ಬೆಂಗಳೂರು : ಕಳಪೆ ಆಹಾರ ಪೂರೈಕೆ ಹಿನ್ನೆಲೆ 10 ಸಾವಿರ ಪೊಲೀಸರಿಗೆ ಇಸ್ಕಾನ್‌ ಸಂಸ್ಥೆ ಆಹಾರ

ಸಾರಾಂಶ

ಕಳಪೆ ಆಹಾರ ಪೂರೈಕೆ ಹಿನ್ನೆಲೆಯಲ್ಲಿ ವೈಮಾನಿಕ ಪ್ರದರ್ಶನದ ಭದ್ರತೆಗೆ ನಿಯೋಜಿತ 10 ಸಾವಿರ ಪೊಲೀಸರಿಗೆ ಆಹಾರ ಸರಬರಾಜು ಗುತ್ತಿಗೆ ಪಡೆದಿದ್ದ ಖಾಸಗಿ ಸಂಸ್ಥೆ ವಿರುದ್ಧ ಯಲಹಂಕ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದ್ದು, ಆ ಸಂಸ್ಥೆಗೆ ನೀಡಿದ್ದ ಗುತ್ತಿಗೆ ರದ್ದುಪಡಿಸಲಾಗಿದೆ.

ಬೆಂಗಳೂರು : ಕಳಪೆ ಆಹಾರ ಪೂರೈಕೆ ಹಿನ್ನೆಲೆಯಲ್ಲಿ ವೈಮಾನಿಕ ಪ್ರದರ್ಶನದ ಭದ್ರತೆಗೆ ನಿಯೋಜಿತ 10 ಸಾವಿರ ಪೊಲೀಸರಿಗೆ ಆಹಾರ ಸರಬರಾಜು ಗುತ್ತಿಗೆ ಪಡೆದಿದ್ದ ಖಾಸಗಿ ಸಂಸ್ಥೆ ವಿರುದ್ಧ ಯಲಹಂಕ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದ್ದು, ಆ ಸಂಸ್ಥೆಗೆ ನೀಡಿದ್ದ ಗುತ್ತಿಗೆ ರದ್ದುಪಡಿಸಲಾಗಿದೆ.

ವಾಟರ್ ಲಾಪಿಂಗ್‌ ಪ್ರಾಡಕ್ಟ್ಸ್‌ (ಎಲ್‌ಡಬ್ಲ್ಯುಪಿ) ಕಂಪನಿ ಮಾಲಿಕ ರಾಜೇಶ್ ವಿರುದ್ಧ ಆರೋಪ ಬಂದಿದೆ. ಈ ಪ್ರಕರಣ ದಾಖಲಾದ ಬೆನ್ನಲ್ಲೇ ಇಸ್ಕಾನ್ ಸಂಸ್ಥೆಗೆ ಪೊಲೀಸ್ ಇಲಾಖೆ ಆಹಾರ ಸರಬರಾಜು ಗುತ್ತಿಗೆ ನೀಡಿದೆ.

ಯಲಹಂಕದ ವಾಯು ನೆಲೆಯಲ್ಲಿ ನಡೆದಿರುವ ಏರ್ ಶೋ ಬಂದೋಬಸ್ತ್‌ಗೆ ನಿಯೋಜಿತಗೊಂಡಿರುವ ಪೊಲೀಸರಿಗೆ 2 ದಿನಗಳಿಂದ ಪೂರೈಕೆಯಾದ ಆಹಾರದಲ್ಲಿ ಜಿರಲೆ ಹಾಗೂ ಹುಳುಗಳು ಪತ್ತೆಯಾಗಿದ್ದವು. ಈ ಬಗ್ಗೆ ಫೋಟೋಗಳು ವೈರಲ್ ಆಗಿ, ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್ ಅವರು, ಆಹಾರ ಪೂರೈಕೆ ಗುತ್ತಿಗೆ ಹೊರಡಿಸಿದ್ದ ಕಾರ್ಯಾದೇಶವನ್ನು ರದ್ದುಪಡಿಸಿದ್ದಾರೆ.

ಕಾಯಂ ಆಹಾರ ಪೂರೈಕೆದಾರ:

ಪೊಲೀಸ್ ಬಂದೋಬಸ್ತ್‌ ವೇಳೆ ರಾಜೇಶ್ ಕಾಯಂ ಆಹಾರ ಪೂರೈಕೆದಾರರಾಗಿದ್ದ. ಅಂತೆಯೇ ಈ ಹಿಂದಿನ ಏರ್ ಶೋಗಳು ಮಾತ್ರವಲ್ಲದೆ ಐಪಿಎಲ್ ಪಂದ್ಯಾವಳಿ ಭದ್ರತೆ ಸೇರಿ ದೊಡ್ಡ ಮಟ್ಟದ ಬಂದೋಬಸ್ತ್ ವೇಳೆ ಪೊಲೀಸರಿಗೆ ಆಹಾರ ಸರಬರಾಜಿನ ಗುತ್ತಿಗೆಯನ್ನು ರಾಜೇಶ್ ಪಡೆಯುತ್ತಿದ್ದರು. ಪ್ರತಿ ಸಿಬ್ಬಂದಿಗೆ ಬೆಳಗ್ಗೆ ಉಪಹಾರ ಹಾಗೂ ಮಧ್ಯಾಹ್ನ ಮತ್ತು ಸಂಜೆ ಊಟಕ್ಕೆ ₹200 ಹಣವನ್ನು ಪೊಲೀಸ್ ಇಲಾಖೆ ನಿಗದಿಪಡಿಸಿದೆ. ಕೆಲವರು ದರ ಕಡಿಮೆ ಎಂಬ ಕಾರಣಕ್ಕೆ ಟೆಂಡರ್ ಪಡೆಯಲು ಹಿಂದೇಟು ಹಾಕುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಯಲಿನಲ್ಲಿ ಅಡುಗೆ:

ನಾಲ್ಕು ದಿನಗಳ ಏರ್ ಶೋಗೆ ಆಹಾರ ಪೂರೈಸುವ ಗುತ್ತಿಗೆ ಪಡೆದಿದ್ದ ರಾಜೇಶ್‌, ಬಯಲಿನಲ್ಲಿ ಶಾಮಿಯಾನ ಹಾಕಿ ಆಹಾರ ತಯಾರಿಸುತ್ತಿದ್ದರು. ಆಗ ಆಹಾರದ ಪೊಟ್ಟಣಗಳಿಗೆ ಹುಳುಗಳು ಬಿದ್ದಿರಬಹುದು. ಹೀಗಾಗಿ ಭಾನುವಾರ ಹಾಗೂ ಸೋಮವಾರದ ಮಧ್ಯಾಹ್ನ ಊಟದಲ್ಲಿ ಕೆಲವರಿಗೆ ಜಿರಲೆ ಹಾಗೂ ಹುಳುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಳಗ್ಗೆ ಉಪಾಹಾರ ಸೇವಿಸಿದ್ದ ಡಿಸಿಪಿ

ಕಳಪೆ ಆಹಾರ ಪೂರೈಕೆ ಆರೋಪ ಹಿನ್ನೆಲೆಯಲ್ಲಿ ವೈಮಾನಿಕ ಪ್ರದರ್ಶನ ಬಂದೋಸ್ತ್‌ಗೆ ನಿಯೋಜಿತ ಸಿಬ್ಬಂದಿ ಜತೆ ಉಪಾಹಾರ ಸೇವಿಸಿ ಈಶಾನ್ಯ ವಿಭಾಗದ ಡಿಸಿಪಿ ವಿ.ಜೆ.ಸಜೀತ್‌ ಸೋಮವಾರ ಪರಿಶೀಲಿಸಿದರು. ಇದಾದ ಬಳಿಕ ಮತ್ತೆ ಮಧ್ಯಾಹ್ನ ಊಟದಲ್ಲಿ ಹುಳುಗಳು ಪತ್ತೆಯಾದ ಹಿನ್ನಲೆಯಲ್ಲಿ ಟೆಂಡರ್ ಅನ್ನು ಡಿಸಿಪಿ ರದ್ದುಪಡಿಸಿದ್ದಾರೆ.

ಆಹಾರ ಪೂರೈಕೆ ಗುತ್ತಿಗೆ ನೀಡುವ ನಿಯಮಾವಳಿಗಳಲ್ಲಿ ಕಳಪೆ ಆಹಾರ ಪೂರೈಸಿದರೆ ಆ ಕ್ಷಣವೇ ಕಾರ್ಯಾದೇಶ ರದ್ದುಪಡಿಸಲಾಗುತ್ತದೆ ಎಂದು ತಿಳಿಸಲಾಗಿತ್ತು. ಅಂತೆಯೇ 2 ದಿನಗಳಿಂದ ಪೊಲೀಸರಿಗೆ ನೀಡಿದ ಆಹಾರದಲ್ಲಿ ಹುಳುಗಳು ಪತ್ತೆಯಾದ ಕಾರಣಕ್ಕೆ ಗುತ್ತಿಗೆ ರದ್ದುಪಡಿಸಿದ್ದು, ಇಸ್ಕಾನ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ.

- ವಿ.ಜೆ ಸಜೀತ್, ಈಶಾನ್ಯ ವಿಭಾಗ ಡಿಸಿಪಿ

 

Share this article