ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿಯನ್ನು ಸಂಪರ್ಕಿಸುವ ಮೆಟ್ರೋ ಮಾರ್ಗ ಉದ್ಘಾಟನೆಗೆ ಇದೇ ತಿಂಗಳ 10ರಂದು ಬೆಂಗಳೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರು ಬಿಜೆಪಿ ಆಯೋಜಿಸಿರುವ ಸಾರ್ವಜನಿಕ ಸಮಾವೇಶದಲ್ಲೂ ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಸುಮಾರು ಅರ್ಧ ಕಿ.ಮೀ.ನಷ್ಟು ರೋಡ್ ಶೋ ಕೂಡ ನಡೆಸಲಿದ್ದಾರೆ.
ಜಯನಗರದಲ್ಲಿರುವ ಶಾಲಿನಿ ಆಟದ ಮೈದಾನದಲ್ಲಿ ಮಧ್ಯಾಹ್ನ 12ಗಂಟೆಗೆ ಸಾರ್ವಜನಿಕ ಸಮಾವೇಶ ನಡೆಯಲಿದ್ದು, ಎಲೆಕ್ರ್ಟಾನಿಕ್ಸ್ ಮೆಟ್ರೋ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮೋದಿ ಅವರು ಜಯನಗರಕ್ಕೆ ಆಗಮಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸಮಾವೇಶದ ಸಿದ್ಧತೆಯನ್ನು ಭರದಿಂದ ಆರಂಭಿಸಿರುವ ಬಿಜೆಪಿ ಮುಖಂಡರು ಸೋಮವಾರ ಜಯನಗರದ ಶಾಲಿನಿ ಆಟದ ಮೈದಾನದಲ್ಲಿ ವೇದಿಕೆಗೆ ಭೂಮಿ ಪೂಜೆ ನೆರವೇರಿಸಿದರು.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಸ್ಥಳೀಯ ಶಾಸಕರೂ ಆಗಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಸಿ.ಕೆ.ರಾಮಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಹಳದಿ ಮಾರ್ಗದ ಮೆಟ್ರೋ ನಮ್ಮ ಬಹಳ ದಿನದ ಕನಸು. ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಅವರು ಬೆಂಗಳೂರಿಗೆ ಮೆಟ್ರೋ ತಂದು ಕೊಟ್ಟರು. ಈ ಹಳದಿ ಮಾರ್ಗ ಮೆಟ್ರೋಗೆ ಪ್ರಧಾನಿ ಮೋದಿ ಅವರೇ ಶಂಕು ಸ್ಥಾಪನೆ ಮಾಡಿದ್ದರು. ಇದೀಗ ಅವರೇ ಉದ್ಘಾಟನೆ ಮಾಡುತ್ತಿರುವುದು ಇತಿಹಾಸ. ಇದರಿಂದ ಈ ಭಾಗದ ವಾಹನ ಸಂಚಾರ ದಟ್ಟಣೆ ಸಮಸ್ಯೆ ಸಾಕಷ್ಟು ಕಡಿಮೆ ಆಗಲಿದೆ ಎಂದರು.
ಸಿ.ಕೆ.ರಾಮಮೂರ್ತಿ ಮಾತನಾಡಿ, ಮೋದಿ ಅವರ ಆಗಮನದ ಹಿನ್ನೆಲೆ ಜಯನಗರದ ಶಾಲಿನಿ ಆಟದ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮ ಯಶಸ್ವಿ ಅಗಲಿ ಎಂಬ ಉದ್ದೇಶದಿಂದ ಪೂಜೆ ಮಾಡಿದ್ದೇವೆ. ಸುಮಾರು 40 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ರಾಗಿಗುಡ್ಡದ ಮೆಟ್ರೋ ನಿಲ್ದಾಣದಿಂದ ಶಾಲಿನಿ ಮೈದಾನಕ್ಕೆ ವಾಹನದಲ್ಲಿ ರೋಡ್ ಶೋ ಮೂಲಕ ಮೋದಿ ಆಗಮಿಸಲಿದ್ದಾರೆ. ಸಾವಿರಾರು ಜನ ಪಾಲ್ಗೊಂಡು ಮೋದಿ ಅವರನ್ನು ಸ್ವಾಗತಿಸಲಿದ್ದಾರೆ ಎಂದು ವಿವರಿಸಿದರು.
10ರಂದು ಮೆಟ್ರೋದಲ್ಲಿ ಮೋದಿ ಪಯಣ
ಆ,10ರಂದು ಬೆಂಗಳೂರು ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆ ನೆರವೇರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಬೊಮ್ಮಸಂದ್ರದಿಂದ ರಾಗಿಗುಡ್ಡದವರೆಗೆ ಮೆಟ್ರೋ ರೈಲಿನಲ್ಲೇ ಪ್ರಯಾಣಿಸಲಿರುವುದು ವಿಶೇಷ. ಜತೆಗೆ ಮೆಟ್ರೋ ರೈಲಿನಲ್ಲಿ ಅವರು ಪ್ರಯಾಣಿಕರೊಂದಿಗೆ ಅನೌಪಚಾರಿಕವಾಗಿ ಸಂವಾದವನ್ನೂ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ನಂತರ ಅವರು ಸಮಾವೇಶಕ್ಕೆ ತೆರಳಲಿದ್ದಾರೆ.