;Resize=(412,232))
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ರಾಜ್ಯದ ಪೊಲೀಸ್ ಠಾಣೆಗಳಲ್ಲಿನ ವಿದ್ಯಮಾನಗಳ ದೃಶ್ಯಾವಳಿ ಮಾತ್ರವಲ್ಲ, ಅಲ್ಲಿ ದೂರುದಾರರು ಹಾಗೂ ಖಾಕಿಧಾರಿಗಳ ನಡುವಿನ ‘ಮಾತುಕತೆ’ ಸಹ ಸ್ಪಷ್ಟವಾಗಿ ಮುದ್ರಿತವಾಗುವಂತಹ ಅತ್ಯಾಧುನಿತ ಸಿಸಿಟಿವಿ ಕ್ಯಾಮೆರಾಗಳು ಬರಲಿವೆ!!
ಠಾಣೆಗಳಿಗೆ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೆ 150 ಕೋಟಿ ರು. ವೆಚ್ಚದ ಯೋಜನೆಯೊಂದನ್ನು ರಾಜ್ಯ ಪೊಲೀಸ್ ಇಲಾಖೆ ರೂಪಿಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಠಾಣೆಗಳಲ್ಲಿ ಕ್ಯಾಮೆರಾ ಕಣ್ಗಾವಲು ಮತ್ತಷ್ಟು ಬಿಗಿಯಾಗಲಿದೆ. ಈ ಮೂಲಕ ಠಾಣೆಗಳಲ್ಲಿ ಅಕ್ರಮ ವ್ಯವಹಾರಗಳಿಗೆ ಕಡಿವಾಣ ಬೀಳಲಿದ್ದು, ನೊಂದ ಜನರ ದೂರಿಗೆ ನ್ಯಾಯ ಸಿಗುವ ನಿರೀಕ್ಷೆ ಇದೆ. ಪೊಲೀಸ್ ಠಾಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಹಾಕಬೇಕು ಹಾಗೂ ಅವುಗಳ ನಿರ್ವಹಣೆಗೆ ಸೂಕ್ತ ವ್ಯವಸ್ಥೆಯೊಂದನ್ನು ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಸೂಚನೆ ನೀಡಿವೆ. ಈಗಾಗಲೇ ನ್ಯಾಯಾಲಯಗಳ ಆದೇಶ ಮೇರೆಗೆ ಠಾಣೆಗಳಲ್ಲಿ ನಾಲ್ಕು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ ಅವುಗಳ ಗುಣಮಟ್ಟ ಹಾಗೂ ನಿರ್ವಹಣೆ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ. ಆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸರಿಯಾಗಿ ದೃಶ್ಯಾವಳಿಗಳು ಚಿತ್ರೀಕರಣವಾಗಿರುವುದಿಲ್ಲ. ಇನ್ನು ದನಿಯಂತೂ ಕೇಳಿಸುವುದೇ ಇಲ್ಲ ಎಂಬ ತಕಾರರುಗಳಿವೆ. ಇತ್ತೀಚೆಗೆ ಪೊಲೀಸ್ ಠಾಣೆಗಳ ಸಿಸಿಟಿವಿ ಕ್ಯಾಮೆರಾಗಳ ಸೂಕ್ತ ನಿರ್ವಹಣೆಗೆ ಪೊಲೀಸ್ ಇಲಾಖೆಗೆ ಹೈಕೋರ್ಟ್ ತಾಕೀತು ಮಾಡಿದೆ. ಈ ಹಿನ್ನೆಲೆಯಲ್ಲಿ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಸುಧಾರಣೆಗೆ ಇಲಾಖೆ ಮುಂದಾಗಿದೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ, ಸೈಬರ್, ಸಂಚಾರ, ಮಹಿಳಾ, ರೈಲ್ವೆ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ), ಸಿಐಡಿ, ಕರಾವಳಿ ಭದ್ರತಾ ಪಡೆ, ಆಂತರಿಕ ಭದ್ರತಾ ವಿಭಾಗ ಹಾಗೂ ಸಿಸಿಬಿ ಸೇರಿ ಒಟ್ಟು 1,115 ಪೊಲೀಸ್ ಠಾಣೆಗಳಿವೆ. ಈ ಪೈಕಿ ಬೆಂಗಳೂರು ನಗರ-189, ಬೆಳಗಾವಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ತಲಾ 53, ದಕ್ಷಿಣ ಕನ್ನಡ-44, ತುಮಕೂರು-43 ಹಾಗೂ ಶಿವಮೊಗ್ಗ-35 ಠಾಣೆಗಳಿವೆ. ಪ್ರಸುತ್ತ ಬಹುತೇಕ ಠಾಣೆಗಳಲ್ಲಿ ನಾಲ್ಕು ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಅವುಗಳ ನಿರ್ವಹಣೆ ಬಗ್ಗೆ ನ್ಯಾಯಾಲಯಕ್ಕೆ ದೂರುಗಳು ಸಲ್ಲಿಕೆಯಾಗಿದ್ದವು. ಹೀಗಾಗಿ ಠಾಣೆಗಳಿಗೆ ಅತ್ಯುತ್ತಮ ಗುಣಮಟ್ಟ ಹಾಗೂ ಸುಧಾರಿತ ತಂತ್ರಜ್ಞಾನವುಳ್ಳ ನಾಲ್ಕು ಕ್ಯಾಮೆರಾಗಳ ಅಳವಡಿಕೆಗೆ ಇಲಾಖೆ ಯೋಜಿಸಿದೆ. ಈ ಬಗ್ಗೆ ಶೀಘ್ರದಲ್ಲೆ ಟೆಂಡರ್ ಸಹ ಕರೆಯಲು ರಾಜ್ಯ ಪೊಲೀಸ್ ಇಲಾಖೆ ತಯಾರಿ ನಡೆಸಲಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಸುಧಾರಣೆಗೆ ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಆರ್ಥಿಕ ನೆರವು ಕಲ್ಪಿಸಿದ್ದು, ಅದರಲ್ಲಿ ರಾಜ್ಯಕ್ಕೂ 150 ಕೋಟಿ ರು. ಅನುದಾನ ನೀಡಿದೆ ಎಂದು ಮೂಲಗಳು ಹೇಳಿವೆ.
‘ಡೀಲ್’ ಗಳಿಗೆ ಲಗಾಮು:
ಪೊಲೀಸ್ ಠಾಣೆಗಳಲ್ಲಿ ಭ್ರಷ್ಟಾಚಾರ ಹಾಗೂ ಪೊಲೀಸರ ದರ್ಪದ ನಡವಳಿಕೆಗಳಿಗೆ ಸಿಸಿಟಿವಿ ಅಳವಡಿಕೆಯಿಂದ ಲಗಾಮು ಬೀಳಬಹುದು. ಠಾಣೆಗೆ ದುಃಖ-ದುಮ್ಮಾನ ಹೊತ್ತು ಬರುವ ನೊಂದವರಿಂದ ದೂರು ಸ್ವೀಕರಿಸಲು ನಿರಾಕರಿಸಿದರೆ ಪೊಲೀಸರು ಉತ್ತರದಾಯಿಗಳಾಗಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನ್ಯಾಯಾಲಯಗಳ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಸುಧಾರಣೆಗೆ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲೇ ಠಾಣೆಗಳಲ್ಲಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಹಾಕಲಾಗುತ್ತದೆ.
-ಸೌಮೆಂದು ಮುಖರ್ಜಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಆಡಳಿತ), ರಾಜ್ಯ ಪೊಲೀಸ್ ಇಲಾಖೆ