ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಹಳ್ಳಿಗಳಿಗೆ ಬೆಂಗಳೂರು ಜಲ ಮಂಡಳಿಯಿಂದಲೇ ಕುಡಿಯುವ ನೀರು ಪೂರೈಸಲು ಚಿಂತನೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಹಳ್ಳಿಗಳಿಗೆ ಬೆಂಗಳೂರು ಜಲ ಮಂಡಳಿಯಿಂದಲೇ ಕುಡಿಯುವ ನೀರು ಪೂರೈಸಲು ಚಿಂತನೆ ನಡೆದಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸೋಮವಾರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಗರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬೇಸಿಗೆಯಲ್ಲಿ ನಗರ ಜಿಲ್ಲೆಗೆ ಎದುರಾಗಬಹುದಾದ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ಈಗಿನಿಂದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಸಿಇಒಗೆ ಸೂಚನೆ ನೀಡಿದರು. ಅಲ್ಲದೇ, ಜಿಲ್ಲೆಯ ಹಳ್ಳಿಗಳಿಗೆ ಜಲಮಂಡಳಿಯ ನೀರು ಪೂರೈಕೆಗೆ ಇರುವ ಅವಕಾಶಗಳ ಕುರಿತು ಪರಿಶೀಲನೆ ನಡೆಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆಗಳಿಗೆ ಕಲುಷಿತ ನೀರು ಹರಿಯದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಎಲ್ಲಾ ಕೆರೆಗಳಿಗೆ ಸಂಸ್ಕರಿಸಿದ ನೀರು ಹರಿಸಬೇಕು. ಬೆಂಗಳೂರು ಜಲಮಂಡಳಿಯೇ ಸಂಸ್ಕರಿಸಿದ ನೀರು ತುಂಬಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್‌ಗೆ ಸೂಚಿಸಿದರು.
‘ಎಲ್ಲಂದರಲ್ಲಿ ತ್ಯಾಜ್ಯ ವಿಲೇವಾರಿ ತಡೆಯಿರಿ’
ಒಡೆದು ಹಾಕಿರುವ ಮತ್ತು ನಿರ್ಮಾಣ ಕಟ್ಟಡ ಅವಶೇಷಗಳನ್ನು ಎಲ್ಲೆಂದರಲ್ಲಿ ಸುರಿಯುತ್ತಿರುವುದನ್ನು ತಪ್ಪಿಸಬೇಕು. ಅದಕ್ಕಾಗಿ ತ್ಯಾಜ್ಯ ಸಾಗಿಸುವ ಲಾರಿಗಳಿಗೆ ಜಿಪಿಎಸ್ ಅಳವಡಿಸಬೇಕು. ನಿಗದಿಪಡಿಸಿದ ಸ್ಥಳದಲ್ಲೇ ಲಾರಿಗಳು ತ್ಯಾಜ್ಯ ವಿಲೇವಾರಿ ಮಾಡಬೇಕು. ಇದನ್ನು ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು. ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲೇ ಸುರಿಯುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ನಿರ್ದೇಶನ ನೀಡಿದರು.
ಯಶವಂತಪುರ ವೃತ್ತದ ಬಳಿ ಸುಮಾರು 10-15 ಲೋಡ್‌ಗಳಷ್ಟು ಕಟ್ಟಡ ತ್ಯಾಜ್ಯಗಳನ್ನು ರಸ್ತೆ ಪಕ್ಕದಲ್ಲಿ ಸುರಿದಿರುವುದನ್ನು ನಾನು ಹಾಗೂ ಪಾಲಿಕೆ ಆಯುಕ್ತರು ನೋಡಿದೆವು. ಹೀಗಾಗಿ, ತ್ಯಾಜ್ಯ ಸಾಗಿಸುವ ಎಲ್ಲಾ ಲಾರಿ ಹಾಗೂ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು ಎಂದು ಸೂಚಿಸಲಾಗಿದೆ.
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ.
8,152 ಎಕರೆ ಒತ್ತುವರಿ ತೆರವು ಬಾಕಿ!
ನಗರದಲ್ಲಿರುವ ಸುಮಾರು 1,18,425 ಎಕರೆ ಸರ್ಕಾರಿ ಜಮೀನಿನಲ್ಲಿ 34,360 ಎಕರೆ ಒತ್ತುವರಿಯಾಗಿದೆ. ಅದರಲ್ಲಿ 12,482 ಎಕರೆ ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಇನ್ನುಳಿದ 8,152 ಎಕರೆ ತೆರವುಗೊಳಿಸಬೇಕಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ ಉಪಮುಖ್ಯಮಂತ್ರಿಗೆ ಮಾಹಿತಿ ನೀಡಿದರು.
ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸರ್ವೆ ಕಾರ್ಯ ನಡೆಸಿ, ನ್ಯಾಯಸಮ್ಮತವಾಗಿ ಮಾಡಬೇಕು. ಯಾವುದೇ ಭೂ ಅಕ್ರಮ ವ್ಯವಹಾರಗಳಲ್ಲಿ ಅಧಿಕಾರಿಗಳು ತೊಡಗಿಕೊಳ್ಳಕೂಡದು ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.