;Resize=(412,232))
ಬೆಂಗಳೂರು : ಕೈಗಾರಿಕೆಗಳಿಗೆ ಪೂರೈಸುವ ಡೀಸೆಲ್ ದರ 20 ರು. ಹೆಚ್ಚಳದಿಂದಾಗಿ ಸರ್ಕಾರಿ ಸಾರಿಗೆ ಬಸ್‌ಗಳ ಪ್ರಯಾಣ ದರ ಏರಿಕೆ ಆಗುತ್ತದೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ‘ಕೈಗಾರಿಕೆಗಳಿಗೆ ಪೂರೈಸುವ ಡೀಸೆಲ್ ದರ ಮಾತ್ರ ಹೆಚ್ಚಿಸಲಾಗಿದೆ. ಹೀಗಾಗಿ ಸದ್ಯಕ್ಕೆ ಬಸ್ ಪ್ರಯಾಣ ದರ ಹೆಚ್ಚಳ ಇಲ್ಲ’ ಎಂದು ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ಯುದ್ಧದ ಪರಿಣಾಮ ಸಾರಿಗೆ ನಿಗಮಗಳ ಮೇಲೂ ಆಗಲಿದೆ. ಯುದ್ಧದಿಂದಾಗಿ ಕೈಗಾರಿಕಾ ಡೀಸೆಲ್ ಬೆಲೆ ಏರಿಕೆಯಾಗಿದ್ದು, ಅದು ತಾತ್ಕಾಲಿಕ ಎಂಬ ಅಭಿಪ್ರಾಯವಿದೆ. ಹೀಗೆ ಕೈಗಾರಿಕೆಗಳ ತಾತ್ಕಾಲಿಕ ಬೆಲೆ ಹೆಚ್ಚಳದಿಂದಾಗಿ ಬಸ್ ಪ್ರಯಾಣ ದರ ಏರಿಕೆ ಮಾಡಲು ಆಗುವುದಿಲ್ಲ’ ಎಂದರು.
‘ಒಂದು ವೇಳೆ ಯುದ್ಧ ಸ್ಥಗಿತಗೊಂಡು, ಪರಿಸ್ಥಿತಿ ಸುಧಾರಿಸಿದರೆ ಸಾಮಾನ್ಯವಾಗಿ ಡೀಸೆಲ್ ಬೆಲೆಯೂ ಇಳಿಕೆಯಾಗಬಹುದು. ಆಗ ಪ್ರಯಾಣ ದರ ಮತ್ತೆ ಇಳಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬಸ್ ಪ್ರಯಾಣ ದರ ಏರಿಕೆಯ ಯಾವುದೇ ಚಿಂತನೆ ನಮ್ಮ ಮುಂದೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.