ಲಾಕ್‌ಡೌನ್‌, ಮಾಸ್ಕ್‌, ಸ್ಕ್ರೀನಿಂಗ್‌, ಮಾರ್ಗಸೂಚಿಗಳು ಇಲ್ಲ - ಎಚ್‌ಎಂಪಿವಿ ಸಹಜ ಸೋಂಕು : ದಿನೇಶ್‌

Published : Jan 07, 2025, 09:40 AM IST
Dinesh gundurao

ಸಾರಾಂಶ

ಎಚ್‌ಎಂಪಿವಿ ಎಂಬುದು ಪ್ರತಿ ವರ್ಷ ಸಾಮಾನ್ಯವಾಗಿ ಹರಡುವ ಸಹಜ ಸೋಂಕು. ಮಾರಣಾಂತಿಕ ಅಥವಾ ಅಪಾಯಕಾರಿ ವೈರಸ್‌ ಅಲ್ಲ

 ಬೆಂಗಳೂರು :  ಎಚ್‌ಎಂಪಿವಿ ಎಂಬುದು ಪ್ರತಿ ವರ್ಷ ಸಾಮಾನ್ಯವಾಗಿ ಹರಡುವ ಸಹಜ ಸೋಂಕು. ಮಾರಣಾಂತಿಕ ಅಥವಾ ಅಪಾಯಕಾರಿ ವೈರಸ್‌ ಅಲ್ಲ. ಹೀಗಾಗಿ ರ್‍ಯಾಂಡಮ್‌ ಪರೀಕ್ಷೆ, ಮಾಸ್ಕ್‌, ಲಾಕ್‌ಡೌನ್‌, ಶಾಲಾ ಮಕ್ಕಗಳಿಗೆ ಮಾರ್ಗಸೂಚಿ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್‌ ಸೇರಿದಂತೆ ಯಾವುದೇ ವಿಶೇಷ ಕ್ರಮಗಳನ್ನೂ ನಾವು ತೆಗೆದುಕೊಳ್ಳುತ್ತಿಲ್ಲ. ಅದರ ಅಗತ್ಯವೂ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ.

ಇನ್ನು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಇಬ್ಬರು ಪುಟ್ಟ ಮಕ್ಕಳಲ್ಲಿ ಕಂಡು ಬಂದಿರುವುದು ಸಾಮಾನ್ಯ ಎಚ್‌ಎಂಪಿವಿ ಸೋಂಕು. ರಾಜ್ಯ ಅಥವಾ ದೇಶದಲ್ಲಿ ಈ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬಂದಿಲ್ಲ. ಹೀಗಾಗಿ ಈ ಮಾದರಿಯನ್ನು ಚೀನಾ ತಳಿಯೇ ಎಂದು ಪರೀಕ್ಷಿಸಲು ಪುಣೆಯ ವೈರಾಣು ಸಂಶೋಧನಾ ಕೇಂದ್ರಕ್ಕೆ ಕಳುಹಿಸುವ ಅಗತ್ಯವಿಲ್ಲ. ರೂಪಾಂತರ ತಳಿಯೇ ಎಂಬುದನ್ನು ಪರೀಕ್ಷಿಸಲು ಜಿನೋಮ್‌ ಸೀಕ್ವೆನ್ಸ್‌ಗೂ ಕಳುಹಿಸುವುದಿಲ್ಲ. ಈ ಬಗ್ಗೆ ಅನಗತ್ಯ ಆತಂಕ ಬೇಡ. ಎಂದಿನಂತೆ ನಿಮ್ಮ ಕೆಲಸ ನೀವು ಮಾಡಿಕೊಂಡಿರಿ ಎಂದು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಚೀನಾ ಹಾಗೂ ಮಲೇಷ್ಯಾದಲ್ಲಿ ಆತಂಕ ಸೃಷ್ಟಿಸಿರುವ ಎಚ್ಎಂಪಿವಿ ವೈರಸ್‌ ಬೆಂಗಳೂರಿನ ಇಬ್ಬರು ಮಕ್ಕಳಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಎಚ್‌ಎಂಪಿವಿ ವೈರಸ್‌ ದೇಶಕ್ಕೆ ಹೊಸದಲ್ಲ. 2001ರಲ್ಲಿ ನೆದರ್‌ಲೆಂಡ್‌ನಲ್ಲಿ ಪತ್ತೆ ಆಗಿತ್ತು. ಅದಕ್ಕೂ ಮೊದಲಿನಿಂದಲೂ ಈ ವೈರಸ್‌ ಇದೆ. ಪ್ರತಿ ವರ್ಷವೂ ಇನ್‌ಫ್ಲ್ಯೂಯೆಂಜಾ ಮಾದರಿ ಅನಾರೋಗ್ಯ ಲಕ್ಷಣಗಳಾದ ಶೀತ, ನೆಗಡಿ, ಕೆಮ್ಮು, ಉಸಿರಾಟದ ಸೋಂಕು ಸಮಸ್ಯೆ ಉಳ್ಳವರಿಗೆ ಪರೀಕ್ಷೆ ನಡೆಸಿದಾಗ ಶೇ.0.75 ರಿಂದ ಶೇ.1ರಷ್ಟು ಮಂದಿಗೆ ಎಚ್‌ಎಂಪಿವಿ ವೈರಸ್‌ ದೃಢಪಡುತ್ತಿತ್ತು. ಇದೇ ರೀತಿ ಈ ಮಕ್ಕಳಿಗೂ ದೃಢಪಟ್ಟಿದೆ. ಇದು ಅಪಾಯಕಾರಿ ವೈರಸ್‌ ಅಲ್ಲ ಎಂದು ಸ್ಪಷ್ಟಪಡಿಸಿದರು.

ಯಾವುದೇ ವಿಶೇಷ ಕ್ರಮವಿಲ್ಲ:

ವೈರಸ್‌ ಬಗ್ಗೆ ಎಲ್ಲಾ ರೀತಿಯಲ್ಲೂ ಚರ್ಚೆ ನಡೆಸಿದ್ದು, ಮಕ್ಕಳ ವಿಶೇಷ ಆಸ್ಪತ್ರೆ ಸೇರಿದಂತೆ ಎಲ್ಲೂ ರ್‍ಯಾಂಡಮ್‌ ಪರೀಕ್ಷೆ ನಡೆಸುವ ಅಗತ್ಯವಿಲ್ಲ. ಮಾಸ್ಕ್ ಧರಿಸುವಂತೆ ನಿಯಮ, ಜನದಟ್ಟಣೆ ಪ್ರದೇಶಗಳಿಗೆ ಹೋಗದಂತೆ ನಿರ್ಬಂಧ, ಶಾಲಾ ಮಕ್ಕಳಿಗೆ ಮಾರ್ಗಸೂಚಿ, ಸೋಂಕಿತರನ್ನು ಐಸೊಲೇಷನ್‌ ಮಾಡುವುದು, ಲಾಕ್‌ಡೌನ್‌ ಹೇರುವುದು, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್‌ ಮಾಡುವುದು ಸೇರಿದಂತೆ ಯಾವುದೇ ಕ್ರಮಗಳನ್ನೂ ಕೈಗೊಳ್ಳುವುದಿಲ್ಲ. ಸಾರ್ವಜನಿಕರು ಕೇವಲ ಸಾಮಾನ್ಯ ಮುನ್ನೆಚ್ಚರಿಕೆ ಪಾಲಿಸಿದರೆ ಸಾಕು ಎಂದು ಸ್ಪಷ್ಟಪಡಿಸಿದರು.

ಐಎಲ್‌ಐ ಸೋಂಕು ಬೇರೆ ಬೇರೆ ವೈರಸ್‌ಗಳಿಂದ ಬರುತ್ತದೆ. ಅದರಲ್ಲಿ ಎಚ್‌ಎಂಪಿವಿ ವೈರಸ್‌ ಕೂಡ ಒಂದು. ಇದು ಮಾರಣಾಂತಿಕ ಸೋಂಕು ಎಂಬುದು ಸಾಬೀತಾಗಿಲ್ಲ. ರೋಗನಿರೋಧಕ ಶಕ್ತಿ ಕಡಿಮೆ ಇರುವ ಪುಟ್ಟ ಮಕ್ಕಳು, ವೃದ್ಧರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಕಾಯಿಲೆ ಜತೆಗೆ ಬೇರೆ ಗಂಭೀರ ಅನಾರೋಗ್ಯ ಸಮಸ್ಯೆಯಿದ್ದರೆ ಮಾತ್ರ ಜೀವಕ್ಕೆ ಅಪಾಯ ಆಗಬಹುದು. ಕಠಿಣ ನಿರ್ಬಂಧಗಳ ಅಗತ್ಯವಿಲ್ಲ ಎಂದರು.

ಎಚ್‌ಎಂಪಿವಿ ವರದಿ ಎಂಬುದೇ ಸುಳ್ಳು:

ಈಗ ಎಚ್‌ಎಂಪಿವಿ ವರದಿ ಆಗಿದೆ ಎಂಬುದೇ ಸುಳ್ಳು. ಅದು ನಮ್ಮೊಂದಿಗೆ ಇರುವ ವೈರಾಣು. ಇದು ಕೊರೋನಾದಂತೆ ಹೊಸ ವೈರಾಣು ಎಂದು ಆತಂಕ ಪಡಬೇಡಿ. ಅನಗತ್ಯವಾಗಿ ಪರೀಕ್ಷೆ ಮಾಡಿಸಲೂ ಹೋಗಬೇಡಿ. ಸೋಂಕಿನ ತೀವ್ರ ಲಕ್ಷಣಗಳು ಕಂಡು ಬಂದು ತೀರಾ ಅಗತ್ಯ ಎನಿಸಿದರೆ ವೈದ್ಯರು ಪರೀಕ್ಷೆ ಮಾಡುತ್ತಾರೆ. ಸರ್ಕಾರದಿಂದ ಪರೀಕ್ಷೆಗೆ ಯಾವುದೇ ಸೂಚನೆ ನೀಡುವುದಿಲ್ಲ.

ಇನ್ನು ಕೇಂದ್ರ ಸರ್ಕಾರವು ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಿ ಎಂದು ಸೂಚಿಸಿದರೆ ಮಾತ್ರ ಪರೀಕ್ಷೆಗಳನ್ನು ಮಾಡುತ್ತೇವೆ ಎಂದು ಹೇಳಿದರು. ಸಭೆಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ, ಆಯುಕ್ತ ಶಿವಕುಮಾರ್‌ ಸೇರಿದಂತೆ ಹಲವರು ಹಾಜರಿದ್ದರು.

ಕಾರ್ಯಪಡೆ ರಚಿಸಲು ನಡ್ಡಾ ಜತೆ ಮಾತನಾಡಲಿ: ದಿನೇಶ್

ಎಚ್‌ಎಂಪಿವಿ ವೈರಸ್‌ ಬಗ್ಗೆ ಕಾರ್ಯಪಡೆ ರಚಿಸುವಂತೆ ಸಂಸದ ಡಾ.ಕೆ. ಸುಧಾಕರ್‌ ಸಲಹೆ ನೀಡಿರುವ ಬಗ್ಗೆ ಮಾತನಾಡಿದ ದಿನೇಶ್ ಗುಂಡೂರಾವ್‌, ಕೇಂದ್ರದಲ್ಲಿ ನಡ್ಡಾ ಸಾಹೇಬ್ರು (ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ) ಇದಾರೆ. ಅಲ್ಲಿ ಅವರ ಜೊತೆ ಮಾತನಾಡಲು ಹೇಳಿ. ಅವರು ಏನು ಹೇಳುತ್ತಾರೋ ಅದನ್ನು ನಾವು ಮಾತನಾಡುತ್ತೇವೆ ಎಂದು ಹೇಳಿದರು.

PREV

Recommended Stories

ಗ್ರಾಪಂ ವ್ಯಾಪ್ತಿ ಎಲ್ಲಾ ಆಸ್ತಿ ತೆರಿಗೆಗೆ ನಿಯಮ ಪ್ರಕಟ
ತರಬೇತಿ ನೀಡಿದಾಕ್ಷಣ ಯುವನಿಧಿ ನಿಲ್ಲಲ್ಲ : ಸಿಎಂ