ಪತ್ನಿಗೆ ಸೈಟ್‌ಗಾಗಿ ಶಿಫಾರಸ್ಸು ಮಾಡಿಲ್ಲ : ಲೋಕಾ ಪೊಲೀಸರ ಮುಂದೆ ಸಿಎಂ ನೀಡಿದ್ದ ಹೇಳಿಕೆ ಬಹಿರಂಗ

Published : Feb 25, 2025, 10:27 AM IST
CM Siddaramaiah Muda Site

ಸಾರಾಂಶ

‘ನನಗೆ ಯಾವುದೇ ಮಾಹಿತಿ ಇಲ್ಲ... ನನ್ನ ಬಾಮೈದ (ಮಲ್ಲಿಕಾರ್ಜುನಸ್ವಾಮಿ) ಜತೆ ಯಾವುದೇ ಹಣಕಾಸು ವ್ಯವಹಾರ ಇಲ್ಲ... ನನ್ನ ಪತ್ನಿಗೆ ನಿವೇಶನ ನೀಡುವಂತೆ ಯಾವುದೇ ಅಧಿಕಾರಿಗಳಿಗೂ ಶಿಫಾರಸ್ಸು ಮಾಡಿಲ್ಲ... ಜಮೀನಿಗೆ ಭೇಟಿ ನೀಡಿಲ್ಲ...!’

  ಬೆಂಗಳೂರು : ‘ನನಗೆ ಯಾವುದೇ ಮಾಹಿತಿ ಇಲ್ಲ... ನನ್ನ ಬಾಮೈದ (ಮಲ್ಲಿಕಾರ್ಜುನಸ್ವಾಮಿ) ಜತೆ ಯಾವುದೇ ಹಣಕಾಸು ವ್ಯವಹಾರ ಇಲ್ಲ... ನನ್ನ ಪತ್ನಿಗೆ ನಿವೇಶನ ನೀಡುವಂತೆ ಯಾವುದೇ ಅಧಿಕಾರಿಗಳಿಗೂ ಶಿಫಾರಸ್ಸು ಮಾಡಿಲ್ಲ... ಜಮೀನಿಗೆ ಭೇಟಿ ನೀಡಿಲ್ಲ...!’

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ವಿಚಾರದಲ್ಲಿ ಮೈಸೂರು ಲೋಕಾಯುಕ್ತ ಪೊಲೀಸರ ಕೇಳಿದ 30 ಪ್ರಶ್ನೆಗಳ ಪೈಕಿ ಬಹುತೇಕ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗಳು ಇದಾಗಿವೆ.

ಲೋಕಾಯುಕ್ತ ಪೊಲೀಸರ ಮುಂದೆ ನೀಡಿರುವ ಹೇಳಿಕೆಯ ಪ್ರತಿ ಲಭ್ಯವಾಗಿದ್ದು, ಮುಡಾ ಹಗರಣಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂಬ ಉತ್ತರವನ್ನು ನೀಡಿರುವುದು ಗೊತ್ತಾಗಿದೆ. ಮಲ್ಲಿಕಾರ್ಜುನ ಸ್ವಾಮಿ ಜಮೀನು ಖರೀದಿಸಿರುವ ವಿಚಾರ ನನಗೆ ಗೊತ್ತಿರಲಿಲ್ಲ. 2013ನೇ ಸಾಲಿನ ಮಧ್ಯಭಾಗದಲ್ಲಿ ನನ್ನ ಪತ್ನಿ (ಪಾರ್ವತಿ) ದಾನವಾಗಿ ನೀಡಿರುವ ಬಗ್ಗೆ ನನಗೆ ತಿಳಿಸಿದರು. ಜಮೀನು ಖರೀದಿಸುವ ವೇಳೆ ಹಣಕಾಸಿನ ಸಹಾಯ ಮಾಡಿಲ್ಲ. ಅಲ್ಲದೇ, ಅವರು ಸಹ ಕೇಳಿರಲಿಲ್ಲ. ಜಮೀನಿನ ಮಾಲೀಕತ್ವ ಯಾರಿಂದ ಯಾರ ಹೆಸರಿಗೆ ಬದಲಾಯಿತು ಎಂಬ ವಿಚಾರ ಸಹ ನನಗೆ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಜಮೀನಿನ ಮೂಲ ಮಾಲೀಕ ದೇವರಾಜು ಪರಿಚಯ ಇಲ್ಲ. 1998ರಲ್ಲಿ ತಮ್ಮ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವ ಸಂಬಂಧ ಅರ್ಜಿ ನೀಡಿರುವ ವಿಚಾರದ ಬಗ್ಗೆಯೂ ಮಾಹಿತಿ ಇಲ್ಲ. 2014ನೇ ಸಾಲಿನಲ್ಲಿ ಪತ್ನಿಯು ಜಮೀನನ್ನು ಮುಡಾ ಅಭಿವೃದ್ಧಿ ಪಡಿಸಿರುವ ಮಾಹಿತಿ ನೀಡಿದರು. ಆಗ ಮುಖ್ಯಮಂತ್ರಿಯಾಗಿದ್ದು, ಯಾವುದೇ ಸೂಚನೆಗಳನ್ನು ಪತ್ನಿಗೆ ನೀಡಿರಲಿಲ್ಲ. ಪತ್ನಿಗೆ ಲಭ್ಯವಾದ ಜಮೀನಿಗೆ ಯಾವಾಗಲೂ ಭೇಟಿ ನೀಡಿಲ್ಲ. ಜಮೀನಿಗೆ ಪರಿಹಾರವಾಗಿ ಬದಲಿ ನಿವೇಶನ ನೀಡುವ ಕುರಿತು ಅರ್ಜಿ ಸಲ್ಲಿಕೆ ಬಗ್ಗೆ ನನಗೆ ಗೊತ್ತಿಲ್ಲ. ಪ್ರಕರಣ ಬೆಳಕಿಗೆ ಬರುವವರೆಗೆ ಬಹಳಷ್ಟು ವಿಷಯಗಳು ನನಗೆ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.

ಮುಡಾದಿಂದ ಬದಲಿ ಜಮೀನು ನೀಡುವ ಸಂಬಂಧ ನಿರ್ಣಯ ಕೈಗೊಂಡಿರುವ ವಿಚಾರವನ್ನು ಆಗಿನ ಅಧ್ಯಕ್ಷರಾಗಿದ್ದ ದೃವಕುಮಾರ್ ತಿಳಿಸಿದ್ದರು. ಆಗ ಮುಖ್ಯಮಂತ್ರಿಯಾಗಿದ್ದರಿಂದ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. 2020ನೇ ಸಾಲಿನಲ್ಲಿ ಪ್ರತಿಪಕ್ಷ ನಾಯಕನಾಗಿದ್ದು, ಆ ವೇಳೆ ನನ್ನ ಮಗ ಯತೀಂದ್ರ ಸಿದ್ದರಾಮಯ್ಯ ಶಾಸಕರಾಗಿದ್ದರು. ಹೀಗಾಗಿ ಸಹಜವಾಗಿ ಸದಸ್ಯರಾಗಿದ್ದರು. ಈ ನಡುವೆ, 14 ನಿವೇಶನಗಳನ್ನು ಮುಡಾದಿಂದ ಪತ್ನಿಗೆ ನೋಂದಣಿಯಾದ ಬಳಿಕ ಈ ವಿಷಯ ಪತ್ನಿಯಿಂದಲೇ ಗೊತ್ತಾಯಿತು. ನಿವೇಶನಗಳನ್ನು ಯಾವ ಬಡಾವಣೆಯಲ್ಲಿ ನೀಡಲಾಗಿತ್ತು ಎಂಬುದು ಆ ಸಂದರ್ಭದಲ್ಲಿ ನನಗೆ ತಿಳಿದಿರಲಿಲ್ಲ. ನಂತರ ಈ ವಿಚಾರ ತಿಳಿದುಬಂದಿದ್ದು, 14 ನಿವೇಶನಗಳಿಗೆ ಎಂದಿಗೂ ಭೇಟಿ ನೀಡಿಲ್ಲ. ಮುಡಾದ ಯಾವುದೇ ಅಧಿಕಾರಿಗಳು ಸಹ ನನ್ನನ್ನುಸಂಪರ್ಕಿಸಿಲ್ಲ ಎಂದಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ಜಮೀನನ್ನು ಉಪಯೋಗಿಸಿದ ಪ್ರಕರಣದಲ್ಲಿ 50:50ರ ಅನುಪಾತದಲ್ಲಿ ನಿವೇಶನ ನೀಡುವ ಬಗ್ಗೆ ಕೈಗೊಂಡ ನಿರ್ಣಯವನ್ನು ಸರ್ಕಾರ ರದ್ದು ಮಾಡಿರುವ ನಡಾವಳಿಯನ್ನು ನಗರಾಭಿವೃದ್ಧಿ ಇಲಾಖೆಯವರು ಮಾಡಿರಬಹುದು. ಆದರೆ, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಇನ್ನು, ಪರಿಹಾರವಾಗಿ ನೀಡಿದ್ದ 14 ನಿವೇಶನಗಳನ್ನು ಹಿಂತಿರುಗಿಸುವ ವಿಚಾರ ನನ್ನ ಪತ್ನಿಯೇ ಕೈಗೊಂಡ ನಿರ್ಣಯವಾಗಿದೆ ಎಂದು ಹೇಳಿಕೆ ನೀಡಲಾಗಿದೆ.

ಮುಡಾಕ್ಕೆ ನೀಡಿರುವ ಅರ್ಜಿಯಲ್ಲಿ ವೈಟ್ನರ್‌ ಹಾಕಿರುವ ವಿಚಾರ ಗೊತ್ತಿಲ್ಲ. 14 ನಿವೇಶನಗಳನ್ನು ನೋಂದಣಿ ಮಾಡಿಸಿಕೊಳ್ಳುವ ಸಂಬಂಧ ಖಾಸಗಿ ಹಾಜರಾತಿ ಪಡೆದು ಸರ್ಕಾರ ಅತಿಥಿ ಗೃಹ ಪಡೆದಿರುವ ಬಗ್ಗೆಯೂ ಯಾವುದೇ ಮಾಹಿತಿ ಇರಲಿಲ್ಲ ಎಂದಿದ್ದಾರೆ.

ಮುಡಾ ಕೇಸ್‌ನಲ್ಲಿ ಸಂಸದ ನಾಯಕ್‌ ಕರ್ತವ್ಯ ಲೋಪ 

ಮುಡಾ ಹಗರಣಕ್ಕೆ ಸಂಬಂಧಿಸಿ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ಮತ್ತು ಹಾಲಿ ರಾಯಚೂರಿನ ಸಂಸದ ಕುಮಾರ್‌ ನಾಯಕ್‌ ಸೇರಿ ನಾಲ್ವರು ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದರು ಎಂಬ ಮಾಹಿತಿ ಮೈಸೂರು ಲೋಕಾಯುಕ್ತ ಪೊಲೀಸರ ವಿಚಾರಣಾ ವರದಿಯಲ್ಲಿ ಬೆಳಕಿಗೆ ಬಂದಿದೆ.

ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಕುಮಾರ್‌ ನಾಯಕ್‌, ತಹಶೀಲ್ದಾರ್‌ ಆಗಿದ್ದ ಮಾಳಿಗೆ ಶಂಕರ್‌, ಕಂದಾಯ ನಿರೀಕ್ಷಕ ಸಿದ್ದಪ್ಪಾಜಿ, ಭೂ ಮಾಪಕ ಶಂಕರಪ್ಪ ಅವರು ಕತ್ಯವ್ಯಲೋಪ ಎಸಗಿದ್ದಾರೆ. ಮಾಳಿಗೆ ಶಂಕರ್‌ ಮತ್ತು ಸಿದ್ದಪ್ಪಾಜಿ ಸೇವೆಯಿಂದ ನಿವೃತ್ತರಾಗಿ 4 ವರ್ಷಗಳಿಗೂ ಹೆಚ್ಚು ಕಾಲವಾಗಿದೆ. ಇವರು ನಿವೃತ್ತಿಯಾಗಿರುವುದರಿಂದ ಶಿಸ್ತುಕ್ರಮ ಕೈಗೊಳ್ಳುವುದನ್ನು ಕೈಬಿಡಬಹುದು. ಕುಮಾರ್‌ ನಾಯಕ್‌ ಐಎಎಸ್‌ ಅಧಿಕಾರಿಯಾಗಿದ್ದು, ಸೇವೆಯಿಂದ ನಿವೃತ್ತಿಯಾಗಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರ ಮಟ್ಟದಲ್ಲಿ ತೀರ್ಮಾನಿಸಬಹುದಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶಂಕರಪ್ಪ ಅವರು ಮೈಸೂರಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಸರ್ಕಾರ ಮಟ್ಟದಲ್ಲಿ ತೀರ್ಮಾನಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಬದಲಿ ಜಾಗಕ್ಕೆ ಮಾತ್ರ ಮನವಿ: ಸಿಎಂ ಪತ್ನಿ 

ಮುಡಾದಿಂದ ನಿವೇಶನ ನಿರ್ಮಿಸಿದ ಬಳಿಕ ನನ್ನ ಜಮೀನಿಗೆ ಬದಲಿ ಜಮೀನು ನೀಡುವಂತೆ ಮನವಿ ಮಾಡಲಾಗಿತ್ತೇ ಹೊರತು ನಿವೇಶನ ನೀಡುವಂತೆ ಅರ್ಜಿ ಸಲ್ಲಿಸಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹೇಳಿದ್ದಾರೆ.

ಮೈಸೂರು ಲೋಕಾಯುಕ್ತ ಪೊಲೀಸರ ವಿಚಾರಣೆ ವೇಳೆ ಅವರು, 2017ರಲ್ಲಿ ಮತ್ತು 2020ರಲ್ಲೂ ಒಮ್ಮೆ ಅರ್ಜಿ ಸಲ್ಲಿಸಲಾಗಿದ್ದು, ಆಗಲೂ ಬದಲಿ ಜಾಗ ನೀಡುವಂತೆ ಕೇಳಿದ್ದು, ನಿವೇಶನಗಳನ್ನು ಕೇಳಿರಲಿಲ್ಲ. ಇನ್ನು, ಮುಡಾಕ್ಕೆ ನೀಡಿರುವ ಅರ್ಜಿಗೆ ವೈಟ್ನರ್‌ ಹಾಕಿರುವ ವಿಚಾರದ ಬಗ್ಗೆ ಅರ್ಜಿ ನೀಡುವಾಗ ಗಮನಿಸಿರಲಿಲ್ಲ. ಅರ್ಜಿಯಲ್ಲಿ ಕೈ ಬರಹದಿಂದ ಬರೆದಿರುವ ಬಗ್ಗೆ ಯಾರು ಬರೆದಿರಬಹುದು ಎಂಬುದು ನೆನಪಿಲ್ಲ ಎಂದಿದ್ದಾರೆ.

ವಿವಾದಿತ ಜಮೀನನ್ನು ನನ್ನ ಸಹೋದರ ಮಲ್ಲಿಕಾರ್ಜುನ ಸ್ವಾಮಿ ದಾನವಾಗಿ ನೀಡಿದ್ದು, ನನ್ನ ಪತಿ (ಸಿದ್ದರಾಮಯ್ಯ) ಯಾವುದೇ ರೀತಿಯಲ್ಲೂ ಹಣಕಾಸು ಸಹಾಯ ಮಾಡಿಲ್ಲ. ಅಲ್ಲದೆ, ಇದರಲ್ಲಿ ನನ್ನ ಪತಿಯದ್ದಾಗಲಿ, ಮಗನದ್ದಾಗಲಿ ಪಾತ್ರ ಇಲ್ಲ ಎಂದು ತಿಳಿಸಿದ್ದಾರೆ.

2010ರಲ್ಲಿ ಸಹೋದರ ನನಗೆ ದಾನ ನೀಡಿದ್ದು, 2013ರಲ್ಲಿ ಮೊದಲ ಬಾರಿಗೆ ಜಮೀನಿಗೆ ಭೇಟಿ ನೀಡಿದಾಗ ಆ ಜಮೀನಿನಲ್ಲಿ ಹುಲ್ಲಷ್ಟೇ ಬೆಳೆದಿತ್ತು. 2014ರಲ್ಲಿ ಮುಡಾ ನಿವೇಶನಗಳನ್ನು ನಿರ್ಮಿಸಿರುವುದು ನನಗೆ ತಿಳಿದುಬಂತು. ಜಮೀನನ್ನು ಮುಡಾದವರು ಭೂಸ್ವಾಧೀನ ಪಡಿಸಿಕೊಂಡ ನಂತರ ಜಮೀನನ್ನು ಭೂ ಸ್ವಾಧೀನದಿಂದ ಕೈಬಿಟ್ಟಿರುವುದು ನನಗೆ ಗೊತ್ತಿರಲಿಲ್ಲ. ಜಮೀನಿನಲ್ಲಿ ಯಾವುದೇ ಬೆಳೆಗಳನ್ನು ಬೆಳೆದಿಲ್ಲ. ದಾನ ಪತ್ರದಲ್ಲಿ ಕೃಷಿಯೇತರ ಭೂ ಪರಿವರ್ತನೆಯಾದ ಬಗ್ಗೆ ಎಲ್ಲೂ ನಮೂದಿಸಿಲ್ಲ ಎಂದು ಹೇಳಿದ್ದಾರೆ.

ಜಮೀನಿನ ಬದಲಾಗಿ ಪರಿಹಾರಾತ್ಮಕವಾಗಿ ಜಮೀನನ್ನು ಕೋರಿ ಅರ್ಜಿ ನೀಡಿದ ನಂತರ ನಾನು ಮುಡಾದ ಯಾವುದೇ ಅಧಿಕಾರಿಗಳನ್ನು ಭೇಟಿ ಮಾಡಿಲ್ಲ. ಈ ಸಂಬಂಧ ನಾನು ನನ್ನ ಪತಿಯಿಂದಾಗಲಿ, ಮಗನಿಂದಾಗಲಿ ಯಾವುದೇ ಸಹಾಯ ಪಡೆದುಕೊಂಡಿಲ್ಲ. 2017ರಲ್ಲಿ ನನಗೆ ಬದಲಿಯಾಗಿ ಜಮೀನು ನೀಡುತ್ತಾರೆಂಬ ವಿಷಯ ಸಹೋದರನಿಂದ ತಿಳಿದುಬಂತು. ನನ್ನ ಜಮೀನಿಗೆ 14 ನಿವೇಶನ ಮಂಜೂರು ಮಾಡಿದ್ದಾರೆಂಬ ವಿಷಯ 2021ನೇ ಸಾಲಿನಲ್ಲಿ ಅಣ್ಣನಿಂದ ತಿಳಿಯಿತು. ನಿವೇಶನಗಳ ಪತ್ರ ಮತ್ತು ನೋಂದಾಯಿಸಿಕೊಳ್ಳುವ ನೋಂದಣಿ ಪತ್ರದಲ್ಲಿ ನನ್ನ ಸಹಿಯನ್ನು ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಹಾಕಿದ್ದೇನೆ. ಅತಿಥಿಗೃಹ ಉಪಯೋಗಿಸಲು ಅನುಮತಿ ಪಡೆದುಕೊಂಡಿರುತ್ತೇವೆ. ಯಾರಿಂದ ಅನುಮತಿ ಪಡೆದುಕೊಳ್ಳಲಾಯಿತು ಎಂಬುದು ನೆನಪಿಲ್ಲ ಎಂದಿದ್ದಾರೆ.

PREV

Recommended Stories

ಸಹಕಾರ ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಿ
ರೈತ ಕುಟುಂಬಗಳ ಆರ್ಥಿಕ ಸುಧಾರಣೆಗೆ ಕ್ರಮ: ಶರತ್‌