;Resize=(412,232))
ವೆಂಕಟೇಶ್ ಕಲಿಪಿ
ಬೆಂಗಳೂರು : ಸಂಶಯ ಎಷ್ಟೇ ಗಂಭೀರವಾಗಿದ್ದರೂ ಅದು ಸಾಕ್ಷಿಯ ಸ್ಥಾನ ತುಂಬುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕೋಣೆಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ನೇಪಾಳ ಪ್ರಜೆಯ ಸಾವಿಗೆ ಕಾರಣವಾದ ವ್ಯಕ್ತಿಯನ್ನು ಕೊಲೆ ಅಪರಾಧದಿಂದ ಖುಲಾಸೆಗೊಳಿಸಿ ಜೀವಾವಧಿ ಶಿಕ್ಷೆ ರದ್ದುಪಡಿಸಿದೆ.
ವಿಚಾರಣಾ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದು ಕೋರಿ ಮೈಸೂರು ಗಾಂಧಿನಗರದ ನಿವಾಸಿ ಶಿವ ಅಲಿಯಾಸ್ ಶಿವಕುಮಾರ್ (40) ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ದೂರುದಾರನೂ ಆದ ಗಾಯಾಳು ಗಣೇಶ್ ಮಾತ್ರ ಶಿವ ಕಿಟಕಿಯಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ನಂತರ ಬೈಕ್ ಹತ್ತಿ ಪರಾರಿ ಆಗಿರುವುದನ್ನು ನೋಡಿದ್ದಾನೆ ಎನ್ನಲಾಗಿದೆ. ಆರೋಪಿ ಹೆಸರನ್ನು ಇತರರಿಗೆ ಹೇಳಿದ್ದೇ ಗಣೇಶ್. ಆತನ ಹೇಳಿಕೆಯನ್ನು 2024ರ ಆ.27ರ ಬೆಳಗ್ಗೆ 8.30ರಿಂದ 9.30ರ ನಡುವೆ ದಾಖಲಿಸಿಕೊಳ್ಳಲಾಗಿದೆ. ಅದಕ್ಕೂ ಮುನ್ನ ಬೆಳಗ್ಗೆ 7.50ರಿಂದ 8.20ರ ನಡುವೆ ದಾಖಲಿಸಿದ ಮರಣಪೂರ್ವ ಹೇಳಿಕೆಯಲ್ಲಿ ಯಾರೋ ಒಬ್ಬರು ಕೋಣೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಎಂಬುದಾಗಿ ತನ್ನ ಸಹೋದರ ಗಣೇಶ್ ಹೇಳಿರುವುದಾಗಿ ಮೃತ ದೆಹಲಿ ರಾಜು ತಿಳಿಸಿದ್ದಾನೆ. ಆದರೆ, ಗಣೇಶ್ ತನ್ನ ಹೇಳಿಕೆಯಲ್ಲಿ ಶಿವನ ಹೆಸರು ಬಹಿರಂಗಪಡಿಸಿಲ್ಲ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.
ಘಟನೆ ನಡೆದ ದಿನದಂದೇ ಪೊಲೀಸರು ಆರೋಪಿ ಶಿವನನ್ನು ಬಂಧಿಸಿದ್ದು, ಆತ ಹೇಳಿದಂತೆ ಪೆಟ್ರೋಲ್ ತಂದು ಕಿಟಿಕಿಯಿಂದ ಸುರಿಯಲು ಬಳಸಲಾಯಿತು ಎನ್ನಲಾದ ಬಾಟಲಿ ವಶಪಡಿಸಿಕೊಂಡು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರ ವರದಿ ಪ್ರಕಾರ, ಆ ಬಾಟಲಿಯಲ್ಲಿ ಪೆಟ್ರೋಲ್ ಮತ್ತು ಸೀಮೆಎಣ್ಣೆಯ ಅವಶೇಷಗಳ ಇರುವಿಕೆ ಕುರಿತ ಪರೀಕ್ಷೆ ಫಲಿತಾಂಶ ನಕಾರಾತ್ಮಕವಾಗಿದೆ. ಪ್ರಕರಣದ ಸಾಕ್ಷಿಗಳ ಪೈಕಿ ಯಾರೊಬ್ಬರೂ ಶಿವು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿ ಆಗಿರುವುದನ್ನು ಪ್ರತ್ಯಕ್ಷವಾಗಿ ನೋಡಿಲ್ಲ ಎಂದು ಪೀಠ ತಿಳಿಸಿದೆ.
ಘಟನೆ ನಡೆಯುವ 15 ದಿನಗಳ ಮುನ್ನ ಮೃತ ಹಾಗೂ ಗಾಯಾಳುಗಳು ತಂಗಿದ್ದ ಕೋಣೆಯಲ್ಲಿ ಉಳಿದುಕೊಂಡಿದ್ದ ಆರೋಪಿ, ಗಾಯಾಳು ಗೋರಕ್ ಮೊಬೈಲ್ ತೆಗೆದುಕೊಂಡು ಹೋಗಿದ್ದನ್ನು ಪ್ರಶ್ನಿಸಿದ್ದಕ್ಕೆ ಅವರಿಗೆ ಆರೋಪಿ ಬೆದರಿಸಿದ್ದ ಎಂದು ಆರೋಪಿಸಲಾಗಿದೆ. ಬೆದರಿಸಿದ ಎಂಬ ಕಾರಣಕ್ಕೆ ಆ ಕೋಣೆಗೆ ಬೆಂಕಿ ಹಚ್ಚಿದವನು ಅವನೇ ಇರಬಹುದೆಂದು ಶಂಕಿಸಲಾಗಿದೆ. ಸಂದೇಹ ಎಷ್ಟೇ ಗಂಭೀರವಾಗಿದ್ದರೂ, ಅದು ಸಾಕ್ಷ್ಯದ ಸ್ಥಾನ ತುಂಬಲಾರದು ಎಂದು ಅಭಿಪ್ರಾಯಪಟ್ಟಿದೆ.
ಮೃತನ ಹೇಳಿಕೆ ಪರಿಶೀಲಿಸಿದರೆ, ಅಪರಾಧ ಕೃತ್ಯದಲ್ಲಿ ಆರೋಪಿ ಭಾಗವಹಿಸಿರುವ ಬಗ್ಗೆ ನ್ಯಾಯಾಲಯದ ಮನಸ್ಸಿನಲ್ಲಿ ಗಂಭೀರ ಸಂಶಯ ಮೂಡುತ್ತಿದೆ. ಹಾಗಾಗಿ, ತನಿಖಾಧಿಕಾರಿಗಳು (ಪ್ರಾಸಿಕ್ಯೂಷನ್) ಆರೋಪಿ ವಿರುದ್ಧ ಹೊರಿಸಲಾದ ಆರೋಪಗಳನ್ನು ಸಂಶಯಕ್ಕೆ ಆಸ್ಪದವಿಲ್ಲದಂತೆ ಸಮಂಜವಾಗಿ ಸಾಬೀತುಪಡಿಸಿಲ್ಲ. ಆದ್ದರಿಂದ, ವಿಚಾರಣಾ ನ್ಯಾಯಾಲಯವು ಶಿವನನ್ನು ದೋಷಿಯಾಗಿ ತಿರ್ಮಾನಿಸಿ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಪಡಿಸಲಾಗುತ್ತಿದೆ ಎಂದು ಪೀಠ ಆದೇಶಿಸಿದೆ.
ಪ್ರಕರಣದಲ್ಲಿ ಮೃತ ದೆಹಲಿ ರಾಜು, ದೂರುದಾರ ಗಣೇಶ್, ಗೋರಕ್ ಸೇರಿ ನಾಲ್ವರು ನೇಪಾಳದಿಂದ ಬಂದು, ಮೈಸೂರಿನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ತಂಗಲು ಮಾಲೀಕರು ಕೋಣೆಯೊಂದನ್ನು ನೀಡಿದ್ದರು. 2014ರ ಆ.27ರಂದು ಮುಂಜಾನೆ 4 ಗಂಟೆಗೆ ದೂರುದಾರ, ಮೃತನು ಸೇರಿ ನಾಲ್ವರು ಮಲಗಿದ್ದಾಗ ಶಿವ ಬಾಟಲಿಯಲ್ಲಿ ಪೆಟ್ರೋಲ್ ತಂದು ಕಿಟಕಿಯಿಂದ ಕೋಣೆಗೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಬೆಂಕಿ ಆವರಿಸಿಕೊಂಡ ಪರಿಣಾಮ ಹೆಚ್ಚಾಗಿ ಸುಟ್ಟಿದ್ದ ದೆಹಲಿ ರಾಜು ಮೃತಪಟ್ಟಿದ್ದ. ಉಳಿದ ಮೂವರು ಗಾಯಗೊಂಡಿದ್ದರು.
ಗಣೇಶ್ ನೀಡಿದ್ದ ದೂರು ಆಧರಿಸಿ ಪೊಲೀಸರು ಶಿವನನ್ನು ಬಂಧಿಸಿದ್ದರು. ಕೊಲೆ ಅಪರಾಧಕ್ಕೆ ಶಿವಗೆ ಜೀವಾವಧಿ ಶಿಕ್ಷೆ ವಿಧಿಸಿ ಮೈಸೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ 2018ರ ಮೇ 24ರಂದು ಆದೇಶಿಸಿತ್ತು. ಅದರ ರದ್ದತಿಗೆ ಕೋರಿ ಶಿವ ಹೈಕೋರ್ಟ್ ಮೊರೆ ಹೋಗಿದ್ದ. ಶಿವ ಪರ ವಕೀಲ ಸಿ.ಎನ್.ರಾಜು ವಾದಿಸಿದ್ದರು.