40 ವರ್ಷಗಳವರೆಗೆ ಕುಡಿಯುವ ನೀರು ಫೂರೈಕೆಯಲ್ಲಿ ಸಮಸ್ಯೆ ಇಲ್ಲ : ಡಿಕೆ ಶಿವಕುಮಾರ್

Published : May 13, 2025, 07:57 AM IST
DK Shivakumar

ಸಾರಾಂಶ

ನಗರದ ನಾಗರಿಕರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಸಂಚಾರಿ ಕಾವೇರಿ ಹಾಗೂ ಸರಳ ಕಾವೇರಿ ಯೋಜನೆ ಜಾರಿಗೊಳಿಸಲಾಗಿದೆ.

ಬೆಂಗಳೂರು : ನಗರದ ನಾಗರಿಕರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಸಂಚಾರಿ ಕಾವೇರಿ ಹಾಗೂ ಸರಳ ಕಾವೇರಿ ಯೋಜನೆ ಜಾರಿಗೊಳಿಸಲಾಗಿದೆ. ಅದರ ಜತೆಗೆ ಇದೀಗ ಪುಲಕೇಶಿನಗರದಲ್ಲಿ ಜಲಾಗಾರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವ ಮೂಲಕ 2.50 ಲಕ್ಷ ಜನರಿಗೆ ನೀರು ಸರಬರಾಜು ಮಾಡಲು ಉದ್ದೇಶಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಸಗಾಯಪುರ ವಾರ್ಡ್‌ನ ಪಿಳ್ಳಣ್ಣ ಗಾರ್ಡನ್‌ನಲ್ಲಿ ಬೆಂಗಳೂರು ಜಲಮಂಡಳಿ 27.45 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಿರುವ 4 ಎಂಎಲ್‌ಡಿ ಸಾಮರ್ಥ್ಯದ ಜಲಾಗಾರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಪುಲಕೇಶಿನಗರದ 30 ಸಾವಿರ ಮನೆಗಳ 2.50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಉದ್ದೇಶದೊಂದಿಗೆ ನೂತನ ಜಲಾಗಾರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈಗಾಗಲೇ ಪುಲಕೇಶಿನಗರ ಕ್ಷೇತ್ರಕ್ಕೆ 1,055 ಕೋಟಿ ರು. ಮೊತ್ತದ ವಿವಿಧ ಕಾಮಗಾರಿಗಳನ್ನು ಮಂಜೂರು ಮಾಡಲಾಗಿದೆ. ಅದರಲ್ಲಿ ಜಲಾಗಾರ ನಿರ್ಮಾಣವೂ ಸೇರಿದೆ. ಅದರ ಜತೆಗೆ ಕ್ಷೇತ್ರದಲ್ಲಿ ನೂತನ ಶಾಲೆ ನಿರ್ಮಾಣದ ಉದ್ದೇಶವಿದ್ದು, ಅದಕ್ಕೆ ಬೇಕಿರುವ ಜಾಗ ಗುರುತಿಸಬೇಕಿದೆ. ಬಿಬಿಎಂಪಿಯಿಂದ ಆಸ್ಪತ್ರೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ. ಅದರೊಂದಿಗೆ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗಾಗಿ 130 ಕೋಟಿ ರು., ಮೇಲ್ಸೇತುವೆ ನಿರ್ಮಾಣಕ್ಕೆ 650 ಕೋಟಿ ರು., ವಾರ್ಡ್‌ಗಳ ಅಭಿವೃದ್ಧಿಗೆ 320 ಕೋಟಿ ರು. ಒದಗಿಸಲಾಗುತ್ತಿದೆ ಎಂದರು.

ನಗರದಲ್ಲಿ ಕಾವೇರಿ ನೀರಿನ ಸಂಪರ್ಕ ಪಡೆಯಲು ಸಣ್ಣ ಮನೆಗಳಿಗೆ 1 ಸಾವಿರ ರು. ಶುಲ್ಕ ನಿಗದಿ ಮಾಡಲಾಗಿದೆ. ಟ್ಯಾಂಕರ್‌ ಮಾಫಿಯಾ ತಡೆಯಲು 650 ರು.ಗೆ ಒಂದು ಟ್ಯಾಂಕರ್‌ ಶುದ್ಧ ಕುಡಿಯುವ ನೀರು ಪೂರೈಸಲು ಸಂಚಾರಿ ಕಾವೇರಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ನಾವು ಅಧಿಕಾರಕ್ಕೆ ಬಂದ ನಂತರ ಕಾವೇರಿ 5ನೇ ಹಂತದ ಯೋಜನೆ ಪೂರ್ಣಗೊಂಡು, ನೀರು ಪೂರೈಸಲಾಗುತ್ತಿದೆ. ಅದರ ಮೂಲಕ ನಗರಕ್ಕೆ ಹೆಚ್ಚುವರಿಯಾಗಿ 6 ಟಿಎಂಸಿ ನೀರು ಪೂರೈಸಲಾಗುತ್ತಿದೆ. ಅದರಿಂದ ಮುಂದಿನ 30-40 ವರ್ಷಗಳವರೆಗೆ ಕುಡಿಯುವ ನೀರು ಫೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದರು.

ಸ್ವಚ್ಛ ಬೆಂಗಳೂರಿಗೆ ಸಹಾಯವಾಣಿ

ಬೆಂಗಳೂರಿನ ಚಿತ್ರಣ ಬದಲಿಸುವ ಉದ್ದೇಶದೊಂದಿಗೆ ಗ್ರೇಟರ್ ಬೆಂಗಳೂರು ಅನುಷ್ಠಾನಗೊಳಿಸಲಾಗುತ್ತಿದೆ. ಇನ್ನು ಎರಡ್ಮೂರು ದಿನಗಳಲ್ಲಿ ಅದಕ್ಕೆ ಚಾಲನೆ ನೀಡಲಾಗುವುದು. ಅದಾದ ನಂತರ ಬೆಂಗಳೂರಿನಲ್ಲಿ ಶುದ್ಧ ವಾತಾವರಣ ನಿರ್ಮಾಣಕ್ಕೆ ಸ್ವಚ್ಛತಾ ಅಭಿಯಾನ ಆರಂಭಿಸಲಾಗುವುದು. ಅದಕ್ಕಾಗಿ ಸಹಾಯವಾಣಿ ಆರಂಭಿಸಿ, ಬೆಂಗಳೂರಿನಲ್ಲಿ ಎಲ್ಲೇ ಕಸ ಶೇಖರಣೆಯಾದರೂ ಜನರು ಅದಕ್ಕೆ ಕರೆ ಮಾಡಿ ದೂರು ನೀಡಬಹುದು. ಅದನ್ನಾಧರಿಸಿ ಬಿಬಿಎಂಪಿ ತ್ಯಾಜ್ಯವನ್ನು ತೆರವು ಮಾಡಿ ಸ್ವಚ್ಛ ಬೆಂಗಳೂರು ರೂಪಿಸಲಿದೆ. ಅದರ ಜತೆಗೆ ತ್ಯಾಜ್ಯ ನಿರ್ವಹಣೆ ಗುತ್ತಿಗೆ ನೀಡುವ ಸಂಬಂಧ ಕಾನೂನು ತೊಡಕು ನಿವಾರಣೆಯಾಗಿದ್ದು, ಶೀಘ್ರದಲ್ಲಿ ಗುತ್ತಿಗೆದಾರರನ್ನು ನೇಮಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಶಾಸಕರಾದ ಎ.ಸಿ. ಶ್ರೀನಿವಾಸ್‌, ರಿಜ್ವಾನ್‌ ಅರ್ಷದ್‌, ವಿಧಾನಪರಿಷತ್‌ ಸದಸ್ಯ ನಾಗರಾಜ ಯಾದವ್‌, ಜಲಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್‌ ಮನೋಹರ್‌, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್‌ರಾವ್‌, ಡಾ. ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಪತ್‌ರಾಜ್‌ ಇತರರಿದ್ದರು.

ನೆಲಮಟ್ಟದ ಜಲಸಂಗ್ರಹಾಗಾರದ ವಿವರ

4 ಎಂಎಲ್‌ಡಿ ಸಾಮರ್ಥ್ಯದ ನೆಲಮಟ್ಟದ ಜಲಾಗಾರ ನಿರ್ಮಾಣ ಮತ್ತು 450 ಮಿಮೀ ಸಾಮರ್ಥ್ಯದ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿಗೆ ಚಾಲನೆ. ಜಲಾಗಾರವು 2 ಅಂತಸ್ತನ್ನು ಹೊಂದಿರಲಿದ್ದು, ಮೊದಲ ಅಂತಸ್ತಿನಲ್ಲಿ 2.48 ಎಂಎಲ್‌ಡಿ, 2ನೇ ಅಂತಸ್ತಿನಲ್ಲಿ 1.52 ಎಂಎಲ್‌ಡಿ ನೀರು ಶೇಖರಣಾ ಸಾಮರ್ಥ್ಯ ಇರಲಿದೆ. ಜಲಾಗಾರದಿಂದ ಅಂದಾಜು 26,479 ಮನೆಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ.

ಶಿವಕುಮಾರ್‌ ಸಿಎಂ ಆಗಲಿ:

ಕಾರ್ಯಕ್ರಮದಲ್ಲಿ ಶಾಸಕ ಎ.ಸಿ. ಶ್ರೀನಿವಾಸ್‌, ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನುದ್ದೇಶಿಸಿದ ಮಾತನಾಡಿದ ಶ್ರೀನಿವಾಸ್‌, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕ್ಷೇತ್ರಕ್ಕಾಗಮಿಸಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಅವರು ಸದಾ ಕ್ಷೇತ್ರದ ಅಭಿವೃದ್ಧಿಗೆ ನೆರವಾಗುತ್ತಿದ್ದು, ಮುಂದೆ ಅವರು ಮುಖ್ಯಮಂತ್ರಿ ಹುದ್ದೆಗೇರಬೇಕು ಎಂದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕೋಗಿಲು ಅಕ್ರಮ ಮನೆಗಳ ತೆರವು ಎನ್‌ಐಎ ತನಿಖೆಗೆ ನೀಡಲು ಆಗ್ರಹ
ಒಳ್ಳೆ ರಿಸಲ್ಟ್‌ಗಾಗಿ ಶಿಕ್ಷಕರಿಂದ್ಲೇ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಲೀಕ್