ಅತ್ಯಂತ ಹಿಂದುಳಿದ ಮೊಗವೀರರನ್ನು ಎಸ್ಸಿಗೆ ಸೇರಿಸಲು ಶ್ರಮಿಸುವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

Published : Jan 06, 2025, 12:17 PM IST
Siddaramaiah

ಸಾರಾಂಶ

ಬಹುತೇಕ ಮೀನುಗಾರಿಕೆಯನ್ನೇ ನಂಬಿರುವ ಅತ್ಯಂತ ಹಿಂದುಳಿದ ಮೊಗವೀರ ಸಮುದಾಯವನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸುವಂತೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರು : ಬಹುತೇಕ ಮೀನುಗಾರಿಕೆಯನ್ನೇ ನಂಬಿರುವ ಅತ್ಯಂತ ಹಿಂದುಳಿದ ಮೊಗವೀರ ಸಮುದಾಯವನ್ನು ಪರಿಶಿಷ್ಟ ಜಾತಿ ಎಂದು ಪರಿಗಣಿಸುವಂತೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಭಾನುವಾರ ಮೊಗವೀರ ಸಂಘದಿಂದ ನಗರದ ಅರಮನೆ ಮೈದಾನದಲ್ಲಿ ಮೊಗವೀರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ನಾನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಒಟ್ಟು ಮೂರು ಬಾರಿ ಮೊಗವೀರರನ್ನು ಎಸ್ಸಿಗೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ. 1998ರಲ್ಲೇ ಮೊಗವೀರರನ್ನು ಎಸ್ಸಿ ಕೆಟಗೆರಿಗೆ ಸೇರಿಸಲು ಮೊದಲ ಬಾರಿ ಶಿಫಾರಸು ಮಾಡಲಾಗಿತ್ತು. ಕುಲಶಾಸ್ತ್ರೀಯ ಅಧ್ಯಯನವನ್ನೂ ಮಾಡಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಈ ಶಿಫಾರಸನ್ನು ವಾಪಸ್ ಕಳುಹಿಸಿ ಎಸ್ಸಿಗೆ ಸೇರಿಸಲಾಗದು ಎಂದು ಉತ್ತರಿಸಿದೆ. ಈಗ ಮತ್ತೊಮ್ಮೆ ಶಿಫಾರಸು ಕಳುಹಿಸುತ್ತೇವೆ ಎಂದರು.

ನಾನು ಮತ್ತು ನಮ್ಮ ಸರ್ಕಾರ ಮೊಗವೀರ ಸಮುದಾಯದ ಜೊತೆ ಎಂದೆಂದಿಗೂ ಇರುತ್ತದೆ. ನ್ಯಾಯಯುತ ಬೇಡಿಕೆ ಈಡೇರಿಸುವ ಕೆಲಸ ಮಾಡುತ್ತೇವೆ. ನ್ಯಾಯಯುತ ಬೇಡಿಕೆ ಪರಿಶೀಲಿಸಿ ಬಜೆಟ್‌ನಲ್ಲಿ ತರಲು ಪ್ರಯತ್ನಿಸುತ್ತೇನೆ. ಮೊಗವೀರರಿಗೆ ಮೀನುಗಾರಿಕೆ ಕುಲಕಸುಬು ಆಗಿರಬಹುದು. ಅದರ ಜೊತೆಗೆ ಶಿಕ್ಷಣ ಪಡೆಯುವ ಮೂಲಕ ಎಂಜಿನಿಯರ್, ವೈದ್ಯರು, ಉದ್ಯಮಿ, ವಿಜ್ಞಾನಿ ಸೇರಿ ಬೇರೆ ಬೇರೆ ಉನ್ನತ ಹುದ್ದೆ ಅಲಂಕರಿಸಲು ಪ್ರಯತ್ನಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಹಿಂದುಳಿದ ಸಮುದಾಯದವರು ಸಾಮಾಜಿಕ ಹಕ್ಕುಗಳಿಗಾಗಿ ಹೋರಾಟ ಮಾಡಬೇಕು. ಕೀಳರಿಮೆ, ಗುಲಾಮಗಿರಿ ಮನಸ್ಥಿತಿಯನ್ನು ಮನಸ್ಸಿನಿಂದ ಕಿತ್ತು ಹಾಕಬೇಕು. ವಿದ್ಯಾವಂತರಾಗಿ ಸಮಾಜದಲ್ಲಿ ಮೇಲಕ್ಕೆ ಬರಲು ಪ್ರಯತ್ನಿಸಬೇಕು. ಹಿಂದುಳಿದವರ ಆರ್ಥಿಕ ಸ್ವಾವಲಂಬನೆಗಾಗಿಯೇ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಿಂದ ಈಗ ಎಲ್ಲರಿಗೂ ಅನುಕೂಲ ಆಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶಾಸಕ ಯಶ್ಪಾಲ್‌ ಸುವರ್ಣ ಮಾತನಾಡಿ, ಮೀನುಗಾರರನ್ನು ಸರ್ಕಾರ ರೈತರೆಂದು ಪರಿಗಣಿಸಬೇಕು. ರೈತರಿಗೆ ನೀಡುವ ಸೌಲಭ್ಯಗಳನ್ನು ಮೀನುಗಾರರಿಗೂ ವಿಸ್ತರಿಸಬೇಕು. ಕೇಂದ್ರ ಸರ್ಕಾರ ಮೀನುಗಾರಿಕೆಯ ಉತ್ತೇಜನಕ್ಕೆ ತಂದಿರುವ ಯೋಜನೆಗಳಿಗೆ ರಾಜ್ಯದಿಂದಲೂ ಪಾಲು ಒದಗಿಸಬೇಕು ಎಂದು ಹೇಳಿದರು.

ಮೊಗವೀರ ಸಮುದಾಯದ ಮುಖಂಡರಾದ ಡಾ.ಜಿ.ಶಂಕರ್ ಮಾತನಾಡಿ, ಬಡ ಮೊಗವೀರ ಸಮುದಾಯದವರು ಜೀವನಾಧಾರಕ್ಕೆ ನಂಬಿಕೊಂಡಿರುವ ಮೀನುಗಾರಿಕೆಯ ಹಲವು ಸಮಸ್ಯೆ ಪರಿಹರಿಸಬೇಕು. ಮೊಗವೀರ ಸಮುದಾಯ ಭವನಕ್ಕೆ 5 ಕೋಟಿ ರು. ಅನುದಾನ ನೀಡಬೇಕು. ಸಮಗ್ರ ಮೀನುಗಾರಿಕಾ ನೀತಿ, ಮೀನುಗಾರರಿಗೆ ವಿಮೆ ನೀಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಚಿವ ಬೈರತಿ ಸುರೇಶ್‌, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿ ಇನ್ನಿತರರು ಉಪಸ್ಥಿತರಿದ್ದರು.

PREV

Recommended Stories

ರೈತರ ಆದಾಯ ವೃದ್ಧಿಗೆ ಹೈನುಗಾರಿಕೆ ಸಹಕಾರಿ
ಏಕರೂಪೀಕರಣದ ಹೇರಿಕೆಯಿಂದ ಬಹುತ್ವದ ಆಶಯಗಳಿಗೆ ಧಕ್ಕೆ