ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡು ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ 11 ಸಾವಿರ ಕಟ್ಟಡಗಳಿಗೆ ‘ಸ್ವಾಧೀನಾನುಭವ ಪ್ರಮಾಣ ಪತ್ರ’ ವಿತರಣೆಗೆ ಸಾಧ್ಯವೇ ಎಂಬುದರ ಬಗ್ಗೆ ಬಿಬಿಎಂಪಿ ಪರಿಶೀಲನೆ ಆರಂಭಿಸಿದ್ದು, ಬಹುತೇಕ ಕಟ್ಟಡಗಳಿಗೆ ನಕ್ಷೆ ಮಂಜೂರಾತಿಯೇ ಇಲ್ಲ, ನಕ್ಷೆ ಮಂಜೂರಾತಿ ಇರುವ ಕಟ್ಟಡಗಳನ್ನು ಸಾಕಷ್ಟು ಉಲ್ಲಂಘಿಸಿಯೇ ನಿರ್ಮಾಣ ಮಾಡಿರುವುದು ಕಂಡು ಬಂದಿದೆ.
ಕಟ್ಟಡ ನಕ್ಷೆ ಮಂಜೂರಾತಿ, ನಿರ್ಮಾಣ ಕಾರ್ಯಾರಂಭ ಪತ್ರ (ಸಿಸಿ) ಹಾಗೂ ಸ್ವಾಧೀನಾನುಭವ ಪ್ರಮಾಣ ಪತ್ರ (ಓಸಿ) ಇಲ್ಲದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ನೀಡದಂತೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಏಪ್ರಿಲ್ 4 ರಿಂದ ವಿದ್ಯುತ್ ಸಂಪರ್ಕ ತಡೆ ಹಿಡಿಯಲಾಗಿದೆ. ಆ ಬಳಿಕ ಕಳೆದ ಮೂರು ತಿಂಗಳಲ್ಲಿ ಬೆಂಗಳೂರಿನಲ್ಲಿ ನಿರ್ಮಾಣಗೊಂಡ ಕಟ್ಟಡಗಳಿಗೆ ಸುಮಾರು 66 ಸಾವಿರ ವಿದ್ಯುತ್ ಸಂಪರ್ಕ ನೀಡುವಂತೆ ಅರ್ಜಿ ಸಲ್ಲಿಕೆಯಾಗಿವೆ.
ವಿದ್ಯುತ್ ಸಂಪರ್ಕ ನೀಡದಿರುವುದರಿಂದ ಸಾಕಷ್ಟು ಕಟ್ಟಡ ಮಾಲೀಕರಿಗೆ ತೊಂದರೆ ಉಂಟಾಗುತ್ತಿರುವ ಕಾರಣ ಯಾವೆಲ್ಲಾ ಕಟ್ಟಡಗಳಿಗೆ ಓಸಿ ವಿತರಣೆ ಮಾಡಬಹುದು ಎಂಬುದನ್ನು ಪರಿಶೀಲನೆ ಮಾಡುವಂತೆ ಸರ್ಕಾರ ಬಿಬಿಎಂಪಿಯ ನಗರ ಯೋಜನೆ ವಿಭಾಗದ ಅಧಿಕಾರಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಅಧಿಕಾರಿಗಳು ಪರಿಶೀಲನೆ ಶುರು ಮಾಡಿದ್ದು, ಸಾಕಷ್ಟು ಕಟ್ಟಡಗಳಿಗೆ ಓಸಿ ನೀಡುವುದಕ್ಕೆ ಸಾಧ್ಯವಾಗದ ಸ್ಥಿತಿ ಇದೆ ಎಂದು ಬಿಬಿಎಂಪಿಯ ನಗರ ಯೋಜನಾ ವಿಭಾಗದ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
5 ಸಾವಿರ ಮಾಲೀಕರು ಸಂಪರ್ಕಕ್ಕೆ ಸಿಕ್ಕಿಲ್ಲ
ಒಟ್ಟು 10,813 ಕಟ್ಟಡಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿರುವ ಮಾಲೀಕರನ್ನು ಬಿಬಿಎಂಪಿಯ ಅಧಿಕಾರಿಗಳು ಸಂಪರ್ಕಕ್ಕೆ ಪ್ರಯತ್ನಿಸಿದ್ದು, ಈ ಪೈಕಿ 5,937 ಕಟ್ಟಡ ಮಾಲೀಕರು ಮಾತ್ರ ಬಿಬಿಎಂಪಿ ಸಂಪರ್ಕಕ್ಕೆ ಸಿಕ್ಕಿದ್ದಾರೆ. ಇನ್ನುಳಿದ 5,209 ಮಾಲೀಕರು ಪೋನ್ ಸಂಪರ್ಕಕ್ಕೆ ದೊರೆತಿಲ್ಲ. ಸಂಪರ್ಕಕ್ಕೆ ದೊರೆತ ಮಾಲೀಕರಿಂದ ಕಟ್ಟಡದ ವಿಳಾಸ, ನಿವೇಶನವು ಎ ಖಾತಾ ಅಥವಾ ಬಿ ಖಾತಾ ಎಂಬ ಮಾಹಿತಿ ಪಡೆಯಲಾಗಿದೆ. ಜತೆಗೆ, ನಕ್ಷೆ ಮಂಜೂರಾತಿ ಪಡೆದ ಕಟ್ಟಡ ಎಷ್ಟು?, ಎಷ್ಟು ಓಸಿ ಪಡೆಯಲಾಗಿದೆ, ಎಷ್ಟು ಕಟ್ಟಡಗಳಿಗೆ ಈಗಾಗಲೇ ವಿದ್ಯುತ್ ಸಂಪರ್ಕ ನೀಡಲಾಗಿದೆಯೇ ಎಂಬ ಮಾಹಿತಿ ಸಂಗ್ರಹಿಸಲಾಗಿದೆ.
ಸಂಪರ್ಕಕ್ಕೆ ಸಿಗದ ಅರ್ಜಿದಾರರಿಗೆ ಮೊಬೈಲ್ ಸಂದೇಶ ಹಾಗೂ ತಿಳಿವಳಿಕೆ ಪತ್ರದ ಮೂಲಕ ಹೇಗೆ ಓಸಿ ಪ್ರಮಾಣ ಪತ್ರ ಪಡೆಯಬಹುದು. ಓಸಿ ಪಡೆಯುವ ಬಿಬಿಎಂಪಿಯ ವೆಬ್‌ಸೈಟ್ ವಿಳಾಸ ಹಾಗೂ ಓಸಿ ಪಡೆಯುವುದಕ್ಕೆ ಸಂಪರ್ಕಿಸಬಹುದಾದ ಅಧಿಕಾರಿಯ ಮಾಹಿತಿಯನ್ನೂ ಒದಗಿಸಲಾಗಿದೆ.
770 ಕಟ್ಟಡ ಪರಿಶೀಲನೆ
ಸಂಪರ್ಕಕ್ಕೆ ಸಿಕ್ಕ ಕಟ್ಟಡ ಮಾಲೀಕರ ಪೈಕಿ 1,567 ಕಟ್ಟಡಗಳ ಮಾಲೀಕರು ಎ ಖಾತಾ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಿರುವುದಾಗಿ ತಿಳಿಸಿದ್ದಾರೆ. 1,354 ಬಿ ಖಾತಾ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಎ ಖಾತಾ ನಿವೇಶನಗಳಿಗೆ ಮಾತ್ರ ನಕ್ಷೆ ಮಂಜೂರಾತಿ, ಸಿಸಿ ನೀಡುವುದಕ್ಕೆ ಅವಕಾಶ ಇರುವುದರಿಂದ ಆ ಕಟ್ಟಡಗಳಿಗೆ ಮಾತ್ರ ಭೇಟಿ ನೀಡಿ ಓಸಿ ನೀಡಬಹುದಾ ಎಂಬುದನ್ನು ಪರಿಶೀಲನೆ ನಡೆಸಲಾಗಿದೆ. ಈವರೆಗೆ ಒಟ್ಟು 770 ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಬಹುತೇಕ ಕಟ್ಟಡಗಳು ನಕ್ಷೆ, ಸಿಸಿ ಪಡೆದೇ ಎಲ್ಲಾ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿರುವುದು ಕಂಡು ಬಂದಿದೆ. ಹೀಗಾಗಿ, ಓಸಿ ನೀಡುವುದಕ್ಕೆ ಸಾಧ್ಯವಿಲ್ಲವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
691 ವಿದ್ಯುತ್ ಸಂಪರ್ಕ
ಅರ್ಜಿ ಸಲ್ಲಿಕೆಯಾದ 10,813 ಕಟ್ಟಡಗಳಲ್ಲಿ 54 ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಟ್ಟಡಗಳು ಇರುವುದು ಕಂಡು ಬಂದಿದೆ. 758 ಕಟ್ಟಡಗಳು ನಕ್ಷೆ ಮಂಜೂರಾತಿ ಪಡೆದು ಕಟ್ಟಡ ನಿರ್ಮಾಣ ಮಾಡಿರುವುದು ಗೊತ್ತಾಗಿದೆ. 11 ಕಟ್ಟಡಗಳಿಗೆ ಓಸಿ ಲಭ್ಯವಾಗಿದೆ. ಎಲ್ಲಾ ಸೇರಿದಂತೆ ಒಟ್ಟು 691 ವಿದ್ಯುತ್ ಸಂಪರ್ಕ ಈಗಾಗಲೇ ಬೆಸ್ಕಾಂ ನೀಡಿರುವುದಾಗಿ ಪರಿಶೀಲನೆ ವೇಳೆ ಮಾಹಿತಿ ಲಭ್ಯವಾಗಿದೆ.
ಓಸಿ ಕಡ್ಡಾಯದಿಂದ ವಿದ್ಯುತ್ ಸಂಪರ್ಕಕ್ಕೆ ಬಾಕಿ ಇರುವ ಕಟ್ಟಡಗಳಿಗೆ ಓಸಿ ನೀಡಬಹುದಾ ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ. ಓಸಿ ಪಡೆಯುವುದಕ್ಕೆ ಕಟ್ಟಡ ಮಾಲೀಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ಜತೆಗೆ, ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆ ಪರಿಹಾರಕ್ಕೆ ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕೆ ಬೇಕಾದ ಕಾಯ್ದೆ, ಕಾನೂನು ರೂಪಿಸಿಕೊಳ್ಳಲಾಗುತ್ತಿದೆ.
- ಗಿರೀಶ್, ಅಪರ ನಿರ್ದೇಶಕರು, ನಗರ ಯೋಜನೆ
ವಲಯವಾರು ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ ಕಟ್ಟಡ ವಿವರ
ವಲಯ ಕಟ್ಟಡ ಸಂಖ್ಯೆ ಎ ಖಾತಾ ಕಟ್ಟಡ ಬಿ ಖಾತಾ ಕಟ್ಟಡ ಪರಿಶೀಲನೆ ಪೂರ್ಣ ಕಟ್ಟಡ
ಪೂರ್ವ 1,014 239 156 22
ಪಶ್ಚಿಮ 718 92 5 54
ದಕ್ಷಿಣ 1,09 28 28 109
ಮಹದೇವಪುರ 2,04 26 26 262
ಬೊಮ್ಮನಹಳ್ಳಿ 1,14 14 168 203
ಆರ್‌ಆರ್‌ನಗರ 2,13 342 26 83
ಯಲಹಂಕ 1,521 161 193 146
ದಾಸರಹಳ್ಳಿ 1,143 42 122 36
ಒಟ್ಟು 10,813 1,567 1,354 770