶೆಯುಳ್ಳ ಗ್ರಾಹಕರಿಗೆ ಸಿಹಿ ಸುದ್ದಿ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿವೇಶನಗಳ ಹಂಚಿಕೆಗಾಗಿ ಸಾರ್ವಜನಿಕರಿಂದ ಆಹ್ವಾನಿಸಲಾಗಿದ್ದ ಆನ್‌ಲೈನ್‌ ಅರ್ಜಿ ಸಲ್ಲಿಕೆ ಅವಧಿಯನ್ನು ಇನ್ನು 15 ದಿನಗಳ ಕಾಲ ವಿಸ್ತರಿಸಲು ಮುಂದಾಗಿದೆ.

ಬೆಂಗಳೂರು : ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಖರೀದಿಸಬೇಕೆಂಬ ಅಭಿಲಾಶೆಯುಳ್ಳ ಗ್ರಾಹಕರಿಗೆ ಸಿಹಿ ಸುದ್ದಿ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿವೇಶನಗಳ ಹಂಚಿಕೆಗಾಗಿ ಸಾರ್ವಜನಿಕರಿಂದ ಆಹ್ವಾನಿಸಲಾಗಿದ್ದ ಆನ್‌ಲೈನ್‌ ಅರ್ಜಿ ಸಲ್ಲಿಕೆ ಅವಧಿಯನ್ನು ಇನ್ನು 15 ದಿನಗಳ ಕಾಲ ವಿಸ್ತರಿಸಲು ಮುಂದಾಗಿದೆ.

ಕಾರಂತ ಬಡಾವಣೆಯಲ್ಲಿ ವಿವಿಧ ಅಳತೆಯ ಒಟ್ಟು 2,815 ನಿವೇಶನಗಳ (ಸೈಟ್‌ಗಳ) ಹಂಚಿಕೆಗಾಗಿ ಆಗಸ್ಟ್‌ 31ರಂದು ಸಾರ್ವಜನಿಕರಿಂದ ಅನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಧಿಸೂಚನೆ ಹೊರಡಿಸಿತ್ತು. ಅಕ್ಟೋಬರ್‌ 15 ಅರ್ಜಿ ಸಲ್ಲಿಸಲು ಕೊನೆಯ ದಿನವೆಂದು ನಿಗದಿಪಡಿಸಲಾಗಿತ್ತು. ಈವರೆಗೆ ಬಿಡಿಎ ವೆಬ್‌ಸೈಟ್‌ನಲ್ಲಿ 2700ಕ್ಕೂ ಹೆಚ್ಚು ಅರ್ಜಿಗಳು ಡೌನ್‌ಲೋಡ್‌ ಆಗಿವೆ. ಆದರೆ, ನೋಂದಣಿ ಮತ್ತು ಠೇವಣಿ ಹಣವನ್ನು ಪಾವತಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಸಂಖ್ಯೆ ಕೇವಲ 1100 ಮಾತ್ರ. ಉಳಿದಂತೆ 1600ಕ್ಕೂ ಹೆಚ್ಚು ಅರ್ಜಿಗಳು ವಾಪಸ್‌ ಬರಬೇಕಿದೆ. ಈ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ಅವಧಿಯನ್ನು ಇನ್ನು 15 ದಿನ ವಿಸ್ತರಿಸುವ ಕುರಿತು ಮಂಗಳವಾರ ನಡೆಯಲಿರುವ ಸಭೆಯಲ್ಲಿ ತೀರ್ಮಾನಕೈಗೊಳ್ಳಲಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಸ್ಥಳೀಯ ನಿವಾಸಿ ದೃಢೀಕರಣ ಪತ್ರ ಗೊಂದಲ:

ಸ್ಥಳೀಯ ನಿವಾಸಿ ದೃಢೀಕರಣ ಪತ್ರವನ್ನು (ಡೊಮಿಸೈಲ್ ಸರ್ಟಿಫಿಕೇಟ್‌) ಕಂದಾಯ ಇಲಾಖೆ ನೀಡುತ್ತದೆ. ಈ ಪ್ರಮಾಣಪತ್ರ ಪಡೆಯಲು ಅರ್ಜಿದಾರರು ಕರ್ನಾಟಕದಲ್ಲಿ ಜನಿಸಿರಬೇಕು ಇಲ್ಲವೇ ಕನಿಷ್ಠ 10 ವರ್ಷಗಳ ಕಾಲ ರಾಜ್ಯದಲ್ಲಿ ವಾಸವಿರಬೇಕು ಎಂಬ ನಿಯಮವಿದೆ. ಆದರೆ, ಬಿಡಿಎ ಶಿವರಾಮ ಕಾರಂತ ಬಡಾವಣೆಗೆ ನಿವೇಶನ ಹಂಚಿಕೆಗೆ ಹೊರಡಿಸಿರುವ ಅಧಿಸೂಚನೆಯಲ್ಲಿ ಕನಿಷ್ಠ 15 ವರ್ಷಗಳಿಗೆ ಕಡಿಮೆಯಿಲ್ಲದ ಅವಧಿಯವರೆಗೆ ಕರ್ನಾಟಕದ ನಿವಾಸಿಯಾಗಿರಬೇಕೆಂಬ ನಿಯಮವನ್ನು ರೂಪಿಸಿದೆ. ಹೀಗಾಗಿ ಗೊಂದಲ ಉಂಟಾಗಿತ್ತು. ಇದಕ್ಕಾಗಿಯೇ ಬಿಡಿಎ ಕಂದಾಯ ಇಲಾಖೆಗೆ ಪತ್ರ ಬರೆದು, ನಿವೇಶನ ಅರ್ಜಿದಾರರಿಗೆ 15 ವರ್ಷಕ್ಕೆ ನಿವಾಸಿ ದೃಢೀಕರಣ ಪತ್ರ ನೀಡುವಂತೆ ಕೋರಿದೆ. ಇದರ ನಡುವೆಯೂ ಕಂದಾಯ ಇಲಾಖೆಯಲ್ಲಿನ ಗೊಂದಲದಿಂದಾಗಿ ಸುಗಮವಾಗಿ ದೃಢೀಕರಣ ಪತ್ರ ಸಿಗುತ್ತಿಲ್ಲ. ಹೀಗಾಗಿ ಹೆಚ್ಚು ಅರ್ಜಿಗಳು ಬಂದಿಲ್ಲ ಎಂಬುದು ಬಿಡಿಎ ಅಧಿಕಾರಿಗಳ ವಾದ.

ಠೇವಣಿ ಮೊತ್ತ ದುಬಾರಿ!

ಅರ್ಜಿಯ ಜೊತೆಗೆ ಠೇವಣಿ ಮೊತ್ತ 9*12 ಚದರ ಮೀಟರ್‌ಗೆ ಸಾಮಾನ್ಯ ವರ್ಗಕ್ಕೆ 8.71 ಲಕ್ಷ ರು., ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1ರ ಅರ್ಜಿದಾರರಿಗೆ 3.48 ಲಕ್ಷ ರು. ನಿಗದಿ ಮಾಡಲಾಗಿದೆ. ಇದು 12*18 ಚದರ ಮೀಟರ್‌ಗೆ 17.43 ಲಕ್ಷರು.ವರೆಗೆ ಮತ್ತು 15*24 ಚದರ ಮೀಟರ್‌ಗೆ 29.06 ಲಕ್ಷ ರು.ವರೆಗೆ ಠೇವಣಿ ಇಡುವಂತೆ ಸೂಚಿಸಲಾಗಿದೆ. ಈ ಭಾರೀ ಮೊತ್ತದ ಠೇವಣಿಯಿಂದ ಬಹುತೇಕ ಆಸಕ್ತರು ಅರ್ಜಿ ಸಲ್ಲಿಕೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

25000 ರಾಗಿ ಬೆಳೆಗಾರರ ₹265 ಕೋಟಿ ಬಾಕಿ ಚುಕ್ತಾ
ಎಸ್ಸಿ, ಎಸ್ಟಿ ಮೀಸಲು ಪ್ರಮಾಣ ಹೆಚ್ಚಳ ಹೈಕೋರ್ಟಲ್ಲಿ ರದ್ದು